
10. ಬಾಳು ಬೆಳಗಿತು
ಮದುವೆ ಎನ್ನುವುದು ಏನೆಂದು ತಿಳಿಯುವ ಮೊದಲೇ ಅವಳಿಗೆ ಮದುವೆಯಾಗಿತ್ತು. ದಾಂಪತ್ಯದ ಬಗ್ಗೆ ಏನೊಂದೂ ತಿಳಿಯದ ಅವಳು ಗಂಡನ ಮನೆಗೆ ಬಂದು, ಅಲ್ಲಿ ಎಲ್ಲಾ ಇದ್ದರೂ ಗಂಡನ ಪ್ರೀತಿ ಸಿಗದೆ ಹತಾಶಳಾದಳು. ದಾಂಪತ್ಯದ ಸವಿ ಸವಿಯುವ ಮೊದಲೇ ವಿಧಿ ಅವಳನ್ನು ವಿಧವೆಯಾಗಿಸಿತು. ಮಗನನ್ನು ನುಂಗಿದ ರಾಕ್ಷಶಿ ಎಂದು ಅತ್ತೆ ಮಾವ ಅವಳನ್ನು ಹೊರಗಟ್ಟಿದರು. ತಂದೆ ಮನೆಯ ಬಾಗಿಲು ಎಂದೋ ಮುಚ್ಚಿ ಹೋಗಿದ್ದರಿಂದ ದಿಕ್ಕು ತೋಚದೆ ಕುಳಿತ ಸಂಧರ್ಭದಲ್ಲಿ ಬಾಲ್ಯದ ಗೆಳೆಯ ಅವಳ ಕೈ ಹಿಡಿದು ಬರಿದಾದ ಅವಳ ಮಡಿಲು ತುಂಬಿದ.
*******
11. ನಿರಾಸೆ
ಮನೆಯಲ್ಲಿ ಗೆಜ್ಜೆ ಸದ್ದು ಕೇಳಬೇಕೆಂದು ವರ್ಷದಿಂದ ಕಾದಿದ್ದ ಅವಳಿಗೆ ಮಗ ಸೊಸೆಯ ವಿರಸ ನಂತರ ಆದ ಮದುವೆ ವಿಚ್ಚೇಧನದ ನಿರ್ಧಾರಗಳು ನಿರಾಸೆ ಮೂಡಿಸಿತು . ಕೊನೆಗೂ ತನ್ನಾಸೆ ಈಡೇರಿಕೆಗೆ ಆಕೆ ಕೈಗೊಂಡ ನಿರ್ಧಾರ ಅನಾಥ ಮಗುವಿನ ಬಾಳಿಗೊಂದು ನೆಲೆಯಾಯಿತು .
*******
12. ಬಾಂಧವ್ಯ
ತನ್ನ ನೆಚ್ಚಿನ ಹಸು ಅಂಬಿಕೆಯನ್ನು ಕಟುಕನಿಗೆ ಮಾರಿದ್ದರಿಂದ ಅನ್ನ ನೀರು ಬಿಟ್ಟು ಕುಳಿತ ಮಗಳು ನಳಿನಾಳನ್ನು ಕಂಡ ಅವಳ ತಂದೆ ತಾಯಿಗೆ ತಮ್ಮ ತಪ್ಪಿನ ಅರಿವಾಗಿ ತಾವು ಮಾರಿದ ಹಸುವನ್ನು ದುಪ್ಪಟ್ಟು ಹಣಕೊಟ್ಟು ಖರೀದಿಸಿ ತಂದಾಗ, ನಳಿನಾ ಚಿಗರೆಯಂತೆ ಹಾರಿ ಅಂಬಿಕೆಯನ್ನು ತಬ್ಬಿಕೊಂಡಳು. ಎಷ್ಟೋ ವರ್ಷದ ಅಗಲಿಕೆಯೇನೋ ಅನ್ನುವಂತೆ ಅಂಬಿಕೆಯೂ ಅವಳ ಕೈ ಮೈಯನ್ನು ನಕ್ಕಿ ಸಂತೋಷ ವ್ಯಕ್ತಪಡಿಸಿತು. ಅವರಿಬ್ಬರ ಪ್ರೀತಿಯನ್ನು ಕಂಡ ತಂದೆ ತಾಯಿಯರ ಕಣ್ಣು ಈ ದೃಶ್ಯವನ್ನು ಕಂಡು ಹನಿಗೂಡಿತು.
******
13. ಸಾಧನೆ
ಬಾಲ್ಯದಿಂದಲೂ ಏನಾದರೂ ಸಾಧಿಸಬೇಕು ಎನ್ನುವ ಮಹತ್ವಾಕಾಂಕ್ಷೆ ಹೊಂದಿದ್ದ ಅನೂಪ್ ತಾನು ಚೆನ್ನಾಗಿ ಓದಿ ಡಾಕ್ಟರ್ ಕಲಿತು ಕೆಲಸಕ್ಕೆ ಸೇರಿದ ತಕ್ಷಣ ಮಾಡಿದ ಮೊದಲ ಕೆಲಸವೆಂದರೆ. ಕಣ್ಣಿಲ್ಲದ ವ್ಯಕ್ತಿಗಳಿಗೆ ದಾನಿಗಳಿಂದ, ಮೃತಪಟ್ಟ ವ್ಯಕ್ತಿಯ ಸಂಬಂಧಿಕರ ಮನವೊಲಿಸಿ ಕಣ್ಣನ್ನು ಅಳವಡಿಸಿ ಅವರ ಬಾಳಿಗೆ ಬೆಳಕಾದುದು, ನೂರಾರು ಅಂಧರ ಬಾಳ ಬೆಳಕು ಆದ ಅನೂಪ್ ನ ಮನ ಇಂದು ತೃಪ್ತಿಯಿಂದ ಬೀಗುತ್ತಿತ್ತು.
*******
14. ಮೋಸಗಾರ
ಆತ ಮೊಸಗಾರನೆಂದು ತಿಳಿಯದೆ ಆಕೆ ಅವನ ಜತೆ ಹುಟ್ಟಿ ಬೆಳೆದ ಮನೆಯನ್ನು ಬಿಟ್ಟು ಹೊರಟು ಬಂದಿದ್ದಳು. ಮಹಾನಗರದ ಆ ವೈಭವೋಪೇತ ಹೋಟೆಲ್‌ನ ರೂಮಿನಲ್ಲಿ ಆತನ ಮೋಸ ತಿಳಿದು ಹೇಗೋ ಅಲ್ಲಿಂದ ತಪ್ಪಿಸಿ ಕೊಂಡು ಬಂದ ಆಕೆ ತನ್ನೂರಿನ ದಾರಿಯನ್ನು ಹಿಡಿದು ನಿಟ್ಟುಸಿರು ಬಿಟ್ಟಳು.
******
15. ವಿಶಾಲ ಹೃದಯಿ
ಮಕ್ಕಳಿಲ್ಲದ ಶಾಂತಮ್ಮನಿಗೆ ವಯಸ್ಸಾಗುತ್ತಿದ್ದರೂ ತನ್ನ ಉದರ ಪೋಷಣೆಗಾಗಿ ಬಸ್ ಸ್ಟ್ಯಾಂಡ್ ನಲ್ಲಿ ಕಡಲೆ ಹುರಿದು ಮಾರುವ ಕೆಲಸ ಮಾಡಿ ಹೊಟ್ಟೆ ತುಂಬಿಸಿ ಕೊಳ್ಳುತ್ತಿದ್ದರು. ಕೊರೊನಾ ಕಾರಣದಿಂದ ಬೀದಿಯಲ್ಲಿ ವ್ಯಾಪಾರ ಮಾಡುವುದು ಸಾಧ್ಯವಿಲ್ಲದ ಕಾರಣ ಆಕೆ ಅಕ್ಷರಶಃ ನಿರ್ಗತಿಕಳಾದಳು. ಇದನ್ನು ತಿಳಿದ ಅವಳ ಪರಿಚಯದ ರಮೇಶನೆಂಬ ತರುಣ ಅವನ ಮನೆಗೆ ಕರೆದೊಯ್ದು ಆಕೆಗೆ ಊಟ ವಸತಿ ವ್ಯವಸ್ಥೆ ಕಲ್ಪಿಸಿ ಹೃದಯ ಶ್ರೀಮಂತಿಕೆ ಮೆರೆದ.
********
16. ತಾಯಿಯೇ ಮೊದಲ ಗುರು
ಮಹೇಶ್ ಕಲಿಯುವುದರಲ್ಲಿ ಅನಾಸಕ್ತಿಯಿಂದಿರುವುದು ಕಂಡ ಅವನ ತಾಯಿ ಯೋಗ್ಯ ಗುರುಗಳ ಮಾರ್ಗದರ್ಶನದಿಂದ ಮಗನ ಕಲಿಕೆ ಉತ್ತಮ ಗೊಳ್ಳಬಹುದೆಂದು ಅಶಿಸಿ ತನಗೆ ಕಷ್ಟವಾದರೂ ಉತ್ತಮ ಗುಣಮಟ್ಟದ ಶಾಲೆಗೆ ಸೇರಿಸುತ್ತಾರೆ. ಶ್ರೀಮಂತರ ಮಕ್ಕಳು ಶೋಕಿಗಾಗಿ ಬರುವ ಆ ಶಾಲೆಯಲ್ಲಿ ಬಡ ವಿದ್ಯಾರ್ಥಿಯಾದ ಮಹೇಶನನ್ನು ಕೇಳುವವರೇ ಇಲ್ಲ. ಇದರಿಂದ ಅವನ ಕಲಿಕೆ ಉತ್ತಮಗೊಳ್ಳುವ ಬದಲು ಇನ್ನಷ್ಟು ಅವನತಿ ಪಡೆದುದು ಕಂಡು ತಾಯಿ ಅವನಿಗೆ ಹುರಿದುಂಬಿಸಿ ಮುಂದಿನ ಅವನ ಗುರಿ ನಿಚ್ಚಳವಾಗಿ ಕಾಣುವಂತೆ ಪ್ರಯತ್ನಿಸುತ್ತಾಳೆ. ಅಂದಿನಿಂದ ಆತ ತಾನಾಯಿತು, ತನ್ನ ಓದಾಯಿತು ಎಂದು ಶ್ರದ್ಧೆಯಿಂದ ಕಲಿಯುತ್ತಾ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರನಾದ. ತಾಯಿಯೇ ಮೊದಲ ಗುರು ಎನ್ನುವುದನ್ನು ಆತ ಅರಿತನು.
*******
17. ಕೃತಜ್ಞತೆ
ದೇವರಿಗೆ ಇಟ್ಟ ನೈವೇದ್ಯಕ್ಕೆ ಬಾಯಿ ಹಾಕಿತೆಂದು ನಾಯಿಯನ್ನು ಸಾಯುವಂತೆ ಬಡಿದ ಅರ್ಚಕರು ಗುಡಿಯ ಬಾಗಿಲಲ್ಲಿ ಜಾರಿ ಬಿದ್ದು ಏಳಲು ಆಗದಾಗ ಓಡಿ ಹೋಗಿ ಮನೆಯವರನ್ನು ಕರೆತಂದ ನಾಯಿಯನ್ನು ಕಂಡು ಅವರ ಕಣ್ಣು ಹನಿಗೂಡಿತು.
********
18. ಮರೆವು ತಂದ ಅವಾಂತರ
ಸಜನ್ ತಂದೆ ತಾಯಿಯರ ಏಕಮಾತ್ರ ಪುತ್ರ ಓದಿನಲ್ಲಿ ಜಾಣ. ಮರೆವು ಬಾರದಂತೆ ಅಂದಂದಿನ ಪಾಠ ಪ್ರವಚನಗಳನ್ನು ಓದಿ ಮನನ ಮಾಡುತ್ತಾ ಪರೀಕ್ಷೆಯಲ್ಲಿ ಚೆನ್ನಾಗಿ ಬರೆದು ಉತ್ತಮ ಅಂಕಗಳಿಂದ ತೇರ್ಗಡೆಯಾಗುತ್ತಿದ್ದನು. ಪ್ರತೀ ಕ್ಲಾಸ್ನಲ್ಲಿಯೂ ಮೊದಲಿಗನಾಗಿ ತೇರ್ಗಡೆಯಾಗುತ್ತಿದ್ದ ಅವನು ಅದೊಂದು ದಿನ ಕೆಲಸದ ಸಂದರ್ಶನಕ್ಕೆ ಹೊರಡುವ ಗಡಿಬಿಡಿಯಲ್ಲಿ ತನ್ನ ಮಾರ್ಕ್ ಕಾರ್ಡ್‌ಗಳಿದ್ದ ಕಡತವನ್ನು ಮನೆಯಲ್ಲೇ ಬಿಟ್ಟು ಬಂದಿದ್ದರಿಂದ ಉತ್ತಮ ಕೆಲಸದ ಅವಕಾಶವನ್ನು ಕಳೆದುಕೊಂಡು ಬಿಟ್ಟನು.ಎಷ್ಟೇ ಜಾಣನಾಗಿದ್ದರೂ ಮರೆವು ಆವರಿಸಿದಾಗ ಬಾಳಲ್ಲಿ ತುಂಬಲಾರದ ನಷ್ಟ ಉಂಟಾಗುತ್ತದೆ ಎನ್ನುವುದನ್ನು ತಿಳಿದ ಆತ ಮುಂದೆಂದೂ ಹೀಗಾಗದಂತೆ ಜಾಗ್ರತೆ ವಹಿಸಿದ.
-ಶ್ರೀಮತಿ ಪಂಕಜಾ.ಕೆ
ಮುಡಿಪು, ಕುರ್ನಾಡು, ದ.ಕ.