|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗೋವಾ-ಕರ್ನಾಟಕ ಪರಸ್ಪರ ಅವಲಂಬಿತ ರಾಜ್ಯಗಳು, ಮಧುರ ಬಾಂಧವ್ಯವಿದೆ: ನಾಡೋಜ ಡಾ. ಮಹೇಶ್‌ ಜೋಷಿ

ಗೋವಾ-ಕರ್ನಾಟಕ ಪರಸ್ಪರ ಅವಲಂಬಿತ ರಾಜ್ಯಗಳು, ಮಧುರ ಬಾಂಧವ್ಯವಿದೆ: ನಾಡೋಜ ಡಾ. ಮಹೇಶ್‌ ಜೋಷಿ

ಗೋವಾ ಕಸಾಪ ಪದಾಧಿಕಾರಿಗಳ ಪದಗ್ರಹಣ; ಅಂಬಿಕಾ ತನಯದತ್ತ ಕವಿ-ಕಾವ್ಯ-ಕಲ್ಪನೆ ವಿಚಾರ ಸಂಕಿರಣ



ಪಣಜಿ: ಗೋವಾ ಮತ್ತು ಕರ್ನಾಟಕ ಇವೆರಡೂ ರಾಜ್ಯಗಳು ಪರಸ್ಪರವಾಗಿ ಅವಲಂಬನೆ ಇರುವ ರಾಜ್ಯಗಳು. ಕರ್ನಾಟಕದಿಂದ ಹಾಲು, ಹಣ್ಣು, ತರಕಾರಿ, ಹೀಗೆ ಅಗತ್ಯ ವಸ್ತುಗಳು ಮತ್ತು ಗೋವಾಕ್ಕೆ ಕಾರ್ಮಿಕರು, ಕರ್ಮಜೀವಿಗಳು ಗೋವಾಕ್ಕೆ ಕರ್ನಾಟಕದಿಂದಲೇ ಬರುತ್ತಾರೆ. ಗೋವಾ ರಾಜ್ಯ ಕರ್ನಾಟಕವನ್ನು ಅವಲಂಬಿಸಿದೆ. ಗೋವಾ ರಾಜ್ಯವೂ ಕೂಡ ಕನ್ನಡಿಗರನ್ನು ಇಲ್ಲಿ ಸ್ವಾಗತಿಸಿ ಮುಕ್ತ ಅವಕಾಶ ಕಲ್ಪಿಸಿಕೊಟ್ಟಿದೆ. ಕರ್ನಾಟಕ ಮತ್ತು ಗೋವಾ ರಾಜ್ಯದ ನಡುವೆ ಇರುವ ಬಾಂಧವ್ಯವನ್ನು ತೋರಿಸುತ್ತದೆ ಎಂದು ಕರ್ನಾಟಕ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್ ಜೋಷಿ ಹೇಳಿದರು.


ಭಾನುವಾರ ಗೋವಾದ ಪಣಜಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಗಡಿನಾಡ ಘಟಕ ಗೋವಾ, ಕನ್ನಡ ಸಂಘಗಳ ಒಕ್ಕೂಟ, ಮನೋಹರ ಗ್ರಂಥಮಾಲೆ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಅಂಬಿಕಾ ತನಯದತ್ತ ಕವಿ-ಕಾವ್ಯ-ಕಲ್ಪನೆ ವಿಚಾರ ಸಂಕಿರಣ ಹಾಗೂ ಗೋವಾ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.


ನಾನು ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ನಂತರ ಗಡಿನಾಡ ಗೋವಾದಲ್ಲಿಯೇ ಪ್ರಪ್ರಥಮವಾಗಿ ಪದಗೃಹಣ ಸಮಾರಂಭ ನಡೆಯುತ್ತಿದೆ. ಗೋವಾದಲ್ಲಿ ಗೋವಾ ರಾಜ್ಯದ ಮೂಲ ನಿವಾಸಿಗಳನ್ನು ಹೊರತುಪಡಿಸಿದರೆ ಇಲ್ಲಿ ಕನ್ನಡಿಗರೇ ಹೆಚ್ಚಾಗಿದ್ದಾರೆ. ಇನ್ನು ಐದು ವರ್ಷಗಳಲ್ಲಿ ಗೋವಾದಲ್ಲಿ 1 ಲಕ್ಷ ಕನ್ನಡಿಗರು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವವನ್ನು ಪಡೆದುಕೊಳ್ಳಬೇಕು. ಕರ್ನಾಟಕ ಸರ್ಕಾರವು ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಅಗತ್ಯ ನಿಧಿ ನೀಡಲು ಸಿದ್ಧವಿದೆ. ಆದರೆ ಗೋವಾದಲ್ಲಿ ಮೊದಲು ಇದಕ್ಕೆ ಜಾಗ ಖರೀದಿಸಬೇಕಿದೆ. ಗೋವಾ ಸರ್ಕಾರವು ಕನ್ನಡ ಭವನ ನಿರ್ಮಾನಕ್ಕೆ ಜಾಗವನ್ನು ನೀಡಬೇಕೆಂದು ನಾಡೋಜ ಜೋಷಿ ಮನವಿ ಮಾಡಿದರು.


ಸಮಾರಂಭದ ದಿವ್ಯ ಸಾನಿಧ್ಯ ವಹಿಸಿರುವ ಬೆಳಗಾವು ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ-ಇನ್ನು ಒಂದು ವರ್ಷದ ಒಳಗೆ ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಬೇಕು. ಇಲ್ಲಿನ ಎಲ್ಲ ಕನ್ನಡಿಗರು ಮನಸ್ಸು ಮಾಡಿದರೆ ಮಾತ್ರ ಕನ್ನಡ ಭವನ ನಿರ್ಮಾಣ ಸಾಧ್ಯ. ಕನ್ನಡ ಭವನದ ಸ್ವಂತ ಜಾಗದಲ್ಲಿ ಕನ್ನಡ ಕಾರ್ಯಕ್ರಮ ಆಯೋಜಿಸುವಂತಾಗಬೇಕು. ಇನ್ನು ಒಂದು ತಿಂಗಳ ಸಮಯದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಜಾಗ ಖರೀದಿಯಾಗಲೇ ಬೇಕು. ಇಲ್ಲವಾದರೆ ನಾನು ನನ್ನ ಮಠಕ್ಕೆ ಎಂದೂ ಇಲ್ಲಿ ಜೋಳಿಗೆ ಹಿಡಿದು ಬಂದವನಲ್ಲ, ಆದರೆ ಇಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಜಾನು ಜೋಳಿಗೆ ಹಿಡಿಯಲು ನಾನು ಸಿದ್ಧ ಎಂದು ಶ್ರೀಗಳು ಹೇಳಿದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಡಾ. ಸಿದ್ಧಣ್ಣ ಮೇಟಿ ಮಾತನಾಡಿ- ಗೋವಾಕ್ಕೆ ಕನ್ನಡ ಭವನ ನಿರ್ಮಾಣಕ್ಕೆ ಸಾಕಷ್ಟು ಪ್ರಯತ್ನ ನಡೆಸಲಾಗುತ್ತಿದೆ. ಕನ್ನಡ ಭವನ ನಿರ್ಮಾಣಕ್ಕೆ ಜಾಗ ಖರೀದಿಸಲು ಹುಕ್ಕೇರಿ ಶ್ರೀಗಳು ಜೋಳಿಗೆ ಹಿಡಿದು ಬಂದರೆ ನಾನು ಆ ಜೋಳಿಗೆಯಲ್ಲಿ 10 ಲಕ್ಷ ರೂ ದೇಣಿಗೆ ರೂಪದಲ್ಲಿ ನೀಡುವುದಾಗಿ ಘೋಷಿಸಿದರು.


ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ವೇದಿಕೆಯ ಮೇಲೆ ಉಪಸ್ಥಿತರಿದ್ದ ಗೋವಾ ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್, ಇಂಡೊ ಪೋರ್ಚುಗೀಸ ಸಾಹಿತ್ಯ ಪ್ರತಿಷ್ಠಾನದ ನಿರ್ದೇಶಕ ಅರವಿಂದ ಯಾಳಗಿ ಮಾತನಾಡಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ವಿಜಯಪುರ ಜಿಪಂ ಮಾಜಿ ಅಧ್ಯಕ್ಷೆ ನೀಲಮ್ಮ ಮೇಟಿ, ಅಖಿಲ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಹನುಮಂತಪ್ಪ ಶಿರೂರ ರೆಡ್ಡಿ, ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯ ಘಟಕದ ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಬದಾಮಿ, ಕರ್ನಾಟಕ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷ ಮಹೇಶಬಾಬು ಸುರ್ವೆ ಉಪಸ್ಥಿತರಿದ್ದರು.


ಕನ್ನಡ ಸಾಹಿತ್ಯ ಪರಿಷತ್‍ನ ನೂತನ ಪದಾಧಿಕಾರಿಗಳಿಗೆ ಅದಗೃಹಣ ಸಮಾರಂಭ ನಡೆಯಿತು. ಕರ್ನಾಟಕದಿಂದ ಆಗಮಿಸಿದ ಸಾಹಿತಿಗಳು ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಪ್ರತಿನಿಧಿ ರೇಣುಕಾ ದಿನ್ನಿ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು. ಮಹಿಳಾ ಪ್ರತಿನಿಧಿ ಕಾಂಚನಾ ಜೋಶಿ ಸಂಗಡಿಗರಿಂದ ನಾಡಗೀತೆ ಪ್ರಸ್ತುತಪಡಿಸಲಾಯಿತು. ಶೀಲಾ ಮೇಸ್ತ ಕಾರ್ಯಕ್ರಮ ನಿರೂಪಿಸಿದರು.


ಸಮಾರಂಭದಲ್ಲಿ ಉತ್ತರ ಮತ್ತು ದಕ್ಷಿಣ ಗೋವಾ ಜಿಲ್ಲಾ ಕ.ಸಾ.ಪ ಪದಾಧಿಕಾರಿಗಳು ಹಾಗೂ ತಾಲೂಕು ಘಟಕದ ಪದಾಧಿಕಾರಿಗಳು, ವಿವಿಧ ಕನ್ನಡ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಕರ್ನಾಟಕದ ಧಾರವಾಡದಿಂದ ಆಗಮಿಸಿರುವ ಸಾಹಿತಿಗಳಿಂದ ಕವಿಗೋಷ್ಠಿ ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯ ಘಟಕದ ಗೌರವ ಕೋಶಾಧ್ಯಕ್ಷ ಪುಟ್ಟಸ್ವಾಮಿ ಗುಡಿಗಾರ ಕೊನೆಯಲ್ಲಿ ವಂದನಾರ್ಪಣೆಗೈದರು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

0 Comments

Post a Comment

Post a Comment (0)

Previous Post Next Post