ಸಚಿವ ಸುನಿಲ್ ಕುಮಾರ್ ಅವರಿಗೆ ಆಹ್ವಾನ
ಕಾರ್ಕಳ: ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟರ ನೇತೃತ್ವದ ಅಜೆಕಾರು ಕಲಾಭಿಮಾನಿ ಬಳಗದ ಇಪ್ಪತ್ತೊಂದನೇ ವಾರ್ಷಿಕೋತ್ಸವ 'ಏಕವಿಂಶತಿ ಕಲಾ ಸಂಭ್ರಮ' 2022 ಸೆಪ್ಟೆಂಬರ್ 17ರಂದು ಮುಂಬೈಯ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗ್ರಹದಲ್ಲಿ ಜರಗಲಿದೆ. ಸಮಾರಂಭದ ಉದ್ಘಾಟಕರಾಗಿ ಕರ್ನಾಟಕ ಸರಕಾರದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ವಿ. ಸುನೀಲ್ ಕುಮಾರ್ ಆಗಮಿಸಲಿದ್ದಾರೆ.
ಈ ಬಗ್ಗೆ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಕಾರ್ಕಳದ ಸ್ಥಳೀಯ ಕಚೇರಿಯಲ್ಲಿ ಸಚಿವರನ್ನು ಭೇಟಿಯಾಗಿ ಆಮಂತ್ರಣ ಪತ್ರಿಕೆ ನೀಡಿ ವಿದ್ಯುಕ್ತವಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಈ ಸಂದರ್ಭ ಅಜೆಕಾರು ಕಲಾಭಿಮಾನಿ ಬಳಗ ಕಾರ್ಕಳ ಘಟಕದ ಅಧ್ಯಕ್ಷ ಅಜೆಕಾರು ವಿಜಯಶೆಟ್ಟಿ ಅವರೂ ಉಪಸ್ಥಿತರಿದ್ದರು.
ಸಚಿವರಿಂದ ಭರವಸೆ:
ಸಚಿವ ಸುನೀಲ್ ಕುಮಾರ್ ಅವರು 'ಹೊರನಾಡಿನಲ್ಲಿ ಜರಗುವ ಈ ಮಹತ್ವದ ಕಾರ್ಯಕ್ರಮದಲ್ಲಿ ತಾನು ತಪ್ಪದೇ ಪಾಲ್ಗೊಳ್ಳುವುದಾಗಿ' ಭರವಸೆ ನೀಡಿದರು. ಅಜೆಕಾರು ಕಲಾಭಿಮಾನಿ ಬಳಗದ ಏಕವಿಂಶತಿ ಕಲಾ ಸಂಭ್ರಮದಲ್ಲಿ ಯಕ್ಷಗಾನ ವಿದ್ವಾಂಸ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರ ಸಂಪಾದಕತ್ವದಲ್ಲಿ ಅಜೆಕಾರು ಪ್ರಕಾಶನ ಹೊರತಂದಿರುವ 'ಯಕ್ಷ ಪುರುಷೋತ್ತಮ' ಭಾಗವತ ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಸ್ಮೃತಿ ಸಂಪುಟವು ಬಿಡುಗಡೆಗೊಳ್ಳಲಿದೆ. ಅಲ್ಲದೆ ಯಕ್ಷರಕ್ಷಾ ಪ್ರಶಸ್ತಿ ಪ್ರದಾನ, ಗೌರವ ಯಕ್ಷರಕ್ಷಾ ಪುರಸ್ಕಾರ ಹಾಗೂ ಶ್ರೀ ಬಪ್ಪನಾಡು ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮುಲ್ಕಿ ಇವರಿಂದ 'ಅಜ್ಜ ಅಜ್ಜ ಕೊರಗಜ್ಜ' ಅಬ್ಬರದ ಯಕ್ಷಗಾನ ಬಯಲಾಟವನ್ನೂ ಏರ್ಪಡಿಸಲಾಗಿದೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ