ಉಜಿರೆ: ದಕ್ಷ ನಾಯಕತ್ವ, ಸಕಾಲಿಕ ಮಾರ್ಗದರ್ಶನ ಮತ್ತು ಆಪ್ತಸಲಹೆ ಮೂಲಕ ರುಡ್‌ಸೆಟ್ ಸಂಸ್ಥೆಗಳ ನಿರ್ದೇಶಕರು ಮತ್ತು ನೌಕರರು ನಿರುದ್ಯೋಗಿ ಯುವಜನತೆಗೆ ಸ್ವ-ಉದ್ಯೋಗ ಪ್ರಾರಂಭಿಸಲು ಪ್ರೇರಣೆ, ಮಾರ್ಗದರ್ಶನ ಮತ್ತು ತರಬೇತಿ ನೀಡಿ, ಅವರಉಜ್ವಲ ಭವಿಷ್ಯರೂಪಿಸುವ ರೂವಾರಿಗಳಾಗಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಗುರುವಾರ ಧರ್ಮಸ್ಥಳದಲ್ಲಿ “ಶ್ರೀಸನ್ನಿಧಿ” ಅತಿಥಿ ಗೃಹದಲ್ಲಿ ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಸಂಸ್ಥೆಗಳ ನಿರ್ದೇಶಕರುಗಳು ಮತ್ತು ನೌಕರರ ವಾರ್ಷಿಕ ಸಮಾವೇಶವನ್ನು ಉದ್ಘಾಟಿಸಿ ವಾರ್ಷಿಕ ವರದಿ ಬಿಡುಗಡೆಗೊಳಿಸಿ ಮಾತನಾಡಿದರು.
ದೇಶದಲ್ಲಿಇಂದು ಪ್ರತಿಯೊಬ್ಬರಿಗೂ ಸ್ವ-ಉದ್ಯೋಗದ ಮೂಲಕ ಸ್ವಾವಲಂಬಿ ಜೀವನ ನಡೆಸಲು ಸಮಾನವಾದ ಹಾಗೂ ವಿಫುಲ ಅವಕಾಶಗಳಿವೆ. ಸರ್ಕಾರ ಮತ್ತು ಬ್ಯಾಂಕ್‌ಗಳಿಂದ ಸಾಲ ಹಾಗೂ ಆರ್ಥಿಕ ನೆರವೂ ದೊರಕುತ್ತದೆ. ಯುವಜನತೆ ತಮ್ಮ ಕನಸನ್ನು ನನಸಾಗಿ ಮಾಡಿ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು. ಮಹಿಳೆಯರು ಕೂಡಾ ಇಂದು ಸ್ವ-ಉದ್ಯೋಗಿಗಳಾಗಿ ಉತ್ತಮ ಆದಾಯದೊಂದಿಗೆ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ರುಡ್‌ಸೆಟ್ ಸಂಸ್ಥೆಗಳ ಸೇವೆ ಮತ್ತು ಸಾಧನೆಯನ್ನು ಸರ್ಕಾರ ಕೂಡಾ ಮಾನ್ಯತೆ ನೀಡಿದ್ದು ದೇಶಕ್ಕೆ ಮಾದರಿ ಎಂದು ಗೌರವಿಸಿದ್ದಾರೆ ಎಂದು ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕೆನರಾ ಬ್ಯಾಂಕ್‌ನ ಮಂಗಳೂರು ವೃತ್ತ ಕಛೇರಿಯ ಮಹಾಪ್ರಬಂಧಕ ಎಸ್. ಜಯಕುಮಾರ್ ಮಾತನಾಡಿ, ಗುರಿ ಸಾಧನೆಯೊಂದಿಗೆ ರುಡ್‌ಸೆಟ್ ಸಂಸ್ಥೆಗಳ ಸೇವೆಯನ್ನು ಶ್ಲಾಘಿಸಿ, ಅಭಿನಂದಿಸಿದರು. ಕೆನರಾ ಬ್ಯಾಂಕ್ ಆರಂಭದಿಂದಲೂ ಬಡವರು ಮತ್ತು ಗ್ರಾಮಾಭಿವೃದ್ಧಿಗೆ ವಿಶೇಷ ಪ್ರೋತ್ಸಾಹ ನೀಡುತ್ತಿದೆ. ಸಿಂಡಿಕೇಟ್ ಬ್ಯಾಂಕ್‌ನೊಂದಿಗೆ ವಿಲೀನದ ಬಳಿಕವೂ ಉಭಯ ಬ್ಯಾಂಕ್‌ಗಳು ರುಡ್‌ಸೆಟ್ ಸಂಸ್ಥೆಗಳ ಸೇವೆಗೆ ಪೂರ್ಣ ಬೆಂಬಲ ನೀಡುತ್ತವೆ ಎಂದು ಅವರು ಭರವಸೆ ನೀಡಿದರು.
ರುಡ್‌ಸೆಟ್ ಸಂಸ್ಥೆಗಳ ನೇಶನಲ್ ಅಕಾಡೆಮಿಯ ಡೈರೆಕ್ಟರ್ ಬೆಂಗಳೂರಿನ ಸತ್ಯಮೂರ್ತಿ ಮತ್ತು ಆರ್.ಆರ್.ಸಿಂಗ್ ಹಾಗೂ ಆರ್‌ಸೆಟಿಯ ನೇಶನಲ್ ಡೈರೆಕ್ಟರ್ ಬಿಪುಲ್‌ಚಂದ್ರ ಶಾ ಶುಭಾಶಂಸನೆ ಮಾಡಿದರು.
ರುಡ್‌ಸೆಟ್ ಸಂಸ್ಥೆಗಳ ಕೇಂದ್ರೀಯ ಕಾರ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಗಿರಿಧರ ಕಲ್ಲಾಪುರ ವರದಿ ಸಾದರ ಪಡಿಸಿ, ಕಳೆದ 40 ವರ್ಷಗಳಲ್ಲಿ 16,998 ತರಬೇತಿ ಕಾರ್ಯಕ್ರಮಗಳ ಮೂಲಕ 2,40,120 ಮಹಿಳೆಯರೂ ಸೇರಿದಂತೆ ಒಟ್ಟು 5,18,643 ನಿರುದ್ಯೋಗಿಗಳಿಗೆ ಸ್ವ-ಉದ್ಯೋಗ ತರಬೇತಿ ನೀಡಲಾಗಿದೆ ಎಂದರು. 576 ಕೌಶಲಾಭಿವೃದ್ಧಿ ತರಬೇತಿ ಆಯೋಜಿಸಲಾಗಿದ್ದು 10,420 ಉದ್ಯಮಿಗಳು ಇದರ ಪ್ರಯೋಜನ ಪಡೆದಿರುತ್ತಾರೆ.
ಧಾರವಾಡ, ಮಧುರೈ, ಭುವನೇಶ್ವರ ಮತ್ತು ಬೆಂಗಳೂರಿನ್ಲಿರುವ ರುಡ್‌ಸೆಟ್ ಸಂಸ್ಥೆಗಳ ಆಶ್ರಯದಲ್ಲಿ ಜೈಲಿನಲ್ಲಿರುವ ಕೈದಿಗಳಿಗೂ ಸ್ವ-ಉದ್ಯೋಗ ತರಬೇತಿ ನೀಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ರುಡ್‌ಸೆಟ್ ಸಂಸ್ಥೆಗಳ ಕೇಂದ್ರೀಯ ಕಾರ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಗಿರಿಧರ ಕಲ್ಲಾಪುರ ಸ್ವಾಗತಿಸಿದರು. ಉಜಿರೆ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಎಂ. ಸುರೇಶ ಧನ್ಯವಾದವಿತ್ತರು. ಹಿರಿಯ ಉಪನ್ಯಾಸಕಿ ಅನಸೂಯ ಕಾರ್ಯಕ್ರಮ ನಿರ್ವಹಿಸಿದರು.