|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಆಳ್ವಾಸ್ ತುಳು ಸಂಸ್ಕೃತಿ ಅಧ್ಯಯನ ಕೇಂದ್ರ: 'ಆಟಿ ಆನಿ ಇನಿ' ಕಾರ್ಯಕ್ರಮ

ಆಳ್ವಾಸ್ ತುಳು ಸಂಸ್ಕೃತಿ ಅಧ್ಯಯನ ಕೇಂದ್ರ: 'ಆಟಿ ಆನಿ ಇನಿ' ಕಾರ್ಯಕ್ರಮ

ಕತ್ತಲೆಯಲ್ಲಿ ಬೆತ್ತಲಾಗಿ ಹೋಗಿ ಕಲ್ಲಿನಲ್ಲಿ ಕೆತ್ತೆ ಕೆತ್ತುವ ಸಂಪ್ರದಾಯ ಇಂದು ಕಣ್ಮರೆ: ಗಣನಾಥ್ ಎಕ್ಕಾರ್


ಮೂಡಬಿದಿರೆ: ಸ್ತ್ರೀ ಪ್ರಧಾನ ಸಮಾಜ, ಅವೈದಿಕ ಆಚರಣೆ ಮತ್ತು ಕೃಷಿ ಸಂಸ್ಕೃತಿ, ಇವು ತುಳುನಾಡಿನ ಸಂಸ್ಕೃತಿಯ ಮೂಲ ಲಕ್ಷಣವಾಗಿದೆ. ಆದರೆ ಇಂದು ಇವು ಕಣ್ಮರೆಯಾಗುತ್ತಿದ್ದು ಯುವಕರಲ್ಲಿ ಆಚರಣೆಗಳ ಬಗ್ಗೆ ಜಾಗೃತಿ ಮೂಡಿಸಿ ಸಂಸ್ಕೃತಿಗೆ ಪುನರುಜ್ಜೀವನ ಕೊಡಿಸುವ ಕೆಲಸ ಮಾಡಬೇಕಾಗಿದೆ ಎಂದು ಗಣನಾಥ್ ಎಕ್ಕಾರ್ ಅಭಿಪ್ರಾಯ ವ್ಯಕ್ತಪಡಿಸಿದರು.


ಆಳ್ವಾಸ್ ತುಳು ಸಂಸ್ಕೃತಿ ಅಧ್ಯಯನ ಕೇಂದ್ರದ ವತಿಯಿಂದ ನಡೆದ ‘ಆಟಿ ಆನಿ ಇನಿ’ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಆಟಿ ತಿಂಗಳ ಪ್ರಾಮುಖ್ಯತೆ, ಆಚರಣೆ, ನಂಬಿಕೆ ಇತ್ಯಾದಿ ವಿಷಯಗಳ ಬಗ್ಗೆ ಬೆಳಕು ಚೆಲ್ಲಿದರು.


ಪ್ರಕೃತಿ ಮತ್ತು ಸಂಸ್ಕೃತಿಗೆ ಅವಿನಾಭಾವ ಸಂಬಂಧ ಇದೆ. ಅದಕ್ಕೆ ಒಂದು ಅತ್ಯುತ್ತಮ ಉದಾಹರಣೆ ಆಟಿ ಮಾಸ. ವರ್ಷದ ಅತ್ಯಂತ ಜೋರು ಮಳೆ ಸುರಿಯುವ ತಿಂಗಳು ಎಂದರೆ ಅದು ಆಟಿ. ಮನೆಯಿಂದ ಹೊರಗೆ ಬರಲು ಸಾಧ್ಯವಾಗದಷ್ಟು ಮಳೆ ಸುರಿಯತ್ತಿದ್ದ ಕಾಲವದು. ಸಮಾಜದಲ್ಲಿ ದಟ್ಟ ದಾರಿದ್ರ್ಯ, ರೋಗ ರುಜಿನಗಳು ವ್ಯಾಪಕವಾಗಿ ಹರಿದಾಡುತ್ತಿತ್ತು. ಆಗ ಜನರು ತಮ್ಮ ಬದುಕನ್ನು ಸಾಗಿಸಲು, ಆಹಾರಕ್ಕಾಗಿ ಮನೆಯ ತೋಟದಲ್ಲಿ ಸಿಗುತ್ತಿದ್ದ ಸೊಪ್ಪು, ಎಲೆ, ಗೆಡ್ಡೆಗಳನ್ನೇ ಬಳಸಿ ಆಹಾರ ತಯಾರಿಸುತ್ತಿದ್ದರು. ಪೆಜಕ್ಕಾಯಿ, ಮಾವಿನಮಿಡಿ, ವಿವಿಧ ಸೊಪ್ಪಿನ ಪಲ್ಯ ಎಲ್ಲವೂ ಹುಟ್ಟಿಕೊಂಡಿದ್ದು ಹೀಗೆ. ಈ ಆಹಾರಗಳಿಗೆ ವೈಜ್ಞಾನಿಕ ಹಿನ್ನೆಲೆಯಿತ್ತು ಮತ್ತು ಅದು ನಮ್ಮ ದೇಹದಲ್ಲಿ ಉಷ್ಣ ಹಾಗೂ ಶೀತವನ್ನು ಸಮತೋಲನದಲ್ಲಿ ಇರಿಸುತ್ತಿತ್ತು ಎಂದರು.


ಸಾಮಾನ್ಯವಾಗಿ ಮನರಂಜನೆಗಾಗಿ ಆಟಗಳನ್ನು ಆಡುತ್ತಾರೆ ಎಂದು ಹೇಳುತ್ತಾರೆ. ಆದರೆ, ತುಳುನಾಡಿನ ಸಂಸ್ಕೃತಿಯಲ್ಲಿ ಕಾಣಸಿಗುವ ಆಟಗಳು ಜನರನ್ನು ಮಾನಸಿಕವಾಗಿ, ಶಾರೀರಿಕವಾಗಿ ಮತ್ತು ಸಾಂಸ್ಕೃತಿಕವಾಗಿಯೂ ಬೆಳೆಸುತ್ತಿತ್ತು. ಉದಾಹರಣೆಗೆ ಹುಲಿ ದನ ಆಟ. ದನದ ಮಹತ್ವವನ್ನು ಸಾರುವ ಆಟ ಅದಾಗಿತ್ತು ಎಂದು ಹೇಳಿದರು.


ತಮಿಳುನಾಡಿನ ರಾಮೇಶ್ವರದಿಂದ ರಾಜ್ಯದ ಉತ್ತರಕನ್ನಡ ಜಿಲ್ಲೆಯ ಆಂಕೋಲದವರೆಗಿನ ಪ್ರದೇಶವನ್ನು ತುಳುನಾಡು ಎಂದು ಕರೆಯುತ್ತಿದ್ದ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಾಗಿದೆ. ಆದರೆ ಇಂದು ಕೇರಳದ ಕಾಸರಗೋಡಿನಿಂದ ಉಡುಪಿ ಜಿಲ್ಲೆಯ ಬ್ರಹ್ಮಾವರದ ವರೆಗೆ ಮಾತ್ರ ತುಳುವರನ್ನು ಕಾಣಬಹುದು. ಈ ಪ್ರದೇಶದ ಮೇಲೂ ಇಂದು ವಿವಿಧ ಸಂಸ್ಕೃತಿಗಳ ಋಣಾತ್ಮಕ ಪ್ರಭಾವ ಬೀರುತ್ತಿದೆ. ಇಂದು ನಮ್ಮತನವು ಕಣ್ಮರೆಯಾಗಿ ಹೊರಗಿನ ಸಂಸ್ಕೃತಿ ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.


ಆಟಿ ತಿಂಗಳ ಅಮಾವಾಸ್ಯೆ ದಿನಕ್ಕೂ ವೈಜ್ಞಾನಿಕ ಮಹತ್ವವಿದೆ. ಆದರೆ ಹಿಂದಿನ ಆಚರಣೆ ಇಂದು ಕಾಣಲು ಸಿಗುತ್ತಿಲ್ಲ. ಹಾಳೆಯ ಮರ ಕೆತ್ತುವ ಪದ್ಧತಿ ಇದೆ. ಕತ್ತಲೆಯಲ್ಲಿ ಬೆತ್ತಲೆಯಾಗಿ ಹೋಗಿ ಅದನ್ನು ಕಲ್ಲಿನಲ್ಲಿಯೇ ಕೆತ್ತಬೇಕು ಎಂಬ ಪ್ರತೀತಿ ಇದೆ. ಆದರೆ ಇಂದು ವಸ್ತ್ರ ಧರಿಸಿಕೊಂಡು ಹೋಗಿ, ಕತ್ತಿಯಿಂದ ಮರದ ಕೆತ್ತೆಯನ್ನು ಕೆತ್ತಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಕಳೆದ 30-40 ವರ್ಷಗಳಲ್ಲಿ ಭಾರಿ ಬದಲಾವಣೆ ಆಗಿದೆ. ಬೇರೆ ಸಂಸ್ಕೃತಿಗಳ ಪ್ರಭಾವದಿಂದಾಗಿ ನಮ್ಮತನ ಎನ್ನುವುದು ಅಪಾಯದಲ್ಲಿದೆ. ಯಾವುದೇ ಒಂದು ಭಾಷೆ, ಆಚರಣೆ ಮೌಲ್ಯವಾಗಿ ಉಳಿಯಬೇಕು ಎಂದಾದರೆ ಇಂತಹ ಕಾರ್ಯಕ್ರಮಗಳು ಅವಶ್ಯವಾಗಿ ಆಗುತ್ತಿರಬೇಕು. ಇವು ಯುವಕರಲ್ಲಿ ಹೊಸ ಯೋಚನೆ, ಆಲೋಚನೆಗಳನ್ನು ಮೂಡಿಸುತ್ತದೆ ಎಂದರು.


ಆಳ್ವಾಸ್ ತುಳು ಸಂಸ್ಕೃತಿ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಯೋಗೀಶ್ ಕೈರೋಡಿ ಅತಿಥಿಯನ್ನು ಪರಿಚಯಿಸಿ, ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ವಿದ್ಯಾರ್ಥಿ ಹೇಮಂತ್ ವಂದಿಸಿದರು. ವಿದ್ಯಾರ್ಥಿನಿ ಸುಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.


'ಆಟಿ ಆನಿ ಇನಿ' ಕಾರ್ಯಕ್ರಮವನ್ನು ಅತಿಥಿಗಳು ಚೆನ್ನೆಮಣೆ ಆಟವನ್ನು ಆಡುವ ಮೂಲಕ ವಿಶೇಷವಾಗಿ ಉದ್ಘಾಟಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಗೆ ಚೆನ್ನೆಮಣೆ ಹಾಗೂ ಸವಾಲ್ ಪಂಥ್ (ರಸಪ್ರಶ್ನೆ ಸ್ಪರ್ಧೆ) ನಡೆಯಿತು ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 Comments

Post a Comment

Post a Comment (0)

Previous Post Next Post