ಅದೊಂದು ದಿನ ಕ್ಲಿನಿಕ್‍ನಲ್ಲಿ ರೋಗಿಗಳು ಇಲ್ಲದೆ ಆರಾಮವಾಗಿ ವೃತ್ತ ಪತ್ರಿಕೆ ಓದುತ್ತಾ ಕಾಫಿ ಹೀರುತ್ತಾ ಕುಳಿತಿದ್ದೆ. ಪೂರ್ವಹ್ನ ಹತ್ತು ಗಂಟೆಯ ಹೊತ್ತು. ಒಬ್ಬ ನಡು ವಯಸ್ಸಿನ ಯುವಕ ಏದುಸಿರು ಬಿಡುತ್ತಾ ಕ್ಲಿನಿಕ್‍ಗೆ ಬಂದಿದ್ದ. ಸ್ವಾಗತಕಾರಣಿಯಲ್ಲಿ ಸಾಮಾನ್ಯವಾಗಿ ರೋಗಿಗಳು ಮೊದಲು ಹೆಸರು, ವಿಳಾಸ ಮತ್ತು ಮೊಬೈಲ್ ನಂಬ್ರ ನೀಡಿದ ಬಳಿಕವೇ ನನ್ನ ಕ್ಲಿನಿಕ್‍ನ ಒಳಗೆ ಅವರಿಗೆ ಪ್ರವೇಶ ನೀಡಲಾಗುತ್ತದೆ. ಈ 45ರ ಅಂದಾಜಿನ ಯುವಕ ನೇರವಾಗಿ ಒಳಗೆ ನುಗ್ಗಿ ಬಂದಿದ್ದ. ಕೂದಲು ಅಸ್ತವ್ಯಸ್ಥವಾಗಿತ್ತು. ಹಳತಾದ ಮಾಸಿದ ಬಟ್ಟೆ, ನಿದ್ದೆ ಇಲ್ಲದ ಕಣ್ಣುಗಳು ಮಾನಸಿಕವಾಗಿ ಆತ ಬಳಲಿದ್ದ ಎಂಬುದನ್ನು ಪರೋಕ್ಷವಾಗಿ ಸಾರುತ್ತಿತ್ತು. ಆತನ ಕಣ್ಣುಗಳಲ್ಲಿ ಗಾಬರಿ ಮುಖದಲ್ಲಿ ಒಂದು ರೀತಿಯ ಅವ್ಯಕ್ತ ಭಯ ಆವರಿಸಿತ್ತು. ಸಣ್ಣಗೆ ಬೆವರುತ್ತಾ ಇದ್ದ. ಆತನ ವೇಷ ಭೂಷಣ ಮತ್ತು ನಡವಳಿಕೆ ನೋಡಿದಾಗ ಆತ ಅಕ್ಷರಸ್ಥನ ರೀತಿಯಲ್ಲಿ ಕಾಣುತ್ತಿರಲಿಲ್ಲ. ಸಾಮಾನ್ಯವಾಗಿ ರೋಗಿ ನನ್ನ ಬಳಿ ಬಂದಾಗ ಅವರನ್ನು ದಂತ ಕುರ್ಚಿಯಲ್ಲಿ ಕುಳ್ಳಿರಿಸಿ ಅವರ ಬಳಿ ಒಂದೈದು ನಿಮಿಷ ಉಭಯ ಕುಶಲೋಪರಿ ಮಾತು ಕತೆ ಮಾಡುತ್ತಾ ಅವರ ಹೆಸರು, ಉದ್ಯೋಗ, ಊರು, ಕುಟುಂಬ ಹಿನ್ನಲೆ ಎಲ್ಲವನ್ನೂ ಸೂಕ್ಷ್ಮವಾಗಿ ವಿಚಾರಿಸಿಕೊಳ್ಳುತ್ತೇವೆ. ಅವರ ಜಾತಿ ಧರ್ಮವೊಂದನ್ನು ಬಿಟ್ಟು ಉಳಿದ ವಿಚಾರಗಳಾದ ರೋಗದ ಹಿನ್ನಲೆ, ರೋಗದ ಚರಿತ್ರೆ, ನೋವಿಗೆ ಕಾರಣ, ಔಷಧಿಗಳ ಅಲರ್ಜಿ ಅಥವಾ ಔಷಧಿಗಳ ಬಗ್ಗೆ ಅಡ್ಡ ಪರಿಣಾಮದ ಚರಿತ್ರೆ ಹೀಗೆ ಎಲ್ಲವನ್ನೂ ಕೂಲಂಕುಷವಾಗಿ ವಿಚಾರಣೆ ನಡೆಸುತ್ತೇವೆ, ನಂತರ ಅವರ ಪ್ರಧಾನ ದೂರುಗಳ ಬಗ್ಗೆ ಹೆಚ್ಚಿನ ವಿಮರ್ಷೆ ಮಾಡಿ, ನೋವಿಗೆ ಕಾರಣವಾದ ಅಂಶವನ್ನು ಹುಡುಕುತ್ತೇವೆ.
ಆದರೆ ಈ ಆಸಾಮಿ ಮಾತ್ರ ಬಹಳ ಗಲಿ ಬಿಲಿ ಮತ್ತು ಗಡಿಬಿಡಿಯಲ್ಲಿ ಇದ್ದ. ನನ್ನ ಪ್ರಶ್ನೆಯನ್ನು ಕೇಳಿಸಿಕೊಳ್ಳುವ ಗೋಜಿಗೆ ಆತ ಹೋಗಲೇ ಇಲ್ಲ. ನಾನು ಏನು ಕೇಳಿದರೂ ಆತ ತಲೆ ಅಲ್ಲಾಡಿಸುತ್ತಿದ್ದ. ಆತನ ತೊಂದರೆ ಏನು ಕೇಳಿದಾಗ ಆತ ನೇರವಾಗಿ ಬಾಯಿಬಿಟ್ಟು ನಿನ್ನೆ ರಾತ್ರಿಯಿಂದ ನನ್ನ ಹಲ್ಲಿನೊಳಗಿಂದ ಒಂದೆ ಸವನೆ ಹುಳ ಬರುತ್ತಿದೆ ಎಂದು ಒಂದೇ ಉಸಿರಿನಲ್ಲಿ ಉಸುರಿದ. ಹಲ್ಲಿನಿಂದ ಹುಳ ಬರುವ ಸಾಧ್ಯತೆ ಅತ್ಯಂತ ವಿರಳ. ನನ್ನ ವೃತ್ತಿ ಜೀವನದಲ್ಲಿ ಬಾಯಿಯಲ್ಲಿ ಹುಳ ನೋಡಿದ ದೃಷ್ಯಾಂತ ಅತ್ಯಂತ ವಿರಳ. ಬಾಯಿಯಲ್ಲಿ ಕ್ಯಾನ್ಸರ್ ಆಗಿ ಗಡ್ಡೆ ಬೆಳೆದು ಅದರಲ್ಲಿ ಹುಳ ಆಗಿರುವ ಒಂದೆರಡು ರೋಗಿಗಳನ್ನು ನಾನು ನೋಡಿದ್ದೆ ಇನ್ನೂ ಮಂದಬುದ್ಧಿಯ ಮಕ್ಕಳಲ್ಲಿ ಬಾಯಿಯ ಸ್ವಚ್ಚತೆ ಕಾಪಾಡಿಕೊಳ್ಳಲು ಸಾಧ್ಯವಾಗದೆ ಬಾಯಿಯ ಆರೋಗ್ಯ ಹದಗೆಟ್ಟು ಬಾಯಿಯಲ್ಲಿ ವಸಡಿನ ನಡುವೆ ಹುಳ ಉಂಟಾದ ರೋಗಿಗಳನ್ನು ಈ ಮೊದಲು ಕಂಡಿದ್ದೆ. ಆದರೆ ಹಲ್ಲಿನೊಳಗಿನ ಹುಳವನ್ನು ಬರೀ ಕಣ್ಣಿನಿಂದ ಕಾಣಲು ಸಾಧ್ಯವಿಲ್ಲ. ಹಲ್ಲಿನೊಳಗೆ ಬ್ಯಾಕ್ಟೀರಿಯಾ ನೋಡಲು ಸೂಕ್ಷ್ಮ ದರ್ಶಕ ಬೇಕೇ ಬೇಕು. ಕಣ್ಣಿಗೆ ಗೋಚರಿಸುವ ಹುಳುಗಳು ಹಲ್ಲಿನೊಳಗೆ ಇರಲು ಸಾಧ್ಯವಿಲ್ಲ. ಈ ರೋಗಿ ಬೇರೆ ಹಲ್ಲಿನಿಂದ ಒಂದೇ ಸವನೆ ಹುಳ ಬರುತ್ತಿದೆ ಎಂದು ಗೋಗರೆಯುತ್ತಿದ್ದಾನೆ. ಔಷಧಿ ಹಾಕಿ ಹುಳ ಕೊಲ್ಲಬೇಕು ಎಂದು ನನಗೆ ದಂಬಾಲು ಬಿದ್ದಿದ್ದಾನೆ. ಆತನ ಗಾಬರಿ ಮತ್ತು ಮಾನಸಿಕ ಸ್ಥಿತಿ ಕಂಡಾಗ ನನಗೆ ಆತನ ಹಲ್ಲಿನ ಹುಳಕ್ಕಿಂತ, ಆತನ ಮೆದುಳಿನ ಒಳಗೆ ಯಾರೋ ಹುಳ ಬಿಟ್ಟಿದ್ದಾರೆ ಎಂಬ ಸತ್ಯದ ಅರಿವಾಯಿತು. ಆತನೊಡನೆ ವಾದ ಮಾಡಿ ಆತನ ಹಲ್ಲಿನಿಂದ ಹುಳ ಬರುವುದಿಲ್ಲ ಎಂದು ಸಾಬೀತು ಮಾಡುವ ಸಾಧ್ಯತೆ ಇಲ್ಲ ಎಂಬ ಸತ್ಯದ ಅರಿತು ನನಗಿತ್ತು.
ಈಗ ನನಗೆ ಆತನ ಹಲ್ಲಿನೊಳಗಿನ ಹುಳದ ಜೊತೆಗೆ, ಆತನ ಮೆದುಳಿಗೆ ಹೊಕ್ಕ ಹುಳವನ್ನು ತೆಗೆಯ ಬೇಕಾದ ಅನಿವಾರ್ಯತೆ ಇದೆ ಎಂದು ನನಗಾಗಲೇ ಮನವರಿಕೆಯಾಗಿತ್ತು. ಆತನ ಹಲ್ಲಿನಲ್ಲಿ ಹುಳ ಬರಲು ಸಾಧ್ಯವಿಲ್ಲ ಎಂಬ ಸತ್ಯದ ಅರಿವು ನನಗಿತ್ತು. ಆದರೆ ಆತನಿಗೆ ಮನವರಿಕೆ ಮಾಡಲು ಸಾಧ್ಯವಿಲ್ಲ ಎಂದು ಕಟು ಸತ್ಯದ ಅರಿವು ನನಗಿತ್ತು. ಇಲ್ಲಿ ಹಾವು ಸಾಯಬೇಕು ಕೋಲು ಮುರಿಯ ಬಾರದು ಎಂಬಂತೆ ನಾನು ಜಾಣತನದಿಂದ ವ್ಯವಹರಿಸಬೇಕಾದ ಸಂದಿಗ್ಧ ಪರಿಸ್ಥಿತಿ ನನಗೆ ಬಂದಿತ್ತು. ಒಂದಷ್ಟು ಸಾವಧಾನತೆಯಿಂದ, ಆತನನ್ನು ದಂತ ಕುರ್ಚಿಯಲ್ಲಿ ಕುಳ್ಳಿರಿಸಿ ಸಮಾಧಾನ ಮಾಡಿದೆ. ಆತನು ಬಿಲ್‍ಕುಲ್ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಒಂದೇ ಸವನೆ ಹುಳ ತೆಗೆಯಲು ದಂಬಾಲು ಬಿದ್ದಿದ್ದ ಆತ.
ನಮ್ಮ ಹಲ್ಲು ಕೊರೆಯುವ ಯಂತ್ರದಿಂದ ಆತನ ಕೆಳ ದವಡೆಯ ಹಲ್ಲಿನ ಹುಳುಕಾದ ಭಾಗವನ್ನು ಕೊರೆದು ಕೆರೆದು, ಒಂದು ದೊಡ್ಡ ಹೊಂಡ ಮಾಡಿದೆ. ಆ ಬಳಿಕ, ಇಂಜೆಕ್ಷನ್ ನೀಡುವ ಸಿರಿಂಜಿನಲ್ಲಿ ಬರೀ ಉಪ್ಪಿನ ದ್ರಾವಣವನ್ನು ತುಂಬಿ ಸೂಜಿಯ ಮುಖಾಂತರ ಆತನ ಹಲ್ಲಿನ ಮಧ್ಯಭಾಗಕ್ಕೆ ಚುಚ್ಚಿದೆ. ಹಲ್ಲಿನ ಮಧ್ಯಭಾಗದಿಂದ ತೆಗೆದ ಹಲ್ಲಿನ ಸಣ್ಣ ಸಣ್ಣ ತುಂಡುಗಳನ್ನು ಆತನಿಗೆ ತೋರಿಸಿ ನೋಡಿ ನಿಮ್ಮ ಹಲ್ಲಿನೊಳಗಿನ ಹುಳಗಳು ಎಂದು ಆತನಿಗೆ ಮನವರಿಕೆ ಮಾಡಿದೆ. ಆತನ ಸಮಾಧಾನಕ್ಕೆ ಮತ್ತೇ ಸೂಜಿಯಿಂದ ಉಪ್ಪಿನ ದ್ರಾವಣ ಸುರಿದು ಸುಮಾರು 25 ಕ್ಕೂ ಹೆಚ್ಚು ಹುಳಗಳನ್ನು ತೆಗೆದು ಆತನಿಗೆ ತೋರಿಸಿದೆ. ಆತನಿಗೆ ಎಷ್ಟು ಖುಷಿಯಾಯಿತು ಎಂದರೆ ನನ್ನ ಮಾತನ್ನು ಯಾರೂ ನಂಬಲ್ಲ. ಹಲ್ಲಿನಲ್ಲಿ ಹುಳ ಇಲ್ಲ ಎಂದು ನನಗೆ ದಬಾಯಿಸುತ್ತಾರೆ ಎಂದು ಮಗದೊಮ್ಮೆ ಆತನ ಹೇಳಿಕೆಯನ್ನು ಅಧಿಕಾರಯುತವಾಗಿ ಸಮರ್ಥಿಸಿದ. ಒಟ್ಟಿನಲ್ಲಿ ಆತನಿಗೆ ಹಲ್ಲಿನೊಳಗಿನ ಹುಳ ಹೋದ ನೆಮ್ಮದಿ ನನಗೆ ಆತನ ತಲೆಯೊಳಗಿನ ಮೆದುಳಿಗೆ ಹೊಕ್ಕ ಹುಳವನ್ನು ತೆಗೆದ ನೆಮ್ಮದಿ ದೊರಕಿತ್ತು. ಆತನ ಗಾಬರಿ ಭಯ ಮತ್ತು ಕಳಕಳಿ ಎಲ್ಲವೂ ಮಾಯವಾಗಿ ಆತನ ಮುಖದಲ್ಲಿ ಮಂದಹಾಸ ಮಿನುಗುತ್ತಿತ್ತು. ಎಷ್ಟು ಬೇಡ ಎಂದರೂ ನನ್ನ ಕಿಸೆಗೆ ಇನ್ನೂರರ ಎರಡು ನೋಟನ್ನು ತುರುಕಿ ಆತ ಖುಷಿ ಪಟ್ಟ.
ನನಗೆ ಮನಸ್ಸಿನಲ್ಲಿ ಸುಳ್ಳು ಹೇಳಿದೆ ಎಂಬ ಪರಿತಾಪ ಕಾಡಿದರೂ, ನಾನು ಹೇಳಿದ ಸುಳ್ಳಿನಿಂದ ಆತನಿಗೆ ನೆಮ್ಮದಿ ಸಿಕ್ಕಿತಲ್ಲ ಎಂಬ ವಿಚಾರ ನೆನಪಿಸಿಕೊಂಡು ಕೆಲವೊಮ್ಮೆ ಅಪ್ರಿಯವಾದ ಸತ್ಯವನ್ನು ಹೇಳಬೇಕು ಮತ್ತು ಪ್ರಿಯವಾದ ಸುಳ್ಳನ್ನೂ ಹೇಳಬೇಕು ಎಂದು ನನಗೆ ನಾನೇ ಸಮಾಧಾನ ಪಡಿಸಿಕೊಂಡೆ. ಮಗದೊಮ್ಮೆ ಆ ಪುಣ್ಯಾತ್ಮ ಹುಳ ತೆಗೆಯಲು ಬರುವುದು ಬೇಡ ಎಂದು ಆತನಿಗೆ ಒಂದು ಬಾಯಿ ಮುಕ್ಕಳಿಸುವ ಔಷಧಿ ನೀಡಿ, ಈ ಔಷಧಿಯನ್ನು ದಿನಾ ರಾತ್ರಿ ಮಲಗುವ ಮುನ್ನ ಬಾಯಿ ಮುಕ್ಕಳಿಸಿದರೆ ಬಾಯಿಯಲ್ಲಿ ಹುಳ ಆಗುವುದೇ ಇಲ್ಲ ಎಂದು ಮತ್ತೊಂದು ಪ್ರಿಯವಾದ ಸುಳ್ಳನ್ನು ಹೇಳಿ ಆತನ ಮುಖದಲ್ಲಿ ಮತ್ತಷ್ಟು ಮಂದಹಾಸ ಬರುವಂತೆ ಮಾಡಿದೆ. ಒಟ್ಟಿನಲ್ಲಿ ಆತನ ತಲೆಯೊಳಗೆ ಹೊಕ್ಕ ಹುಳವನ್ನು ಹಲ್ಲಿನ ಮುಖಾಂತರ ತೆಗೆದು ಆವನಿಗೂ ನೆಮ್ಮದಿ ನನಗೂ ನೆಮ್ಮದಿ ಬಂದಿರುವುದು ಸತ್ಯವಾದ ಮಾತು.
-ಡಾ. ಮುರಲೀ ಮೋಹನ ಚೂಂತಾರು
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ