ಅಚ್ಚಳಿಯದ ನೆನಪುಗಳನ್ನು ಬಿತ್ತಿದ 'ಕೆಸರ್ಡೊಂಜಿ ದಿನ'

Upayuktha
0

ಲವಾರು ಪಠ್ಯ ಪಠ್ಯೇತರ ಚಟುವಟಿಕೆಗಳ ಆಯೋಜನೆಯ ಭರ್ಜರಿ ಯಶಸ್ಸಿನ ನಂತರ ಗ್ರಾಮೀಣ ಸೊಗಡಿನ, ಸಂಸ್ಕೃತಿಯ ಪ್ರತೀಕತೆಯ ಕೆಸರುಗದ್ದೆ ಕ್ರೀಡಾಕೂಟವನ್ನು ವಿದ್ಯಾಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳುವ ಪ್ರಸ್ತಾಪ ಬಂದಾಗಲೇ ನಮ್ಮೆಲ್ಲರ ಹರುಷ ಮುಗಿಲು ಮುಟ್ಟಿತ್ತು. ಒಂದೊಮ್ಮೆ ಕೆಸರುಗದ್ದೆಗಿಳಿದು ಮೋಜು ಮಸ್ತಿಯನ್ನನುಭವಿಸುವ ನಿರೀಕ್ಷೆ ಒಂದಿಷ್ಟು ಸ್ನೇಹಿ ಬಳಗದ್ದಾದರೆ, ಇನ್ನೊಂದಿಷ್ಟು ಸ್ನೇಹಿ ಬಳಗಕ್ಕೆ ಕೆಸರ್ಡೊಂಜಿ ದಿನವೆಂಬ ವಿಭಿನ್ನ ಕ್ರೀಡಾಕೂಟದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹೆಚ್ಚಾಗಿತ್ತು. ವಿದ್ಯಾ ಸಂಸ್ಥೆಯ ಕೆಲ ವಿದ್ಯಾರ್ಥಿಗಳ ಹಲವು ದಿನಗಳ ಶ್ರಮದಿಂದ ಆದ್ಯಪ್ಪಾಡಿ ಆದಿನಾಥೇಶ್ವರ ಪುಣ್ಯಕ್ಷೇತ್ರದ ಗದ್ದೆಯಲ್ಲಿ ಕ್ರೀಡಾಕೂಟಕ್ಕೆ ಅಣಿಯಾಗಿತ್ತು.


18 -07- 2022 ರಂದು ಕಾಲೇಜಿನ ವಿದ್ಯಾರ್ಥಿ ಬಳಗ, ಉಪನ್ಯಾಸಕ ಬಳಗ ಒಟ್ಟಾಗಿ ಆದಿನಾಥೇಶ್ವರ ಸನ್ನಿಧಾನಕ್ಕೆ ತೆರಳಿ ದೇವರ ದರ್ಶನ ಪಡೆದು ಕೆಸರುಗದ್ದೆಗಿಳಿದೆವು. ಮಳೆರಾಯನೂ ನಮ್ಮ ಉತ್ಸಾಹಕ್ಕೆ ಆನಂದಭಾಷ್ಪ ಸುರಿಸುತ್ತಿದ್ದರಿಂದ ಗದ್ದೆಯ ನೀರು ಮೊಣಕಾಲಿನವರೆಗೂ ತಲುಪಿತ್ತು . ಅದ್ಯಾವುದನ್ನೂ ಲೆಕ್ಕಿಸದೆ ಮೈಚಳಿ ಬಿಟ್ಟು ಕೃಷಿ ಸಂಪ್ರದಾಯದ ಖುಷಿಯನ್ನನುಭವಿಸಿದೆವು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ವಾಮಂಜೂರಿನಲ್ಲಿ ಸಹಾಯಕ ಉಪನ್ಯಾಸಕರಾಗಿರುವ ಶ್ರೀ ಅಶ್ವಿನ್ ಶೆಟ್ಟಿ ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿ ತುಳುನಾಡಿನ ಮಣ್ಣಿನ ಹಿರಿಮೆ- ಗರಿಮೆ, ಆಚಾರ - ವಿಚಾರದ ಕುರಿತಾಗಿ ನಿರರ್ಗಳ ಮಾತುಗಾರಿಕೆಯೊಂದಿಗೆ ತಮ್ಮ ಚಿಂತನೆಗಳನ್ನು ಹಂಚಿಕೊಂಡರು.


ದೇವಾಲಯದ ಪ್ರಧಾನ ಅರ್ಚಕರಾದ ಶ್ರೀ ಮಹೇಶ್ ಭಟ್ ರವರು ಸಾಂಪ್ರದಾಯಿಕ ರೀತಿಯಲ್ಲಿ ಗದ್ದೆಗೆ ತೀರ್ಥ ಎರೆದು, ತೆಂಗಿನಕಾಯಿ ಹೊಡೆದು ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. ಬೆಳಗಿನ ಉಪಹಾರವನ್ನು ಸೇವಿಸಿದ ನಂತರ ಕೆಸರು ಗದ್ದೆಯಲ್ಲಿ ನಡೆಯುವ ಪೈಪೋಟಿಗೆ ಸಜ್ಜಾದೆವು. ಕೆಸರಿನ ನೀರಿಗೆ ಇಳಿಯುವುದಕ್ಕೆ ಅಂಜುತ್ತಿದ್ದ ಮಿತ್ರ ಬಳಗ ಬಟ್ಟೆ ಬರೆ ಕೆಸರಿನಿಂದ ತೊಯ್ದರೂ ಲೆಕ್ಕಿಸದೆಯೇ ಕೆಸರಿನೆರಚಾಟದೊಂದಿಗೆ ಸಂಭ್ರಮಿಸಿದರು. ಓಟ, ಹಿಂಬದಿ ಓಟ, ವಾಲಿಬಾಲ್, ತ್ರೋಬಾಲ್, ಕೂಸು ಮರಿ ಓಟ, ಹಗ್ಗ ಜಗ್ಗಾಟ, ಮಡಕೆ ಹೊಡೆಯುವುದು ಮುಂತಾದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಕೆಸರಿನ ಖುಷಿಯಲ್ಲಿ ಮೈಮರೆತೆವು.


ಮೊಣಕಾಲಿನವರಿಗೆ ನೀರು ತುಂಬಿದ ಕೆಸರು ಗದ್ದೆಯಲ್ಲಿ ನಡೆದಾಡುವುದೇ ಕಷ್ಟ ಎನ್ನುವ ಮಾತಿನ ನಡುವೆ ಓಟದ ಸ್ರ‍್ಧೆಯಲ್ಲಿ ಬಿದ್ದರೂ ಎದ್ದು ತಮ್ಮ ಗುರಿ ತಲುಪುವ ಪ್ರಯತ್ನ ಬಿಡಲಿಲ್ಲ. ಸ್ಪರ್ಧೆಗಳ ಹಣಾಹಣಿಯ ನಡುವೆ ಹಾಸ್ಯಭರಿತ ವೀಕ್ಷಕ ವಿವರಣೆ ಎಲ್ಲರಿಗೂ ಮನರಂಜನೆಯನ್ನು ತಂದುಕೊಟ್ಟಿತ್ತು. ಉಪನ್ಯಾಸಕ ಬಳಗ ಆಟೋಟಗಳಲ್ಲಿ ಭಾಗಿಯಾಗಲು ಸಾಧ್ಯವಾಗದಿದ್ದರೂ ಕೆಸರು ಗದ್ದೆಗಿಳಿದು ಉತ್ಸುಕರಾಗಿ ಎಲ್ಲರನ್ನೂ ಹುರಿದುಂಬಿಸುತ್ತಿದ್ದರು. ಮಧ್ಯಾಹ್ನದ ಸಮಯಕ್ಕೆ ದೇವಾಲಯದಲ್ಲಿ ಅನ್ನಪ್ರಸಾದವನ್ನು ಸ್ವೀಕರಿಸಿ ಮತ್ತೆ ಕ್ರೀಡಾ ಚಟುವಟಿಕೆಗಳು ಆರಂಭಗೊಂಡವು. ಇಷ್ಟೇ ಅಲ್ಲದೆ ಪ್ರತಿ ವಿದ್ಯಾರ್ಥಿಯನ್ನೂ ಗದ್ದೆಯ ಉದ್ದಗಲವನ್ನು ಎಣಿಸುವಂತೆ ಮಾಡಿದ್ದು ನಿಧಿ ಶೋಧನೆಯೆಂಬ ಹೊಸ ಚಟುವಟಿಕೆ !!


ಬೆಳಗ್ಗಿನಿಂದ ನಿಧಿ ಹುಡುಕುವ ಚಟುವಟಿಕೆಗೆ ಉತ್ಸಾಹಭರಿತರಾಗಿ ಗದ್ದೆಯ ಆಳ ಅಗಲ ತಿಳಿದರೂ ನಿಧಿ ಇರುವ ಜಾಗ ತಿಳಿಯದಿದ್ದಾಗ ಇದು ಅಸಾಧ್ಯವೆಂದು ಹಿಂದೆ ಸರಿದರೂ ಇತರರ ಉತ್ಸಾಹ ಮತ್ತೆ ಶೋಧನೆಗೆ ಇಳಿಯುವಂತೆ ಪ್ರೋತ್ಸಾಹಿಸುತ್ತಿತ್ತು. ದೋ.. ಎಂದು ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ನಾವು ಪಡುತ್ತಿದ್ದ ಸಂಭ್ರಮವನ್ನು ಊರ ಹಿರಿಯರು ನೋಡಿ ನೆಲದ ಸಂಸ್ಕೃತಿಯ ಬಗ್ಗೆ ಹಿರಿಮೆ ಪಟ್ಟರು. ಮನಸ್ಸಿಗೆ ಮುದ ನೀಡಿದ ನಮ್ಮ ಆಟೋಟಗಳಿಗೆ ಹಿರಿಯ, ಸ್ನೇಹಿ ಮನಸ್ಸುಗಳು ನಗದು ಬಹುಮಾನವನ್ನು ಘೋಷಿಸಿ ಪ್ರೋತ್ಸಾಹವನ್ನಿತ್ತು, ಕ್ರೀಡೋತ್ಸವದ ಕೊನೆಯವರೆಗೂ ನಮ್ಮೊಂದಿಗೆ ಸಾಥ್ ನೀಡಿದರು.


ಮೊಬೈಲ್, ಟಿವಿಗೆ ಜೈ ಎನ್ನುವ ಕಾಲಘಟ್ಟದಲ್ಲಿಯೂ ನೋವು ನಲಿವುಗಳಲ್ಲಿ ಕೈ ಹಿಡಿದು ಸಂಬಂಧಗಳನ್ನು ಬಿಗಿಯಾಗಿಸುವ ಇಂತಹ ಗ್ರಾಮೀಣ ಕ್ರೀಡೆಗಳು ಅಳಿದು ಹೋಗುವುದಲ್ಲ ಬದಲಾಗಿ ಶಾಶ್ವತವಾಗಿ ಪುಣ್ಯ ಮಣ್ಣಿನಲ್ಲಿ, ಜನರ ಮನದಲ್ಲಿ ಅಚ್ಚಳಿಯದಂತೆ ಉಳಿಯುವಂತಹ ಸಂಸ್ಕೃತಿ. ಕೆಸರ್ಡೊಂಜಿ ದಿನವೆಂಬ ಕಾಲೇಜಿನ ಈ ಚಟುವಟಿಕೆ ನಮ್ಮೆಲ್ಲರಿಗೂ ಅದೆಷ್ಟೋ ಸಾವಿರ ಸುಂದರ ಕ್ಷಣಗಳ ನೆನಪುಗಳನ್ನು ಬಿತ್ತಿದೆ. ವಿಭಿನ್ನ, ವಿಶಿಷ್ಟ ಕ್ರೀಡಾಕೂಟದಲ್ಲಿ ಮೊದಲ ಬಾರಿ ಪಾಲ್ಗೊಂಡ ಸಹಪಾಠಿಗಳಿಗೆ ಈ ಅದ್ಭುತ ಕ್ರೀಡಾಕೂಟ ಮನಸಿಗೆ ಮುದ ನೀಡಿ ಧನ್ಯತೆಯನ್ನು ತುಂಬಿತ್ತು. ಕೆಸರ ಮಂಥನದಲ್ಲಿ ಸಂಜೆಯವರೆಗೂ ನಲಿದಾಡಿದರೂ ಸುಸ್ತು ಎಂಬ ಮಾತೇ ಇರಲಿಲ್ಲ. ಬದಲಾಗಿ ಮತ್ತೊಮ್ಮೆ ಬರಬೇಕೆಂಬ ನಿರೀಕ್ಷೆ, ಹಂಬಲ ಎಲ್ಲರ ಮೊಗದಲ್ಲೂ ಹಾತೊರೆಯುತ್ತಿತ್ತು.


✍️ ಅಖಿಲಾ ಶೆಟ್ಟಿ ಪುತ್ತೂರು

ಮನೆಲ್ ಶ್ರೀನಿವಾಸ್ ನಾಯಕ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೋಂದೆಲ್

ಮಂಗಳೂರು


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top