ಚೌಟರ ತೋಟ ಮತ್ತು ನರೇಂದ್ರ ರೈ ದೇರ್ಲ

Upayuktha
0

ಡಾ| ನರೇಂದ್ರ ರೈ ದೇರ್ಲ ಅವರು ನನ್ನ ಆನ್‌ಲೈನ್‌ ಸ್ನೇಹಿತರು. ಅವರು ಬರೆದ ನಂದನವನ ಪುಸ್ತಕವನ್ನು ಓದಿ ಆಸ್ವಾದಿಸಿದವನು ನಾನು. ಕೃಷಿ ಕುಟುಂಬದಿಂದಲೇ ಬಂದ ಅವರು ಕೃಷಿಯ ಬಗ್ಗೆ ಆಸಕ್ತಿ ಹೊಂದಿದವರು.  ಇತ್ತೀಚೆಗೆ ಫೇಸ್ ಬುಕ್ಕಲ್ಲಿ ಇವರು ಬರೆದು ಪ್ರಿಂಟಿಗೆ ಹೋಗಿದ್ದ ಚೌಟರ ತೋಟದ ಬಗ್ಗೆ ಬರೆದಿದ್ದರು. ನನಗೊಂದು ಪ್ರತಿ‌ ಇರಲಿ ಎಂದಿದ್ದೆ.


ಒಂದು ದಿನ ನನಗೆ ವಾಟ್ಸ್ ಆಪ್ ಮೆಸ್ಸೇಜ್‌ ಮಾಡಿ ಪುಸ್ತಕ ಕಳುಹಿಸಿದ್ದೇನೆ ಎಂದಿದ್ದರು. ಕಳೆದ ಸಲವೂ ಇದೇ ರೀತಿ ಪುಸ್ತಕ ಕಳುಹಿಸಿ ಮೆಸ್ಸೇಜ್ ಮಾಡಿದ್ದರು. ಹಣ ಕೇಳಿದಾಗ ಪುಸ್ತಕ ನಿಮಗೆ ತಲಪಿದ ಮೇಲೆ ಮೊತ್ತ ಪಾವತಿಸಿ‌ ಅಂದಿದ್ದರು. ಇದನ್ನು ಕೇಳಿದಾಗ ಜಿ.ಟಿ.ನಾರಾಯಣ ರಾಯರು ತಮ್ಮ ಆತ್ಮಕತೆಯಲ್ಲಿ ಬರೆದ ಒಬ್ಬ ಅಪ್ರಾಮಾಣಿಕನಿಗಾಗಿ ಹತ್ತು ಪ್ರಾಮಾಣಿಕರನ್ನು ಸಂದೇಹಿಸ ಬೇಡ ಎಂಬ ಮಾತು ನೆನಪಿಗೆ ಬಂತು.


ಮೊನ್ನೆ ಪುಸ್ತಕ ಕೈಗೆ ಬಂತು. ಕೂಡಲೇ ಓದಲು ಸುರು ಮಾಡಿ ಸಂಜೆಯೊಳಗೆ ಕೊನೆಯ ಪಂಕ್ತಿಯೂ ಓದಿ ಮುಗಿಸಿದ್ದೆ. ಚೌಟರು ನನಗೆ ಸ್ನೇಹಿತರಲ್ಲ. ಆದರೆ ಪರಿಚಿತರು. ಬಹುಶ: ಅವರಿಗೆ ನಾನು ಪರಿಚಿತನಲ್ಲ. ಸಿ.ಪಿ.ಸಿಅರ್.ಐ ಯವರು ಆಯೋಜಿಸಿದ ಹಾಗೆಯೇ ಅವರು ಭಾಗವಹಿಸಿದ ಹಲವು ಕಾರ್ಯಕ್ರಮಗಳಲ್ಲಿ ನಾನು ಸಭಿಕನಾಗಿ ಭಾಗಿಯಾಗಿದ್ದವ.


ಪುಸ್ತಕದಲ್ಲಿ ಬರೆದಂತೆ ಈ ಮನುಷ್ಯ ಅಹಂಕಾರಿಯೇನೋ ಅಂದನಿಸಿದ್ಧು ಇತ್ತು ನನಗೆ ಕೆಲವು ಸಲ. ನಮಸ್ಕಾರ ಮಾಡಿದಾಗ ಪ್ರತಿ ನಮಸ್ಕಾರವಷ್ಟೇ ಮಾಡಿ ಕುಳಿತ ಇವರನ್ನು ಮಾತನಾಡಿಸುವ ಗೋಜಿಯೇ ಬೇಡ ಎಂದೂ ಅನ್ನಿಸಿತ್ತು. ಅವರ ಬಳಿಯೇ ಕುಳಿತ ವಾಚಾಳಿಯಾದ ನಾನು ಮೌನವಾಗಿಯೇ ಇದ್ದೆ.


ಸ್ಟೇಜಿಗೆ ಹೋಗಿ ಮಾತನಾಡಲು ಸುರುಮಾಡಿದ ಇವರ ಕೃಷಿಯ ಬಗ್ಗೆಗಿನ ಆಳವಾದ ಜ್ಞಾನಕ್ಕೆ ಮಾರು ಹೋಗಿದ್ದೆ ಅಂದು. ಬಹುಶ: ಅವರು ಅಂದಂತೆ ಅವರು ಇರುವುದೇ ಹಾಗೆ. ಸಭಾ ಕಾರ್ಯಕ್ರಮದ ನಂತರ ನಮಸ್ಕರಿಸಿ ತುಂಬಾ ಚೆನ್ನಾಗಿ ಮಾತನಾಡಿದ್ದೀರಿ ಅಂದಿದ್ದೆ. ಮುಗುಳ್ನಕ್ಕ ಅವರು ತಲೆಯಷ್ಟೇ ಅಲ್ಲಾಡಿಸಿ ಮುಂದುವರಿದಿದ್ದರು. ಆ ಮೇಲೂ ಅವರ ಕಾರ್ಯಕ್ರಮಗಳು ಇದ್ದಲ್ಲಿ ಸಭಿಕನಾಗಿ ಹೋಗಿದ್ದರೂ ಅವರ ಬಳಿ ಮಾತನಾಡಿಸಿರಲಿಲ್ಲ. ಕೇವಲ ನಮಸ್ಕಾರ ಪ್ರತಿ ನಮಸ್ಕಾರಕ್ಕಷ್ಟೇ ಸೀಮಿತ ನಮ್ಮ ಪರಿಚಯ.


ಸ್ವಾಮೀ ಸತ್ಯ ಹೇಳ್ತೇನೆ ಈ ಬೊಂಡದ ಚೌಟರ ತೋಟಕ್ಕೆ (ಅವರು ಬೊಂಡದ ವ್ಯಾಪಾರ ಸುರು ಮಾಡಿದ ಸಮಯದಲ್ಲಿ ಹಾಗೆಯೇ ಕರೆಯಲ್ಪಡುತ್ತಿದ್ದರು) ನಾನು ಈ ವರೆಗೆ ಭೇಟಿ ನೀಡಿಲ್ಲ. ಆದರೆ ಮೊನ್ನೆ ಸಂಪೂರ್ಣ ಭೇಟಿ ಮಾಡಿಯೇ ಬಿಟ್ಟೆ. ನರೇಂದ್ರ ರೈ ದೇರ್ಲರವರ ಚೌಟರ ತೋಟ ಪುಸ್ತಕದ ಮೂಲಕ.


ಒಂದು ಪುಸ್ತಕವನ್ನು ವಿಂಗಡಿಸುವ ಕ್ರಮ. ಎಲ್ಲೆಲ್ಲಿ ಯಾವ ಯಾವ ವಿಷಯದ ಪ್ರಸ್ತಾಪ ಮಾಡಬೇಕು ಹಾಗೆಯೇ ವಿಷಯ ಓದುಗನಿಗೆ ಮನದಟ್ಟಾಗುವಂತೆ ಹೇಗೆ ವಿವರಿಸ ಬೇಕು ಎಂಬುದನ್ನು ನರೇಂದ್ರ ರೈಯವರಿಂದ ಕಲಿಯಬೇಕು. ಪುತ್ತೂರಿನ ಶೋಭಾಪ್ರೆಸ್ ನ ಮಾಲಿಕರಾದ ಎಂ.ಎಸ್. ರಘುನಾಥರಾಯರ ಅಕ್ಷರಯಾನ ದಲ್ಲಿ ಕಂಡ ಶಿಸ್ತು  ವಿಷಯ ಮಂಡನೆಯ ಪರಿ ಇಲ್ಲೂ ನಾನು ಕಂಡಿದ್ದೇನೆ.


ಪುಸ್ತಕದಲ್ಲಿ ಬಂದ ಮುಂಗಾರು ಪತ್ರಿಕೆಯ ಬಗ್ಗೆ ಎರಡು ಮಾತು ಬರೆಯಲೇ ಬೇಕಿದೆ. ಮುಂಗಾರು ಪತ್ರಿಕೆ ಪ್ರಾರಂಭಕ್ಕೆ ಮೊದಲು ಕೆಲವು ಪ್ರತಿಗಳನ್ನು ಅಚ್ಚು ಹಾಕಿ ನನ್ನಂತೆ ಹಲವೂ ಪತ್ರಿಕೆಗಳನ್ನು ಓದುತ್ತಿದ್ದ ಓದುಗರಿಗೆ ತಲಪಿಸುವ ಕೆಲಸ ನನ್ನ ಕಾರ್ಯಕ್ಷೇತ್ರವಾಗಿದ್ದ ಕುಂಬಳೆಯ ಪತ್ರಿಕಾ ಏಜೆಂಟ್ ಮಾಡಿದ್ದರು.


ಮೊದಲ ಪ್ರತಿಯಿಂದಲೇ ಮುಂಗಾರು ಪತ್ರಿಕೆಯನ್ನು ದಿನಾ ಕೊಂಡು ಓದುತ್ತಿದ್ದೆ. ವಡ್ಡರಸೆಯವರ ಅನುಭವವನ್ನು ಸಂಪೂರ್ಣ ಧಾರೆ ಎರೆದು ಬೆಳೆಸಿದ ಪತ್ರಿಕೆ ನೆಲಕಚ್ಚಿ ಹೋದಾಗ ಸಂಕಟ ಪಟ್ಟಿದ್ದೆ.  ನಿಜವಾಗಿಯೂ ಒಂದು ಉತ್ತಮ ಪತ್ರಿಕೆಯಾಗಿತ್ತು ಅದು. ಆದರೆ ವ್ಯವಹಾರದಲ್ಲಿ ತಪ್ಪಿದರೇ? ಅಲ್ಲಾ ಜನರ ನಾಡಿಬಡಿತ ಹಿಡಿಯಲು ತಪ್ಪಿದರೇ? ಎಂಬ ಸಂದೇಹ ಕಾಡುತ್ತಿತ್ತು. ಚೌಟರ ತೋಟ ಓದಿದ ಮೇಲೆ ನಾನು ಸಂದೇಹ ಒಳಗಿನ ಶತ್ರುಗಳೇ ಉತ್ತಮ ಪತ್ರಿಕೆಯೊಂದನ್ನು ಮುಳುಗಿಸಿದರೇ? ಎಂದು.


ಚೌಟರ ತೋಟ ದೊಂದಿಗೆ ಚೌಟ ಸಹೋದರರ ಪರಿಚಯವನ್ನೂ ಮಾಡಿಸಿದ ನರೇಂದ್ರ ರೈ‌ಯವರಿಗೆ ಅಭಿನಂದನೆಗಳು. ಚಂದ್ರಶೇಖರ ಚೌಟರ ಅಲ್ಪ ಸ್ವಲ್ಪ ಪರಿಚಯ (ಬಹುಶ: ವನ್ ವೇ) ನನಗಿದ್ದಂತೆ ಡಿ.ಕೆ.ಚೌಟರ ಪರಿಚಯವೂ ಅಲ್ಪ ಸ್ವಲ್ಪ ಇತ್ತು. ಆದರೆ ಸ್ವಭಾವದಲ್ಲಿ ಒಂದಷ್ಟು ವ್ಯತ್ಯಾಸ ಕಂಡವ ನಾನು. ಚಂದ್ರಶೇಖರ ಚೌಟರ ನಾನಿರುವುದೇ ಹೀಗೆ ಎಂಬ ವ್ಯಕ್ತಿತ್ವಕ್ಕಿಂತ ಭಿನ್ನ ವ್ಯಕ್ತಿತ್ವದ ಅನುಭವ ನನಗೆ ಡಿ.ಕೆ.ಚೌಟರೊಂದಿಗೆ ಆಗಿತ್ತು. ಅವರೊಂದಿಗೆ ಒಂದಷ್ಟು ಮಾತನಾಡಿಯೂ ಇದ್ದೆ. ಬರೆಯುತ್ತಾ ಹೋದರೆ  ಹಳೆಯ ನೆನಪುಗಳು ಹೊಸದಾಗಿ ಬರುತ್ತಾ ಇದೆ. ಆದ್ದರಿಂದ ಇಲ್ಲಿಗೆ ಮುಗಿಸೋಣ.


ಕೃಷಿ ಋಷಿಗಳ ಪರಿಚಯ ಮಾಡಿಸುವ ನರೇಂದ್ರರೈ ದೇರ್ಲರವರ ಈ ಸಾಹಸಕ್ಕೆ ಒಂದು ಅಭಿನಂದನೆ ಸಲ್ಲಿಸಲೇ ಬೇಕಾಗಿದೆ. ಅವರದ್ದೇ ಆದ ವಿಶಿಷ್ಟ ಶೈಲಿಯಲ್ಲಿ ಚೌಟರ ತೋಟವನ್ನು ಪರಿಚಯಿಸಿದ್ದಾರೆ. ನಿಸ್ಸಂಶಯವಾಗಿಯೂ ಕೃಷಿ ಆಸಕ್ತಿ ಇರುವವರು ಕೃಷಿಯಲ್ಲಿ ಪ್ರಯೋಗ ಮಾಡ ಬಯಸುವವರು ಕೊಂಡು ಓದಲೇ ಬೇಕಾದ ಪುಸ್ತಕ ಇದು.


ಇಲ್ಲಿ ನರೇಂದ್ರರೈ ಯವರು ಪುಸ್ತಕವನ್ನು ಪ್ಯಾಕ್ ಮಾಡಿದ ರೀತಿಯ ಬಗ್ಗೆ ಒಂದು ವಾಕ್ಯ ಬೇಕೆನಿಸಿದೆ. ಪೋಸ್ಟ್‌ ಮೂಲಕ ಬಂದ ಪ್ರತಿಯನ್ನು ಬಿಡಿಸಿದಾಗ ಅದನ್ನು ಕಳುಹಿಸಿದ ಕವರೇ ಅದಕ್ಕೆ ಏನೂ ಮಾಡದೆ ಬೈಂಡಿಂಗ್ ಪೇಪರ್ ಆಗುವಂತೆ ಪ್ಯಾಕ್ ಮಾಡಿದ್ದರು.


ನರೇಂದ್ರ ರೈ; ದೇರ್ಲ ಅವರಿಗೆ ಧನ್ಯವಾದಗಳೊಂದಿಗೆ ಈ ಬರವಣಿಗೆಗೆ ಕೊನೆಯ ಚುಕ್ಕಿ ಇಡುತ್ತಿದ್ದೇನೆ.

ನರೇಂದ್ರ ರೈ ಅವರ ಸಂಪರ್ಕ ಸಂಖ್ಯೆ : +91 94489 51939


-ಎಡನಾಡು ಕೃಷ್ಣ ಮೋಹನ ಭಟ್ಟ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top