ಪಣಜಿ: ಗೋವಾ ರಾಜ್ಯದಲ್ಲಿ ಅಗಸ್ಟ್ 10 ರಂದು ಗ್ರಾ.ಪಂ ಚುನಾವಣೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಆಗಸ್ಟ್ 9 ಮತ್ತು 10 ರಂದು ಗೋವಾದಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಇದಲ್ಲದೆ, ಮತ ಎಣಿಕೆಯ ದಿನ ಅಂದರೆ ಆಗಸ್ಟ್ 12 ರಂದು ಮದ್ಯ ಮಾರಾಟವನ್ನು ನಿಷೇಧಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಗೋವಾ ಸರ್ಕಾರ ಈ ಕುರಿತು ಬುಧವಾರ ಅಧಿಸೂಚನೆ ಹೊರಡಿಸಿದೆ. ಆಗಸ್ಟ್ 9, ಆಗಸ್ಟ್ 10 ಮತ್ತು ಆಗಸ್ಟ್ 12 ರಂದು ಗೋವಾ ರಾಜ್ಯದಾದ್ಯಂತ ಮದ್ಯ ಮಾರಾಟ ಮಾಡುವ ಎಲ್ಲಾ ಪರವಾನಗಿ ಪಡೆದ ಅಂಗಡಿಗಳನ್ನು ಮುಚ್ಚಬೇಕು. ಮೇಲೆ ತಿಳಿಸಿದ ದಿನಾಂಕಗಳಲ್ಲಿ ರಾಜ್ಯದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಮದ್ಯ ಸಾಗಣೆಯನ್ನು ನಿಷೇಧಿಸಿ ಅಧಿಸೂಚನೆಯನ್ನು ಸಹ ಹೊರಡಿಸಲಾಗಿದೆ.
ಪಂಚಾಯತ್ ಚುನಾವಣೆಗೆ ರಾಜ್ಯದಲ್ಲಿ ಸಾರ್ವಜನಿಕ ರಜೆ ಘೋಷಿಸಲಾಗಿದೆ.
ಗೋವಾದಲ್ಲಿ 186 ಪಂಚಾಯತ್ ಸ್ಥಾನಗಳಿಗೆ ಆಗಸ್ಟ್ 10 ರಂದು ಮತದಾನ ನಡೆಯುತ್ತಿದೆ. ರಾಜ್ಯ ಸರ್ಕಾರ ಮತದಾನಕ್ಕಾಗಿ ಆಗಸ್ಟ್ 10 ರಂದು ಸಾರ್ವಜನಿಕ ರಜೆ ಘೋಷಿಸಿದೆ. ಆದ್ದರಿಂದ ರಾಜ್ಯದ ಎಲ್ಲಾ ನಾಗರಿಕರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಸಾಧ್ಯವಾಗುತ್ತದೆ. ಈ ಕುರಿತು ರಾಜ್ಯ ಸರ್ಕಾರದ ಆಡಳಿತ ಯೋಜನಾ ಇಲಾಖೆ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರದ ಆದೇಶದ ಪ್ರಕಾರ ರಾಜ್ಯದಲ್ಲಿನ ಸಂಸ್ಥೆಗಳು ನೌಕರರಿಗೆ ವೇತನ ಸಹಿತ ರಜೆ ನೀಡಬೇಕು. ಗೋವಾ ಪಂಚಾಯತ್ ರಾಜ್ ಕಾಯ್ದೆ 1994 ರ ಪ್ರಕಾರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಗೋವಾದ 186 ಪಂಚಾಯತ್ ಚುನಾವಣೆಗೆ ಅರ್ಜಿ ಸಲ್ಲಿಸಲು ಸೋಮವಾರ ಕೊನೆಯ ದಿನವಾಗಿತ್ತು. ಕೊನೆಯ ದಿನ ಎರಡೂ ಜಿಲ್ಲೆಗಳಿಂದ 1,499 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಚುನಾವಣೆಗೆ ಒಟ್ಟು 6,256 ನಾಮಪತ್ರಗಳು ಸಲ್ಲಿಕೆಯಾಗಿವೆ. ಅರ್ಜಿಗಳನ್ನು ಮಂಗಳವಾರ ಪರಿಶೀಲನೆ ನಡೆದಿದೆ. ರಾಜ್ಯದ 186 ಪಂಚಾಯಿತಿಗಳಿಗೆ ಆಗಸ್ಟ್ 10 ರಂದು ಮತದಾನ ನಡೆಯಲಿದ್ದು, ಆಗಸ್ಟ್ 12 ರಂದು ಮತ ಎಣಿಕೆ ನಡೆಯಲಿದೆ.