|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಂಸ್ಕೃತಿಯ ರೂಪಕ ' ಗಣಪತಿ '

ಸಂಸ್ಕೃತಿಯ ರೂಪಕ ' ಗಣಪತಿ '


ಭಾರತೀಯ ಸಂಸ್ಕತಿಯಲ್ಲಿ ಗಣಪತಿಯ ಸ್ಥಾನವು ವ್ಯಾಪಕವೂ ಹಾಗೂ ಮಹತ್ವದ್ದಾಗಿದೆ. ಈತ ಗಣನಾಯಕ ಗಣಾಧಿಪತಿ. ವೇದೋಪನಿಷತ್ತು, ಪುರಾಣ, ತಂತ್ರ, ಸ್ಮೃತಿ ಗ್ರಂಥಗಳಲ್ಲಿ, ಐತಿಹಾಸಿಕ ಕಾವ್ಯಗಳಾದ ರಾಮಾಯಣ ಮಹಾಭಾರತಗಳಲ್ಲಿ, ಅನೇಕ ಕಾವ್ಯ ಗ್ರಂಥಗಳಲ್ಲಿ ಈತನ ಗುಣಮಹಿಮೆಗಳನ್ನು ಸಾರಲಾಗಿದೆ. ಜೈನ ಹಾಗೂ ಬೌದ್ಧ ಗ್ರಂಥಗಳಲ್ಲಿಯೂ ಗಣಪತಿಗೆ ಸ್ಥಾನವಿದೆ.


ಋಗ್ವೇದದಲ್ಲಿ ಗಣಪತಿಯ ಉಲ್ಲೇಖವನ್ನು ನೋಡಬಹುದು. ವೇದದ ಭಾಷ್ಯಕಾರ ಸಾಯಣರ ಪ್ರಕಾರ ಗಣಪತಿಯು ದೇವಾದಿ ದೇವತೆಗಳೊಂದಿಗೆ ಸಂಬಂಧ ಉಳ್ಳವನಾಗಿದ್ದಾನೆ ಹಾಗೂ ಮಂತ್ರಗಳಿಗೆ ಒಡೆಯನಾದ ಬ್ರಹ್ಮಣಸ್ಪತಿ ಆಗಿದ್ದಾನೆ. ಶುಕ್ಲ ಯಜುರ್ವೇದ, ಐತರೇಯ ಬ್ರಾಹ್ಮಣದಲ್ಲಿ ಇಂತಹ ಗಣಪತಿ ಸಂಬಂಧಿ ಮಂತ್ರಗಳನ್ನು ಹೇಳಲಾಗಿದೆ.


ಋಗ್ವೇದದಲ್ಲಿ ಗಣಪತಿಗೆ ಭೀಮ, ಈಶಾನ, ಮಹಾಹಸ್ತಿ ಎಂಬ ವಿಶೇಷಣ ಕಂಡು ಬರುತ್ತದೆ. ಸ್ಕಂಧಸ್ವಾಮಿಯ ಋಗ್ವೇದ ಭಾಷ್ಯದಲ್ಲಿ ಬ್ರಹ್ಮಣಸ್ಪತಿ, ಗಣಪತಿ ಮುಂತಾದ ಹೆಸರು ಗಜಾನನನೆ ಎಂದು ಹೇಳಲಾಗಿದೆ. 

 

ಗಣಪತಿ ಉಪನಿಷದ್ ಹಾಗೂ ಗಣಪತಿ ಅಥರ್ವಶೀರ್ಷ ಉಪನಿಷತ್ತಿನಲ್ಲಿ ಗಣಪತಿಯನ್ನು ಪರಾತ್ಪರ  ಎಂದು   ವರ್ಣಿಸಲಾಗಿದೆ. ಇನ್ನು ಗಣೇಶ ಪೂರ್ವತಾಪಿನೀ ಉಪನಿಷತ್, ಉತ್ತರತಾಪಿನೀ ಉಪನಿಷತ್ , ಹೇರಂಭೋಪನಿಷತ್ ಮುಂತಾದ ಉಪನಿಷತ್ತುಗಳಲ್ಲೂ ಗಣಪತಿಯನ್ನು ವರ್ಣಿಸಲಾಗಿದೆ. ಗಣೇಶ, ಗಣಪತಿ, ಏಕದಂತ, ದಂತಿ ಇತ್ಯಾದಿ ಹೆಸರುಗಳು ಉಪನಿಷತ್ತುಗಳಲ್ಲಿ ಕಾಣಬಹುದು. ಯಾಜ್ಞವಲ್ಕ್ಯ ಸ್ಮೃತಿ, ಗೋಭಿಲಸ್ಮೃತಿ, ಗೃಹ್ಯ ಸೂತ್ರ, ಬೋಧಾಯನನ ಧರ್ಮ ಸೂತ್ರ, ಮನುಸ್ಮೃತಿ ಇತ್ಯಾದಿ ಗ್ರಂಥಗಳಲ್ಲಿ ಗಣಪತಿಯ ಬಗ್ಗೆ ವಿವರಣೆ ಸಿಗುತ್ತದೆ.


ರಾಮಾಯಣದ ಯುದ್ಧ ಕಾಂಡದಲ್ಲಿ ಗಣಪತಿಯ ಉಲ್ಲೇಖವಿದೆ. ಮಹಾಭಾರತದಲ್ಲಿ 'ಗಣೇಶ್ವರವಿನಾಯಕ:' ಇತ್ಯಾದಿ ವಿವರ ನೋಡಿದರೆ ಇವನು ಆವಾಗಲೇ ಗಣೇಶ್ವರನು ಎಂದು, ವಿನಾಯಕನು ಎಂದು ಪ್ರಸಿದ್ಧನಾಗಿರುವುದು ಕಂಡು ಬರುತ್ತದೆ. ಮಹಾಭಾರತದ ಲಿಪಿಕಾರ ಇವನೇ ಆಗಿದ್ದಾನೆ. 


ನಾರದ ಪುರಾಣದಲ್ಲಿ ಗಣಪತಿ ತತ್ವವನ್ನು ಹೇಳಿರುವುದು ಮಾತ್ರವಲ್ಲದೆ ಈತನನ್ನು ಶೂರ್ಪ ಕರ್ಣ, ಗಜಕರ್ಣನು ಎಂದೂ ಹೇಳಲಾಗಿದೆ. ಮುದ್ಗಲ ಪುರಾಣದಲ್ಲಿ ಗಣಪತಿಯ ಮೂವತ್ತೆರಡು ರೂಪಗಳನ್ನು ಹೇಳಲಾಗಿದೆ. ಅಗ್ನಿಪುರಾಣದಲ್ಲಿ ಗಣಪತಿಯನ್ನು ಗಾಂಗೇಯನೆಂದು ಕರೆಯಲಾಗಿದೆ. ಶಿವಪುರಾಣದ ಪ್ರಕಾರ ಈತನು ಗೌರಿಯ ಬೆವರಿನಿಂದ ಜನ್ಮತಾಳಿದವನು. ವರಾಹ ಪುರಾಣ, ಸ್ಕಂದ ಪುರಾಣ, ಬ್ರಹ್ಮವೈವರ್ತ ಪುರಾಣಗಳಲ್ಲಿ ಗಜವದನನ ಕಥೆ ವಿಧ ವಿಧವಾಗಿ  ವರ್ಣಿಸಲಾಗಿದೆ. ಹಾಗೆಯೇ ಲಿಂಗ ಪುರಾಣ, ಮತ್ಸ್ಯ ಪುರಾಣ, ಭವಿಷ್ಯ ಪುರಾಣ, ಬ್ರಹ್ಮ ಪುರಾಣ, ಗರುಡ ಪುರಾಣ, ವಾಮನಪ್ ಪುರಾಣ, ಬ್ರಹ್ಮಾಂಡ ಪುರಾಣಗಳಲ್ಲಿ ಗಣಪತಿಯ ಕುರಿತು ಸ್ವಾರಸ್ಯಕರ ಕಥೆಗಳಿವೆ. 


ಪ್ರಸಿದ್ಧ ಕಥೆಗಳ ಆಗರ ವಿಷ್ಣು ಶರ್ಮನ ಪಂಚತಂತ್ರ, ಭೋಜರಾಜನ ಚಂಪೂ ರಾಮಾಯಣದ ಮಂಗಳ ಶ್ಲೋಕದಲ್ಲಿ , ಧನಂಜಯನ ದಶ ರೂಪಕದಲ್ಲಿ ಗಣಪತಿಯನ್ನು ಸ್ತುತಿಸಲಾಗಿದೆ. ಪ್ರಪಂಚಸಾರ, ಶಾರದಾತಿಲಕ ಹಾಗೂ ಮಂತ್ರಮಹಾರ್ಣವಗಳಲ್ಲಿ ಮಹಾಗಣಪತಿಯ ಯಾಗದ ಬಗ್ಗೆ ಹೇಳಲಾಗಿದೆ. ಭವಭೂತಿಯ ಮಾಲತಿಮಾಧವ ಹಾಗೂ ಉತ್ತರರಾಮಚರಿತ ನಾಟಕಗಳಲ್ಲಿ ಗಣಪತಿಯನ್ನು ಸ್ತುತಿಸುವ ಪದ್ಯಗಳಿವೆ.   


ಬೌದ್ಧ ಮತ್ತು ಜೈನ ಧರ್ಮ ಗ್ರಂಥಗಳಲ್ಲಿಯೂ ವಿನಾಯಕನ ನಂಬಿಕೆಯೊಂದಿಗೆ ಪೂಜೆ ಪುನಸ್ಕಾರಗಳನ್ನು ಕಾಣಬಹುದು. ಬೌದ್ಧ ತಂತ್ರ ಗ್ರಂಥ ಸಾಧನಮೂಲದಲ್ಲಿ ಹೇಳಿದ ಸಾಧನಾ ಮಂತ್ರವು ಪುರುಷರೂಪಿ ಗಣಪತಿ ಹಾಗೂ ಗಣಪತಿಯ ಶಕ್ತಿಯನ್ನು ಕುರಿತದ್ದಾಗಿದೆ. ಜೈನರ ಮಂಜುಶ್ರೀ ಮೂಲಕಲ್ಪದ ಗ್ರಂಥದಲ್ಲಿ ಗಣಪತಿಯ ಬಗ್ಗೆ ಹೇಳಲಾಗಿದೆ. ಜೈನಧರ್ಮದಲ್ಲಿ ಜಿನೇಂದ್ರನೇ ವಿನಾಯಕ. ಮುನಿಗಳಿಗೆ ಅಧಿಪತಿ ಎಂಬುದಾಗಿ ಹೇಳಲಾಗಿದೆ. 


ಭಾರತೀಯ ಸಂಸ್ಕೃತಿಯು ಪಸರಿಸಿದಂತೆ ಗಣಪತಿಯು ಸಹ ಸಂಸ್ಕೃತಿಯ ಭಾಗವಾದನೆಂದು ಹೇಳಬಹುದು. ಪ್ರೀತಿಯ ಆರಾಧಕ ದೇವನಾಗಿ ಇಂದು ವಿಶ್ವವ್ಯಾಪಿಯಾಗಿ ಬೆಳಗಿರುವ ದೇವನೀತ. ಒಂದು ರೀತಿಯಲ್ಲಿ ಸಂಸ್ಕೃತಿಯ ಹರಿಕಾರ.

-ಡಾ. ಪ್ರಸನ್ನಕುಮಾರ್ ಐತಾಳ್.

ಸಂಸ್ಕೃತ ಪ್ರಾಧ್ಯಾಪಕರು

ಎಸ್.ಡಿ.ಎಂ ಕಾಲೇಜು, ಉಜಿರೆ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

0 Comments

Post a Comment

Post a Comment (0)

Previous Post Next Post