ಕಿರುಚಿತ್ರಗಳಿಗೂ ಸಿನಿಮಾಗಳಂತೆ ಪ್ರಬುದ್ಧತೆ ಅಗತ್ಯ: ಸುನಿಲ್ ಕುಮಾರ್ ದೇಸಾಯಿ

Upayuktha
0

`ಆಳ್ವಾಸ್ ಅರೆನಾ’ ಪ್ರಶಸ್ತಿ ಪ್ರದಾನ


ಮೂಡುಬಿದಿರೆ: ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕಥೆ ಹೇಳುವ ಸಾಮರ್ಥ್ಯ ಕಿರುಚಿತ್ರಗಳಿಗೆ ಇದೆ ಎಂದು ಹೆಸರಾಂತ ಚಿತ್ರ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಹೇಳಿದರು.


ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗವು ಆಯೋಜಿಸಿದ್ದ ರಾಷ್ಟ್ರ ಮಟ್ಟದ ಕಿರುಚಿತ್ರ ಸ್ಪರ್ಧೆ `ಆಳ್ವಾಸ್ ಅರೆನಾ'ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಸ್ಪರ್ಧೆಗೆ ಬಂದ ಎಲ್ಲಾ ಕಿರುಚಿತ್ರಗಳು ಕಥೆಯ ಆಯ್ಕೆ, ಅಭಿನಯ, ಛಾಯಾಗ್ರಹಣ, ನಿರೂಪಣೆಯಲ್ಲಿ ಪ್ರಬುದ್ಧತೆ ಮೆರೆದಿವೆ. ಮುಖ್ಯವಾಹಿನಿಯ ಚಿತ್ರಗಳಿಗೂ ಈ ಕಿರುಚಿತ್ರಗಳು ಸ್ಪರ್ಧೆಯನ್ನೊಡ್ಡಿವೆ ಎಂದು ಹೇಳಿದರು.


ವಿಜೇತ ವಸತಿಯುತ ವಿಶೇಷ ಮಕ್ಕಳ ಶಾಲೆಯ ಸಂಸ್ಥಾಪಕಿ ಡಾ. ಕಾಂತಿ ಹರೀಶ್ ಮಾತನಾಡಿ, ಪತ್ರಿಕೋದ್ಯಮ ವಿದ್ಯಾರ್ಥಿಗಳು ಸಾಮಾಜಿಕ ಕಾಳಜಿ ಇರುವ ಚಿತ್ರ ನಿರ್ಮಿಸಿದರೆ ಸಮಾಜಕ್ಕೆ ಒಳಿತಾಗುತ್ತದೆ. ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು ನಿರ್ಮಿಸಿದ  ವಿಜೇತ ವಿಶೇಷ ಶಾಲೆಯ ಸಾಕ್ಷ ಚಿತ್ರಕ್ಕೆ ಹಲವೆಡೆಯಿಂದ ಉತ್ತಮ ಸ್ಪಂದನೆ ದೊರಕಿದೆ. ಇದರಿಂದ ಚಿತ್ರೋದ್ಯಮವು ಸಮಾಜಮುಖಿ ವಸ್ತುವಿಷಯವನ್ನು ಆರಿಸಿಕೊಂಡರೆ ಸಮಾಜದಲ್ಲಿ ಧನಾತ್ಮಕ ಬದಲಾವಣೆ ಸಾಧ್ಯ ಎಂಬ ಸಂದೇಶ ರವಾನೆಯಾಗುತ್ತದೆ ಎಂದರು.


ಉದ್ಯಮಿ ಶಶಿಧರ್ ಶೆಟ್ಟಿ ಮಾತನಾಡಿ, ಕಲ್ಪನೆ ಮತ್ತು ಸಾಧಿಸುವ ಛಲ ಇದ್ದರೆ ಸದಭಿರುಚಿಯ ಹಾಗೂ ಸಾಮಾಜಿಕ ಸಂದೇಶವುಳ್ಳ ಚಿತ್ರ ನಿರ್ಮಿಸಬಹುದು ಎಂದು ಅಭಿಪ್ರಾಯಪಟ್ಟರು. ಒಳ್ಳೆಯ ಚಿತ್ರ ನಿರ್ಮಾಣ ಮಾಡಲು ಶೈಕ್ಷಣಿಕ ಅರ್ಹತೆ ಹೊಂದಿದ್ದರೆ ಸಾಲದು ಒಳ್ಳೆಯ ಅಭಿರುಚಿಯೂ ಇರಬೇಕು ಎಂದರು.


ಕಾರ್ಯಕ್ರಮದಲ್ಲಿ ಸುನಿಲ್ ಕುಮಾರ್ ದೇಸಾಯಿ, ಡಾ. ಕಾಂತಿ ಹರೀಶ್ ಮತ್ತು ಶಶಿಧರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. 


ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಯುವಜನತೆ ಚಿತ್ರ ನಿರ್ಮಾಣದಲ್ಲಿ ಸಕ್ರಿಯವಾಗಿ ಮತ್ತು ಸೃಜನಾತ್ಮಕವಾಗಿ ತೊಡಗಿಸಿಕೊಂಡರೆ ಚಿತ್ರೋದ್ಯಮವು ಉತ್ತಮ ಚಿತ್ರಗಳಿಂದ ಮನ್ನಣೆ ಪಡೆಯಬಹುದು ಎಂದರು.


ಎರಡನೆ ಆವೃತ್ತಿಯ ರಾಷ್ಟ್ರ ಮಟ್ಟದ  ಕಿರುಚಿತ್ರ ಸ್ಪರ್ಧೆಯಲ್ಲಿ 80ಕ್ಕೂ ಅಧಿಕ ಸಿನಿಮಾಗಳು ನೋಂದಣಿಗೊಂಡಿದ್ದು, ಖ್ಯಾತ ನಟ ಹಾಗೂ ನಿರ್ದೇಶಕ ಸುರೇಶ ಹೆಬ್ಳೀಕರ್, ಮಂಡ್ಯ ರಮೇಶ್, ನೆನಪಿರಲಿ ಪ್ರೇಮ್, ಹಾಗೂ ಸುನಿಲ್ ಕುಮಾರ್ ತೀರ್ಪುಗಾರರಾಗಿ ಕೆಲಸ ನಿರ್ವಹಿಸಿದ್ದಾರೆ.


ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ವಿಭಾಗದ ಸಂಯೋಜಕ ಪ್ರಸಾದ ಶೆಟ್ಟಿ, ಮಾನವಿಕ ವಿಭಾಗದ ಡೀನ್ ಸಂಧ್ಯಾ ಕೆ. ಎಸ್ ಉಪಸ್ಥಿತರಿದ್ದರು. 


ಆಳ್ವಾಸ್ ಅರೆನಾ ಎರಡನೇ ಆವೃತ್ತಿಯ ಉತ್ತಮ ಕಿರುಚಿತ್ರವಾಗಿ ನಿಶಿತ್ ಶೆಟ್ಟಿ ನಿರ್ದೇಶನದ `ವೃಷ್ಟಿ' ಕಿರುಚಿತ್ರವು 9,999 ರೂಪಾಯಿ ನಗದು ಬಹುಮಾನದೊಂದಿಗೆ ಮೊದಲ ಸ್ಥಾನ, ಅಜ್ಜಿಮನೆ ಕಿರುಚಿತ್ರ 6,666 ರೂಪಾಯಿ ನಗದು ಬಹುಮಾನದೊಂದಿಗೆ ದ್ವಿತೀಯ ಸ್ಥಾನ ಹಾಗೂ ವಿಕಾಸ್ ನಿರ್ದೇಶನದ ಮಾತು-ಕಥೆ ತೃತೀಯ ಸ್ಥಾನ ಪಡೆಯಿತು. ವಿಶೇಷ ಕೆಟಗರಿಯಲ್ಲಿ 4 ಸಿನಿಮಾಗಳನ್ನು ಉತ್ತಮ ನಿರ್ದೇಶಕ, ನಟ, ಛಾಯಾಗ್ರಾಹಣ ಹಾಗೂ ಸಂಕಲನಕ್ಕೆ ಆರಿಸಲಾಗಿತ್ತು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top