ಪಂಡಿತವರೇಣ್ಯ ಗುತ್ತಲ ರಂಗಾಚಾರ್ಯರಿಗೆ “ಶ್ರೀ ಮಧ್ವ ಪುರಂದರ ಪ್ರಶಸ್ತಿ”

Upayuktha
0

ಸಜ್ಜನಿಕೆಯ ಸೌಗಂಧದಿಂದ ಎಲ್ಲರ ಗೌರವಾದರಗಳಿಗೆ ಪಾತ್ರವಾದ, ಯೋಗಿಜನರಿಂದ ಪಾವಿತವಾದ ಪರಿಶುದ್ಧವಾದ ಗುತ್ತಲ ಮನೆತನದಲ್ಲಿ 1947ರಲ್ಲಿ ಶ್ರೀಮತಿ ರಮಾಬಾಯಿ ಹಾಗೂ ಮಹಾವಿಭೂತಿಪುರುಷರಾದ ಸಾಧುಜನ ಮೂರ್ಧನ್ಯರಾದ, ಸರ್ವಮೂಲಗ್ರಂಥಾದಿಗಳಲ್ಲಿ ಸ್ವಚ್ಛಂದವಿಹಾರಿಗಳಾದ ಪಂಡಿತಾಗ್ರಣಿಗಳಾದ ಶ್ರೀಗುರುರಾಜಾಚಾರ್ ಗುತ್ತಲ [ಪರಮಪೂಜ್ಯ ಶ್ರೀ ಶ್ರೀ ಸತ್ಯಪ್ರಮೋದತೀರ್ಥರು] ಇವರ ಸುಪುತ್ರರಾಗಿ ಜನನ. ವಿದ್ವದ್ವರೇಣ್ಯರ ಮನೆತನದ ಧಾರ್ಮಿಕ ಸ್ವಚ್ಛವಾತಾವರಣದಲ್ಲಿ ಬೆಳೆದ ಇವರಿಗೆ ಮನೆಯೇ ಪಾಠಶಾಲೆಯಾಯಿತು.


ಬಾಲ್ಯದಲ್ಲಿಯೇ ಅಧ್ಯಾತ್ಮತೆಯನ್ನು ಮೈಗೂಸಿಕೊಂಡು ಅತ್ಯಂತ ತೀಕ್ಷಮತಿಗಳಾದ ಶ್ರೀಯುತರಿಗೆ  ಪಂ.ತಿರುವಾದಿ ವಿಜಯೀಂದ್ರಾಚಾರ್, ಪಂ.ವರಖೇಡಿ ನರಸಿಂಹಾಚಾರ್ಯರÀಲ್ಲಿ ನ್ಯಾಯಶಾಸ್ತ್ರದ ಅಧ್ಯಯನವು ನಡೆಯಿತು. ಪಾರಮೇಷ್ಠ್ಯ ಪದವಿಯನ್ನಾಳುವ ಚತುರ್ಮುಖನೂ ತಲೆಬಾಗುವ ಹಂಸನಾಮಕ ಪರಮಾತ್ಮನಿಂತ ಪ್ರವರ್ತಿತವಾದ ಶ್ರೀಮದುತ್ತರಾದಿ ಮಠಾಧೀಶರಾದ ಮಹಾತಪಸ್ವಿಗಳಾದ ಪರಮಪೂಜ್ಯ ಶ್ರೀ ಶ್ರೀಸತ್ಯಪ್ರಮೋದತೀರ್ಥರಲ್ಲಿ ಶ್ರೀಮನ್ಯಾಯಸುಧಾಂತ ವೇದಾಂತದ ಉದ್ಗ್ರಂಥಗಳ ಅಧ್ಯಯನವನ್ನು ಮಾಡುವ ಸೌಭಾಗ್ಯ ನಿಮ್ಮದು. ನೀವು ಪರಮಪೂಜ್ಯಶ್ರೀಪಾದರ ಸನ್ನಿಧಿಯಲ್ಲಿ ನಡೆಸಿದ ಸುಧಾಮಂಗಳ ಕಾರ್ಯಕ್ರಮವು ಚರಿತ್ರೆಯ ಪುಟಗಳಲ್ಲಿ ದಾಖಲೆಯಾಗಿದೆ.


ಮುಂಬಯಿಯ ಸತ್ಯಧ್ಯಾನ ವಿದ್ಯಾಪೀಠದ ಕುಲಪತಿಗಳಾದ, ಉದ್ದಾಮ ವಿದ್ವಾಂಸರಾದ, ಪ್ರಾತಃಸ್ಮರಣೀಯರಾದ ಪಂ. ಮಾಹುಲೀ ಗೋಪಾಲಾಚಾರ್ಯರ ಸುಪುತ್ರಿಯಾದ ಶ್ರೀಮತಿ ರುಕ್ಮಿಣೀಬಾಯಿಯವರೊಂದಿಗೆ ಗೃಹಸ್ಥಾಶ್ರಮವನ್ನು ಸ್ವೀಕರಿಸಿ, ಸದ್ಗøಹಸ್ಥಾಶ್ರಮಕ್ಕೆ ಅನುರೂಪವಾಗಿ 1975 ರಲ್ಲಿ ಮನೆಯಲ್ಲಿಯೇ “ವಿದ್ಯಾಮಂದಿರ”ವನ್ನು ಸ್ಥಾಪಿಸಿ ಅನೇಕರಿಗೆ ಉಚಿತವಾದ ಅಶನ-ವಸನಗಳ ಜೊತೆಗೆ ಸದ್ವಿದ್ಯಾದಾನವನ್ನು ಮಾಡಿ ಅವರೆಲ್ಲರ ಬದುಕಿಗೆ ದಾರಿದೀಪವಾಗಿದ್ದಾರೆ. ಜನಸಾಮಾನ್ಯರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸಲು ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ಪಾಠ-ಪ್ರವಚನಗಳ ಮೂಲಕ ನೀವು ಕೈಗೊಂಡಿದ್ದ ಧಾರ್ಮಿಕ ಕಾರ್ಯಕ್ರಮಗಳಿಂದ ಸ್ಫೂರ್ತಿಗೊಂಡ ಎಲ್ಲರೂ ಸತ್ಕಾರ್ಯಗಳಲ್ಲಿ ತತ್ಪರರಾಗುವಂತೆ ಮಾಡಿದ್ದಾರೆ. ಅನೇಕ ಸುಕೃತದ ಫಲದಿಂದ ಲೋಕಮಾನ್ಯರಾದ ಮಹಾಮಹಿಮಾನ್ವಿತರಾದ ಪರಮಪೂಜ್ಯ ಶ್ರೀ ಶ್ರೀ ಸತ್ಯಾತ್ಮತೀರ್ಥಶ್ರೀಪಾದಂಗಳವರನ್ನು ಪುತ್ರರÀನ್ನಾಗಿ ಪಡೆದ ಮಹಾಪುಣ್ಯವಂತರು .


“ವಿಷ್ಣೋಃ ಸರ್ವೋತ್ತಮತ್ವಂ ಚ ಸರ್ವದಾ ಪ್ರತಿಪಾದಯ” ಎಂಬ ತ್ರೈಲೋಕ್ಯಾಚಾರ್ಯರ ಸಂದೇಶದಂತೆ ಪಾಠ-ಪ್ರವಚನ-ಗ್ರಂಥಸಂಪಾದನೆಯ ಕಾರ್ಯದಲ್ಲಿಯೇ ಸದಾ ಆಸಕ್ತರಾದ ಶ್ರೀಯುತರ ದೂರದೃಷ್ಟಿಯ ಫಲವಾಗಿಯೇ 1989ರಲ್ಲಿ “ಜಯತೀರ್ಥ ವಿದ್ಯಾಪೀಠ” ದ ಉದಯ. ಪ್ರಾತಃಸ್ಮರಣೀಯರಾದ ಶ್ರೀ ಶ್ರೀ ಸತ್ಯಪ್ರಮೋದತೀರ್ಥಶ್ರೀಪಾದಂಗಳವರ ಅಮೃತ ಹಸ್ತದಿಂದ ಪ್ರಾರಂಭಗೊಂಡ “ಜಯತೀರ್ಥ ವಿದ್ಯಾಪೀಠ”ದ ಕುಲಪತಿಗಳಾಗಿ ನೂರಾರು ವಿದ್ಯಾರ್ಥಿಗಳಿಗೆ ಉದ್ಗ್ರಂಥಗಳನ್ನು ಬೋಧಿಸುತ್ತಿದ್ದಾರೆ. ಇವರ ಶಿಷ್ಯರಿಂದ ಸಮಗ್ರ ಶ್ರೀಮನ್ಯಾಯಸುಧಾ ಪರೀಕ್ಷೆ ಹಾಗೂ ಸಮಗ್ರ ಟೀಕಾಗ್ರಂಥಗಳ ಪರೀಕ್ಷೆಯನ್ನು ಕೊಡಿಸಿ ಅವರೆಲ್ಲರೂ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವುದು ಇವರ ವಿದ್ವತ್ತಿಗೆ ಸಾಕ್ಷಿಯಾಗಿದೆ. ಮಹಾಸಂಸ್ಥಾನದ ಮಹೋನ್ನತವಾದ ಆಡಳಿತ ಮೇಲ್ವಿಚಾರಕರಾಗಿ ಇವರು  ಮಾಡಿದ ಕಾರ್ಯಗಳು ಎಂದಿಗೂ ಅಜರಾಮರ.   


18,000 ಶ್ಲೋಕಗಳ ಸಮಗ್ರ ಶ್ರೀಮದ್ಭಾಗವತವನ್ನು ತಿಳಿಯಾದ ಕನ್ನಡದಲ್ಲಿ ಅನುವಾದಿಸಿ, ಶ್ರೀಮನ್ಯಾಯಸುಧಾ ಗ್ರಂಥ ಮತ್ತು ಅನೇಕ ಗ್ರಂಥಗಳನ್ನು ಸರಳವಾದ ಶೈಲಿಯಲ್ಲಿ  ಅನುವಾದಿಸಿ ಮಹದುಪಕಾರವನ್ನು ಮಾಡಿದ್ದಾರೆ. “ಸುಧಾವಿಶಾರದ” “ಧ್ಯಾನಪ್ರಮೋದಪ್ರಶಸ್ತಿ” “ಶಾಸ್ತ್ರರತ್ನಾಕರ” “ಪರವಿದ್ಯಾಮಾನ್ಯ” ಮೊದಲಾದ ಪ್ರಶಸ್ತಿಗಳೊಂದಿಗೆ ಅನೇಕ ಪೀಠಾಧಿಪತಿಗಳು ಇವರ ಸಾಧನೆಯನ್ನು ಪ್ರಶಂಸಿಸಿ ಪರಮಾನುಗ್ರಹಪೂರ್ವಕವಾಗಿ ಸನ್ಮಾನಿಸಿದ್ದಾರೆ. 


ಮಾಧ್ವವಾಙ್ಮಯ ಪ್ರಪಂಚಕ್ಕೆ ಹಾಗೂ ಶ್ರೀಮಠಕ್ಕೆ ಅದ್ವಿತೀಯವಾದ ಕೊಡುಗೆಯನ್ನು ನೀಡಿದ ಶ್ರಿಯುತರ ವಜ್ರಮಹೋತ್ಸವದ ಶುಭಸಂದರ್ಭದಲ್ಲಿ  ಮಳಖೇಡ ನಿವಾಸಿಗಳಾದ ಶ್ರೀಮಜ್ಜಯತೀರ್ಥರ ಆರಾಧನೆಯ ಪುಣ್ಯಪರ್ವದಲ್ಲಿ “ಮಧ್ವ ಪುರಂದರ ಪ್ರಶಸ್ತಿ”ಯನ್ನು ಶ್ರೀಭಂಡಾರಕೇರಿ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿದ್ಯೇಶತೀರ್ಥಶ್ರೀಪಾದಂಗಳವರ ಅಮೃತ ಹಸ್ತದಿಂದ ನೀಡಿ ಸನ್ಮಾನಿಸಲಾಗುತ್ತಿದೆ. 

ಭಗವಂತನು ತಮಗೆ ಇತೋಪ್ಯತಿಶಯವಾದ ಆಯುರಾರೋಗ್ಯ ಸಕಲ ಸಂಪದಗಳನ್ನಿತ್ತು ಸಲಹಲಿ. ನಿಮ್ಮ ಅನುಗ್ರಹದಿಂದ ಭಗವಂತನ ಸೇವೆ ಮಾಡುವ ಸೌಭಾಗ್ಯವು ನಮಗೆ ದೊರೆಯಲಿ ಎಂದು ಅನಂತ ಪ್ರಣಾಮಗಳೊಂದಿಗೆ ಪ್ರಾರ್ಥಿಸುತ್ತೇವೆ.


- ಡಾ.ಬಿ.ಗೋಪಾಲಾಚಾರ್ಯ, ನಿರ್ದೇಶಕರು, ಉಡುಪಿ ಪುತ್ತಿಗೆ ಮಠದ ಶ್ರೀವಾದಿರಾಜ ಸಂಶೋಧನಾ ಪ್ರತಿಷ್ಠಾನ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top