ಮಂಗಳೂರು: ನಗರ ಹೆಸರಾಂತ ಕಾರುಗಳ ಮಾರಾಟ ಸಂಸ್ಥೆ- ಮಾಂಡೋವಿ ಮೋಟರ್ಸ್ ವತಿಯಿಂದ ಇಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.
ರಾಜ್ಯ ಸರಕಾರದ ಆಯುಷ್ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮತ್ತು ತೋಟಗಾರಿಕೆ ಇಲಾಖೆ ಹಾಗೂ ಮಾಂಡೋವಿ ಮೋಟರ್ಸ್ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ 'ಯೋಗ ಮತ್ತು ಆರೋಗ್ಯ' ಕುರಿತ ವಿಚಾರಗೋಷ್ಠಿ ನಡೆಯಿತು. ಆರೋಗ್ಯಕ್ಕಾಗಿ ಯೋಗ, ಹೊಸ ದಿನಚರಿಗಾಗಿ ಯೋಗ ಎಂಬ ಥೀಮ್‌ನಲ್ಲಿ ಈ ಕಾರ್ಯಕ್ರಮ ನಡೆಸಲಾಯಿತು.
ಬೆಳ್ತಂಗಡಿಯಲ್ಲಿ ವೆಲ್‌ನೆಸ್ ಆಫೀಸರ್ ಆಗಿ ಕೆಲಸ ಮಾಡುತ್ತಿರುವ ಡಾ. ಕೃಷ್ಣ ಪ್ರಸಾದ್, ಯೋಗ ತಜ್ಞೆ ಡಾ. ಸಂಗೀತಾ, ಮಾಂಡೋವಿ ಮೋಟರ್ಸ್‌ನ ಸಿಇಓ ಪಾರ್ಶ್ವನಾಥ್, ಮಾರ್ಕೆಟಿಂಗ್ ವಿಭಾಗದ ಮ್ಯಾನೇಜರ್ ಆಗಿರುವ ಶಶಿಧರ ಕಾರಂತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
2015ರಲ್ಲಿ ಆರಂಭಿಸಲಾದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಇದೀಗ 8ನೇ ವರ್ಷಕ್ಕೆ ಕಾಲಿಟ್ಟಿದೆ. ವಿಶ್ವದ 178 ದೇಶಗಳು ಯೋಗ ದಿನವನ್ನು ಆಚರಿಸುತ್ತಿವೆ. ಆಹಾರ, ವಿಶ್ರಾಂತಿ, ವ್ಯಾಯಾಮ- ಇವು ಮೂರು ನಮ್ಮ ಆರೋಗ್ಯದ ಮೇಲೆ ಅತಿ ಹೆಚ್ಚು ಪರಿಣಾಮ ಬೀರುವಂಥವುಗಳು. ಆಹಾರ, ವಿಶ್ರಾಂತಿಯಷ್ಟೇ ವ್ಯಾಯಾಮವೂ ಪ್ರಮುಖವಾಗಿದೆ. ಎಲ್ಲ ವ್ಯಾಯಾಮಗಳಲ್ಲಿ ಅತ್ಯಂತ ಉನ್ನತ ಸ್ಥಾನದಲ್ಲಿರುವುದು ಹಾಗೂ ಆರೋಗ್ಯದ ಮೇಲೆ ಅತ್ಯುತ್ತಮ ಪರಿಣಾಮ ಬೀರುವುದು ಯೋಗ ಮಾತ್ರ ಎಂದು ಡಾ. ಕೃಷ್ಣಪ್ರಸಾದ್ ಹೇಳಿದರು.
ಯೋಗ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಿರಬಾರದು. ಪ್ರತಿದಿನವೂ ಯೋಗಾಭ್ಯಾಸ ಮಾಡುವುದು ದಿನಚರಿಯಾಗಬೇಕು ಎಂದು ಡಾ. ಸಂಗೀತಾ ಅವರು ಹೇಳಿದರು. ಉಸಿರಾಟದ ಸರಿಯಾದ ಕ್ರಮವೇ ಯೋಗಾಭ್ಯಾಸದಲ್ಲಿ ಎಲ್ಲಕ್ಕಿಂತ ಮೊದಲು ಕಲಿಯಬೇಕಾದುದು ಎಂದು ಅವರು ಪ್ರಾಯೋಗಿಕ ಅಭ್ಯಾಸಗಳ ಮೂಲಕ ವಿವರಿಸಿದರು.
ವಿಶ್ರಾಂತ ಸ್ಥಿತಿಯಲ್ಲಿದ್ದಾಗ ಉಸಿರಾಟ ಸಹಜ ಸ್ಥಿತಿಯಲ್ಲಿರುತ್ತದೆ. ಆಗ ದೇಹದ ಎಲ್ಲ ಅಂಗಾಂಗಳು ಸಹಜವಾಗಿ ಕಾರ್ಯನಿರ್ವಹಿಸುತ್ತವೆ. ಯಾವಾಗ ನಮ್ಮ ಚಟುವಟಿಕೆಗಳು ಒತ್ತಡದ ಸ್ಥಿತಿಗೆ ತಲುಪುತ್ತವೆಯೋ ಆಗ, ದೇಹದ ಆಂತರಿಕ ಅಂಗಗಳ ಕಾರ್ಯ ನಿರ್ವಹಣೆಯೂ ಬದಲಾಗುತ್ತದೆ. ನಮಗೆ ಅರಿವಿಲ್ಲದೆಯೇ ಕಾಯಿಲೆಗಳು ಅಂಟಿಕೊಳ್ಳಲು ಇಂತಹ ಒತ್ತಡದ ಸ್ಥಿತಿಯೇ ಕಾರಣವಾಗುತ್ತದೆ. ಆದ್ದರಿಂದ ಒತ್ತಡರಹಿತವಾಗಿ ಕೆಲಸ ನಿರ್ವಹಿಸಲು ಮೊದಲು ಉಸಿರಾಟ ಕ್ರಮದ ಮೇಲೆ ನಿಯಂತ್ರಣ ಸಾಧಿಸಬೇಕು ಎಂದು ಡಾ. ಸಂಗೀತಾ ವಿವರಿಸಿದರು.
ದೀರ್ಘ ಶ್ವಾಸೋಛ್ವಾಸವನ್ನು ಅಭ್ಯಾಸ ಮಾಡುವುದರಿಂದ ಶ್ವಾಸಕೋಶದ ಸಾಮರ್ಥ್ಯ ವೃದ್ಧಿಸುತ್ತದೆ. ದೇಹಕ್ಕೆ ಸಿಗುವ ಆಮ್ಲಜನಕದ ಪ್ರಮಾಣ ಹೆಚ್ಚಾಗುತ್ತದೆ. ಆದರಿಂದ ರಕ್ತದ ಪರಿಚಲನೆಯೂ ಸರಾಗವಾಗುತ್ತದೆ. ಆರೋಗ್ಯವಂತ ವ್ಯಕ್ತಿಯ ಶ್ವಾಸಕೋಶಗಳು 5 ಲೀಟರ್‌ಗಳಷ್ಟು ಪ್ರಮಾಣದ ಗಾಳಿಯನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಹೊಂದಿವೆ ಎಂದು ಅವರು ತಿಳಿಸಿದರು.
ಒಂದು ಉಸಿರಾಟದಲ್ಲಿ ಸರಾಸರಿ 3.5 ಲೀಟರ್‌ನಷ್ಟು ಗಾಳಿ ಶ್ವಾಸಕೋಶದ ಒಳಗೆ-ಹೊರಗೆ ಸಂಚರಿಸುವಷ್ಟು ಸಾಮರ್ಥ್ಯ ನಮ್ಮಲ್ಲಿರುತ್ತದೆ. ಆದರೆ ಅದನ್ನು ಬಳಸಿಕೊಳ್ಳುವುದಿಲ್ಲ ಅಷ್ಟೇ. ಹಾಗಾಗಿ ನಮ್ಮ ಕ್ಷಿಪ್ರ ಉಸಿರಾಟದಲ್ಲಿ ಕೇವಲ 200 ಎಂಎಲ್ ನಷ್ಟು ಮಾತ್ರ ಆಮ್ಲಜನಕ ಒಳಗೆ ಸೇರಿಕೊಳ್ಳುತ್ತದೆ. ಈಗ ನಾವು ನಮ್ಮ ನೈಜ ಶಕ್ತಿಯಲ್ಲಿ ಎಷ್ಟು ಪ್ರಮಾಣವನ್ನು ಮಾತ್ರ ಬಳಸಿಕೊಳ್ಳುತ್ತಿದ್ದೇವೆ ಎಂಬ ಅರಿವು ಬಂದಿರಬಹುದು. ನಿರಂತರ ಅಭ್ಯಾಸ ಮಾಡಿದರೆ ಎಲ್ಲರೂ ಈ ಸಾಮರ್ಥ್ಯವನ್ನು ಗಳಿಸಿಕೊಳ್ಳಬಹುದು ಎಂದು ಅವರು ವಿವರಿಸಿದರು.
ಪ್ರಾಚೀನ ಕಾಲದ ಯೋಗಿಗಳು, ಋಷಿ-ಮುನಿಗಳು ದೀರ್ಘಕಾಲದ ವರೆಗೆ ಉಸಿರನ್ನು ಪ್ರತಿಬಂಧಿಸಿ ತಪಸ್ಸು ಮಾಡುವ ಶಕ್ತಿಯನ್ನೂ ಹೊಂದಿದ್ದರು. ಅದು ಅವರ ನಿರಂತರ ಸಾಧನೆಯಿಂದ ಗಳಿಸಿದ ಶಕ್ತಿಯಾಗಿತ್ತು ಎಂದು ಅವರು ತಿಳಿಸಿದರು.
ಮಾಡೋವಿ ಮೋಟರ್ಸ್ ಸಂಸ್ಥೆಯ ಅಸಿಸ್ಟೆಂಟ್ ಸೇಲ್ಸ್ ಮ್ಯಾನೇಜರ್ ಮುರಳೀಧರ್ ಬಿ.ಜೆ ಅವರು ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಎಲ್ಲ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ