ಸೇವೆಯ ಸಮಾಧಾನ, ಸಂತೋಷ, ಭೋಗದಲ್ಲಿಲ್ಲ: ರಾಘವೇಶ್ವರ ಶ್ರೀ

Upayuktha
0



ಗೋಕರ್ಣ: ಸೇವೆಯಲ್ಲಿರುವ ಸಮಾಧಾನ, ಸಂತೋಷ ಭೋಗದಲ್ಲಿಲ್ಲ; ಯುವಶಕ್ತಿಯನ್ನು ಭೋಗದ ಜತೆ ಜೋಡಿಸದೇ, ಸೇವೆಯ ಜತೆ ಜೋಡಿಸುವ ಕಾರ್ಯ ಆಗಬೇಕು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು.


ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಯುವ ಸೇವಾ ಸಮಾವೇಶದಲ್ಲಿ ಆಶೀರ್ವಚನ ನೀಡಿದ ಅವರು, ಯುವಶಕ್ತಿ ಮತ್ತು ಸೇವೆ ಇಂದಿನ ಸಮಾಜದಲ್ಲಿ ಅಪಮೌಲ್ಯವಾಗಿದೆ. ಪ್ರಕೃತಿಯ, ದೇಶದ, ಸಮಾಜದ ಮತ್ತು ನಮ್ಮಿಂದ ಶ್ರೇಷ್ಠರ ಸೇವೆ ಮಾಡುವ ಮೂಲಕ ನಮ್ಮ ಜೀವನ ಸಾರ್ಥಕಗೊಳಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.


ಸೇವೆ ಮಾಡದಿದ್ದರೆ ಬದುಕು ಪೂರ್ಣವಾಗುವುದಿಲ್ಲ. ದೇಶಕ್ಕೆ, ದೇವರಿಗೆ, ಸಮಾಜಕ್ಕೆ, ಗುರುಸ್ಥಾನಕ್ಕೆ ಸೇವೆ ಮಾಡುವ ಸಂಕಲ್ಪ ತೊಡಿ. ಸೇವೆ ಇಲ್ಲದಿದ್ದರೆ ಜೀವನ ವ್ಯರ್ಥ. ಯುವಕರೆಲ್ಲ ಸೇವಕರಾಗಬೇಕು; ಸೇವಕರೆಲ್ಲ ಯುವಕರಾಗಿಯೇ ಇರಬೇಕು. ಮುಪ್ಪಿಗೆ ಮದ್ದು ಸೇವೆ. ಸೇವೆಯಿಂದ ನಾವು ಶಾಶ್ವತರಾಗುತ್ತೇವೆ. ಮುಪ್ಪು- ಸಾವುಗಳಿಲ್ಲದ ಸ್ಥಿತಿಗೆ ಬರಲು ಸಾಧ್ಯ. ಸೇವೆಯ ಮೂಲಕ ನಾವು ಅಜರಾಮರ, ಅಮರರಾಗಬಹುದು ಎಂದು ಹೇಳಿದರು.


ರಾಷ್ಟ್ರಕ್ಕಾಗಿ ಜೀವ ಕೊಡುವ ಸೈನಿಕ ಎಷ್ಟು ಶ್ರೇಷ್ಠವೋ, ದೇಶಕ್ಕಾಗಿ ಸೇವೆಯ ಮೂಲಕ ಜೀವನ ನೀಡುವ ವ್ಯಕ್ತಿ ಕೂಡಾ ಅಷ್ಟೇ ಶ್ರೇಷ್ಠ. ಸತ್ಯ ಹಾಗೂ ತತ್ವಕ್ಕೆ ಜೀವನವನ್ನು ಸಮರ್ಪಣೆ ಮಾಡಿಕೊಂಡವರು ನಿಜವಾದ ಯೋಗಿಗಳು. ಧರ್ಮಕ್ಕೆ, ರಾಷ್ಟ್ರಕ್ಕೆ, ಪರಂಪರೆಗೆ ಸಮರ್ಪಣೆ ಮಾಡಿಕೊಂಡ ಜೀವನ ಸರ್ವಶ್ರೇಷ್ಠ ಎಂದರು.


ಶ್ರೇಷ್ಠತೆಯೇ ಯುವಕನ ಲಕ್ಷಣ. ಸೇವೆ ಮತ್ತು ಸಾಧನೆಯಿಂದಷ್ಟೇ ಯುವ ಹುಮ್ಮಸ್ಸು ಬರಲು ಸಾಧ್ಯ. ನೈಸರ್ಗಿಕ ಬಲ ಉಳ್ಳವನು ಯುವಕ. ಬೀಜವು ಮಣ್ಣು, ಗಾಳಿ, ಬೆಳಕಿನ ಆಸರೆಯಿಂದ ವಿಕಾಸ ಹೊಂದಿ ವೃಕ್ಷವಾಗಿ ಫಲ ಬಿಡುತ್ತದೆ. ಮರ ಮತ್ತೆ ಆ ಫಲವನ್ನು ಮತ್ತೆ ಭೂಮಿಗೆ ನೀಡುತ್ತದೆ. ಹಾಗೆಯೇ ಯುವಕರ ಶಕ್ತಿ ಕೂಡಾ ದೇವರು, ಸಮಾಜ, ದೇಶದಿಂದ ಬರುವಂಥದ್ದು. ವೃಕ್ಷ ತನ್ನ ಫಲವನ್ನು ಮತ್ತೆ ಪ್ರಕೃತಿಗೆ ಅರ್ಪಿಸುವಂತೆ ಯುವ ಶಕ್ತಿ ಕೂಡಾ ತಾನು ಬೆಳೆಯಲು ಕಾರಣವಾದ ಸಮಾಜಕ್ಕೆ ಸಮರ್ಪಿಸಿಕೊಳ್ಳಬೇಕು ಎಂದು ಆಶಿಸಿದರು.


ನಮ್ಮ ಪ್ರತಿಯೊಬ್ಬರ ಬೆಳವಣಿಗೆಗೆ ಸಮಾಜ ಕಾರಣ. ನಾವು ಆ ಋಣವನ್ನು ದೇವರಿಗೆ, ನಿಸರ್ಗಕ್ಕೆ, ಸಮಾಜಕ್ಕೆ ದೇಶಕ್ಕೆ ಅರ್ಪಣೆ ಮಾಡದಿದ್ದರೆ, ಆ ಋಣ ನಮ್ಮಲ್ಲಿ ಉಳಿದುಕೊಳ್ಳುತ್ತದೆ. ಬದುಕಿನ ಧನ್ಯತೆ ಬರುವುದು ಸೇವೆಯಿಂದ. ಯಾರಿಗಾಗಿ ನಾವು ಸೇವೆ ಮಾಡುತ್ತೇವೆಯೋ ಲಾಭ ಅವರಿಗಲ್ಲ; ನೈಜವಾಗಿ ಅದರ ಲಾಭವಾಗುವಂಥದ್ದು ನಮಗೆ ಎಂದು ವಿಶ್ಲೇಷಿಸಿದರು.


ಸೇವೆ ಎಂದರೆ ನಮಗಿಂತ ಮೇಲಿರುವವರ ಜತೆ ಸಂಪರ್ಕ ಸಾಧಿಸುವುದು. ಅಂಥ ಶ್ರೇಷ್ಠರಿಂದ ಶಕ್ತಿ ನಮಗೆ ಹರಿಯುತ್ತದೆ. ಸೇವೆಯಲ್ಲಿ ವಿನಯ ಮುಖ್ಯ. ಕೊಡ ಬಾವಿಯಲ್ಲಿ ಬಾಗಿ ನೀರು ತುಂಬಿಕೊಳ್ಳುವಂತೆ ನಾವೂ ವಿನೀತರಾಗಿ ಶ್ರೇಷ್ಠರ ಸೇವೆ ಮಾಡುವ ಮೂಲಕ ನಾವೂ ತುಂಬಿದ ಕೊಡಗಳಾಗಬೇಕು ಎಂದರು.

ಶಕ್ತಿ ಇದ್ದಾಗ ಸೇವೆ ಮಾಡಬೇಕು; ಬದುಕನ್ನು ವ್ಯರ್ಥ ಮಾಡಿಕೊಳ್ಳಬೇಡಿ. ಯೌವನದಲ್ಲಿ ಭೋಗಕ್ಕೆ ಬಿದ್ದರೆ ವೃದ್ಧಾಪ್ಯವನ್ನು ನಾವು ಕರೆಸಿಕೊಂಡಂತಾಗುತ್ತದೆ. ಆದ್ದರಿಂದ ಯುವಕರಿಗೆ ಸೇವೆಯ ಪ್ರೇರಣೆ ನೀಡುವುದೇ ಇಂದಿನ ಸಮಾವೇಶದ ಉದ್ದೇಶ ಎಂದು ಸ್ಪಷ್ಟಪಡಿಸಿದರು.


ನಾವು ಮಕ್ಕಳನ್ನು ಸಂಪತ್ತನ್ನಾಗಿ ಮಾಡಬೇಕು. ಇದಕ್ಕೆ ಹೆಚ್ಚು ಹೆಚ್ಚು ಮಕ್ಕಳನ್ನು ಪಡೆಯಲು ಮುಂದಾಗಬೇಕು. ಆಗ ಮಾತ್ರ ಇಷ್ಟ ಸಂತತಿ ಬೆಳೆಯುತ್ತದೆ. ಇಲ್ಲದಿದ್ದರೆ ದುಷ್ಟ ಸಂತತಿ ಬೆಳೆದು ನಮ್ಮ ಸಂಸ್ಕøತಿ, ಪರಂಪರೆ ನಷ್ಟವಾಗುತ್ತದೆ. ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಪಡೆದುಕೊಳ್ಳಿ. ಮಕ್ಕಳು ಹೆಚ್ಚು ಎನಿಸಿದರೆ ನಮ್ಮ ಸುಪರ್ದಿಗೆ ನೀಡಿ. ಮಠ ಅಂಥ ಮಕ್ಕಳಿಗೆ ವಿದ್ಯೆ, ಸಂಸ್ಕಾರ ನೀಡಿ ದೇಶದ ಆಸ್ತಿಯಾಗಿ ಅವರನ್ನು ಬೆಳೆಸುತ್ತದೆ ಎಂದು ಹೇಳಿದರು.


ಇಂದಿನ ಯುವ ದಂಪತಿಗಳು ಮಕ್ಕಳೇ ಬೇಡ ಎಂಬ ತೀರ್ಮಾನಕ್ಕೆ ಬರುತ್ತಿರುವುದು ವಿಷಾದನೀಯ. ಅಂಥ ನಿರ್ಧಾರವನ್ನು ನಿಮ್ಮ ತಂದೆ ತಾಯಿಯೂ ಕೈಗೊಂಡಿದ್ದರೆ ನೀವೇ ಇಲ್ಲಿ ಇರುತ್ತಿರಲಿಲ್ಲ ಎಂದು ಮಾರ್ಮಿಕವಾಗಿ ನುಡಿದರು.


ಅಂಕಣಕಾರ ರೋಹಿತ್ ಚಕ್ರತೀರ್ಥ ಮಾತನಾಡಿ, ನಮ್ಮಿಂದ ಸೇವೆ ಪಡೆದವರು ಕೂಡಾ ಸಂತುಷ್ಟರಾಗುವಂತಿರಬೇಕು. ತೋರಿಕೆಯ ಸೇವೆ ಬೇಡ; ಇದರಿಂದ ಯಾವ ಉಪಯೋಗವೂ ಇಲ್ಲ. ಜಗತ್ತಿನ ಎಲ್ಲರಿಗೂ ಸಲ್ಲುವ ಸೇವೆ ನಿಜವಾದ ಸೇವೆ ಎಂದು ಹೇಳಿದರು.


ಆರೆಸ್ಸೆಸ್ ಮುಖಂಡ ಕಜಂಪಾಡಿ ಸುಬ್ರಹ್ಮಣ್ಯ ಭಟ್, ನಮ್ಮಲ್ಲಿ ವಿಕಾಸದ ಕಥೆಯನ್ನು ಉಪನಿಷತ್‍ಗಳಲ್ಲಿ ಹೇಳಿದೆ. ಆಕಾಶ, ವಾಯು, ಅಗ್ನಿ, ನೀರು, ಮಣ್ಣು ಹೀಗೆ ಪಂಚಭೂತಗಳಿಂದ ನಮ್ಮ ವಿಕಾಸವಾಗಿದೆ ಎನ್ನುವುದು ಭಾರತೀಯ ಪರಿಕಲ್ಪನೆ ಎಂದು ಪ್ರತಿಪಾದಿಸಿದರು.


ಸಮೂಹದ ಪರಿಕಲ್ಪನೆ ಭಾರತದಲ್ಲಿ ಮಾತ್ರ ಇದೆ. ಕಾಮ, ಕ್ರೋಧ, ಲೋಭ ಇವು ಮೂರು ನರಕಕ್ಕೆ ದಾರಿ. ಇವುಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಇಡೀ ವಿಶ್ವದ ವಿಕಾಸಕ್ಕೆ ಭಾರತದ ಕೊಡುಗೆ ಅಪಾರ. ಇದನ್ನು ಅರ್ಥ ಮಾಡಿಕೊಂಡು ಭಾರತೀಯ ಯುವ ಪೀಳಿಗೆ ಭಾರತೀಯ ಸಂಸ್ಕøತಿ ಪರಂಪರೆಯ ಬಗ್ಗೆ ಗೌರವ ಹೊಂದಿ ಅದನ್ನು ಪಾಲಿಸಬೇಕು ಎಂದು ಸಲಹೆ ಮಾಡಿದರು.


ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಹವ್ಯಕ ಮಹಾಮಂಡಲ ಅಧ್ಯಕ್ಷ ಆರ್.ಎಸ್.ಹೆಗಡೆ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಹೇಶ್ ಕಜೆ,ಶ್ರೀ ಮಠದ ಲೋಕಸಂಪರ್ಕಾಧಿಕಾರಿ ಹರಿಪ್ರಸಾದ್ ಪೆರಿಯಾಪು  ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top