ಮೂಡುಬಿದಿರೆ: ಪ್ರತಿ ಉದ್ದಿಮೆಗೂ ವಾಣಿಜ್ಯ ವಿಭಾಗದ ಪದವೀದರರ ಅವಶ್ಯಕತೆಯಿದೆ. ದೇಶದ ಅಭಿವೃದ್ಧಿಯಲ್ಲಿ ವಾಣಿಜ್ಯ ವಿಭಾಗದ ಕೊಡುಗೆ ಮಹತ್ತರವಾದುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಹೇಳಿದರು.
ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ಸಂಘದ ಉದ್ಘಾಟನೆ ಮತ್ತು ಸಾಧಕರಿಗೆ ಅಭಿನಂದನಾ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದರು. ಇಂದು ವಾಣಿಜ್ಯ ವಿಭಾಗದಲ್ಲಿ ಸಾಕಷ್ಟು ಅವಕಾಶಗಳಿವೆ ಅದನ್ನು ಗುರುತಿಸಿ ಉಪಯೋಗಿಸಿಕೊಳ್ಳಬೇಕು ಎಂದರು.
ಹಿಂದೆ ಗ್ರಾಮೀಣ ಭಾಗದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಅವಕಾಶಗಳು ಸೀಮಿತವಾಗಿದ್ದವು. ಆದರೆ ಇಂದು ಗುಣಾತ್ಮಕ ಶಿಕ್ಷಣ ಎಲ್ಲಾ ಕಡೆ ಲಭ್ಯವಿರುವುದರಿಂದ ದೇಶ ವಿದೇಶದ ಪ್ರತಿಷ್ಠಿತ ಕಂಪೆನಿಗಳಲ್ಲಿ ಗ್ರಾಮೀಣ ಪ್ರತಿಭೆಗಳು ಬೆಳಗುವಂತಾಗಿದೆ ಎಂದರು. ಈ ಹಿನ್ನಲೆಯಲ್ಲಿ ಆರಂಭವಾದ ಆಳ್ವಾಸ್ ಶಿಕ್ಷಣ ಸಂಸ್ಥೆಗಳಿಂದು ಉತ್ತಮವಾದ ವಿದ್ಯಾಭ್ಯಾಸ ಹಾಗೂ ಪಠ್ಯೇತರ ಚಟುವಟಿಕೆಗಳ ಜತೆಯಲ್ಲಿ ಸಿ.ಎ, ಸಿಪಿಟಿ, ಸಿ.ಎಸ್,ಎಸಿಸಿಎ, ಸಿಎಂಎಸ್ ಹೀಗೆ ವಾಣಿಜ್ಯ ವಿಭಾಗಕ್ಕೆ ಸಂಬಂಧಿಸಿದಂತೆ ಇತರ ವಿಷಯಗಳ ಕುರಿತಾಗಿ ನುರಿತ ತರಬೇತುದಾರರಿಂದ ತರಭೇತಿ ನೀಡುತ್ತಿವೆ. ಪ್ರತಿ ವರ್ಷ ಸಿಎ, ಸಿಪಿಟಿ, ಸಿಎಸ್ ರಿಸಲ್ಟ್ ಗಳಲ್ಲಿ ಆಳ್ವಾಸ್ ವಿದ್ಯಾರ್ಥಿಗಳು ಮೇಲುಗೈ ಸಾಧಿಸುತ್ತಾ ಬಂದಿದ್ದಾರೆ, ಅಲ್ಲದೆ ದೇಶ ವಿದೇಶಗಳಲ್ಲಿ ಇಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಮಟ್ಟದ ಉದ್ಯೋಗಗಳನ್ನು ಪಡೆಯುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಕಾರ್ಯಕ್ರಮದಲ್ಲಿ 2021-22 ರಲ್ಲಿ ಸಿಎ ಫೈನಲ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಆಳ್ವಾಸ್‌ನ 15 ಜನ ಹಿರಿಯ ವಿದ್ಯಾರ್ಥಿಗಳು ಹಾಗೂ 2022 ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಹತ್ತು ಸ್ಥಾನ ಪಡೆದ ವಾಣಿಜ್ಯ ವಿಭಾಗದ 16 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಮೊಹಮ್ಮದ್ ಸದಾಕತ್, ಪ್ರತಿ ದಿನ ಹೊಸ ದಿನ ಎಂಬಂತೆ ಆರಂಭಿಸಬೇಕು. ಆಗ ಎದುರಾಗುವ ಹೊಸ ಸವಾಲುಗಳನ್ನು ಸಮರ್ಥವಾಗಿ ಎದುರಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಮ್ ಡಿ ಮತ್ತು ವಾಣಿಜ್ಯ ಸಂಘದ ಸಂಯೋಜಕ ಪ್ರಮತ್ ಶೆಟ್ಟಿ ಉಪಸ್ಥಿತರಿದ್ದರು. ಉಪನ್ಯಾಸಕಿ ಶೆಲೆಟ್ ಮೋನಿಸ್ ಸ್ವಾಗತಿಸಿ, ಮೇಘನಾ ವಂದಿಸಿ, ರಶ್ಮಿನ್ ತನ್ವೀರ್ ಕಾರ್ಯಕ್ರಮ ನಿರೂಪಿಸಿದರು.