'ಪ್ರವಾದಿ ಮಹಮ್ಮದರಿಗೆ ಅವಹೇಳನ ಮಾಡಿದರು' ಎಂಬ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಜೆ.ಬಿ. ಪರ್ದೀವಾಲ ಅವರು ನೂಪುರ್ ಶರ್ಮ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ನೂಪುರ್ ಶರ್ಮ ಅವರು ಯಾವ ಬೈಗುಳಪದಗಳನ್ನೂ ಉಪಯೋಗಿಸಿಲ್ಲ, ಅವರು ಕುರಾನಿನ ಹದೀಸುಗಳನ್ನೇ ಉಲ್ಲೇಖಿಸಿದ್ದು ಎಂಬಿತ್ಯಾದಿ ಸಮರ್ಥನೆಗಳೆಲ್ಲ ಒಂದಟ್ಟಿಗಿರಲಿ. ಆದರೆ ಇಲ್ಲಿ ಮುಖ್ಯವಾಗುವುದು "ದೈವನಿಂದನೆ" ಅಥವಾ "blasphemy" ಎಂಬ ಪರಿಕಲ್ಪನೆಯನ್ನು ನ್ಯಾಯಾಧೀಶರು ಭಾರತೀಯ ಸಂದರ್ಭದಲ್ಲಿ ಹುಟ್ಟುಹಾಕಿದ ಅನಾಹುತಕಾರಿ ನಡೆ. ಹತ್ತಾರು ಮತಗಳು, ನೂರಾರು ಪಂಥಗಳು, ಸಾವಿರಾರು ಜಾತಿ, ಉಪಜಾತಿ, ಸಮುದಾಯಗಳು ಮತ್ತವರ ಅಸಂಖ್ಯಾತ ನಂಬಿಕೆ, ನಡಾವಳಿಗಳು, ಸಂಪ್ರದಾಯ ಮತ್ತು ಕಟ್ಟುಕಟ್ಟಳೆಗಳು ಇರುವಲ್ಲಿ ಒಂದು ಮತದ blasphemy ಎಂಬ ಮತೀಯ ಶಾಸನವನ್ನು ನ್ಯಾಯಾಲಯ ಮಾನ್ಯ ಮಾಡಬಹುದೇ!? ಭಾರತದಲ್ಲಿ ದೈವನಿಂದನೆ ಎಂಬ ಪರಿಕಲ್ಪನೆ ಇಲ್ಲ, ಇರಲು ಸಾಧ್ಯವಿಲ್ಲ.
ತಮ್ಮ ಮತದ ಸಮರ್ಥನೆ, ಪ್ರಚಾರದ ಹೊತ್ತಿನಲ್ಲಿ ಅವರ ಅನ್ಯಮತ, ಅನ್ಯದೈವದ ಕುರಿತು ಮಾತನಾಡಿದ್ದು ಸಮಯ-ಸನ್ನಿವೇಶಗಳಿಗೆ ತಕ್ಕಂತೆ ಭಾಷ್ಯ, ಖಂಡನ, ಮಂಡನ, ವಿಮರ್ಶೆ, ನಿಂದನೆ ಎಂಬಿತ್ಯಾದಿಯಾಗಿ ಪರಿಗಣಿಸಬೇಕಾಗುತ್ತದೆ.
ಅದ್ವೈತ, ವಿಶಿಷ್ಟಾದ್ವೈತ, ದ್ವೈತ, ಮಾಧ್ವ ಶೈವ, ವೈಷ್ಣವ, ಗಾಣಪತ್ಯ, ವೀರಶೈವ, ಲಿಂಗಾಯತ ಇವರೆಲ್ಲ ಸಾವಿರಾರು ವರ್ಷಗಳಿಂದ ಅನ್ಯಮತ, ಅನ್ಯದೈವದ ಕುರಿತು ಆಡಿದ್ದಕ್ಕೆಲ್ಲ ತಲೆ ಕಡಿಯುವುದಾದರೆ ಯಾರು ಉಳಿಯುತ್ತಿದ್ದರು!? ಬಸವಣ್ಣನವರಿಂದ ತೊಡಗಿ ಭಗವಾನರ ತನಕ ಯಾರ ತಲೆಯೂ ಉಳಿಯುತ್ತಿರಲಿಲ್ಲ!
"ವೇದವನೋದಿದ ಬ್ರಹ್ಮನ ಶಿರ ಹೋಯಿತು"
"ಹಲವು ದೈವಗಳ ಎಂಜಲ ತಿಂಬವರೆಂಬೆ"
"ಸಗಣಿಯ ಬೆನಕಂಗೆ ಸಂಪಗೆಯರಳಲ್ಲಿ ಪೂಜಿಸಿದಡೆ
ರಂಜನೆಯಲ್ಲದೆ ಅದರ ಗಂಜಳ ಬಿಡದಣ್ಣ"
"ಕೂಡಲಸಂಗಯ್ಯನ ಪೂಜಿಸಿ ಅನ್ಯದೈವಗಳಿಗೆರಗಿ
ಭಕ್ತರೆನಿಸಿಕೊಂಬ ಅಜ್ಞಾನಿಗಳ..."
"...ಅಜಾಂಡ ಹರಿವಿರಿಂಚಿಗಳು
ನಿಮ್ಮ ಉದರದ ಕೊನೆಯ ಪ್ರಾಣಿಗಳಯ್ಯಾ..." (ಅಂದರೆ ಹರಿವಿರಿಂಚಿಬ್ರಹ್ಮ ಮೊದಲಾದವರೆಲ್ಲ ಶಿವನ ಗುದದ್ವಾರದಿಂದ ಹೊರಬರುವ ಹುಳುಗಳು ಎಂದರ್ಥ!)
"ಹರಿಹರನೊಂದೆ ಎಂದಡೆ, ಸುರಿಯುವೆ ಬಾಯಲಿ
ಬಾಲಹುಳಗಳು"
"ವಿಷ್ಣು ನಾನಾಯೋನಿಯಲ್ಲಿ ಬಾರದ ಭವಗಳಲ್ಲಿ ಬರುತಿಪ್ಪ
ರುದ್ರನಾವ ಯೋನಿಯಲ್ಲಿ ಬಂದನೆಂದು ನೀವು ಹೇಳಿರೋ"
"ನಾರಾಯಣನೆಂಬವನ ಕಾಣೆ, ಗೀರಾಯಣನೆಂಬವನ ಕಾಣೆ
ಬೊಮ್ಮನೆಂಬವನ ಕಾಣೆ, ಗಿಮ್ಮನೆಂಬವನ ಕಾಣೆ"
"ಮೊರವ ಗೋಟಿಲಿ ಬಪ್ಪ ಕಿರುಕುಳದೈವಕೆ
ಕುರಿಯನಿಕ್ಕಿಹೆನೆಂದು ನಲಿನಲಿದಾಡುವರು"
"ಮಡಕೆ ದೈವ ಮೊರ ದೈವ, ಬೀದಿಯ ಕಲ್ಲು ದೈವ,
ಹಣಿಗೆ ದೈವ, ಬಿಲ್ಲನಾರಿ ದೈವ ಕಾಣಿರೋ!
ಕೊಳಗ ದೈವ, ಗಿಣ್ಣಿಲು ದೈವ ಕಾಣಿರೋ!
ದೈವದೈವವೆಂದು ಕಾಲಿಡಲಿಂಬಿಲ್ಲ"
(ಬಹುತ್ವ ಎಂದು ಹಲುಬುವವರು ಎಲ್ಲಿದ್ದೀರಿ ಸ್ವಾಮಿ!?)
"...ನಮ್ಮ ಲಿಂಗದ ಮುಂದೆ
ಅನ್ಯ ದೈವವೆಂಬುದ ತೋರಿಯೂ ಕಾಣಬಾರದು"
(ಸಹಿಷ್ಣುತೆ ಎಂದು ಹಲುಬುವವರು ಎಲ್ಲಿದ್ದೀರಿ ಸ್ವಾಮಿ!?)
"ಅನ್ಯ ದೈವವೆಂಬುದು ಹಾದರ ಕಾಣಿರೋ"
"ವಿಷ್ಣುವ ಪೂಜಿಸಿ ಮುರುಹ ನುಡಿಸಿಕೊಂಬುದ ಕಂಡೆ
ಜಿನನ ಪೂಜಿಸಿ ಬತ್ತಲೆಯಪ್ಪುದ ಕಂಡೆ
ಮೈಲಾರನ ಪೂಜಿಸಿ ನಾಯಾಗಿ ಬಗಳುವುದು ಕಂಡೆ" (ಭಜನೆ, ಸಂಗೀತಗಳನ್ನು ಬಸವಣ್ಣ ಲೇವಡಿ ಮಾಡಿದ್ದು ಹೀಗೆ!)
ಇದು ಬಸವಣ್ಣನವರ ವಚನಗಳ ಕೆಲವು ಸಾಲುಗಳು, sampleಗಳು!! ಇನ್ನು ಬೇರೆ ವಚನಕಾರರ ಇದಕ್ಕಿಂತಲೂ ಭೀಕರವಾದ ವಚನಗಳನ್ನು ಇಲ್ಲಿ ಉದ್ಧರಣ ಮಾಡುವುದಿಲ್ಲ. ಏಕೆಂದರೆ ಅದಕ್ಕೆ ಕೊನೆಯಿಲ್ಲ. ಕಳೆದ ಒಂದು ಶತಮಾನದಲ್ಲಿ ನಮ್ಮ ಬುದ್ಧಿಜೀವಿಗಳು ರಾಮ, ಕೃಷ್ಣ, ಶಿವ ಮೊದಲಾದ ದೇವರನ್ನು, ನಮ್ಮ ಆಚಾರ, ವಿಚಾರ ಆಚರಣೆಗಳನ್ನು ಅದೆಷ್ಟು ಹಳಿದಿಲ್ಲ? ದಕ್ಷಿಣ ಕನ್ನಡದ ದೈವಾರಾಧನೆಯ ಸಂದರ್ಭದಲ್ಲಿ ಕೂಡ ಇದು ಇದೆ. (ನಮ್ಮದು ಮೂಢನಂಬಿಕೆ, ಇಸ್ಲಾಂ ಮತ್ತು ಕ್ರೈಸ್ತ ಮತಗಳಲ್ಲಿ ಮೂಢನಂಬಿಕೆಗಳೇ ಇಲ್ಲ!)
ರಮೇಶ ಉಮೇಶರು ಶತಮಾನಗಳ ಕಾಲ ಹೊಡೆದಾಡಿಕೊಂಡಿಲ್ಲವೇ? "ದೇವರ ಹೆಣ" ಎಂಬ ಲೇವಡಿಯನ್ನೇ ಪಠ್ಯ ಪುಸ್ತಕ ಮಾಡಿದವರು ನಾವು! ಇಷ್ಟೆಲ್ಲ ನಮ್ಮನ್ನು ಹಳಿದ ಬಸವಣ್ಣನವರನ್ನು ನಾವು ಸಮಾಜೋದ್ಧಾರಕ ಎನ್ನುತ್ತೇವೆ!
ಅಂದರೆ ನಮ್ಮ ನೆಲವು ಅವೆಲ್ಲವನ್ನೂ ಸಂದರ್ಭಕ್ಕೆ ಸರಿಯಾಗಿ ಸಹಿಸಿದೆ, ಜೀರ್ಣಿಸಿಕೊಂಡಿದೆ, ತಿರಸ್ಕರಿಸಿದೆ, ಪುರಸ್ಕರಿಸಿದೆ, ಅವಮಾನವನ್ನು ನುಂಗಿಕೊಂಡಿದೆ, ಮೌನವಾಗಿ ನೋಡಿದೆ, ಮರೆತಿದೆ.
ಇನ್ನು ಈ ದೈವನಿಂದನೆ ಎಂಬ ವಿಚಾರದಲ್ಲಿ ನಮ್ಮ ನೆಲದಲ್ಲಿ ಎರಡು ವಿಭಾಗ ಇದೆ. (ಅದನ್ನು ಇಸ್ಲಾಂ ಮಾನ್ಯ ಮಾಡುವುದಿಲ್ಲ.)
ಅವೆಂದರೆ ವಾಸ್ತವ ಮತ್ತು ಕಲೆ.
ಬಸವಣ್ಣನವರು ಮತ್ತು ಇಂದಿನ ಬುದ್ಧಿಜೀವಿಗಳು ಮಾಡುತ್ತಿರುವುದು ಮಾಡಿದ್ದು ವಾಸ್ತವ ಅಥವಾ ನಿಜವಾದ ನಿಂದನೆ. ಇನ್ನು ಪ್ರದರ್ಶನ ಕಲೆಗಳಲ್ಲಿ ಮಾಡುವ ನಿಂದನೆ ಇರುತ್ತದೆ. ವಾಲಿರಾವಣಾದಿಗಳು (ಕಲಾವಿದರು!) ರಾಮನಿಗೆ ಬಯ್ಯುತ್ತಾರೆ! ಕೌರವ, ಕಂಸಾದಿಗಳು ಕೃಷ್ಣನಿಗೆ ಬಯ್ಯುತ್ತಾರೆ. (ಶೇಣಿಯವರ ತಲೆ ಕಡಿಯಿರಿ ಎಂದ ಯಕ್ಷಗಾನ ಪ್ರೇಮಿಗಳೋ, ರಾಮಭಕ್ತರೋ ಇದ್ದಾರೆಯೇ!?) ಪಂಜುರ್ಲಿದೈವವನ್ನು ಭಕ್ತರು ಅಟ್ಟಾಡಿಸಿ ಗೇಲಿಮಾಡುವ ಪ್ರಸಂಗವಿದೆ. ಅವರಿಗೆಲ್ಲ ಪಂಜುರ್ಲಿಯ ಶಾಪ ತಟ್ಟಿತೇ!? ಇದು ಕೂಡ ವಿಸ್ತಾರವಾದ ಚರ್ಚೆ, ವಿಶ್ಲೇಷಣೆ ಬಯಸುವ ವಿಚಾರ.
ಇದ್ಯಾವುದರ ಗಣನೆ, ಅಧ್ಯಯನ, ಪರಿಜ್ಞಾನ ಇಲ್ಲದ ಓರ್ವ ವ್ಯಕ್ತಿ ಇಂತಹ ವಿಶಿಷ್ಟ ಸಹನೆಯನ್ನು ಮೈಗೂಡಿಸಿಕೊಂಡಿರುವ ನೆಲದಲ್ಲಿ ಕೇವಲ ಒಂದು ಮತದ ದೈವನಿಂದನೆಯ (blasphemy) ಶಾಸನವನ್ನು ಎಲ್ಲ ಜನರ ಮೇಲೂ ಹೇರುವುದು ವಿವೇಚನೆ, ನ್ಯಾಯ ಅನ್ನಿಸಿಕೊಳ್ಳುತ್ತದೆಯೇ!? (ಮುಸ್ಲಿಮರಿಗೆ ಮಾತ್ರ ಎಂದು ಮಾಡಿದ್ದರೆ ಸರಿಯಲ್ಲವಾದರೂ ಸರಿ ಎಂದು ಹೇಳಬಹುದೇನೋ!?)
ಅದಕ್ಕಿಂತಲೂ ಭಯಜನಕವಾದ ಸಂಗತಿಯೆಂದರೆ ಇಸ್ಲಾಂ ಮತವು ತನ್ನ ಎಲ್ಲ ಅನುಯಾಯಿಗಳಿಗೆ 'ಇಂತಹ' ಸಂದರ್ಭಗಳಲ್ಲಿ ಕ್ರಮ ಕೈಗೊಳ್ಳುವ ಅಧಿಕಾರವನ್ನು ನೀಡುತ್ತದೆ. ಅದನ್ನು ನಮ್ಮ ನ್ಯಾಯಾಲಯವೂ ಈಗ ಒಪ್ಪಿದಂತಾಯಿತು ಅಲ್ಲವೇ!? ಈ ದೇಶದ ಪ್ರತಿಯೊಬ್ಬ ಸತ್ಯವಿಶ್ವಾಸಿಯು ಕಾಫಿರರ ವಿರುದ್ಧ ಇದನ್ನು ಪರವಾನಗಿ ಎಂದು ಪರಿಗಣಿಸಿದರೆ ಮುಂದಿನ ದಿನಗಳು ಹೇಗಿರಬಹುದು!? ನ್ಯಾಯಾಧೀಶರು ಅದನ್ನು ಸ್ಪಷ್ಟವಾಗಿ ಹೇಳಿದ ಹಾಗಾಗಿದೆ ಅಲ್ಲವೇ!? ಇಸ್ಲಾಂ ನಿಯಮದ ಪ್ರಕಾರ ಪ್ರತಿಯೊಬ್ಬನೂ ಮತರಕ್ಷಣೆಗೆ ನಿಲ್ಲಬೇಕು, ನಿಲ್ಲುತ್ತಾನೆ. ಆದರೆ ಒಂದು ರಿಲಿಜನ್ ಅಲ್ಲದ, ಅಂತಹ ರಕ್ಷಣೆಯ ಅಥವಾ ಉಗ್ರ ನಿಲುವು ಇಲ್ಲದ ಹಿಂದೂ ಸಮುದಾಯಗಳ ರಕ್ಷಣೆಗೆ ಯಾರು ಬರಬೇಕು!? 'ನ್ಯಾಯಾಲಯ ಇಲ್ಲ' ಎಂದು ಸಾಬೀತಾಯಿತು ಅಲ್ಲವೇ!? ಮಿಲಿಟರಿ, ಪೋಲಿಸ್, ಸರಕಾರ, ಮಾಧ್ಯಮ, ಬೌದ್ಧಿಕ ವರ್ಗ, ರಾಜಕೀಯ ಪಕ್ಷಗಳು... ಯಾರೂ ನಮ್ಮ ರಕ್ಷಣೆಗೆ ಇಲ್ಲ ಎಂದಾಯ್ತಲ್ಲ?;
- ಸನಾತನಿ