|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಾನ್ಯತಾ ಅಡಿಯಲ್ಲಿ ಕರ್ನಾಟಕದ 73 ಆಸ್ಪತ್ರೆಗಳಿಂದ ಶೇ.100 ಸ್ತನ್ಯ ಪಾನ ಮಾರ್ಗಸೂಚಿ ಜಾರಿ

ಮಾನ್ಯತಾ ಅಡಿಯಲ್ಲಿ ಕರ್ನಾಟಕದ 73 ಆಸ್ಪತ್ರೆಗಳಿಂದ ಶೇ.100 ಸ್ತನ್ಯ ಪಾನ ಮಾರ್ಗಸೂಚಿ ಜಾರಿ

17 ರಾಜ್ಯಗಳ ಆಸ್ಪತ್ರೆ ಸಿಬ್ಬಂದಿ ಸಾಮರ್ಥ್ಯ ಹೆಚ್ಚಿಸಿದ ಆರ್ಟಿಸ್ಟ್

 ಸ್ತನ್ಯಪಾನ ಸಪ್ತಾಹ ಸರಿಯಾದ ಅನುಷ್ಠಾನಕ್ಕೆ ಡಾ. ಹೇಮಾ ದಿವಾಕರ್ ಕರೆ



ಬೆಂಗಳೂರು: ಶಿಶುವಿನ ಜೀವನದ ಮೊದಲ ಆರು ತಿಂಗಳ ಅವಧಿಯಲ್ಲಿ ಸ್ತನ್ಯಪಾನದ ಮಹತ್ವಕ್ಕೆ ಒತ್ತು ನೀಡಿ ಆರ್ಟಿಸ್ಟ್ (Asian Research & Training Institute for Skill Transfer) ‘ಮಾನ್ಯತಾ' ಅಡಿ ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳ ಶಿಫಾರಸುಗಳ ಅನ್ವಯ ಕರ್ನಾಟಕದಲ್ಲಿ 73 ಆಸ್ಪತ್ರೆಗಳ ಸಾಮರ್ಥ್ಯ ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ. 


ಇದರೊಂದಿಗೆ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಹೆರಿಗೆಯ ಸಮಯದಲ್ಲಿ ಮತ್ತು ನಂತರ ಉತ್ಕೃಷ್ಟವಾದ ಹಾಗೂ ಗೌರವಯುತ ಸೇವೆಗಳನ್ನು ನೀಡುವ ನಿಟ್ಟಿನಲ್ಲಿ ಸ್ಥಳೀಯ ವೈದ್ಯರ ಸಾಮರ್ಥ್ಯ ಹೆಚ್ಚಿಸುವ ಮಹತ್ವಾಕಾಂಕ್ಷಿ ಉಪಕ್ರಮವನ್ನು ಸಹ ಕೈಗೊಂಡಿದೆ. 


ಆಗಸ್ಟ್ 1 ರಿಂದ 7ರವರೆಗೆ ಸ್ತನ್ಯಪಾನ ಸಪ್ತಾಹ ಆಚರಿಸುವುದು ಕೇವಲ ಜಾಗೃತಿ ಮೂಡಿಸುವ ಉದ್ದೇಶದಿಂದಲ್ಲ. ಬದಲಾಗಿ ತಾಯಂದಿರಿಗೆ ಶಿಕ್ಷಣ ಮತ್ತು ತರಬೇತಿ ಮೂಲಕ ಸ್ತನ್ಯಪಾನ ಶಿಶುವಿನ ಜೀವ ರಕ್ಷಣೆಗೆ ಕಾರಣವಾಗುವ ಅಂಶಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುತ್ತದೆ. 


ತಾಯಂದಿರಿಗೆ ಸ್ತನ್ಯಪಾನದ ಬಗ್ಗೆ ಶಿಕ್ಷಣ ಮತ್ತು ತರಬೇತಿ ನೀಡುವ ನಿಟ್ಟಿನಲ್ಲಿ ಭಾರತೀಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ಸಂಘಗಳ ಒಕ್ಕೂಟ (FOGSI)ದ ಸಹಯೋಗದೊಂದಿಗೆ ಆರ್ಟಿಸ್ಟ್ ‘ಮಾನ್ಯತಾ’ ಅಡಿಯಲ್ಲಿರುವ ಎಲ್ಲ 73 ಆಸ್ಪತ್ರೆಗಳ ಸಿಬ್ಬಂದಿಯನ್ನು ಅಣಿಗೊಳಿಸಲಾಗುತ್ತಿದೆ.  

 

ಜನನದ ಮೊದಲ ಒಂದು ಗಂಟೆಯಲ್ಲಿ ಶೀಘ್ರ ಮತ್ತು ಸಮಯೋಚಿತ ಹಾಲುಣಿಸುವಿಕೆ ತಾಯಿ ಮತ್ತು ಮಗು ಇಬ್ಬರಿಗೂ ಗಣನೀಯ ಪ್ರಯೋಜನಗಳನ್ನು ನೀಡುತ್ತದೆ. ಸ್ತನ್ಯಪಾನವು ನವಜಾತ ಶಿಶುವಿಗೆ ಕೊಲೊಸ್ಟ್ರಂ ಒದಗಿಸಲು ನೆರವಾಗುತ್ತದೆ. ಇದು ನ್ಯುಮೋನಿಯಾ ಮತ್ತು ಅತಿಸಾರದಂತಹ ಸೋಂಕುಗಳನ್ನು ತಡೆಯುತ್ತದೆ. ಟೈಪ್ 2 ಡಯಾಬಿಟಿಸ್, ಕ್ಯಾನ್ಸರ್, ಪಾರ್ಶ್ವವಾಯು, ಹೃದಯ ರಕ್ತನಾಳದ ಕಾಯಿಲೆಗಳು, ಬೊಜ್ಜು ಮುಂತಾದ ಸಾಂಕ್ರಾಮಿಕವಲ್ಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ನಿರಂತರ ಸ್ತನ್ಯಪಾನವು ತಾಯಂದಿರಿಗೆ ಸಹಾಯ ಮಾಡುತ್ತದೆ ಎಂದು ಆರೋಗ್ಯ ರಕ್ಷಣೆ ಸೇವೆಯ ಮುಂಚೂಣಿಯಲ್ಲಿರುವ, ಭಾರತೀಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ಸಂಘಗಳ ಒಕ್ಕೂಟದ ಎನ್ ಸಿಡಿ ಸಮಿತಿ ಉಪಾಧ್ಯಕ್ಷರು ಹಾಗೂ ಆರ್ಟಿಸ್ಟ್ ಅಧ್ಯಕ್ಷರಾಗಿರುವ ಡಾ. ಹೇಮಾ ದಿವಾಕರ್ ಹೇಳಿದ್ದಾರೆ.


ಸೌತ್ ಏಷ್ಯನ್ ಫೆಡರೇಶನ್ ಆಫ್ ಅಬ್ಸ್ಟೆಟ್ರಿಕ್ಸ್ ಆ್ಯಂಡ್ ಗೈನಾಕಾಲಜಿ (SAFOG) ಪ್ರಸೂತಿ ತಜ್ಞರು ಮತ್ತು ಸ್ತ್ರೀರೋಗ ತಜ್ಞರಿಗಾಗಿ ಆಯೋಜಿಸಿದ್ದ ‘ಮೊದಲು ಸ್ತನ್ಯಪಾನದ ಬಗ್ಗೆ ಯೋಚಿಸಿ’ ಎಂಬ ವಿಷಯ ಕುರಿತು ಅವರು ಇಂದು ಮಾತನಾಡಿದರು.


ಕರ್ನಾಟಕದ ಜೊತೆ, ಇತರ 16 ರಾಜ್ಯಗಳಲ್ಲಿ ‘ಮಾನ್ಯತಾ’ ಅಡಿ ಆರ್ಟಿಸ್ಟ್ ಆಸ್ಪತ್ರೆಗಳ ಸಾಮರ್ಥ್ಯ ವರ್ಧನೆ ಕಾರ್ಯ ಕೈಗೊಳ್ಳಲಾಗುತ್ತಿದೆ. ಸ್ತನ್ಯಪಾನ ಕುರಿತು ಅನವಶ್ಯಕ ನಂಬಿಕೆಗಳು ತಾಯಂದಿರು ಶಿಶುವಿಗೆ ಸರಿಯಾಗಿ ಸ್ತನ್ಯಪಾನ ಮಾಡಿಸುವಲ್ಲಿ ಅಡ್ಡಿಯಾಗಿವೆ. 


ನಾವು ಸ್ತನ್ಯಪಾನದ ಬಗ್ಗೆ ಮಾಹಿತಿ ನೀಡಬೇಕು. ಅದರಲ್ಲೂ ಹೆರಿಗೆ ಆಸ್ಪತ್ರೆಗಳಲ್ಲಿ ಪ್ರತಿ ಹಂತದಲ್ಲಿ ತಾಯಂದಿರಿಗೆ ಶಿಕ್ಷಣ ನೀಡಬೇಕು. ನವಜಾತ ಶಿಶುವಿನ ತಾಯಂದಿರಿಗೆ ಮನವರಿಕೆ ಮಾಡಿ ತರಬೇತಿ ಮತ್ತು ಮಾರ್ಗದರ್ಶನ ನೀಡಬೇಕು. ಸಲಹೆಯಂತೆ ಸ್ತನ್ಯಪಾನವನ್ನು ಅಭ್ಯಾಸ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಆರೋಗ್ಯ ರಕ್ಷಣೆಯ ಜವಾಬ್ದಾರಿಯುತ ಸ್ಥಾನದಲ್ಲಿರುವ ಎಲ್ಲರೂ ಇದಕ್ಕೆ ಕೈಜೋಡಿಸಬೇಕು ಎಂದು ಡಾ. ಹೇಮಾ ಹೇಳಿದರು.


ಡಾ. ಹೇಮಾ ಅವರ ಪ್ರಕಾರ, ಸ್ತನ್ಯಪಾನಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಬೇಕಾಗಿದೆ. ಉದಾಹರಣೆಗೆ, ತಾಯಂದಿರು 6 ತಿಂಗಳವರೆಗೆ ನವಜಾತ ಶಿಶುಗಳಿಗೆ ಹಾಲುಣಿಸಬೇಕು. ಆದರೆ ಎಲ್ಲ ಸಂಸ್ಥೆಗಳು ಕೆಲಸ ಮಾಡುವ ಮಹಿಳೆಯರಿಗೆ 6 ತಿಂಗಳ ಹೆರಿಗೆ ರಜೆ ನೀಡಲು ಒಪ್ಪುವುದಿಲ್ಲ. ಅಂತೆಯೇ, ಸಾರ್ವಜನಿಕ ಸ್ಥಳಗಳಲ್ಲಿ ಹಾಲುಣಿಸುವ ಕೋಣೆಗಳನ್ನು ರಚಿಸುವ ಅಗತ್ಯವಿದೆ. ಇದಲ್ಲದೆ, ಎದೆ ಹಾಲನ್ನು ಹೊರತೆಗೆದು ಶೇಖರಣೆ ಮಾಡುವ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಹೊರ ತೆಗೆದ ಎದೆ ಹಾಲನ್ನು ನಂತರದ ಬಳಕೆಗಾಗಿ ಶೇಖರಿಸಿಡುವ ಕ್ರಮ ಅತ್ಯುತ್ತಮವೆನಿಸಿದೆ. ಆದರೆ ಇದರ ಬಗ್ಗೆ ಸರಿಯಾದ ಮಾಹಿತಿಯ ಕೊರತೆಯಿದೆ ಎಂದು ಡಾ. ಹೇಮಾ ಗಮನ ಸೆಳೆದರು.


ಎದೆಹಾಲು ಬ್ಯಾಂಕ್ ಗಳ ಪರಿಕಲ್ಪನೆ ಭಾರತದಲ್ಲಿ ಇನ್ನೂ ಆರಂಭಿಕ ಹಂತದಲ್ಲಿದ್ದು ಇದನ್ನು ಸ್ಥಾಪಿಸುವ ಅಗತ್ಯವಿದೆ. ಎದೆಹಾಲು ಬ್ಯಾಂಕ್ ಸ್ಥಾಪನೆ ಚಿಂತನೆಯನ್ನೂ ಹೊಂದಿದ್ದು ಹೊಸ ತಾಯಂದಿರ ಸಹಕಾರದ ಅಗತ್ಯವಿದೆ. ನವಜಾತ ಶಿಶುಗಳು, ವಿಶೇಷವಾಗಿ ಅಕಾಲಿಕ ಶಿಶುಗಳಿಗೆ ಈ ಬ್ಯಾಂಕ್ ಗಳು ಅಪಾರ ಪ್ರಯೋಜನಕ್ಕೆ ಬರುತ್ತವೆ. ಆದರೆ ಎದೆಹಾಲು ದಾನ ಮಾಡಲು ಪರಂಪರಾಗತ ನಂಬಿಕೆಗಳ ಆಧರಿತ ಅಡ್ಡಿ ಇದೆ. ಮಹಿಳೆಯರಿಗೆ ಶಿಕ್ಷಣ ನೀಡುವ ಹಾಗೂ ಒಂದು ಜಾಲವನ್ನೇ ರಚಿಸುವ ಮೂಲಕ ನಾವು ಅದನ್ನು ನಿವಾರಿಸಬೇಕಿದೆ ಎಂದು ಡಾ. ಹೇಮಾ ಹೇಳಿದರು.


ನೈಜ ಕ್ರಮಗಳು ಜಾರಿಯಾಗದಿದ್ದಲ್ಲಿ ‘ಸ್ತನ್ಯಪಾನ ಸಪ್ತಾಹ’ ಆಚರಿಸುವುದು ವ್ಯರ್ಥ. ಅದು ಯಾವುದೇ ಪ್ರಯೋಜನಗಳನ್ನು ನೀಡುವುದಿಲ್ಲ. ಕಾರಣ ಭಾರತದಲ್ಲಿ ಶೇ.40 ನವಜಾತ ಶಿಶುಗಳು ಸ್ತನ್ಯಪಾನದ ಮಹತ್ವದ ಬಗ್ಗೆ ಅಜ್ಞಾನದಿಂದಾಗಿ ಹುಟ್ಟಿದ ಮೊದಲ ಗಂಟೆಯಲ್ಲಿ ತಾಯಿಯ ಎದೆ ಹಾಲಿನಿಂದ ವಂಚಿತವಾಗುತ್ತವೆ.  


ಫಿಗೋ ಕೈಗೊಳ್ಳುತ್ತಿರುವ ಕ್ರಮಗಳು ವಿಶ್ವ ಆರೋಗ್ಯ ಸಂಸ್ಥೆ 2025ರ ಗುರಿಯನ್ನು ಸಾಧಿಸಲು ಪೂರಕವಾಗಿವೆ. ಈ ಕ್ರಮಗಳು ಮೊದಲ ಆರು ತಿಂಗಳಲ್ಲಿ ಸ್ತನ್ಯಪಾನದ ಪ್ರಮಾಣವನ್ನು ಶೇ. 50ಕ್ಕೆ ಹೆಚ್ಚಿಸಲು, ಕಡಿಮೆ ತೂಕದ ಶಿಶುವಿನ ಪ್ರಮಾಣವನ್ನು ಶೇ. 40ರಿಂದ 30ರಷ್ಟಕ್ಕೆ ಇಳಿಸಲು, ಹಾಗೂ ತೂಕವಿಲ್ಲದ ಶಿಶುಗಳ ಸಂಖ್ಯೆಯನ್ನು ಶೇ.5 ಕ್ಕಿಂತ ಕಡಿಮೆ ಮಾಡುವಲ್ಲಿ ಸಹಾಯವಾಗಿವೆ.


ಶಿಶು ಜನಿಸಿದ ಮೊದಲ ಒಂದು ಗಂಟೆಯಲ್ಲಿ ತಾಯಂದಿರು ಸ್ತನ್ಯಪಾನ ಮಾಡಿಸುವಲ್ಲಿ ನಿರೀಕ್ಷಿತ ಕ್ರಮ ಜಾರಿಗೊಳಿಸುವಲ್ಲಿ ಜಗತ್ತಿನ ಹಲವು ರಾಷ್ಟ್ರಗಳು ಎಡವಿವೆ. ಜಾಗತಿಕವಾಗಿ ಪರಿಗಣಿಸಿದಾಗ 5 ರಲ್ಲಿ 3 ಶಿಶುಗಳಿಗೆ ಹುಟ್ಟಿದ ಒಂದು ಗಂಟೆ ಅವಧಿಯಲ್ಲಿ ಎದೆಹಾಲು ಉಣಿಸಲಾಗುವುದಿಲ್ಲ. ಇದು ಭಾರತ ಸೇರಿದಂತೆ ಮಧ್ಯಮ ಹಾಗೂ ಕಡಿಮೆ ಆದಾಯವಿರುವ ನಾಗರಿಕರಿರುವ ದೇಶಗಳ ಸಮಸ್ಯೆಯಾಗಿದೆ ಎಂದು ಡಾ. ಹೇಮಾ ಹೇಳಿದರು.


ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಸಂಪರ್ಕಿಸಿ:

Dr. Hema Divakar

Medical Director, Divakars Speciality Hospital, Bengaluru.

CEO & Chairman, ARTIST for Her

Chair of well woman healthcare committee at FIGO

M: 9844046724 | Email: drhemadivakar@gmail.com


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post