ಕವನ: ನಾನು ಅಜ್ಜನಾದೆ

Upayuktha
0

ಅಪ್ಪನಾದೆನು ಅಂದು ಮಗಳು ಜನಿಸಿದಳೆಂದು 

ಅಜ್ಜನಾದೆನು ಇಂದು ಮಗಳು ಹೆತ್ತಳು ಎಂದು 

ಆದರೂ ಆದೇನು ಮುತ್ತಜ್ಜನೂ ಮುಂದು 

ಆಸೆಗಾದರು ಇಲ್ಲಿ ಮಿತಿಯೆಂಬುದೆಲ್ಲಿಹುದು


ಅಜ್ಜನಾಗುವುದು ಜಗದಿ ನಾನೇನು ಮೊದಲಲ್ಲ 

ಅಜ್ಜನಾಗುವುದಕ್ಕೆ ಮೊಮ್ಮಗುವೆ ಬೇಕಿಲ್ಲ 

ಕೇಶವಿಲ್ಲದ ಶಿರವು ಮಿರಮಿರನೆ ಮಿಂಚಿದರು 

ಕೇಶವರ್ಣವು ಕೊಂಚ ಬಿಳುಪಾಗಿ ಕಂಡರೂ 


ಬಿದ್ದು ಹೋದರು ಹಲ್ಲು ಕೊಂಚ ಬಾಗಲು ಬೆನ್ನು 

ಅಜ್ಜ ಬಂದರು ನೋಡು ಎಂದು ಹೇಳುವರಲ್ಲ 

ಯಾರಾತ ಮನಸನ್ನು ಹರೆಯದಲ್ಲಿರಿಸುವನೊ 

ಕಾಯ ಹಳತಾದರೂ ಅಜ್ಜನಾಗಲು ಉಂಟೆ


ಅಜ್ಜನಾಗುವ ಹಾದಿ ಬಲು ಕಠಿಣವಿಹುದಿಲ್ಲಿ

ಹೆಜ್ಜೆ ಹಜ್ಜೆಗು ರಾಶಿ ಅನುಭವದ ಮೂಟೆಗಳ

ಹೊತ್ತು ಕಳೆದಿಹ ಹರೆಯ ಮಾಗುತ್ತ ಮುಪ್ಪಾಗಿ

ಲೋಕಕ್ಕೆ ಬೆಳಕಾದ ಚೇತನವೆ ಧನ್ಯವದು 


ಜ್ಞಾನವನು ಗಳಿಸುತ್ತ ವೃದ್ಧ ನಾನಾಗಿಲ್ಲ 

ಜಾರಿದವು ತನ್ನಂತೆ ಹಗಲು ರಾತ್ರಿಗಳಿಲ್ಲಿ 

ಜೀವನದ ಅನಿವಾರ್ಯ ಗುರುವಾಗಿ ಕೈಹಿಡಿದು 

ಅಜ್ಜನನ್ನಾಗಿಸಿದೆ ಕಾಲವದು ನನ್ನನ್ನು 

***********

-ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter
Tags

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top