ಕೃತಕ ಬುದ್ಧಿಮತ್ತೆ ಮತ್ತು ವೈದ್ಯ ವಿಜ್ಞಾನ

Upayuktha
0

ಇತ್ತೀಚಿನ ದಿನಗಳಲ್ಲಿ ‘ಕೃತಕ ಬುದ್ಧಿಮತ್ತೆ’ ಎನ್ನುವ ಪದ ಹೆಚ್ಚು ಹೆಚ್ಚು ಬಳಕೆಯಾಗುತ್ತದೆ ಮತ್ತು ಈ ವಿಚಾರ ಹೆಚ್ಚು ಮುನ್ನಲೆಗೆ ಬರುತ್ತಿದೆ. ಆಂಗ್ಲಭಾಷೆಯಲ್ಲಿ ಇದನ್ನು ‘ಆರ್ಟಿಫೀಷಿಯಲ್ ಇಂಟೆಲಿಜೆನ್ಸ್’ ಎಂದು ಸಂಬೋಧಿಸುತ್ತಾರೆ. ಭಾರತದಲ್ಲಿ ಈ ಕೃತಕ ಬುದ್ಧಿಮತ್ತೆ ಹೆಚ್ಚು ಬಳಕೆ ಇನ್ನೂ ಆಗುತ್ತಿದೆಯಷ್ಟೆ. ಜಾಗತಿಕವಾಗಿ ಈ ಕೃತಕ ಬುದ್ಧಿಮತ್ತೆಯಲ್ಲಿ ಭಾರತದ ಪಾಲು ಶೇಕಡಾ ಒಂದು ಮಾತ್ರ ಆಗಿರುತ್ತದೆ. ಆದರೆ ವಿಶ್ವದ ಒಟ್ಟು ಕೃತಕ ಬುದ್ಧಿಮತ್ತೆ ಪ್ರತಿಭಾವಂತರ ಪಟ್ಟಿಯಲ್ಲಿ ಭಾರತದ ಕೊಡುಗೆ 15 ಶೇಕಡಾ ಆಗಿರುತ್ತದೆ.


ಏನಿದು ಕೃತಕ ಬುದ್ಧಿ ಮತ್ತೆ?

ವಿಜ್ಞಾನ ಮತ್ತು ತಂತ್ರಜ್ಞಾನ ನಿಂತ ನೀರಾಗಿ ಉಳಿಯುವುದೇ ಇಲ್ಲ. ಇವುಗಳು ನಿರಂತರವಾಗಿ ಬದಲಾವಣೆಗೆ ತೆರೆದುಕೊಳ್ಳುತ್ತದೆ. ದಿನೇ ದಿನೇ ಹೊಸ ಹೊಸ ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿದೆ ಮತ್ತು ಹೊಸತನಕ್ಕೆ ಸದ್ದಿಲ್ಲದೆ ಮುನ್ನುಡಿ ಬರೆಯುತ್ತಿದೆ. ಆರ್ಟಿಫೀಷಿಯಲ್ ಇಂಟೆಲಿಜೆನ್ಸ್ ಎನ್ನುವುದು ಕಂಪ್ಯೂಟರ್ ವಿಜ್ಞಾನದ ವಿಶೇಷವಾದ ಶಾಖೆಯಾಗಿದೆ. ಮನುಷ್ಯನಂತೆ ಯೋಚಿಸಿ, ಮಂಥಿಸಿ ಕೆಲಸ ಮಾಡುವ ಬುದ್ಧಿವಂತ ಯಂತ್ರಗಳ ಅಭಿವೃದ್ಧಿಗೆ ಇದು ಒತ್ತು ನೀಡುತ್ತದೆ. ಆಪರೇಶನ್ ಮಾಡುವ ರೋಬೋಟ್‍ಗಳು, ಚೆಸ್ ಆಡುವ ಕಂಪ್ಯೂಟರ್‍ಗಳು, ಸ್ವಯಂ ಚಾಲಿತ ಕಾರುಗಳು ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿರುತ್ತದೆ. ಆರೋಗ್ಯ ಕ್ಷೇತ್ರ, ಹಣಕಾಸು, ಕ್ರೀಡೆ, ಸಾರಿಗೆ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಹೆಚ್ಚು ಬಳಸಲಾಗುತ್ತಿದೆ. ಅಮೇರಿಕಾದ ಕಂಪ್ಯೂಟರ್ ವಿಜ್ಞಾನಿ ಜಾನ್ ಮೆಕಾರ್ಥಿ ಅವರನ್ನು ಕೃತಕ ಬುದ್ಧಿಮತ್ತೆಯ ಪಿತಾಮಹ ಎಂದು ಗುರುತಿಸುತ್ತಾರೆ.


ಕೃತಕ ಬುದ್ದಿಮತ್ತೆಯ ಲಾಭಗಳು ಏನು?

1) ಯಾವುದೇ ಕೆಲಸವನ್ನು ಅತೀ ಬೇಗನೆ ಮುಗಿಸಲು ಸಾಧ್ಯವಾಗುತ್ತದೆ ಮತ್ತು ಸಮಯ ಉಳಿತಾಯವಾಗುತ್ತದೆ.

2) ಮಾನವ ಸಂಪನ್ಮೂಲಗಳ ಕೊರತೆ ಇದ್ದಾಗ, ಈ ಕೃತಕ ಬುದ್ದಿಮತ್ತೆ ಬಳಸಿ ಎಲ್ಲಾ ಕೆಲಸಗಳನ್ನು ಮಾಡಬಹುದಾಗಿದೆ.

3) ದಿನದ 24 ಗಂಟೆಗಳ ಕಾಲ ಹಗಲು ರಾತ್ರಿಯ ಪರಿವೇ ಇಲ್ಲದೆ, ಅಡೆತಡೆಯಿಲ್ಲದೆ ನಿರಂತರವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ.

4) ನಿರ್ಧಾರ ತೆಗೆದುಕೊಳ್ಳುವಿಕೆಯ ಸಮಯವನ್ನು ಕಡಿತಗೊಳಿಸಲು ಅತ್ಯಂತ ಚಾಣಾಕ್ಷತನದ ನಿರ್ಧಾರವನ್ನು ಅತೀ ಕಡಿಮೆ ಅವಧಿಯಲ್ಲಿ ತೆಗೆದುಕೊಂಡು ಕೆಲಸವನ್ನು ಸುಲಲಿತವಾಗಿಸುತ್ತದೆ.

5) ಸಂಕೀರ್ಣ ಕೆಲಸಗಳನ್ನು ಮಾಡುವಲ್ಲಿ ಮತ್ತು ಕ್ಲಿಷ್ಟಕರವಾದ ಸಮಸ್ಯೆಗಳಿಗೆ ಅತೀ ಸುಲಭವಾಗಿ ಪರಿಹಾರ ನೀಡುತ್ತದೆ.

6) ಯಾಂತ್ರೀಕರಣದ ಕಾರಣದಿಂದ 10 ಜನರು ಮಾಡುವ ಕೆಲಸವನ್ನು ಏಕಕಾಲದಲ್ಲಿ ನಿರ್ವಹಿಸಲು ಸಾಧ್ಯ. ಸಮಯ, ಸಂಪನ್ಮೂಲ ಮತ್ತು ಹಣದ ಉಳಿತಾಯವಾಗುತ್ತದೆ.  

7) ಪುನರಾವರ್ತಿತ ಕೆಲಸದ ನಿರ್ವಹಣೆಯಲ್ಲಿ ಕೃತಕ ಬುದ್ದಿಮತ್ತೆ ಅತೀ ಹೆಚ್ಚು ಬಳಕೆಯಲ್ಲಿದೆ.  

8) ಅತ್ಯಂತ ಕ್ಲಿಷ್ಟಕರವಾದ ಸರ್ಜರಿಗಳನ್ನು, ಗಂಟೆಗಟ್ಟಲೆ ಮಾಡುವ ಸರ್ಜರಿಗಳನ್ನು ಬಹಳ ಸುಲಭವಾಗಿ ಸುಲಲಿತವಾಗಿ ‘ಕೃತಕ ಬುದ್ದಿಮತ್ತೆ’ ತಂತ್ರಜ್ಞಾನ ಬಳಸಿ ರೋಬೋಟ್‍ಗಳ ಮುಖಾಂತರ ಮಾಡಲು ಸಾಧ್ಯವಿದೆ.  

9) ‘ಕೃತಕ ಬುದ್ದಿಮತ್ತೆ’ ತಂತ್ರಜ್ಞಾನ ಬಳಕೆ ಏಕಕಾಲದಲ್ಲಿ ಹಲವು ಕೆಲಸಗಳನ್ನು ಪರಿಣಾಮಕಾರಿಯಾಗಿ ಮಾಡಲು ಸಾಧ್ಯವಿದೆ. ಮಾನವ ಸಂಪನ್ಮೂಲದ ಕೊರತೆ ಇದ್ದರೂ ನಿರ್ದಿಷ್ಟ ಕೆಲಸವನ್ನು ನಿರ್ದಿಷ್ಟ ಸಮಯದೊಳಗೆ ಮುಗಿಸಲು ಸಾಧ್ಯವಾಗುತ್ತದೆ.


ಕೃತಕ ಬುದ್ದಿಮತ್ತೆಯ ವೈದ್ಯ ವಿಜ್ಞಾನದಲ್ಲಿ ಹೇಗೆ ಬಳಸಬಹುದು:

ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ವೈದ್ಯಕೀಯ ರಂಗದಲ್ಲಿ ಹಲವಾರು ರೀತಿಗಳಲ್ಲಿ ಬಳಸಿಕೊಳ್ಳಲಾಗುತ್ತದೆ. 

1) ರೋಗಪತ್ತೆ ಹಚ್ಚುವುದರಲ್ಲಿ ಬಹುಮುಖ್ಯ ಭೂಮಿಕೆ ವಹಿಸುತ್ತದೆ. ನಿರ್ದಿಷ್ಟ ರೋಗದ ನಿರ್ಧಿಷ್ಟ ಲಕ್ಷಣಗಳನ್ನು ಕಂಪ್ಯೂಟರ್ ಗ್ರಹಿಸಿಕೊಂಡು ರೋಗ ನಿರ್ಣಯ ಮಾಡಲು ವೈದ್ಯರಿಗೆ ಸಹಕಾರಿಯಾಗಬಲ್ಲದು.

2) ಹೊಸ ಔಷಧಿಗಳನ್ನು ಕಂಡು ಹಿಡಿಯುವಲ್ಲಿ ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಬಹಳ ಪ್ರಾಮುಖ್ಯವಾದ ಪಾತ್ರ ವಹಿಸುತ್ತದೆ.  

3) ರೋಗಿ ಮತ್ತು ವೈದ್ಯರ ನಡುವೆ ಉತ್ತಮ ಸಂವಹನ ಮಾಡುವಲ್ಲಿ ಈ ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಹೆಚ್ಚು ಬಳಕೆಯಲ್ಲಿದೆ.  ರೋಗದ ಚರಿತ್ರೆಯ ವಿವರಗಳನ್ನು ಮತ್ತು ದಾಖಲೆಗಳಿಗೆ ಅತ್ಯಂತ ನಾಜೂಕಾಗಿ, ಅಚ್ಚುಕಟ್ಟಾಗಿ ದಾಖಲಿಸುತ್ತದೆ ಮತ್ತು ಜಗತ್ತಿನ ಯಾವುದೇ ಮೂಲೆಯಲ್ಲಿರುವ ರೋಗಿಯ ವಿವರಗಳನ್ನು ದಾಖಲಿಸಿ ಮತ್ತೆಲ್ಲೋ ಇರುವ ವೈದ್ಯರ ಬಳಿ ರವಾನಿಸಿ ರೋಗ ನಿರ್ಣಯ ಮಾಡುವಲ್ಲಿ ಸಹಕರಿಸುತ್ತದೆ. ಮನುಷ್ಯರಷ್ಟೇ ನಿಖರವಾಗಿ ಕೆಲಸ ಮಾಡುವ ಕೃತಕ ಬುದ್ದಿಮತ್ತೆ ಇರುವ ಗಣಕಯಂತ್ರಗಳು ಈಗ ಬಳಕೆಯಲ್ಲಿರುತ್ತದೆ ಮತ್ತು ವೈದ್ಯ ವಿಜ್ಞಾನಕ್ಕೆ ಅತ್ಯಂತ ಸಹಕಾರಿಯಾಗಿದೆ.

4) ಅತೀ ಕ್ಲಿಷ್ಟಕರವಾದ ಆಪರೇಷನ್‍ಗಳನ್ನು ನಿರ್ವಹಿಸುವಲ್ಲಿ ಮನುಷ್ಯ ಸಹಜ ತಪ್ಪುಗಳನ್ನು ತಪ್ಪಿಸುವ ಸಲುವಾಗಿ ಕೃತಕ ಬುದ್ದಿಮತ್ತೆ ತಂತ್ರಜ್ಞಾನದಿಂದ ರೋಬೋಟ್‍ಗಳನ್ನು ಗಣಕಯಂತ್ರದ ಮುಖಾಂತರ ನಿರ್ವಹಿಸಿ, ನಿಯಂತ್ರಿಸಿ ಆಪರೇಷನ್ ಪ್ರಕ್ರಿಯೆಯನ್ನು ಸುಲಭಗೊಳಿಸಲಾಗುತ್ತದೆ. ಮನುಷ್ಯ ಸಹಜವಾದ ಬಳಲಿಕೆ, ವಿಶ್ರಾಂತಿ ಇವು ಯಾವುದರ ತೊಂದರೆ ಇಲ್ಲದೆ ರೋಬೋಟಿಕ್ ಸರ್ಜರಿ ಮಾಡಲು ಈ ‘ಕೃತಕ ಬುದ್ದಿಮತ್ತೆ’ ತಂತ್ರಜ್ಞಾನ ಸಹಕಾರಿಯಾಗಿದೆ.  

5) ರೋಗದ ಪತ್ತೆ ಹಚ್ಚುವಿಕೆಯಲ್ಲಿ ಮತ್ತು ರೋಗದ ಚಿಕಿತ್ಸೆಯಲ್ಲಿ ಕೃತಕ ಬುದ್ದಿಮತ್ತೆ ಬಹಳ ಮುಖ್ಯಪಾತ್ರವಹಿಸುತ್ತದೆ. ‘ಎಲೆಕ್ಟ್ರಾನಿಕ್ ಹೆಲ್ತ್ ರೆಕಾರ್ಡ್’ ತಂತ್ರಜ್ಞಾನದಿಂದ ರೋಗಿಯ ಎಲ್ಲಾ ರೋಗದ ಲಕ್ಷಣಗಳನ್ನು ಮತ್ತು ರೋಗ ಚರಿತ್ರೆಗಳನ್ನು ದಾಖಲಾತಿ ಮಾಡಲಾಗುತ್ತದೆ. ಅದಕ್ಕೆ ಸಂಬಂಧಿಸಿದ ಚಿತ್ರಗಳನ್ನು ಕಂಪ್ಯೂಟರ್‍ಗೆ ನೀಡಲಾಗುತ್ತದೆ. ಆ ಬಳಿಕ ‘ಕೃತಕ ಬುದ್ದಿಮತ್ತೆ’ ತಂತ್ರಜ್ಞಾನದ ಮುಖಾಂತರ ಬಹಳ ಸುಲಭವಾಗಿ ರೋಗ ನಿರ್ಣಯ ಮಾಡಲು ಸಾಧ್ಯವಿದೆ.  

6) ಆರ್ಟಿಫೀಷಿಯಲ್ ಇಂಟಲಿಜೆನ್ಸ್ ಬಳಸಿ ರೋಗದ ಚಿಕಿತ್ಸೆಯಲ್ಲಿ ಯಾವ ರೀತಿಯ ಚಿಕಿತ್ಸಾ ವಿಧಾನ ಹೆಚ್ಚು ಪರಿಣಾಮಕಾರಿ ಮತ್ತು ಯಾವ ರೀತಿ ರೋಗಿಗಳು ಸ್ಪಂದಿಸಬಹುದು ಎಂಬುದನ್ನು ಮೊದಲೇ ನಿರ್ಣಯಿಸಲು ಸಾಧ್ಯವಾಗುತ್ತದೆ.  

7) ರೋಗದ ಚಿಕಿತ್ಸೆಯ ಸಂಧರ್ಭದಲ್ಲಿ ಕೃತಕ ಬುದ್ದಿಮತ್ತೆ ತಂತ್ರಜ್ಞಾನದ ಮುಖಾಂತರ ರೋಗಿಯ ಚಿಕಿತ್ಸೆಗೆ ಯಾವ ರೀತಿ ಸ್ಪಂದಿಸುತ್ತಾನೆ ಮತ್ತು ಯಾವ ರೀತಿಯ ಚಿಕಿತ್ಸೆ ಆ ರೋಗಿಗೆ ಉತ್ತಮ ಎಂಬುವುದರ ಬಗ್ಗೆ ಮಾಹಿತಿ ಕೂಡ ಸಿಗುತ್ತದೆ.

8) ರೋಗಿಗಳ ರೋಗದ ಚರಿತ್ರೆ ದಾಖಲಾತಿ ಮಾಡುವಲ್ಲಿ ಮತ್ತು ರೋಗದ ಎಲ್ಲಾ ಲಕ್ಷಣಗಳನ್ನು ದಾಖಲಾತಿ ಮಾಡುವಲ್ಲಿ ಕೃತಕ ಬುದ್ದಿಮತ್ತೆ ಹೆಚ್ಚು ಬಳಸಲಾಗುತ್ತದೆ. ಮಗದೊಮ್ಮೆ ಅದೇ ರೋಗಿ ಬಂದ ಕ್ಷಣದಲ್ಲಿ ಆತನ ಸಂಪೂರ್ಣ ಚರಿತ್ರೆಯನ್ನು ಗಣಕಯಂತ್ರ ನಮ್ಮೆದುರು ತೆರೆದುಬಿಡುತ್ತದೆ.

9) ಪರೀಕ್ಷೆಯ ಫಲಿತಾಂಶಗಳ ವಿಮರ್ಶೆ, x-ray ಗಳ ವಿಮರ್ಶೆ,  C.T. ಸ್ಕ್ಯಾನ್‍ಗಳ ವಿಮರ್ಶೆ ಮುಂತಾದ ಪದೇ ಪದೇ ಮಾಡಬೇಕಾದ ಕೆಲಸಗಳನ್ನು ಕೃತಕ ಬುದ್ದಿಮತ್ತೆ ಇರುವ ಗಣಕಯಂತ್ರ ಕ್ಷಣದಲ್ಲಿ ಮಾಡಿ ಮುಗಿಸುತ್ತದೆ. ಕಾರ್ಡಿಯೋಲಜಿ ಮತ್ತು ರೇಡಿಯೋಲಜಿ ಕ್ಷೇತ್ರದಲ್ಲಿ ಇದು ಅತೀ ಉಪಯುಕ್ತ. ಅತೀ ಕ್ಲಿಷ್ಟಕರವಾದ ವಿರಳವಾದ ಸಂಧರ್ಭಗಳಲ್ಲಿ ಮಾತ್ರ ವೈದ್ಯರು ನಡುವೆ ನಿರ್ಧಾರ ತೆಗೆದುಕೊಂಡಲ್ಲಿ ಸಾಕಾಗುತ್ತದೆ. ಇಂತಹ ಎಲ್ಲಾ ಸಾಮಾನ್ಯ ಸಂಧರ್ಭಗಳಲ್ಲಿ ಕಂಪ್ಯೂಟರ್ ಎಲ್ಲಾ ನಿರ್ಧಾರ ತೆಗೆದುಕೊಳ್ಳುತ್ತದೆ.


ಕೊನೆಮಾತು:

ವಿಜ್ಞಾನ, ತಂತ್ರಜ್ಞಾನ ಬದಲಾಗುತ್ತಿದೆ. ಹೊಸ ಹೊಸ ಅವಿಷ್ಕಾರಗಳು ನಡೆಯುತ್ತಿವೆ. ವೈದ್ಯ ರೋಗಿಗಳ ನಡುವಿನ ಭಾವನಾತ್ಮಕ ಸಂಬಂಧ ಶಿಥಿಲವಾಗುತ್ತಿದೆ. ಎಲ್ಲಾ ಕೆಲಸವನ್ನು ಕುಳಿತಲ್ಲಿಯೇ ಕಂಪ್ಯೂಟರ್ ಮುಖಾಂತರ ಮಾಡುವ ಕಾಲಘಟ್ಟಕ್ಕೆ ನಾವು ತಲುಪಿದ್ದೇವೆ. ಇದೊಂದು ರೀತಿಯ ಎರಡು ಅಲುಗಿನ ಕತ್ತಿಯ ಹಾಗೆ. ವೈದ್ಯರ ಮುಂದೆ ರೋಗಿ ತನ್ನ ರೋಗದ ಲಕ್ಷಣಗಳನ್ನು ಹೇಳಿಕೊಂಡಾಗ ವೈದ್ಯ ರೋಗಿಯ ನಾಡಿ ಪರೀಕ್ಷೆ ಮಾಡಿ, ಬೆನ್ನು ಸವರಿ, ಸಾಂತ್ವನ ನೀಡಿ, ಒಂದೆರಡು ಧೈರ್ಯದ ಮಾತನಾಡಿದಾಗ ರೋಗಿಯ ಆತ್ಮ ವಿಶ್ವಾಸ ಇಮ್ಮಡಿಯಾಗುತ್ತದೆ. ಆದರೆ ಈಗ ಕೃತಕ ಬುದ್ದಿಮತ್ತೆ ತಂತ್ರಜ್ಞಾನದಿಂದ ಇನ್ನು ಮುಂದೆ ನೀವು ರೋಗ ಬಂದಾಗ ಮೊದಲ ಕಂಪ್ಯೂಟರ್ ಮುಂದೆ ಕುಳಿತು ನಿಮ್ಮ ಸಮಸ್ಯೆಗಳನ್ನು ಅದಕ್ಕೆ ತಿಳಿಸಬೇಕಾಗುತ್ತದೆ. ನಿಮ್ಮ ರಕ್ತದೊತ್ತಡ, ನಾಡಿಯ ಮಿಡಿತ, ದೇಹದ ಉಷ್ಣತೆ ಎಲ್ಲವನ್ನೂ ಕಂಪ್ಯೂಟರ್‍ಗೆ ಫೀಡ್ ಮಾಡಿ ನಿಮ್ಮ ರೋಗದ ಲಕ್ಷಣದ ಚರಿತ್ರೆಯನ್ನು ಅಭ್ಯಸಿಸಿ ನಿಮಗೆ ಇಂತಹ ರೋಗ ಇರಬಹುದು ಎಂಬ ನಿರ್ಣಯಕ್ಕೆ ಕಂಪ್ಯೂಟರ್ ಬರುತ್ತದೆ. ಅದನ್ನು ಮುಂದೆ ವೈದ್ಯರಿಗೆ ತಿಳಿಸಲಾಗುತ್ತದೆ. ನಂತರ ನೀವು ವೈದ್ಯರನ್ನು ಕಾಣಬೇಕಾಗುತ್ತದೆ. ಇಲ್ಲಿ ವೈದ್ಯರ ಕೆಲಸ ಸುಗಮವಾಗುತ್ತದೆ. ಸಮಯ ಉಳಿಸುತ್ತದೆ. ಮತ್ತು ನಿಮ್ಮ ಎಲ್ಲಾ ದಾಖಲೆಗಳು ಸುರಕ್ಷಿತವಾಗಿ ಕಂಪ್ಯೂಟರ್‍ನಲ್ಲಿ ದಾಖಲೆಯಾಗುತ್ತದೆ. ಆದರೆ ವೈದ್ಯ ರೋಗಿಯ ನಡುವಿನ ಕಂದಕ ಸೃಷ್ಠಿಯಾಗುವ ಸಾಧ್ಯತೆ ಇರುತ್ತದೆ. ಅದೇನೇ ಇರಲಿ ಈ ಕೃತಕ ಬುದ್ದಿಮತ್ತೆ ತಂತ್ರಜ್ಞಾನ ವೈದ್ಯಕೀಯ ಕ್ಷೇತ್ರಕ್ಕೆ ವರದಾನವಾಗಿರುವುದಂತೂ ನಿಜವಾದ ಮಾತು. ಅಗತ್ಯವಿದ್ದಾಗ ತಂತ್ರಜ್ಞಾನ ಬಳಸಿ ವೈದ್ಯರು ಮತ್ತು ಕಂಪ್ಯೂಟರ್‍ಗಳ ಬುದ್ದಿಮತ್ತೆಯನ್ನು ಸಮಾನವಾಗಿ ಬಳಸಿದ್ದಲ್ಲಿ ಮಾತ್ರ ರೋಗಿಯ ಉತ್ತಮ ಚಿಕಿತ್ಸೆ ದೊರಕಬಹುದು ಮತ್ತು ಮನುಕುಲದ ಹಿತ ಅದರಲ್ಲಿಯೇ ಅಡಗಿದೆ.


-ಡಾ|| ಮುರಲೀ ಮೋಹನ್‍ಚೂಂತಾರು

ಬಾಯಿ, ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು

BDS, MDS,DNB,MOSRCSEd(U.K), FPFA, M.B.A

ಮೊ : 9845135787

drmuraleechoontharu@gmail.com


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top