ಬಾಯಲ್ಲಿ ನೀರೂರಿಸಿದ ಭಕ್ಷಗಳು, ಕಣ್ಸೆಳೆದ ಕ್ರಿಯಾಶೀಲತೆ!

Upayuktha
0

ಮಂಗಳೂರು: ಅತಿಥಿಗಳನ್ನು ಕೈ ಬೀಸಿ ಕರೆಯುತ್ತಿದ್ದ ಅಲಂಕಾರ. ಅತ್ತಿತ್ತ ನೋಡಿದರೆ ಪ್ರಾಚೀನ ಕಾಲದ ತಾಮ್ರ, ಹಿತ್ತಾಳೆಯ ಪಾತ್ರೆಗಳು, ಕಲಾತ್ಮಕ ವಸ್ತುಗಳು. ಮಂಗಳೂರಿನ ಮೀನಿನ ತಿನಿಸುಗಳು, ಕೊಂಕಣಿ ಸಮುದಾಯದ ಖಾದ್ಯಗಳು, ಕರಾವಳಿಯ ತಿಂಡಿಗಳ ಪರಿಚಯ …ಹೀಗೆ ಭರಪೂರ ಮಾಹಿತಿ ನೀಡುವ ಭಿತ್ತಿಪತ್ರಗಳು. ಇದೂ ಸಾಲದೆಂಬಂತೆ ಖಾದ್ಯಗಳಿಗೆ ಸಂಬಂಧಿಸಿದ ಸುಂದರ ಉಕ್ತಿಗಳು… !


ಇದ್ಯಾವುದೋ ವಸ್ತುಪ್ರದರ್ಶನ ಅಂದುಕೊಂಡರೆ ನಿಮ್ಮ ಊಹೆ ತಪ್ಪು. 'ಬಂಜರ – 2022ʼ ಎಂಬ ಹೆಸರಿನಲ್ಲಿ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಪ್ರವಾಸೋದ್ಯಮ ವಿಭಾಗ ಹಾಗೂ ಬಿಬಿಎ (ಟೂರಿಸಂ ಅಂಡ್ ಟ್ರಾವೆಲ್) ವಿಭಾಗದ ವತಿಯಿಂದ ಮಂಗಳವಾರ ಆಯೋಜಿಸಲಾಗಿದ್ದ ಆಹಾರೋತ್ಸವ ದೃಶ್ಯವಿದು! ಹೌದು, ಆಹಾರ ವೈವಿಧ್ಯತೆಯ ಜೊತೆಗೆ ವಿದ್ಯಾರ್ಥಿಗಳ ಕ್ರಿಯಾಶೀಲತೆ ಇಲ್ಲಿ ಎದ್ದು ಕಾಣುತ್ತಿತ್ತು. 


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಂಟ್ವಾಳದ ಬಂಟರ ಸಂಘದ ಅಧ್ಯಕ್ಷ ಚಂದ್ರಶೇಖರ್ ಡಿ.ಶೆಟ್ಟಿ, ತುಳುನಾಡಿನಲ್ಲಿರುವಷ್ಟು ಬಗೆಬಗೆಯ ತಿನಿಸುಗಳು ಇನ್ನೆಲ್ಲೂ ಇಲ್ಲ. ಕೇವಲ ಅಕ್ಕಿಯಿಂದ ಇನ್ನೂರಕ್ಕೂ ಹೆಚ್ಚು ಬಗೆಯ ದೋಸೆ, ಇಪ್ಪತ್ತೈದಕ್ಕೂ ಹೆಚ್ಚು ಬಗೆಯ ಕಡುಬು ಮಾಡಬಲ್ಲವರು ನಾವು. ಎಲ್ಲವೂ ಆರೋಗ್ಯಕ್ಕೆ ಹಾನಿಕರವಲ್ಲದ ಸಮತೋಲಿತ ಆಹಾರಗಳು. ಹಿರಿಯರಿಂದ ಬಂದಿರುವ ಈ ಜ್ಞಾನವನ್ನು ಉಳಿಸಿ, ಬೆಳೆಸುವುದು ನಮ್ಮ ಕರ್ತವ್ಯ, ಎಂದರು.  


ಮುಖ್ಯ ಅತಿಥಿ, ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ರಮೇಶ್.ಕೆ ಮಾತನಾಡಿ, ಹೊಸದಾಗಿ ಆರಂಭವಾಗಿರುವ ಬಿಬಿಎ ಕಾರ್ಯಕ್ರಮಕ್ಕೆ ಸೇರಲು ಆಸಕ್ತರಿಗೆ ಇಂತಹ ಕಾರ್ಯಕ್ರಮಗಳು ಸ್ಪೂರ್ತಿ ನೀಡಲಿವೆ, ಎಂದು ಅಭಿಪ್ರಾಯಪಟ್ಟರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪ್ರಾಂಶುಪಾಲೆ ಡಾ. ಅನಸೂಯ ರೈ ಮಾತನಾಡಿ, ಕರಾವಳಿ ಪ್ರವಾಸೋದ್ಯಮದಲ್ಲಿ ಇಲ್ಲಿನ ಆಹಾರ ವೈವಿಧ್ಯವೂ ಪ್ರಮುಖ ಪಾತ್ರ ವಹಿಸುತ್ತದೆ. ಆರೋಗ್ಯಕರ ಆಹಾರ ಪದ್ದತಿಯನ್ನು ಕರಾವಳಿಗರು ರೂಢಿಸಿಕೊಂಡಿದ್ದಾರೆ, ಎಂದರು. 


ತುಳುನಾಡು ಕ್ಯಾಟ್ರಾಸ್ ಹಾಗೂ ಸಚಿತಾ ಫ್ಯಾಮಿಲಿ ಕಿಚನ್ ಅವರಿಂದ ತಯಾರಿಸಲ್ಪಟ್ಟ ಸ್ವಾದಿಷ್ಟ ತಿನಿಸುಗಳನ್ನು ಖರೀದಿಸಲು ಐದರಿಂದ, ನೂರೈವತ್ತು ರೂಪಾಯಿಯ ಕೂಪನ್ ಗಳಿದ್ದವು. ಸುಮಾರು ಐವತ್ತಕ್ಕೂ ಹೆಚ್ಚಿನ ಬಗೆಯ ತಿಂಡಿಗಳು, ವಿವಿಧ ಬಗೆಯ ಜ್ಯೂಸ್ ಗಳು ಆಕರ್ಷಿಸಿದವು. ಪ್ರವಾಸೋದ್ಯಮ ವಿಭಾಗ ಪ್ರವಾಸೋದ್ಯಮ ವಿಭಾಗದ ಮುಖ್ಯಸ್ಥೆ ಡಾ. ಮೀನಾಕ್ಷಿ ಎಂ ಎಂ, ಬಿಬಿಎ ಮುಖ್ಯಸ್ಥ ಡಾ. ಎ ಸಿದ್ಧಿಕ್ ಸೇರಿದಂತೆ ಹಿರಿಯ ಪ್ರಾಧ್ಯಾಪಕರು ಭಾಗವಹಿಸಿದ್ದರು. ಉಪನ್ಯಾಸಕ ಶ್ರೀರಾಜ್ ಅತಿಥಿಗಳನ್ನು ಸ್ವಾಗತಿಸಿದರೆ, ಉಪನ್ಯಾಸಕಿ ಪರಿಣಿತಾ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿನಿ ಲಿಖಿತಾ ಜಿ.ಎನ್ ಕಾರ್ಯಕ್ರಮ ನಿರೂಪಿಸಿದರು. 


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top