ಶಿಕ್ಷಣದೊಂದಿಗೆ ಆದರ್ಶ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು: ಡಾ. ಡಿ. ವೀರೇಂದ್ರ ಹೆಗ್ಗಡೆ

Upayuktha
0

• ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸಾಧಕರನ್ನು ಸನ್ಮಾನಿಸಿದರು.

• ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ವಿಜೇತ ಗುರುರಾಜ್ ಪೂಜಾರಿ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.




ಉಜಿರೆ: ವಿದ್ಯಾರ್ಥಿಗಳು ತಮಗೆ ಸಿಗುವ ಅವಕಾಶದ ಸದುಪಯೋಗ ಪಡೆದು ಉತ್ತಮ ಚಾರಿತ್ರ್ಯವನ್ನು ಮೈಗೂಡಿಸಿಕೊಂಡು ಆದರ್ಶ ವ್ಯಕ್ತಿತ್ವ ನಿರ್ಮಾಣ ಮಾಡಿಕೊಳ್ಳಬೇಕು. ಸಮಾಜದ ಸಭ್ಯ, ಸುಸಂಸ್ಕøತ ನಾಗರಿಕರಾಗಿ ರೂಪುಗೊಳ್ಳಬೇಕು. ಕೇವಲ ಜ್ಞಾನ ಸಂಗ್ರಹ ಶಿಕ್ಷಣದ ಗುರಿಯಾಗಬಾರದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.


ಅವರು ಬುಧವಾರ ಉಜಿರೆಯಲ್ಲಿ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನಲ್ಲಿ ಉನ್ನತ ಸಾಧನೆ ಮಾಡಿದ ಸಾಧಕರನ್ನು ಗೌರವಿಸಿ ಅಭಿನಂದಿಸಿದರು.


ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವುದೇ ಸಾಧಕರ ಸನ್ಮಾನದ ಉದ್ದೇಶವಾಗಿದೆ. ಪ್ರಾಥಮಿಕ ಶಾಲಾ ಹಂತದಿಂದಲೇ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರವನ್ನು ಗುರುತಿಸಿ ಕಠಿಣ ಪರಿಶ್ರಮ ಮತ್ತು ನಿರಂತರ ಅಭ್ಯಾಸದೊಂದಿಗೆ ಉನ್ನತ ಸಾಧನೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಸಿ.ಸಿ. ಟಿ.ವಿ. ಯಂತೆ ದೇವರು ಅಗೋಚರವಾಗಿ ನಮ್ಮ ಎಲ್ಲಾ ಚಟುವಟಿಕೆಗಳನ್ನು ಗಮನಿಸುತ್ತಾರೆ. ಆದುದರಿಂದ ಪ್ರತಿಯೊಬ್ಬರೂ ತಮ್ಮ ಕಾರ್ಯಕ್ಷೇತ್ರದಲ್ಲಿ ಸತ್ಯ, ಧರ್ಮ, ನ್ಯಾಯ, ನೀತಿಯ ಪರಿಪಾಲನೆಯೊಂದಿಗೆ ಪ್ರಾಮಾಣಿಕ ವ್ಯವಹಾರ ನಡೆಸಬೇಕು. ಆತ್ಮಸಾಕ್ಷಿಗೆ ಸರಿಯಾಗಿ ಕರ್ತವ್ಯ ಮಾಡಬೇಕು ಎಂದು ಹೇಳಿದರು.


ಗ್ರಾಮೀಣ ಪ್ರದೇಶವಾದ ಉಜಿರೆಯಲ್ಲಿ 1966 ರಲ್ಲಿ ಕಾಲೇಜನ್ನು ಪ್ರಾರಂಭಿಸಿದ ತನ್ನ ತೀರ್ಥರೂಪರಾದ ಕೀರ್ತಿಶೇಷ ಡಿ. ರತ್ನವರ್ಮ ಹೆಗ್ಗಡೆಯವರು, ಸ್ಥಾಪಕ ಪ್ರಾಂಶುಪಾಲ ಪ್ರೊ. ಎಸ್. ಪ್ರಭಾಕರ್, ಕಾರ್ಯದರ್ಶಿಗಳಾದ ಡಾ. ಬಿ. ಯಶೋವರ್ಮ ಮತ್ತು ಡಿ. ಹಷೇಂದ್ರ ಕುಮಾರ್ ಮೊದಲಾದವರ ಸೇವೆಯನ್ನು ಹೆಗ್ಗಡೆಯವರು ಸ್ಮರಿಸಿದರು.


ಇತ್ತೀಚೆಗೆ ನಿಧನರಾದ ಡಾ. ಬಿ. ಯಶೋವರ್ಮರು ಉಜಿರೆ ಕಾಲೇಜನ್ನು ಪ್ರಯೋಗಶಾಲೆಯಾಗಿ ಮಾಡಿ ಅನೇಕ ಕ್ರಾಂತಿಕಾರಿ ಸುಧಾರಣೆಗಳನ್ನು ಮಾಡಿರುವುದಲ್ಲದೆ ಉಜಿರೆಯನ್ನು ಸೌಂದರ್ಯಗೊಳಿಸಲು ವಿಶೇಷ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದರು.


ಶಾಸಕ ಹರೀಶ್ ಪೂಂಜ ಮಾತನಾಡಿ, ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ತಮ್ಮ ಆಸಕ್ತಿಯ ಕ್ಷೇತ್ರವನ್ನು ಗುರುತಿಸಿಕೊಂಡು ಪ್ರಬಲ ಇಚ್ಛಾಶಕ್ತಿಯೊಂದಿಗೆ ನಿರಂತರ ಅಭ್ಯಾಸ, ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ಪ್ರಯತ್ನಿಸಿದಲ್ಲಿ ಉನ್ನತ ಸಾಧನೆಯೊಂದಿಗೆ ಯಶಸ್ಸು ಪಡೆಯಬಹುದು ಎಂದು ಹೇಳಿದರು.

ಉಜಿರೆಯ ಸರ್ವತೋಮುಖ ಪ್ರಗತಿಗೆ ಡಾ. ಬಿ. ಯಶೋವರ್ಮರ ಭಗೀರಥ ಪ್ರಯತ್ನವನ್ನು ಅವರು ಧನ್ಯತೆಯಿಂದ ಸ್ಮರಿಸಿದರು.


ಸನ್ಮಾನ: ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನಗೊಂಡಿರುವ ಡಿ. ವೀರೇಂದ್ರ ಹೆಗ್ಗಡೆಯವರು, ಶಾಸಕ ಹರೀಶ್ ಪೂಂಜ ಮತ್ತು ಎಸ್.ಡಿ.ಎಂ. ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ವಿಜೇತ ಗುರುರಾಜ್ ಪೂಜಾರಿ ಅವರನ್ನು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ವತಿಯಿಂದ ಗೌರವಿಸಲಾಯಿತು.


ಕಾಲೇಜಿನ ಉಪಪ್ರಾಂಶುಪಾಲ ಡಾ. ಎ. ಜಯಕುಮಾರ್ ಶೆಟ್ಟಿ ವಾರ್ಷಿಕ ವರದಿ ಸಾದರ ಪಡಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಪಿ.ಎನ್. ಉದಯಚಂದ್ರ ಸ್ವಾಗತಿಸಿದರು. ಕಲಾವಿಭಾಗದ ಡೀನ್ ಡಾ. ಶಲೀಪ್ ಕುಮಾರಿ ಧನ್ಯವಾದವಿತ್ತರು.


ಡಾ. ಬಿ.ಎ. ಕುಮಾರ್ ಹೆಗ್ಡೆ, ಡಾ. ಚಿತ್ರಾ ಮತ್ತು ಡಾ. ನೆಫಿಸೆತ್ ಕಾರ್ಯಕ್ರಮ ನಿರ್ವಹಿಸಿದರು.


ಸನ್ಮಾನಕ್ಕೆ ಕೃತಜ್ಞತೆ ವ್ಯಕ್ತಪಡಿಸಿ ಮಾತನಾಡಿದ ಕಾಲೇಜಿನ ಹಿರಿಯ ವಿದ್ಯಾರ್ಥಿ ಗುರುರಾಜ್ ಪೂಜಾರಿ 2010 ರಿಂದ 5 ವರ್ಷಗಳ ಕಾಲ ತಾನು ಎಸ್.ಡಿ.ಎಂ. ಕಾಲೇಜಿನಲ್ಲಿ ಪಡೆದ ತರಬೇತಿ, ಪ್ರೋತ್ಸಾಹ ಮತ್ತು ಮಾರ್ಗದರ್ಶನವನ್ನು ಕೃತಜ್ಞತೆಯೊಂದಿಗೆ ಸ್ಮರಿಸಿದರು.


ದೈಹಿಕ ಶಿಕ್ಷಣ ನಿರ್ದೇಶಕರಾದ ರಮೇಶ್ ಹೆಚ್, ಶಾರದಾ ಮತ್ತು ರಾಜೇಂದ್ರಪ್ರಸಾದ್ ಅವರ ನಿರಂತರ ತರಬೇತಿ ಮತ್ತು ಪ್ರೋತ್ಸಾಹ ಉಲ್ಲೇಖನೀಯವಾಗಿದೆ ಎಂದರು.


ನಿರ್ಧಿಷ್ಠ ಗುರಿಯೊಂದಿಗೆ ಯಾವುದೇ ಕ್ಷೇತ್ರದಲ್ಲಿ ಕಠಿಣ ಪರಿಶ್ರಮ ಮತ್ತು ನಿರಂತರ ಅಭ್ಯಾಸ ಮಾಡಿದಲ್ಲಿ ಯಶಸ್ಸು ಖಚಿತ ಎಂದು ಹೇಳಿದರು.


ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಕೊನೆಯ ಕ್ಷಣದಲ್ಲಿ ತನ್ನ ಆರೋಗ್ಯದಲ್ಲಿ ವ್ಯತ್ಯಯವಾದರೂ ಮಡದಿಯ ಮಮತೆಯ ಶುಭಹಾರೈಕೆ, ಕುಟುಂಬದವರ ಪ್ರೋತ್ಸಾಹ, ಎಲ್ಲರ ಶುಭಹಾರೈಕೆಯೊಂದಿಗೆ ಹೊಸ ಸ್ಪೂರ್ತಿ ಮತ್ತು ಚೈತನ್ಯ ಮೂಡಿಬಂದು ಕಂಚಿನ ಪದಕ ಪಡೆಯಲು ಸಾಧ್ಯವಾಯಿತು. ಇಂದಿನ ಸನ್ಮಾನ ಅತ್ಯಂತ ಮುದ ನೀಡಿದೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top