ಯೋಗ ಭಾರತೀಯತೆಯ ಪ್ರತೀಕ: ಸುಬ್ರಹ್ಮಣ್ಯ ನಟ್ಟೋಜ

Upayuktha
0

 ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಉದ್ಯೋಗಿಗಳಿಗೆ ಯೋಗ ಶಿಬಿರ


ಪುತ್ತೂರು: ಯೋಗ ಭಾರತೀಯತೆಯ ಪ್ರತೀಕ. ಇಡಿಯ ಪ್ರಪಂಚಕ್ಕೆ ವಿಶಿಷ್ಟ ಆರೋಗ್ಯ ನಿರ್ವಹಣಾ ವಿಚಾರವನ್ನು ನಮ್ಮ ದೇಶ ಕೊಟ್ಟಿದೆ ಎಂಬುದಕ್ಕೆ ಹೆಮ್ಮೆ ಪಡಬೇಕು. ಇಂತಹ ಯೋಗವನ್ನು ವಿದ್ಯಾರ್ಥಿಗಳ ಮೂಲಕ ಸಮಾಜಕ್ಕೆ ಪಸರಿಸುವುದು ಅಗತ್ಯ. ಶಿಕ್ಷಕರು ಯೋಗವನ್ನು ಅರಿತರೆ ವಿದ್ಯಾರ್ಥಿಗಳಿಗೂ ಅದನ್ನು ಪರಿಣಾಮಕಾರಿಯಾಗಿ ತಲಪಿಸುವುದಕ್ಕೆ ಸಾಧ್ಯ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಬೋಧಕ ಹಾಗೂ ಬೋಧಕೇತರ ವೃಂದದವರಿಗಾಗಿ ಆಯೋಜಿಸಲಾದ ಒಂದು ದಿನದ ಯೋಗ ಶಿಬಿರವನ್ನು ಉದ್ಘಾಟಿಸಿ ಭಾನುವಾರ ಮಾತನಾಡಿದರು.


ನಮ್ಮ ದೇಸೀಯ ಜ್ಞಾನ ವಿಜ್ಞಾನಗಳ ಬಗೆಗೆ ನಮಗೇ ಅವಜ್ಞೆ ಇದೆ. ಪ್ರಾಪಂಚಿಕವಾಗಿ ಉತ್ಕೃಷ್ಟವಾದದ್ದನ್ನು ನಾವು ಹೊಂದಿದ್ದೇವೆ ಅಥವಾ ನೀಡಿದ್ದೇವೆ ಎಂಬ ಕಲ್ಪನೆಯೇ ನಮ್ಮಲ್ಲಿ ಮೂಡದಿರುವುದು ಬೇಸರದ ವಿಚಾರ. ಹಾಗಾಗಿ ಮಕ್ಕಳಿಗೆ ಎಳವೆಯಿಂದಲೇ ನಮ್ಮತನವನ್ನು ಹೇಳಿಕೊಡಬೇಕಾದ ಅಗತ್ಯವಿದೆ. ಶಿಕ್ಷಕರ ಮೂಲಕ ಇಂತಹ ವಿಚಾರಗಳು ವಿದ್ಯಾರ್ಥಿಗಳನ್ನು ತಲಪಿದಾಗ ಉತ್ತಮ ಪರಿಣಾಮ ಉಂಟಾಗುವುದಕ್ಕೆ ಸಾಧ್ಯ ಎಂದರು.


ಕಾರ್ಯಾಗಾರದ ತರಬೇತುದಾರರಾಗಿ ಆಗಮಿಸಿದ್ದ ಯೋಗಶಿಕ್ಷಕಿ ಶರಾವತಿ ರವಿನಾರಾಯಣ ಮಾತನಾಡಿ,  ನಮ್ಮ ಮೂಲದ ಬಗೆಗೆ ಹೆಮ್ಮೆ ಪಡುವ ವಿದ್ಯಾರ್ಥಿಗಳನ್ನು ನಾವು ರೂಪಿಸಬೇಕಿದೆ. ಯಾರಿಗೆ ಮೂಲದ ಅರಿವಿಲ್ಲವೋ ಅವರೇ ನಾಳೆ ಸಮಾಜಘಾತುಕ ಶಕ್ತಿಗಳಾಗಿ ಬೆಳೆಯುವ ಸಾಧ್ಯತೆ ಇರುತ್ತದೆ ಎಂದರಲ್ಲದೆ ಯೋಗ ಮನಸ್ಸು ಮನಸ್ಸನ್ನು ಬೆಸೆಯುವ ಕಾರ್ಯವನ್ನೂ ಮಾಡುತ್ತದೆ. ಹಾಗಾಗಿ ಯೋಗದ ಬಗೆಗಿನ ಅರಿವು ಪ್ರತಿಯೊಬ್ಬರಿಗೂ ಅಗತ್ಯ ಎಂದು ನುಡಿದರು.


ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಸದಸ್ಯ ಸುರೇಶ ಶೆಟ್ಟಿ, ಯೋಗ ಮಾರ್ಗದರ್ಶಕಿ ಸುಧಾ ಹೆಬ್ಬಾರ್, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ, ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ, ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ಪ್ರಾಚಾರ್ಯರುಗಳಾದ ಸತ್ಯಜಿತ್ ಉಪಾಧ್ಯಾಯ ಎಂ ಹಾಗೂ ಸುಚಿತ್ರಾ ಪ್ರಭು, ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‍ಇಯ ಪ್ರಾಚಾರ್ಯೆ ಮಾಲತಿ ಡಿ, ಬೋಧಕ ಬೋಧಕೇತರ ವೃಂದ ಉಪಸ್ಥಿತರಿದ್ದರು. ಉಪನ್ಯಾಸಕ ಸತೀಶ್ ಇರ್ದೆ ಕಾರ್ಯಕ್ರಮವನ್ನು ನಿರ್ವಹಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top