ಹವ್ಯಕ ಸಂಘಗಳ ಸನ್ಮಾನ ಸ್ವೀಕರಿಸಿ ಹಿರಿಯ ಹೋರಾಟಗಾರ ಉಜ್ರೆ ಈಶ್ವರ ಭಟ್ಟ ಅಭಿಮತ
ಮಂಗಳೂರು: ಸುಮಾರು ತೊಂಬತ್ತು ವರ್ಷಗಳ ಹೋರಾಟ ಮತ್ತು ಸಾವಿರಾರು ಮಂದಿಯ ತ್ಯಾಗ ಬಲಿದಾನದಿಂದ ಬಹಳ ಕಷ್ಟ ಪಟ್ಟು ನಾವು ಸ್ವಾತಂತ್ರ್ಯ ಗಳಿಸಿದ್ದೇವೆ. ಅಮೂಲ್ಯವಾದ ಪಡೆದುಕೊಂಡಿರುವ ಈ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಸಮೃದ್ಧವಾದ ಮಹಾನ್ ಭಾರತವನ್ನು ಕಟ್ಟುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ನಿವೃತ್ತ ನ್ಯಾಯವಾದಿ, ಹಿರಿಯ ರಾಜಕೀಯ ಹೋರಾಟಗಾರ ಉಜ್ರೆ ಈಶ್ವರ ಭಟ್ ನುಡಿದರು.
ದ.ಕ. ಮತ್ತು ಕಾಸರಗೋಡು ಹವ್ಯಕ ಮಹಾಜನ ಸಭಾ, ಮಂಗಳೂರು ಹವ್ಯಕ ಸಭಾ ಮತ್ತು ಶ್ರೀಭಾರತೀ ಸೌಹಾರ್ದ ಸಹಕಾರಿ ನಿಯಮಿತ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ನಂತೂರಿನ ಭಾರತೀ ಕಾಲೇಜಿನ ಶಂಕರಶ್ರೀ ಸಭಾಭವನದಲ್ಲಿ ಜರಗಿದ ಸ್ವಾತಂತ್ರ್ಯದ ಅಮೃತ ಮಹೋತ್ಸವ ವಿಶೇಷ ಕಾರ್ಯಕ್ರಮದಲ್ಲಿ ತನಗೆ ನೀಡಿದ ಸನ್ಮಾನಕ್ಕೆ ಉತ್ತರವಾಗಿ ಅವರು ಮಾತಾಡುತ್ತಿದ್ದರು.
ಮಹಿಳೆಯರ ಸ್ವಾಭಿಮಾನ ಮತ್ತು ಸ್ವಾವಲಂಬನೆಗಾಗಿ ದುಡಿದ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸೌರ್ಕುಡೇಲು ಮಹಾಬಲೇಶ್ವರ ಭಟ್ ಅವರ ಪತ್ನಿ ಶ್ರೀಮತಿ ಸರಸ್ವತಿ ಭಟ್ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಮಹಿಳೆಯರ ಸ್ಥಾನಮಾನ ಮತ್ತು ಗೌರವಕ್ಕಾಗಿ ತಾನು ಶ್ರಮಿಸಿದ ದಿನಗಳನ್ನು ಅವರು ಸ್ಮರಿಸಿಕೊಂಡರು.
ಭಾರತಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಮಹಿಳೆಯರು ದೇಶಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಿದರು. ರಾಜೀ ಬಾಲಕೃಷ್ಣ ಕಾಕುಂಜೆ ನೇತೃತ್ವದಲ್ಲಿ ಸ್ವಾತಂತ್ರ್ಯದ ವೀರವನಿತೆಯರು ಎಂಬ ವಿಶೇಷ ರೂಪಕವನ್ನು ಪ್ರದರ್ಶಿಸಲಾಯಿತು.
ಡಾ. ಶ್ರೀಕೃಷ್ಣ ಭಟ್ ಸುಣ್ಣಂಗುಳಿ ಅವರು ಸ್ವಾತಂತ್ರ್ಯ ಹೋರಾಟದ ಹೆಜ್ಜೆಗುರುತುಗಳು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಬ್ರಿಟಿಷರು ಈ ದೇಶಕ್ಕೆ ಮಾಡಿದ ಲಾಭಕ್ಕಿಂತ ನಮಗಾದ ನಷ್ಟವೇ ಹೆಚ್ಚು ಎಂದು ಅವರು ಅಭಿಪ್ರಾಯ ಪಟ್ಟರು.
ಸಭಾಧ್ಯಕ್ಷತೆಯನ್ನು ದ.ಕ. ಮತ್ತು ಕಾಸರಗೋಡು ಹವ್ಯಕ ಮಹಾಜನ ಸಭಾದ ಅಧ್ಯಕ್ಷ ನಿಡುಗಳ ಕೃಷ್ಣ ಭಟ್ ವಹಿಸಿದ್ದರು. ಮಂಗಳೂರು ಹವ್ಯಕ ಸಭಾದ ಅಧ್ಯಕ್ಷ ಡಾ. ರಾಜೇಂದ್ರಪ್ರಸಾದ್ ಸ್ವಾಗತಿಸಿದರು. ಶ್ರೀ ಭಾರತೀ ಸೌಹಾರ್ದ ಸಹಕಾರ ನಿಯಮಿತದ ಅಧ್ಯಕ್ಷ ಜಿ. ಕೆ. ಭಟ್ ಕೊಣಾಜೆ ವಂದಿಸಿದರು. ಕೆ. ಈಶ್ವರ ಭಟ್ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ