-ಡಾ. ಲಕ್ಷ್ಮೀಕಾಂತ ವಿ.ಮೊಹರೀರ, ಸಂಸ್ಕೃತಿ ಚಿಂತಕರು, ರಾಯಚೂರು
ವೈದಿಕ ಪರಂಪರೆಯ ಹಿನ್ನೆಲೆಯಲ್ಲಿ ಬೆಳೆದು ಬಂದ ದಾಸಸಾಹಿತ್ಯವು ತನ್ನ ದೇದಿಪ್ಯ ಪ್ರಭೇಯಿಂದಾಗಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದೆ ಹಾಗೂ ನೀಡುತ್ತಲಿದೆ. ಕರ್ನಾಟಕದ ಹರಿದಾಸ ಭಕ್ತಿ ಪಂಥಕ್ಕೆ ಆನಂದತೀರ್ಥರ ದ್ವೈತ ಸಿದ್ದಾಂತವೇ ಬೆನ್ನೆಲುಬು. ಹಾಗಾಗಿ ಮಧ್ವಸಿದ್ಧಾಂತದ ತತ್ವಗಳ ಬೆಳಕಿನಲ್ಲಿ ತಮ್ಮ ಮೌಲಿಕ ಜೀವನದ ಸಾರ್ಥಕತೆಯೊಂದಿಗೆ ಆತ್ಮ ಸಾಕ್ಷಾತ್ಕಾರ ಮಾಡಿಕೊಂಡಿರುವರು ಹರಿದಾಸರು. ಹರಿದಾಸ ಸಾಹಿತ್ಯವೃಕ್ಷವು ಮೂಲತಃ ಶ್ರೀ ಮಧ್ವಾಚಾರ್ಯರಿಂದ ಬಿತ್ತಲ್ಪಟ್ಟು; ನರಹರಿತೀರ್ಥರಲ್ಲಿ ರೂಪತಾಳಿ; ಶ್ರೀಪಾದರಾಜರಲ್ಲಿ ಪಲ್ಲಿವಿಸಿ; ಶ್ರೀ ಪುರಂದರದಾಸರು, ಶ್ರೀಕನಕದಾಸರು, ಶ್ರೀವಾದಿರಾಜರು ಹಾಗೂ ವೈಕುಂಠದಾಸರಿಂದ ಕುಸುಮಿಸಿ; ಶ್ರೀಮಹಿಪತಿದಾಸರು, ಶ್ರೀವಿಜಯದಾಸರು, ಶ್ರೀಗೋಪಾಲದಾಸರು, ಶ್ರೀಜಗನ್ನಾಥದಾಸರು, ಶ್ರೀಮೋಹನದಾಸರು ಮುಂತಾದ ಹರಿದಾಸರಿಂದ ಫಲಭರಿತವಾಗಿ ಬೆಳೆದು ಬಂದಿದೆ.
ಕೀರ್ತನೆ, ದೇವರನಾಮ, ಉಗಾಭೋಗ, ಸುಳಾದಿ, ದಂಡಕ, ವೃತ್ತನಾಮ ಹೀಗೆ ಅನೇಕ ರೀತಿಗಳಲ್ಲಿ ಹರಿದಾಸರ ರಚನೆಗಳು ಭಕ್ತಾದಿಗಳಿಗೆ ಮಾರ್ಗದರ್ಶನ ಮಾಡಿದವು. ಹಾಗಾಗಿ ದಾಸಸಾಹಿತ್ಯವು ಮನಸ್ಸನ್ನು ಹೃದಯವನ್ನು ಅರಳಿಸುವ ಸಾಹಿತ್ಯವಾಯಿತು.
ಇಂತಹ ಹೃದಯವನ್ನು ಅರಳಿಸುವ ಸಾಹಿತ್ಯವನ್ನು ತಮ್ಮ ಜೀವನದ ಉಸಿರಾಗಿಸಿಕೊಂಡು, ವೈದಿಕ ಪರಂಪರೆಯಲ್ಲಿರುವ ತತ್ವ ಸಿದ್ದಾಂತಗಳನ್ನು ಮೈಗೂಡಿಸಿಕೊಂಡು ಸಾತ್ವಿಕ ಮಾರ್ಗದಲ್ಲಿ ನಡೆಯುತ್ತ ಶ್ರೀನಿವಾಸನ ಅನುಗ್ರಹಕ್ಕೆ ಪಾತ್ರರಾಗಿ ಶ್ರೀ ಶ್ರೀನಿವಾಸ ಉತ್ಸವ ಬಳಗದ ಪ್ರಮುಖ ರೂವಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸನ್ಮಾನ್ಯ ಶ್ರೀ ಟಿ. ವಾದಿರಾಜರವರು ಈಗಾಗಲೇ ‘ವೇದರತ್ನ’ ಮುಂತಾದ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಕಳೆದ ಹತ್ತು ವರ್ಷಗಳಿಂದ ‘ಶ್ರೀ ಶ್ರೀನಿವಾಸ ಉತ್ಸವ ಬಳಗ (ರಿ) ದಾಸಸಾಹಿತ್ಯ ಪ್ರಚಾರ ಮಾಧ್ಯಮ ಸಂಘಟನೆಯ ಮೂಲಕ ‘ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವ’ವನ್ನು ಮಾಡುತ್ತ ಜನಹಿತಕಾರ್ಯ ಮಾಡುತ್ತಿರುವುದು ತುಂಬಾ ಶ್ಲಾಘನೀಯ ವಿಚಾರ.
‘ಬಾರೋ ಮನೆಗೆ ಗೋವಿಂದ’ ಎಂಬ ಶೀರ್ಷಿಕೆಯಿಂದ ಶ್ರೀ ಶ್ರೀನಿವಾಸ ಉತ್ಸವ ಬಳಗವು 2012ರಲ್ಲಿ ನಾಡಿನದ್ಯಂತ ಅಧ್ಯಾತ್ಮಿಕ, ಸಾಂಸ್ಕøತಿಕ, ಸಾಹಿತ್ಯ, ಸಂಗೀತಗಳನ್ನು ಪಸರಿಸುವ ಕ್ಯಂಕರ್ಯದ ಧ್ಯೇಯಯಿಂದ ಉದಯವಾಯಿತು. ಆಂದಿನಿಂದ ಇಂದಿನ ಕಾಲಘಟ್ಟದವರೆಗೆ ಉತ್ಸವ ಬಳಗವು ಹರಿದಾಸ ಸಾಹಿತ್ಯ ಪ್ರಚಾರ ಹಾಗೂ ಆದಕ್ಕೆ ಪೂರಕವಾದ ವಿವಿಧ ಚಟುವಟಿಕೆಗಳನ್ನು ಆಭಿಮಾನಿಗಳ ಹಾಗೂ ಹಿತೈಗಳ ಸಹಕಾರದಿಂದ ಬಹುಯಶಸ್ವಿಯಾಗಿ ನಡೆಸುವ ಸೌಭಾಗ್ಯ ಇವರದ್ದಾಗಿದೆ. ಪ್ರತೀ ವರ್ಷವೂ ದಾಸಶ್ರೇಷ್ಠ ಶ್ರೀ ಪುರಂದರದಾಸರ ಪುಣ್ಯದಿನದ ಸಂದರ್ಭದಲ್ಲಿ ಮೂರು ದಿನಗಳ ಕಾಲ ನಿರಂತರವಾಗಿ ನಡೆಯುವ ಸಂಗೀತ ವಿದ್ವಾಂಸರುಗಳ ಉಪನ್ಯಾಸಗಳು ದಾಸವಾಣಿ, ಹರಿದಾಸ ಗೋಷ್ಠಿ, ಭಜನೆ, ಪ್ರತಿಭಾನ್ವಿತ ಗಣ್ಯರಿಗೆ ‘ಹರಿದಾಸ ಆನುಗ್ರಹ’ ಪ್ರಶಸ್ತಿ ಸಮಾರಂಭಗಳು ನಾಡಿನಾದ್ಯಂತ ಜನಪ್ರಿಯವಾಗಿವೆ.
ದಾಸ ಸಾಹಿತ್ಯ ಪ್ರಚಾರವಿಲ್ಲದೇ ಈ ಉತ್ಸವ ಬಳಗವು ವೈಭವೋಪೇತವಾಗಿ ದೇಶದ ಉದ್ದಗಲಕ್ಕೂ ನಡೆಸುವ ಕಾರ್ಯಕ್ರಮ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಊಂಜಲೋತ್ಸವ’. ತಿರುಮಲೆಯಲ್ಲಿ ಸಾಂಪ್ರದಾಯಕವಾಗಿ ಮತ್ತು ವಿಧಿವತ್ತಾಗಿ ನಡೆಯುವ ಎರಡು ವರ್ಣರಂಜಿತ ಉತ್ಸವಗಳನ್ನು ಸಂದರ್ಭಕ್ಕೆ ಸೂಕ್ತವಾದ ದಾಸರ ಪದಗಳು, ದೇವರ ನಾಮಗಳನ್ನು ಆಳವಡಿಸಿಕೊಂಡು ಪ್ರಸ್ತುತಗೊಳಿಸುವ ಈ ಬಳಗದ ಕಾರ್ಯಕ್ರಮ ಭಕ್ತಜನರ ಮನಸೂರೆಗೊಂಡಿದೆ.
ದಾಸಸಾಹಿತ್ಯದ ಧೃವತಾರೆ, ಕರ್ನಾಟಕ ಸಂಗೀತದ ಪಿತಾಮಹ, ಕನ್ನಡ ಸಂಸ್ಕೃತಿಯ ಗೌರಿಶಂಕರವೆಂಬ ಉಪಾಧಿಗಳನ್ನು ಅತ್ಯಂತ ಗೌರವಯುತವಾಗಿ ಸಂಸ್ಮರಿಸುವ ಧೀಮಂತ ಪುರುಷ ಮಣಿಯೇ ‘ಪುರಂದರದಾಸರು’. ‘ದಾಸರೆಂದರೆ ಪುರಂದರದಾಸರಯ್ಯ’ ವೆಂಬ ಹೆಗ್ಗಳಿಕೆಗೆ ಪಾತ್ರರಾದ, ಅತ್ಯಂತ ಮೌಲಿಕ ವಿಚಾರಗಳ ಖಣಿಯಾಗಿರುವ ಇವರು, ಸಾಂಸ್ಕೃತಿಕ ಪರಂಪರೆಯ ಪವಿತ್ರ ಚೇತನರಾಗಿದ್ದು, ಕನ್ನಡಕ್ಕೆ ಆಡು ಮಾತಿನ ಸೊಬಗನ್ನು, ಸೊಗಡನ್ನು ಕನ್ನಡ ಸಾರಸ್ವತ ಲೋಕಕ್ಕೆ ತುಂಬಿಕೊಟ್ಟ ಮಹಿಮಾನ್ವಿತರು.
ಶ್ರೀನಿವಾಸ ಬಳಗವು ನಾಡಿನ ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿ ‘ಶ್ರೀ ಪುರಂದರದಾಸರ’ ಹತ್ತೊಂಬತ್ತು ಆಡಿ ಎತ್ತರದ ಏಕಶಿಲಾ ಪ್ರತಿಮೆಯನ್ನು ಶ್ರೀಮದ್ ಉತ್ತರಾದಿ ಮಠಾಧೀಶರಾದ ಶ್ರೀ ಶ್ರೀ 1008 ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಆನುಗ್ರಹದಿಂದ ಬೆಂಗಳೂರು ನಗರದಲ್ಲಿರುವ ಉತ್ತರಾದಿ ಮಠದ ಶ್ರೀ ದಿಗ್ವಿಜಯ ಲಕ್ಷ್ಮೀನರಸಿಂಹ ದೇವಸ್ಥಾನದ ಅವರಣದಲ್ಲಿ 2020ರಲ್ಲಿ ನಾಡಿಗೆ ಈ ಬಳಗದ ವತಿಯಿಂದ ಸಮರ್ಪಣೆ ಮಾಡಲಾಯಿತು. ಈ ಮಹತ್ತರವಾದ ಕಾರ್ಯವನ್ನು ಕಾರ್ಯರೂಪಕ್ಕೆ ತಂದ ಹೆಮ್ಮೆ ಈ ಬಳಗಕ್ಕೆ ಸಲ್ಲುತ್ತದೆ.
ಉತ್ಕೃಷ್ಟ ಸಾಧಕರ ಸಾಹಿತ್ಯ ಪ್ರಭೆಯನ್ನು ಜಗತ್ತಿಗೆ ಪರಿಚಯಿಸುವ ಪ್ರಾಮಾಣಿಕ ಪ್ರಯತ್ನವನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ‘ಶ್ರೀ ಶ್ರೀನಿವಾಸ ಉತ್ಸವ ಬಳಗದವರು’ ಸಂಗೀತ ಕ್ಷೇತ್ರ, ಸಮಾಜ ಸೇವೆ, ದಾಸಸಾಹಿತ್ಯ ಸಂಶೋಧನೆ, ಮುಂತಾದ ವಿಭಾಗಗಳಲ್ಲಿ ಉನ್ನತ ಮಟ್ಟದಲ್ಲಿ ಸೇವೆ ಸಲ್ಲಿಸುತ್ತಿರುವ ನಾಡಿನ ಮಹನೀಯರನ್ನು ಬರಮಾಡಿಕೊಂಡು ‘ಹರಿದಾಸ ಅನುಗ್ರಹ ಪ್ರಶಸ್ತಿ’ಯನ್ನು ಕಳೆದ ಹತ್ತು ವರ್ಷಗಳಿಂದ ಕೊಡಮಾಡುತ್ತಿರುವ ಶ್ರೀ ಶ್ರೀನಿವಾಸ ಉತ್ಸವ ಬಳಗದ ಕಾರ್ಯ ಅನುಪಮವಾದದ್ದು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ