ಎಸ್.ಡಿ.ಎಂ: ಸಾಧಕರ ದಿನಾಚರಣೆ

Upayuktha
0

ಜ್ಞಾನದ ಸಾಂದರ್ಭಿಕ ಅನ್ವಯದಿಂದ ಅರ್ಥಪೂರ್ಣ ಸಾಧನೆ: ಡಾ.ಡಿ.ವೀರೇಂದ್ರ ಹೆಗ್ಗಡೆ


ಉಜಿರೆ: ಶಿಕ್ಷಣದ ವಿವಿಧ ಹಂತಗಳ ಮೂಲಕ ಪಡೆಯುವ ಜ್ಞಾನವು ಸಾಂದರ್ಭಿಕ ಅನ್ವಯಿಸುವಿಕೆಯ ಕೌಶಲ್ಯದಿಂದ ಅರ್ಥಪೂರ್ಣಗೊಂಡು ವಿನೂತನ ಸಾಧನೆಗೆ ಪ್ರೇರಣೆಯಾಗುತ್ತದೆ ಎಂದು ರಾಜ್ಯಸಭೆಯ ನೂತನ ಸದಸ್ಯ, ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.


ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಮಹಾವಿದ್ಯಾಲಯದ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಾಧಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಜ್ಞಾನಾರ್ಜನೆಯೊಂದೇ ಶಿಕ್ಷಣದ ಏಕೈಕ ಉದ್ದೇಶವಲ್ಲ. ಪಡೆದ ಜ್ಞಾನವನ್ನು ಕಾಲದ ಅಗತ್ಯಗಳಿಗೆ ತಕ್ಕಂತೆ ಬಳಸಿಕೊಂಡು ಅನ್ವಯಿಸುವ ಕೌಶಲ್ಯದ ಜೊತೆಗೆ ಶೈಕ್ಷಣಿಕ ಯಶಸ್ಸು ಇರುತ್ತದೆ. ಪಡೆದ ಜ್ಞಾನವನ್ನು ಅಗತ್ಯವಿರುವ ಕಡೆಗೆ ಬಳಸಿಕೊಳ್ಳದೇ ಇದ್ದರೆ ಪ್ರಯೋಜನವಿಲ್ಲ. ಆ ಜ್ಞಾನ ಕ್ರಿಯಾಶೀಲತೆಯಲ್ಲಿ ಮೇಳೈಸಿದಾಗ ವ್ಯಕ್ತಿಗತ ಕೌಶಲ್ಯಕ್ಕೆ ಜೀವಂತಿಕೆ ಸಿಗುತ್ತದೆ. ಈ ಮೂಲಕ ಶಿಕ್ಷಣದ ಸಾಧ್ಯತೆಗಳು ವಿಸ್ತಾರಗೊಳ್ಳುತ್ತಿರುತ್ತವೆ ಎಂದು ಅವರು ಹೇಳಿದರು.


ಶಿಕ್ಷಣದ ವಿವಿಧ ಹಂತಗಳನ್ನು ದಾಟಿಕೊಳ್ಳುವಾಗ ಅಧ್ಯಯನದಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳುವ ಬದ್ಧತೆ ಮುಂದಿನ ಸಾಧನೆಯ ಹಾದಿಯನ್ನು ಸ್ಪಷ್ಟಗೊಳಿಸುತ್ತದೆ. ಓದುವಾಗ ರೂಢಿಸಿಕೊಳ್ಳುವ ಸಂಸ್ಕಾರಗಳು ವೃತ್ತಿಜೀವನದಲ್ಲಿಯೂ ವ್ಯಕ್ತಿತ್ವಕ್ಕೆ ಮನ್ನಣೆ ದಕ್ಕಿಸಿಕೊಳ್ಳುವ ಸಂದರ್ಭದಲ್ಲಿ ಮಹತ್ವದ ಪಾತ್ರವಹಿಸುತ್ತವೆ. ವ್ಯಕ್ತಿಗತ ಜ್ಞಾನ, ಕೌಶಲ್ಯಗಳಿಗೆ ಸಂಸ್ಕಾರಯುತ ನಡವಳಿಕೆಯಿಂದ ಹೊಸದೊಂದು ಆಯಾಮ ದೊರಕುತ್ತದೆ. ವಿದ್ಯಾರ್ಥಿಗಳ ಭವಿಷ್ಯ ಈ ಬಗೆಯ ತಿಳುವಳಿಕೆಯಿಂದ ಉಜ್ವಲವಾಗುತ್ತದೆ ಎಂದು ನುಡಿದರು.


ಖಾಸಗಿ ಅಥವಾ ಸರ್ಕಾರಿ ವಲಯಗಳಲ್ಲಿ ಕಾರ್ಯೋನ್ಮುಖರಾಗಿರುವಾಗ ಇನ್ನೊಬ್ಬರೊಂದಿಗೆ ಹೇಗೆ ನಡೆದುಕೊಳ್ಳುತ್ತೇವೆ ಎನ್ನುವುದೇ ಮುಖ್ಯವಾಗುತ್ತದೆ. ಸೌಜನ್ಯದ ನಡವಳಿಕೆಗಳು ವೃತ್ತಿಜೀವನದ ಬೆಳವಣಿಗೆಗೆ ಪೂರಕವಾಗುತ್ತವೆ. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯು ಜ್ಞಾನಾರ್ಜನೆಯ ಉದ್ದೇಶದೊಂದಿಗೆ ಸಂಸ್ಕಾರಯುತ ನಡವಳಿಕೆಗಳನ್ನೂ ರೂಢಿಸುವುದಕ್ಕೆ ಆದ್ಯತೆ ನೀಡುತ್ತದೆ. ಈ ನೆಲೆಯಲ್ಲಿಯೇ ವಿವಿಧ ವಲಯಗಳವರು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನ ಪೂರೈಸಿದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ನೀಡುತ್ತಾರೆ ಎಂದರು.


ಮುಖ್ಯ ಅತಿಥಿ, ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ಮಾತನಾಡಿ ಪದವಿ ಪೂರ್ಣಗೊಳ್ಳುವುದಕ್ಕೆ ಮುಂಚೆಯೇ ಸಾಧನೆಯ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವ ಹಂಬಲಗಳನ್ನಿರಿಸಿಬೇಕು ಎಂದು ಹೇಳಿದರು. ಆಧುನಿಕ ಯುಗದ ಸ್ಪರ್ಧಾತ್ಮಕ ಜಗತ್ತಿನ ವೇಗಕ್ಕೆ ತಕ್ಕಂತೆ ಸಾಮರ್ಥ್ಯ ರೂಢಿಸಿಕೊಳ್ಳಬೇಕು. ಹಾಗಾದಾಗ ಮಾತ್ತ ಸಾಧನೆ ನಿಶ್ಚಿತವಾಗುತ್ತದೆ ಎಂದರು.


ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಡಾ.ಡಿ. ವೀರೇಂದ್ರ ಹೆಗ್ಗಡೆ, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪದಕ ವಿಜೇತರಾದ ಎಸ್.ಡಿ.ಎಂ ಕಾಲೇಜಿನ ಹಳೆಯ ವಿದ್ಯಾರ್ಥಿ ಗುರುರಾಜ, ಉಜಿರೆಯ ಸೌಂದರ್ಯೀಕರಣಕ್ಕೆ ಆದ್ಯತೆ ನೀಡಿದ ಶಾಸಕ ಹರೀಶ್ ಪೂಂಜ ಅವರನ್ನು ಇದೇ ಸಂದರ್ಭದಲ್ಲಿ ವಿಶೇಷವಾಗಿ ಗೌರವಿಸಲಾಯಿತು. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯಲ್ಲಿ ಸಿಕ್ಕ ಸಕಾಲಿಕ ಮಾರ್ಗದರ್ಶನ, ಸ್ಪಷ್ಟ ಗುರಿ ಮತ್ತು ನಿರಂತರ ಪರಿಶ್ರಮವು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸಾಧನೆಗೈಯಲು ಸಹಾಯಕವಾದವು ಎಂದು ಗುರುರಾಜ ಹೇಳಿದರು.


ಇದೇ ಸಂದರ್ಭದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಿ.ಹರ್ಷೇಂದ್ರಕುಮಾರ್, ಡಾ.ಸತೀಶ್ಚಂದ್ರ ಎಸ್ ಉಪಸ್ಥಿತರಿದ್ದರು. ರ‍್ಯಾಂಕ್ ವಿಜೇತರು, ಶೈಕ್ಷಣಿಕ ಸಾಧನೆಗೈದ ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ, ನಗದು ಬಹುಮಾನ ಮತ್ತು ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.


ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ.ಪಿ.ಎನ್. ಉದಯಚಂದ್ರ ಸ್ವಾಗತಿಸಿದರು. ಉಪ ಪ್ರಾಂಶುಪಾಲ ಡಾ.ಎ.ಜಯಕುಮಾರ ಶೆಟ್ಟಿ ಕಾಲೇಜಿನ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಾಧನೆಯ ಹೆಜ್ಜೆಗಳ ವಿವರಗಳನ್ನು ಒಳಗೊಂಡ ವರದಿಯನ್ನು ವಾಚಿಸಿದರು. ಪ್ರಾಧ್ಯಾಪಕರಾದ ಡಾ.ಕುಮಾರ ಹೆಗ್ಡೆ ಬಿ.ಎ ಕಾರ್ಯಕ್ರಮ ನಿರೂಪಿಸಿದರು. ಕಲಾ ವಿಭಾಗದ ಡೀನ್ ಡಾ. ಶಲೀಪ್ ಕುಮಾರಿ ವಂದಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top