‘ಅ’ದಿಂದ ಆರಂಭಿಸಿದ್ದಕ್ಕೆ ಅಮೃತದಂಥ ಹಾಡು ಸಿಕ್ಕಿತು!

Upayuktha
0


ನಿಮ್ಮಲ್ಲಿ ಹೆಚ್ಚಿನವರಿಗೆ ಈಗಾಗಲೇ ಗೊತ್ತಿರಬಹುದಾದಂತೆ ತಿಳಿರುತೋರಣ ಅಂಕಣದ ಪ್ರತಿಯೊಂದು ಲೇಖನವನ್ನೂ (ಇದುವರೆಗಿನ 336 ಲೇಖನಗಳನ್ನೂ!!) ‘ಅ’ ಅಕ್ಷರದಿಂದಲೇ ಪ್ರಾರಂಭಿಸಿರುವುದಾಗಿದೆ. ಇದಕ್ಕೆ ವಿಶೇಷ ಕಾರಣವೇನೂ ಇಲ್ಲ, ಮೊತ್ತಮೊದಲ ಲೇಖನ ‘ಅಕ್ಷರಮಿತ್ರರಿಗೆ ನಮಸ್ಕಾರ’ ಎಂದು ಆರಂಭವಾದದ್ದನ್ನು ಆಮೇಲೆ 2ನೆಯ, 3ನೆಯ... ಹೀಗೆ ಪ್ರತಿವಾರವೂ ‘ಅ’ದಿಂದಲೇ ಆರಂಭಿಸುವ ಒಂದು ವೈಶಿಷ್ಟ್ಯವನ್ನು, ಅನನ್ಯತೆಯನ್ನು ಅಳವಡಿಸಿಕೊಂಡದ್ದು ಅಷ್ಟೇ. "ಅಕ್ಷರಾಣಾಂ ಅಕಾರೋಽಸ್ಮಿ..." ಎಂದು ಭಗವದ್ಗೀತೆಯಲ್ಲಿ ಕೃಷ್ಣಪರಮಾತ್ಮ ಹೇಳಿದ್ದಾನೆಂದು ಆಮೇಲೆ ಅದಕ್ಕೊಂದು ವಿವರಣೆಯನ್ನೂ ಸೇರಿಸಿದ್ದು. ಕೆಲವು ಲೇಖನಗಳಲ್ಲಿ ‘ಅ’ ಆರಂಭ ಅತ್ಯಂತ ಸಹಜವಾಗಿ ಬಂದದ್ದಿದೆಯಾದರೆ ಕೆಲವೊಂದರಲ್ಲಿ ಸ್ವಲ್ಪ ಕೃತಕ, ಸಂದರ್ಭಕ್ಕೆ ಸರಿಹೊಂದದ, ಒತ್ತಾಯದಿಂದ ತುರುಕಿದ... ಅಂತ ಅನಿಸಿದ್ದೂ ಇದೆ. ಬರೆಯುವಾಗಲೂ ಅಷ್ಟೇ: ಕೆಲವೊಮ್ಮೆ ‘ಅ’ ಆರಂಭ ಅತಿಸುಲಭವಾಗಿ ಹೊಳೆದರೆ, ಕೆಲವೊಮ್ಮೆ ತುಂಬ ತಿಣುಕಾಡಿದ್ದೂ ಇದೆ.


ಮೊನ್ನೆ ಜುಲೈ17ರ ಲೇಖನ ‘ತೂಗುಮಂಚದಲ್ಲಿ ಕೂತು... ತೂಗುವಿಕೆಯದೇ ಮಾತು’ ಬರೆಯುವಾಗಲೂ ಹಾಗೇ ಆಯ್ತು. ತೂಗುವಿಕೆಗೆ ಸಂಬಂಧಿಸಿದಂತೆ ‘ಅ’ ಅಕ್ಷರ ಹೇಗಪ್ಪಾ ತರುವುದು ಎಂದು ಸಾಕಷ್ಟು ತಲೆಕೆರೆದುಕೊಂಡಿದ್ದೆ. ಲೇಖನ ಪತ್ರಿಕೆಗೆ ಕಳುಹಿಸಬೇಕಾದ ಗಡುವೂ ಹತ್ತಿರ ಬರುತ್ತ ಇತ್ತು. ಆಗ ಹೊಳೆದದ್ದು ಕೆ.ಎಸ್.ನರಸಿಂಹಸ್ವಾಮಿಯವರ ಪ್ರಖ್ಯಾತ ರಚನೆ ಲಾಲಿಹಾಡು ‘ಅತ್ತಿತ್ತ ನೋಡದಿರು... ಅತ್ತು ಹೊರಳಾಡದಿರು...’. ನನಗೆ ತುಂಬ ಇಷ್ಟದ ಹಾಡು ಅದು. ಅದರಲ್ಲಿನ ‘ಅತ್ತಿತ್ತ’ ಪದವನ್ನೇ ‘ತೂಗು’ವಿಕೆಯ ವ್ಯಾಖ್ಯೆಗೆ/ವ್ಯಾಖ್ಯಾನಕ್ಕೆ ಬಳಸಬಹುದೆಂದು ನನಗೆ ಹೊಳೆದದ್ದು ನಿಜಕ್ಕೂ ಒಂದು ಯುರೇಕಾ!! ಕ್ಷಣವೇ ಆಗಿತ್ತು.


ಲೇಖನ ಪ್ರಕಟವಾಯಿತು. ಓದಿ/ಕೇಳಿ ತುಂಬ ಜನ ಮೆಚ್ಚುಗೆಯ ಪ್ರತಿಕ್ರಿಯೆಯನ್ನೂ ಕಳುಹಿಸಿದರು. ತಮ್ಮ ಇಷ್ಟದ/ ತಮಗೆ ನೆನಪಾದ ಲಾಲಿಹಾಡುಗಳನ್ನೆಲ್ಲ ತಿಳಿಸಿದರು. ಇದೇ ‘ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು...’ ಬಗ್ಗೆಯೂ ಆಪ್ತ ಭಾವವನ್ನು ವ್ಯಕ್ತಪಡಿಸಿದರು. “ಈ ಗಾನತೋರಣ ಕಟ್ಟಲು, ನೀವು ಆಯ್ಕೆ ಮಾಡಿಕೊಂಡ ಮೊದಲ ಎಲೆ ‘ಅತ್ತಿತ್ತ ನೋಡದಿರು....’ ಅಗಲಿದ ನನ್ನ ಅತ್ತಿಗೆ ಖ್ಯಾತ ಹಿನ್ನೆಲೆಗಾಯಕಿ ಶ್ರೀಮತಿ ಸುಲೋಚನ ವೆಂಕಟೇಶ್ ಅವರ ಇನಿದನಿಯಲ್ಲಿ, ಸುಶ್ರಾವ್ಯವಾದ ಈ ಗೀತೆ ಕೇಳಿದ ನೆನಪು ಬಹಳವಾಗಿ ಬಂದಿತು." ಎಂದು ಬೆಂಗಳೂರಿನಿಂದ ವರಲಕ್ಷ್ಮಿ ಮುಕುಂದ ರಾವ್ ಬರೆದರು.


ಈದಿನ ಇನ್ನೊಂದು ಪ್ರತಿಕ್ರಿಯೆ ಇಮೇಲ್‌ನಲ್ಲಿ ಬಂದಿದೆ. ಅದನ್ನಿಲ್ಲಿ ಯಥಾವತ್ತಾಗಿ ಹಂಚಿಕೊಳ್ಳುತ್ತಿದ್ದೇನೆ. 

"ನಮಃ. ತಿಳಿರುತೋರಣದಲ್ಲಿ ಮೊನ್ನೆ ಮೊದಲಿಗೇ ನರಸಿಂಹಸ್ವಾಮಿಯವರ ಅತ್ತಿತ್ತ ನೋಡದಿರು ... ಜೋಗುಳ ಹಾಡಿನ ಉಲ್ಲೇಖವಿದ್ದುದನ್ನು ಓದುತ್ತಿದ್ದ ಹಾಗೆ ಒಂದು ನೆನಪು ಒತ್ತಿಕೊಂಡು ಬಂತು. ಅದು 1990ನೆಯ ಇಸವಿ. ಸಂಸ್ಕೃತವನ್ನು ಜನಪ್ರಿಯಗೊಳಿಸಲು ನಾವು ಹೊಸಹೊಸ ಮಾರ್ಗಗಳನ್ನು ಹುಡುಕುತ್ತಿದ್ದೆವು. ನಾನು ಆ ವರ್ಷವಷ್ಟೆ ಗೃಹಸ್ಥನಾಗಿದ್ದೆ. ನರಸಿಂಹಸ್ವಾಮಿಯವರ ಅಭಿಮಾನಿಯೂ ಆದ ನನಗೆ ಆಗ ಅನುಭವಕ್ಕೆ ಬಂದ ಒಂದು ವಿಷಯವೆಂದರೆ ಸಂಸ್ಕೃತ ಭಾಷೆಯಲ್ಲಿ ಅಂತಹ ಹಾಡೊಂದೂ ಸಿಗುವುದಿಲ್ಲವಲ್ಲ ಎಂದು. ಹಾಗಾಗಿ ಯಾವುದೋ ಸಂದರ್ಭದಲ್ಲಿ ನಾನೇ ಒಂದು ಹಾಡನ್ನು ಬರೆದೆ. ಪುತ್ತೂರು ನರಸಿಂಹನಾಯಕರ ಸಂಗೀತನಿರ್ದೇಶನದಲ್ಲಿ ಪ್ರೇಮಲತಾ ದಿವಾಕರ್ ಹಾಡಿದ ಆ ಹಾಡು "ಪುತ್ರೀ ಮಮ ಖಲು ನಿದ್ರಾತಿ..." ಎಷ್ಟು ಜನಪ್ರಿಯವಾಯಿತೆಂದರೆ ಒಮ್ಮೆ ಪೇಜಾವರ ಮಠಾಧೀಶರೂ ಅದನ್ನು ಕೇಳಿ ಅಭಿನಂದಿಸಿದರು. ಆ ಹಾಡು ಇಂದು ಅನೇಕ ಪಠ್ಯಪುಸ್ತಕಗಳಲ್ಲೂ ಇದೆ. ಅದರ ಲಿಂಕ್ ಇದರ ಜೊತೆಗಿದೆ. ಸಮಯ ದೊರಕಿದಾಗ ಒಮ್ಮೆ ಕೇಳಬಹುದು. ಧನ್ಯವಾದ. 

- ಡಾ.ಎಚ್.ಆರ್.ವಿಶ್ವಾಸಃ, ಅಖಿಲಭಾರತಪ್ರಶಿಕ್ಷಣಪ್ರಮುಖಃ, ಸಂಸ್ಕೃತಭಾರತೀ."

===



ಪುತ್ರೀ ಮಮ ಖಲು ನಿದ್ರಾತಿ 


ಪುತ್ರೀ ಮಮ ಖಲು ನಿದ್ರಾತಿ  

ಪುತ್ರೀ ಮಮ ಖಲು ನಿದ್ರಾತಿ |

ಸುಂದರಶಯನೇ ಸುಖಮಯವಸನೇ

ಪುತ್ರೀ ಮಮ ಖಲು ನಿದ್ರಾತಿ || ಪ ||


ರೇ ರೇ ವಾಯಸ ಕರ್ಕಶಕಂಠ!

ಮಾ ರಟ ಮಾ ರಟ ಕರ್ಣಕಠೋರಮ್ |

ಶ್ರಾಂತಾ ಕ್ಲಾಂತಾ ಪುನರನುನೀತಾ

ಪುತ್ರೀ ಮಮ ಖಲು ನಿದ್ರಾತಿ || ೧||


ಮ್ಯಾಂವ್ ಮ್ಯಾಂವ್ ಮಾ ಕುರು ಘೋರವಿರಾವಂ

ಚಲ ಚಲ ರೇ ಖಲ ಚೋರಬಿಡಾಲ !

ಸ್ನಿಗ್ಧಾ ಮುಗ್ಧಾ ಸೇವಿತದುಗ್ಧಾ

ಪುತ್ರೀ ಮಮ ಖಲು ನಿದ್ರಾತಿ || ೨||


ಉಚ್ಚೈರ್ಮಾ ಭಷ ಶುನಕ ವರಾಕ

ಭೌ ಭೌ ಮಾ ಕುರು ಕಾರ್ಯವಿಹೀನ !

ವಿಮಲಾ ಕುಶಲಾ ಸುಮನೋಮೃದುಲಾ

ಪುತ್ರೀ ಮಮ ಖಲು ನಿದ್ರಾತಿ || ೩||


ರೇ ರೇ ಮಶಕ ಮಾ ಕುರು ಗಾನಂ 

ಮಾ ಸ್ಪೃಶ ಮಾ ದಶ ರಕ್ತಪಿಪಾಸೋ |

ಸುದತೀ ಸುಮುಖೀ ಶೋಭನಗಾತ್ರೀ

ಪುತ್ರೀ ಮಮ ಖಲು ನಿದ್ರಾತಿ || ೪||


===



ಹೌದು, ಸಂಸ್ಕೃತದ ಈ ಸುಮಧುರ ಲಾಲಿಹಾಡು "ಪುತ್ರೀ ಮಮ ಖಲು ನಿದ್ರಾತಿ..."ಯನ್ನು ಹಿಂದೆಲ್ಲ ಅನೇಕ ಸರ್ತಿ ಕೇಳಿ ಆನಂದಿಸಿದ್ದೇನೆ. ಮಗುವನ್ನು ಮಲಗಿಸುತ್ತ ತಾಯಿಯು ಅನುಕ್ರಮವಾಗಿ ಕಾಗೆ, ಬೆಕ್ಕು, ನಾಯಿ, ಮತ್ತು ಸೊಳ್ಳೆಗೆ ‘ಜೋರಾಗಿ ಶಬ್ದ ಮಾಡದಿರಿ! ನನ್ನ ಮಗಳು ಮಲಗುತ್ತಿದ್ದಾಳೆ...’ ಎಂದು ಬಿನ್ನವಿಸುವ ಸುಂದರವಾದ ಹಾಡು. ಮತ್ತೆಮತ್ತೆ ಕೇಳಬೇಕೆನಿಸುವುದು. ಡಾ.ಎಚ್.ಆರ್. ವಿಶ್ವಾಸರಿಗೆ ಹೃತ್ಪೂರ್ವಕ ಧನ್ಯವಾದಗಳು. 

ನೀವು ಈ ಹಾಡನ್ನು  ಈ ಹಿಂದೆ ಕೇಳಿದ್ದರೂ, ಕೇಳಿಲ್ಲವಾದರೂ, ಒಮ್ಮೆ ಕೇಳಿ ಆನಂದಿಸಿ.

- ಶ್ರೀವತ್ಸ ಜೋಶಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top