ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡಮಿಯ ಸಹಭಾಗಿತ್ವದಲ್ಲಿ ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವ ಸರಣಿಯ 20 ನೆಯ ಕಾರ್ಯಕ್ರಮ ಶ್ರೀ ಕುಡ್ತೇರಿ ಮಹಾಮಾಯಾ ದೇವರ ಸನ್ನಿಧಿಯಲ್ಲಿ ಇತ್ತೀಚಿಗೆ ಜರಗಿತು.
ಕೀರ್ತಿಶೇಷ ನಂದಳಿಕೆ ವಾಸುದೇವ ಭಟ್ಟರ ಸಂಸ್ಮರಣೆಯನ್ನು ನಂದಳಿಕೆ ಬಾಲಚಂದ್ರ ರಾಯರು ಮಾಡಿದರು.
ಯಕ್ಷಗಾನ ಭಾಗವತಿಕೆಯಲ್ಲಿ ಉತ್ತಮ ಸಾಧನೆ ಮಾಡಿದ್ದ ವಾಸುದೇವ ಭಟ್ಟರು ಉತ್ಸವದ ದೇವರನ್ನು ಹೊರುವ ವಿಚಾರದಲ್ಲೂ ಹೆಸರುವಾಸಿಯಾಗಿದ್ದರು.
ಅತ್ಯಂತ ಸೌಮ್ಯ ಸ್ವಭಾವದ ವಾಸುದೇವ ಭಟ್ಟರು ಅದೇ ಗುಣಗಳುಳ್ಳ ಮಕ್ಕಳನ್ನು ಸಮಾಜಕ್ಕೆ ನೀಡಿದ್ದಾರೆ.ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಹಾರೈಸಿದರು.
ವಿದ್ವಾನ್ ನಂದಳಿಕೆ ಕೃಷ್ಣರಾಜ ಭಟ್ ಇವರ ಅಭಿನಂದನಾ ಭಾಷಣವನ್ನು ಸಂಘದ ಕೋಶಾಧಿಕಾರಿ ಶಿವಪ್ರಸಾದ್ ಪ್ರಭು ಗೈದರು. ಗೋಪಾಲಕೃಷ್ಣ ಐಯರ್ ಇವರಿಂದ ಸಂಗೀತ ಶಿಕ್ಷಣ, ಮಾಂಬಾಡಿ ಸುಬ್ರಹ್ಮಣ್ಯ ಭಟ್ ಇವರಿಂದ ಯಕ್ಷಗಾನ ಭಾಗವತಿಕೆ, ಚೆಂಡೆ ಮದ್ದಳೆ ವಾದನ, ಗುರುರಾಜ್ ಅವರಿಂದ ಮೃದಂಗ ವಾದನವನ್ನು ಕಲಿತಿರುವ ಕೃಷ್ಣರಾಜ ಭಟ್, ತಾನು ಕಲಿತದ್ದನ್ನು ಅಪಾರ ಶಿಷ್ಯ ವೃಂದಕ್ಕೆ ಹಂಚುತ್ತಿದ್ದಾರೆ. ಇವರಿಗೆ ಮಹಾಮಾಯೀ ದೇವರ ಅನುಗ್ರಹ ಸದಾ ಇರಲಿ ಎಂದು ಹಾರೈಸಿದರು.
ಅತಿಥಿಯಾಗಿ ಆಗಮಿಸಿದ್ದ ಪತ್ರಕರ್ತ ಜಿತೇಂದ್ರ ಕುಂದೇಶ್ವರ,ಹವ್ಯಾಸಿ ಯಕ್ಷಗಾನ ಸಂಘಗಳು ಯಕ್ಷಗಾನ ಕಲೆಗೆ ಬಹು ಮುಖ್ಯ ಆಧಾರ ಸ್ತಂಭಗಳು. ಹಾಗೆಯೇ ಯಾವುದೇ ಪ್ರಚಾರದ ಬಯಕೆ ಇಲ್ಲದೆ ನಿಸ್ವಾರ್ಥವಾಗಿ ಕಲೆಯನ್ನು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಹಸ್ತಾಂತರಿಸುತ್ತಿರುವ ಕೃಷ್ಣರಾಜ ಭಟ್ಟರಂತಹ ಗುರುಗಳು ನಿಜಕ್ಕೂ ಅಭಿನಂದನಾರ್ಹರು ಎಂದರು.
ಇನ್ನೋರ್ವ ಅತಿಥಿ ಎಲ್ಲೂರು ರಾಮಚಂದ್ರ ಭಟ್, ಕದ್ರಿ ಇವರು ನೂರು ವರ್ಷಗಳ ಐತಿಹ್ಯವುಳ್ಳ ಸಂಘದ ಬಗ್ಗೆ ಮೆಚ್ಚುಗೆಯ ನುಡಿಗಳನ್ನು ಆಡಿದರು. ಪ್ರಸಿದ್ಧ ವ್ಯಕ್ತಿಗಳಿಗೆ, ಧನವಂತರಿಗೇ ಸನ್ಮಾನ ಆಗುತ್ತಿರುವ ಈ ಕಾಲದಲ್ಲಿ ಎಲೆಯ ಮರೆಯ ಕಾಯಿಯಂತಿರುವ ಶ ಕೃಷ್ಣರಾಜ ಭಟ್ಟರಿಗೆ ಮಾಡಿದ ಸನ್ಮಾನ ನಿಜಕ್ಕೂ ಅರ್ಥಪೂರ್ಣ ಎಂದರು.
ಸಭಾಧ್ಯಕ್ಷರಾದ ಯೋಗೀಶ್ ಕುಮಾರ್ ಜೆಪ್ಪು,1 922 ರಲ್ಲಿ ಈ ಸಂಘ ಸ್ಥಾಪನೆಯಾದಾಗ ವಾಹನ ವ್ಯವಸ್ಥೆ ಇರಲಿಲ್ಲ, ಬೆಳಕಿನ ವ್ಯವಸ್ಥೆ ಇರಲಿಲ್ಲ. ಆದರೂ ಆಗಿನ ಕಲಾವಿದರು ತ್ಯಾಗ ಬುದ್ಧಿಯಿಂದಯಕ್ಷಗಾನ ಕಲೆಗಾಗಿ ಮಾಡಿದ ಕಾರ್ಯ ಸದಾ ಸ್ಮರಿಸಬೇಕಾದದ್ದು. ಹಾಗೆಯೇ ಮಹಾಮಾಯಾ ದೇವಿಯ ಸನ್ನಿಧಿಯೂ ಇದಕ್ಕೆ ಕಾರಣವಾಗಿರಬಹುದು ಎಂದರು.
ಸೇರಾಜೆ ಪ್ರೀತಮ್ ಭಟ್ ಸನ್ಮಾನ ಪತ್ರ ವಾಚಿಸಿದರು. ಅಧ್ಯಕ್ಷ ಶ್ರೀನಾಥ್ ಪ್ರಭು, ಕೋಶಾಧಿಕಾರಿ ಶಿವಪ್ರಸಾದ್ ಪ್ರಭು, ಉಪಾಧ್ಯಕ್ಷೆ ಶ್ರೀಮತಿ ಪ್ರಫುಲ್ಲ ನಾಯಕ್, ಪ್ರಭಾಕರ ಕಾಮತ್, ಶ್ರೀ ಮಧುಸೂದನ ಅಲೆವೂರಾಯ, ಪೆರ್ಲ ಗಣಪತಿ ಭಟ್, ಅಶೋಕ ಬೋಳೂರ್ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಪಿ. ಸಂಜಯ ಕುಮಾರ್ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಂಘದ ಕಲಾವಿದರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ "ಸೇತು ಬಂಧನ" ತಾಳಮದ್ದಳೆ ಜರಗಿತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ