ಧರ್ಮಸ್ಥಳದಲ್ಲಿ ಐವತ್ತೊಂದನೇ ವರ್ಷದ ಪುರಾಣ ಕಾವ್ಯ ವಾಚನ - ಪ್ರವಚನ ಪ್ರಾರಂಭ

Upayuktha
0

ಪುರಾಣ ವಾಚನ - ಪ್ರವಚನದಿಂದ ಸುಖ-ಶಾಂತಿ, ನೆಮ್ಮದಿ ಸಿಗುತ್ತದೆ


ಕಟೀಲು ಲಕ್ಷ್ಮೀನಾರಾಯಣ ಅಸ್ರಣ್ಣರು ಪುರಾಣ ಕಾವ್ಯ ವಾಚನ - ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ಉಜಿರೆ: ಪುರಾಣ ವಾಚನ - ಪ್ರವಚನದಿಂದ ಸುಖ-ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಲಕ್ಷ್ಮೀನಾರಾಯಣ ಅಸ್ರಣ್ಣರು ಹೇಳಿದರು. 


ಅವರು ಭಾನುವಾರ ಧರ್ಮಸ್ಥಳದಲ್ಲಿ ಐವತ್ತೊಂದನೇ ವರ್ಷದ ಪುರಾಣ ಕಾವ್ಯ ವಾಚನ - ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಶ್ರದ್ಧಾ-ಭಕ್ತಿಯಿಂದ ಧರ್ಮದ ಮರ್ಮವನ್ನರಿತು, ಸಾತ್ವಿಕರಾಗಿ, ಸಭ್ಯ - ಸುಸಂಸ್ಕøತ ನಾಗರಿಕರಾಗಿ, ಸಹೃದಯವಂತರಾಗಿ ಸಾರ್ಥಕ ಜೀವನ ನಡೆಸಲು ಪುರಾಣ ವಾಚನ - ಪ್ರವಚನ ಪ್ರೇರಣೆ, ಮಾರ್ಗದರ್ಶನ ನೀಡುತ್ತದೆ. ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ನಿತ್ಯವೂ ಅಷ್ಟಾವಧಾನ ನಡೆಸುವ ಸಂಪ್ರದಾಯವಿದೆ. ಆದುದರಿಂದ ಎಲ್ಲಾ ತೀರ್ಥಕ್ಷೇತ್ರಗಳಲ್ಲಿಯೂ ಪುರಾಣ ವಾಚನ - ಪ್ರವಚನ ನಡೆಯಬೇಕು ಎಂದು ಅವರು ಸಲಹೆ ನೀಡಿದರು


ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಪ್ರತಿಯೊಬ್ಬರಿಗೂ ಜ್ಞಾನದಾಹ ಇರಬೇಕು. ಧರ್ಮಸ್ಥಳದಲ್ಲಿ ಭಕ್ತರ ಜ್ಞಾನದಾಹ ನಿವಾರಣೆಗಾಗಿ ವಸ್ತು ಸಂಗ್ರಹಾಲಯ, ಕಾರ್ ಮ್ಯೂಸಿಯಂ, ಉದ್ಯಾನವನ, ತಾಳೆಗರಿ ಸಂಗ್ರಹ ಮೊದಲಾದ ಸೌಲಭ್ಯಗಳನ್ನು ಒದಗಿಸಲಾಗಿದೆ. ಅವಿಭಕ್ತ ಕುಟುಂಬ ಪದ್ಧತಿಯಲ್ಲಿ ಹಿಂದೆ ಪ್ರತಿ ಮನೆಯಲ್ಲಿ ಪುರಾಣ ವಾಚನ ಮಾಡುವ ಸಂಪ್ರದಾಯವಿತ್ತು. ಆದರೆ, ಆಧುನಿಕ ಜೀವನ ಶೈಲಿ ಮತ್ತು ಕೆಲಸದ ಒತ್ತಡದಿಂದ ಸಂಪ್ರದಾಯವೆಲ್ಲ ಮರೆಯಾಗುತ್ತಿದೆ. ಪುರಾಣಗಳಲ್ಲಿ ನಮ್ಮ ಬದುಕಿನ ಎಲ್ಲಾ ಸಮಸ್ಯೆಗಳಿಗೆ, ಸವಾಲುಗಳಿಗೆ, ಸಾಂಸಾರಿಕ ತಾಪತ್ರಯಗಳಿಗೆ ಸೌಹಾರ್ದಯುತ ಪರಿಹಾರ ದೊರಕುತ್ತದೆ. ಅನೇಕ ಮಂದಿ ಭಕ್ತರು ತಮ್ಮ ಶಾಪ-ತಾಪ ಪರಿಹಾರಕ್ಕಾಗಿ ಕೌಟುಂಬಿಕ ಸಮಸ್ಯೆಗಳ ಇತ್ಯರ್ಥಕ್ಕಾಗಿ ಧರ್ಮಸ್ಥಳಕ್ಕೆ ಬರುತ್ತಾರೆ. ಮಹಿಳೆಯರು, ಹಿರಿಯರು, ನೊಂದವರ ಕಣ್ಣೀರೇ ಶಾಪವಾಗಿ ಪರಿಣಮಿಸುತ್ತದೆ. ಆದುದರಿಂದ ಪುರಾಣ ವಾಚನ - ಪ್ರವಚನದ ಮೂಲಕ ಜ್ಞಾನ ಸಂಗ್ರಹ ಮಾಡಿ ಸಾಂಸಾರಿಕ ಸಮಸ್ಯೆಗಳಿಗೆ ಪರಿಹಾರ ಪಡೆದು ಶಾಂತಿ - ನೆಮ್ಮದಿಯ ಜೀವನ ನಡೆಸಬಹುದು ಎಂದು ಹೆಗ್ಗಡೆಯವರು ಸಲಹೆ ನೀಡಿದರು.


ಧರ್ಮಸ್ಥಳ ಯಕ್ಷಗಾನ ಮೇಳದ ನಿವೃತ್ತ ಕಲಾವಿದ ಕೆ. ಗೋವಿಂದ ಭಟ್ ಮಾತನಾಡಿ, ಧರ್ಮಸ್ಥಳಕ್ಕೆ ಭಕ್ತರು ಆರ್ತರಾಗಿ, ಜ್ಞಾನಿಗಳಾಗಿ, ಜಿಜ್ಞಾಸುಗಳಾಗಿ ಕುತೂಹಲದಿಂದ ತಮ್ಮ ಸವiಸ್ಯೆಗಳ ಪರಿಹಾರ ಹಾಗೂ ಶಾಂತಿ ಪಡೆಯಲು ಬರುತ್ತಾರೆ. ಅವರಿಗೆ ಬೇಕಾದ ಸಕಾಲಿಕ ಪರಿಹಾರ ಮತ್ತು ಮಾರ್ಗದರ್ಶನ ಹಾಗೂ ಸುಜ್ಞಾನದ ಬೆಳಕನ್ನು ನೀಡಿ ಸಾರ್ಥಕ ಬದುಕಿಗೆ ಪ್ರೋತ್ಸಾಹ ನೀಡಲಾಗುತ್ತದೆ ಎಂದು ಹೇಳಿದರು.  


ಕಟೀಲು ಲಕ್ಷ್ಮೀನಾರಾಯಣ ಅಸ್ರಣ್ಣರು ಮತ್ತು ನಿವೃತ್ತ ಕಲಾವಿದ ಕೆ. ಗೋವಿಂದ ಭಟ್ ಅವರನ್ನು ಹೆಗ್ಗಡೆಯವರು ಸನ್ಮಾನಿಸಿ ಗೌರವಿಸಿದರು. 


ಹವ್ಯಾಸಿ ಯಕ್ಷಗಾನ ಕಲಾವಿದ ಉಜಿರೆ ಆಶೋಕ ಭಟ್ ಸ್ವಾಗತಿಸಿದರು. ಕಾರ್ಯಕ್ರಮ ನಿರ್ವಹಿಸಿದ ಶ್ರೀನಿವಾಸ ರಾವ್ ಧರ್ಮಸ್ಥಳ ಕೊನೆಯಲ್ಲಿ ಧನ್ಯವಾದವಿತ್ತರು. 


ಸೆ. 17ರ ವರೆಗೆ ಪ್ರತಿದಿನ ಸಂಜೆ ಗಂಟೆ 6.30 ರಿಂದ 8.00 ರ ವರೆಗೆ ಪುರಾಣ ಕಾವ್ಯ ವಾಚನ - ಪ್ರವಚನ ನಡೆಯುತ್ತದೆ. 


web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top