ನಿಟ್ಟೆಯಲ್ಲಿ ರೈತ ಉತ್ಪಾದಕ ಕಂಪೆನಿ ಉದ್ಘಾಟನೆ

Upayuktha
0

ನಿಟ್ಟೆ: 'ನಿಟ್ಟೆ ಎಂಬ ಹಳ್ಳಿಯ ಸರ್ವತೋಮುಖ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡುವ ಇಂಗಿತ ಹೊಂದಿದ್ದ ಜಸ್ಟೀಸ್ ಕೆ.ಎಸ್. ಹೆಗ್ಡೆ ಅವರ ಕನಸು ಇಂದು ನಿಟ್ಟೆ ರೈತ ಉತ್ಪಾದಕ ಕಂಪೆನಿ ಉದ್ಘಾಟನೆಯಿಂದ ಸಾಕಾರಗೊಂಡಿದೆ ಎಂದರೆ ತಪ್ಪಾಗದು. ದೇಶದಲ್ಲಿ ಹಳ್ಳಿಗಳ ಅಭಿವೃದ್ದಿ, ಕೃ‍ಷಿ ಹಾಗೂ ರೈತರ ಅಭಿವೃದ್ದಿಗೆ ಬೆಂಬಲ ಸಿಕ್ಕರಷ್ಟೇ ದೇಶದ ಅಭಿವೃದ್ಧಿ ಸಾಧ್ಯ' ಎಂದು ನಿಟ್ಟೆ ಕ್ಯಾಂಪಸ್ ಮೈಂಟೆನೆನ್ಸ್ & ಡೆವಲಪ್ಮೆಂಟ್ ನ ನಿರ್ದೇಶಕ ಶ್ರೀ ಯೋಗೀಶ್ ಹೆಗ್ಡೆ ಅಭಿಪ್ರಾಯಪಟ್ಟರು.


ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನೆರವಿನೊಂದಿಗೆ ಕೃಷಿ, ತೋಟಗಾರಿಕಾ ಹಾಗೂ ಜಲಾನಯನ ಇಲಾಖೆ ಮತ್ತು ಅಟಲ್ ಇನ್ಕೂಬೇಷನ್ ಸೆಂಟರ್ ನ ಸಹಯೋಗದೊಂದಿಗೆ ಆ.೨೭ ರಂದು ಆರಂಭಗೊಂಡ ನಿಟ್ಟೆ ರೈತ ಉತ್ಪಾದಕ ಕಂಪೆನಿ (ಲಿ) ಯನ್ನು ನಿಟ್ಟೆ ತಾಂತ್ರಿಕ ಕಾಲೇಜಿನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. 'ದೇಶದ ರೈತರು ಆಹಾರಧಾನ್ಯವನ್ನು ಬೆಳೆದು ನಮ್ಮ ಉಪಯೋಗಕ್ಕೆ ಬೇಕಾದಷ್ಟನ್ನು ಉಳಿಸಿಕೊಂಡು ಹೆಚ್ಚಿನದನ್ನು ರಫ್ತು ಮಾಡುವ ಮಟ್ಟಿಗೆ ಕೃ‍ಷಿ ಕ್ಷೇತ್ರದಲ್ಲಿ ಪ್ರಗತಿಯನ್ನು ಹೊಂದಿರುವರು. ರೈತರು ಬೆಳೆದ ಕೃ‍ಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುವ ನಿಟ್ಟಿನಲ್ಲಿ ಈ ರೈತ ಉತ್ಪಾದಕ ಕಂಪೆನಿ ಸಹಕಾರಿಯಾಗಲಿದೆ' ಎಂದರು.


ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಬೆಂಗಳೂರಿನ ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೇಂದ್ರದ ನಿರ್ದೇಶಕ ಡಾ.ಅಶೋಕ್ ಆಲೂರು ಮಾತನಾಡುತ್ತಾ 'ದೇಶದ ಎಲ್ಲಾ ರಾಜ್ಯಗಳಲ್ಲಿ ನಿರ್ಮಾಣಗೊಳ್ಳುತ್ತಿರುವ ರೈತ ಉತ್ಪಾದಕ ಕಂಪೆನಿಗಳು ಹಲವಾರು ವರ್ಷಗಳ ಚಿಂತನೆಗಳ ಫಲಶ್ರುತಿ ಎಂದರೆ ತಪ್ಪಾಗದು. ಇಂದಿನವರೆಗೆ ಕರ್ನಾಟಕ ರಾಜ್ಯದಲ್ಲಿ ವಿವಿಧ ಇಲಾಖೆಗಳಡಿಯಲ್ಲಿ ೧೧೫೩ ರೈತ ಉತ್ಪಾದಕ ಕಂಪೆನಿಗಳು ಆರಂಭಗೊಂಡಿರುವುದು ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಒದಗಿಸುವಲ್ಲಿ ನೆರವಾಗುತ್ತಿದೆ. ಕೃಷಿಯು ಸಮಾಜದಲ್ಲಿ ಹೊಟ್ಟೆಪಾಡಿನ ಉದ್ಯೋಗವೆಂಬ ತಪ್ಪುಕಲ್ಪನೆಯಿದ್ದು ವಾಣಿಜ್ಯ ಬೆಳವಣಿಗೆಯ ದೃಷಿಯಿಂದ ಕೃಷಿಯನ್ನು ಆಯ್ದುಕೊಳ್ಳುವಂತಾಗಬೇಕು. ರೈತರು ಜಾತಿ, ಧರ್ಮ ಹಾಗೂ ರಾಜಕೀಯದ ಭೇದವನ್ನು ಮರೆತು ರೈತ ಉತ್ಪಾದಕ ಕಂಪೆನಿಯ ಅಭಿವೃದ್ದಿಗೆ ಶ್ರಮಿಸಬೇಕಿದೆ' ಎಂದರು.


ಉಡುಪಿ ಜಿಲ್ಲಾ ಕೃಷಿ ವಿಭಾಗದ ಜಂಟಿ ನಿರ್ದೇಶಕ ಶ್ರೀ ಕೆಂಪೇಗೌಡ ಹೆಚ್ ಅವರು ಮಾತನಾಡುತ್ತಾ 'ನಿಟ್ಟೆ ಸಂಸ್ಥೆಯ ಸಹಯೋಗದೊಂದಿಗೆ ಆರಂಭಗೊಂಡಿರುವ ರೈತ ಉತ್ಪಾದಕ ಕಂಪೆನಿಯ ಪಾಲುದಾರರಾಗಿರುವುದು/ಸದಸ್ಯರಾಗಿರುವುದು ತಮ್ಮೆಲ್ಲರ ಭಾಗ್ಯ. ರೈತ ಉತ್ಪಾದಕ ಕಂಪೆನಿಗಳನ್ನು ಜಿಲ್ಲೆಯ ಹಲವು ತಾಲೂಕುಗಳಲ್ಲಿ ಆರಂಭಿಸುವ ಯೋಜನೆಯಲ್ಲಿ ಕೆಲವಾರು ಸವಾಲುಗಳು ಹಾಗೂ ತಪ್ಪುಕಲ್ಪನೆಗಳನ್ನು ನಾವು ಕಂಡಿದ್ದೇವೆ. ಈ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸುವಲ್ಲಿ ನಿಟ್ಟೆ ಅಟಲ್ ಇನ್ಕೂಬೇಷನ್ ಸೆಂಟರ್ ನ ಅಧಿಕಾರಿಗಳು ಸಹಕರಿಸಿರುವರು. ಕೃಷಿ ಹಾಗೂ ತೋಟಗಾರಿಕಾ ಇಲಾಖೆಗಳಡಿಯಲ್ಲಿ ಹಲವಾರು ಯೋಜನೆಗಳು ಲಭ್ಯವಿದ್ದು ಇದರ ಸದುಪಯೋಗಪಡಿಸುವಲ್ಲಿ ಹೆಚ್ಚಿನ ಶ್ರಮ ವಹಿಸಬೇಕು' ಎಂದರು.


ಉಡುಪಿ ಜಿಲ್ಲಾ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕಿ ಶ್ರೀಮತಿ ಭುವನೇಶ್ವರಿ ಅವರು ಮಾತನಾಡಿ 'ತಮ್ಮ ಇಲಾಖೆಯೆಯಿಂದ ರೈತರ ಏಳಿಗೆಗೆ ಬೇಕಾದ ಸೌಲಭ್ಯಗಳನ್ನು ಒದಗಿಸಲು ಸದಾ ಸಿದ್ದ. ನಿಟ್ಟೆ ರೈತ ಉತ್ಪಾದಕ ಕಂಪೆನಿಯ ಏಳಿಗೆಯಿಂದ ವಿವಿದೆಡೆ ಈ ಸಂಸ್ಥೆಯನ್ನು ಮಾದರಿಯಾಗಿ ಪರಿಗಣಿಸುವಂತಾಗಬೇಕು' ಎಂದರು.


ನಿಟ್ಟೆ ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷ ಶ್ರೀ ಅಶೋಕ್ ಅಡ್ಯಂತಾಯ ಅವರು 'ನಿಟ್ಟೆ ಸಮೂಹ ಸಂಸ್ಥೆಗಳ ಸಹಕಾರದೊಂದಿಗೆ ಹಾಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಸಹಾಯದೊಂದಿಗೆ ಆರಂಭಿಸಿರುವ ನಿಟ್ಟೆ ರೈತ ಉತ್ಪಾದಕ ಕಂಪೆನಿಯನ್ನು ಉತ್ತಮ ರೀತಿಯಲ್ಲಿ ಬೆಳೆಸಬೇಕಿದೆ. ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ವಿವಿಧ ಒಡಂಬಡಿಕೆಗಳು ಅಗತ್ಯ. ರೈತರಿಗೆ ತಮ್ಮ ಬೆಳೆಬೆಳೆಯಲು ಬೇಕಾದ ಬೀಜ, ರಸಗೊಬ್ಬರ, ಯಂತ್ರೋಪಕರಣಗಳಂತಹ ವಿವಿಧ ಸಹಾಯಗಳನ್ನು ಒದಗಿಸುವ ನಿಟ್ಟಿನಲ್ಲಿ ಈ ಸಂಸ್ಥೆ ಕೆಲಸ ಮಾಡಲಿದೆ. ಈ ಸಂಸ್ಥೆಗೆ ೭೫೦ ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗಿರುವರು. ಈ ನಿಟ್ಟಿನಲ್ಲಿ ನನ್ನೊಂದಿಗೆ ಇದ್ದ ನಿಟ್ಟೆ ಸಂಸ್ಥೆಯ ಅಧ್ಯಕ್ಷ ಶ್ರೀ ವಿನಯ ಹೆಗ್ಡೆ ಹಾಗೂ ನಿಟ್ಟೆ ಕ್ಯಾಂಪಸ್ ನ ನಿರ್ದೇಶಕ ಯೋಗೀಶ್ ಹೆಗ್ಡೆಯವರ ಸಹಕಾರ ಸ್ಮರಣೀಯ' ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ 'ಕೃಷಿ ಕ್ಷೇತ್ರದಲ್ಲಿ ಯಂತ್ರೋಪಕರಣಗಳ ಸಹಾಯದಿಂದ ಹಾಗೂ ಆಧುನಿಕ ಕೃಷಿ ಪದ್ದತಿಗಳಿಂದ ಹೆಚ್ಚಿನ ಬೆಳೆಬೆಳೆಯಲು ಇಂದಿನ ದಿನಗಳಲ್ಲಿ ಸಾಧ್ಯವಾಗುತ್ತಿದೆ. ಕೃಷಿ ಕ್ಷೇತ್ರದ ಅಭಿವೃದ್ದಿಗೆ ವಿದ್ಯಾರ್ಥಿಗಳು ಹಲವಾರು ಪ್ರಾಜೆಕ್ಟ್ ಗಳನ್ನು ಕೈಗೊಂಡಿರುವರು. ಅವುಗಳನ್ನು ಕೃಷಿಕರ ಪ್ರತಿಕ್ರಿಯೆಗಳ ಅನುಸಾರವಾಗಿ ಅಭಿವೃದ್ದಿ ಪಡಿಸಿ ಉಪಯೋಗಿಸುವಂತಾಗಬೇಕು. ನಿಟ್ಟೆ ವಿದ್ಯಾ ಸಂಸ್ಥೆ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುವ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದೆ' ಎಂದರು.


ವೇದಿಕೆಯಲ್ಲಿ ಬೆಂಗಳೂರಿನ ಕೃಷಿ ತಜ್ಞ ಡಾ.ಎಂ ಎಸ್ ರಾವ್, ನಿಟ್ಟೆ ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ, ಕಲ್ಯಾ ಗ್ರಾಮ ಪಂಚಾಯತ್ ನ ಅಧ್ಯಕ್ಷ ಸಂಜೀವ್ ಶೆಟ್ಟಿ, ನಿಟ್ಟೆ ರೈತ ಉತ್ಪಾದಕ ಕಂಪೆನಿಯ ನಿರ್ದೇಶಕರುಗಳಾದ ಗಜಾನನ ಶೆಟ್ಟಿ, ಶಂಕರ್ ಕುಂದರ್, ಸುರೇಶ್ ಮೂಲ್ಯ, ವಿ ಕೆ ಭಟ್ ಉಪಸ್ಥಿತರಿದ್ದರು.


ನಿಟ್ಟೆ ರೈತ ಉತ್ಪಾದಕ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯ ಶೆಟ್ಟಿ ಸ್ವಾಗತಿಸಿದರು. ನಿಟ್ಟೆ ಸಂಸ್ಥೆಯ ಅಟಲ್ ಇಂಕ್ಯೂಬೇಶನ್ ಸೆಂಟರ್ ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ| ಎ.ಪಿ. ಆಚಾರ್ಯ ಪ್ರಾಸ್ತಾವಿಸಿದರು. ನಿಟ್ಟೆ ಇನ್ಕೂಬೇಶನ್ ಸೆಂಟರ್ ನ ದೀಕ್ಷಾ ಶೆಟ್ಟಿ ವಂದಿಸಿದರು. ನಿಟ್ಟೆ ಸಂಸ್ಥೆಯ ಹರ್ಷವರ್ಧನ್ ನಿಟ್ಟೆ ಕಾರ್ಯಕ್ರಮ ನಿರೂಪಿಸಿದರು.


ಸಭಾಕಾರ್ಯಕ್ರಮದ ಅನಂತರ ಬೆಂಗಳೂರಿನ ಕೃಷಿ ತಜ್ಞ ಡಾ.ಎಂ ಎಸ್ ರಾವ್ ಅವರಿಂದ ಕೃಷಿ ಕ್ಷೇತ್ರದ ಬೆಳವಣಿಗೆ ಹಾಗೂ ಸವಾಲುಗಳ ಬಗೆಗೆ ಸವಿವರ ದಿಕ್ಸೂಚಿ ಮಂಡನೆ ನಡೆಯಿತು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top