ಯೋಗ ಜೀವನದ ಅವಿಭಾಜ್ಯ ಅಂಗವಾಗಲಿ: ದೇಲಂಪಾಡಿ

Upayuktha
0

ಮಂಗಳೂರು: ಯೋಗ, ಧ್ಯಾನ ಮತ್ತು ಪ್ರಾಣಯಾಮ ನಮ್ಮ ದೇಹದ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಅತಿ ಅವಶ್ಯಕ. ಇಂದಿನ ಒತ್ತಡದ ಹಾಗೂ ಧಾವಂತದ ಜೀವನಶೈಲಿಯಿಂದ ಜನರು ಮಾನಸಿಕವಾಗಿ ಬಹಳಷ್ಟು ಬಳಲುತ್ತಾರೆ. ಈ ನಿಟ್ಟಿನಲ್ಲಿ ದಿನ ನಿತ್ಯ ಯೋಗ, ಧ್ಯಾನ ಮಾಡುವುದು ಅನಿವಾರ್ಯವಾಗಿದೆ. ವರುಷದಲ್ಲಿ ಒಂದೆರಡು ಬಾರಿ ಯೋಗ ಮಾಡಿದರೆ ಸಾಲದು. ದಿನಂಪ್ರತಿ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಒಬ್ಬ ವ್ಯಕ್ತಿಯ ದೈಹಿಕ, ಮಾನಸಿಕ ಹಾಗೂ ಪರಿಪೂರ್ಣ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಿಸುವಲ್ಲಿ ಸಂದೇಹವೇ ಇಲ್ಲ ಎಂದು ಖ್ಯಾತ ಯೋಗಗುರು ಶ್ರೀ ಗೋಪಾಲಕೃಷ್ಣ ದೇಲಂಪಾಡಿ ಅಭಿಪ್ರಾಯಪಟ್ಟರು.


ದಿನಾಂಕ 09-06-2022ನೇ ಗುರುವಾರದಂದು ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸದಸ್ಯರಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಪೂರಕವಾಗಿ ಉಚಿತ ಯೋಗ ತರಬೇತಿ ಹಾಗೂ ಪೂರ್ವಭಾವಿ ಸಿದ್ಧತಾ ಶಿಬಿರವನ್ನು ಅವರು ಉದ್ಘಾಟಿಸಿ ಮಾತನಾಡಿದರು.


ದಕ್ಷಿಣ ಕನ್ನಡ ಗೃಹರಕ್ಷಕದಳದ ಸಮಾದೇಷ್ಟ ಹಾಗೂ ಪೌರರಕ್ಷಣಾ ತಂಡದ ಮುಖ್ಯಪಾಲಕ ಡಾ|| ಮುರಲೀ ಮೋಹನ್ ಚೂಂತಾರು ಅವರು ಮಾತನಾಡಿ, ದಿನವಿಡೀ ನಿಂತುಕೊಂಡು ಒತ್ತಡದಲ್ಲಿಯೇ ಕೆಲಸ ಮಾಡುವ ಗೃಹರಕ್ಷಕರಿಗೆ ಯೋಗ ತರಬೇತಿ ಅತೀ ಅಗತ್ಯ. ಈ ನಿಟ್ಟಿನಲ್ಲಿ ಕಳೆದ 8 ವರುಷಗಳಿಂದ ನಿರಂತರವಾಗಿ ಯೋಗ ತರಬೇತಿ, ಯೋಗ ಶಿಬಿರ ಮತ್ತು ಯೋಗ ತರಗತಿಗಳನ್ನು ಗೃಹರಕ್ಷಕರಿಗೆ ನಡೆಸಲಾಗುತ್ತಿದೆ. ಎಲ್ಲಾ ಗೃಹರಕ್ಷಕರು ದಿನ ನಿತ್ಯ ಯೋಗ ಮಾಡುವಂತಹ ವಾತಾವರಣ ನಿರ್ಮಾಣವದಲ್ಲಿ ಅವರ ಆರೋಗ್ಯದ ಜೊತೆಗೆ ಸಮಾಜದ ಆರೋಗ್ಯವು ವೃದ್ಧಿಸಲಿದೆ ಎಂದು ಅವರು ನುಡಿದರು.


ಯೋಗ ಶಿಕ್ಷಕಿ ಸುಮಾ ಅವರು ಈ ತರಬೇತಿ ಶಿಬಿರದಲ್ಲಿ ಮಹಿಳೆಯರಿಗೆ ಮಾರ್ಗದರ್ಶನ ನೀಡಿದರು. ಮಂಗಳೂರು ಘಟಕದ ಘಟಕಾಧಿಕಾರಿ ಶ್ರೀ ಮಾರ್ಕ್ ಶೇರಾ ಹಾಗೂ ಸುಮಾರು 100 ಹಿರಿಯ ಹಾಗೂ ಕಿರಿಯ ಗೃಹರಕ್ಷಕರು ಈ ತರಬೇತಿ ಪೂರ್ವಸಿದ್ಧತಾ ಶಿಬಿರದಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಈ ಶಿಬಿರ 6 ದಿನಗಳ ಕಾಲ ಆನ್ ಲೈನ್ ಹಾಗೂ ಉಳಿದ 6 ದಿನಗಳ ಕಾಲ ಆಫ್ ಲೈನ್ ವಿಧಾನದಲ್ಲಿ ಪ್ರಾಯೋಗಿಕ ತರಗತಿ ನಡೆಯಲಿದೆ.


ಜೂನ್ 21 ರಂದು ನಡೆಯುವ 8ನೇ ವಿಶ್ವ ಯೋಗ ದಿನಾಚರಣೆಯ ತರಬೇತಿ ಪಡೆದ ಎಲ್ಲಾ ಗೃಹರಕ್ಷಕರು ಜಿಲ್ಲಾಡಳಿತದಿಂದ ನಡೆಯುವ ಯೋಗ ದಿನಾಚರಣೆಯಲ್ಲಿ ಭಾಗವಹಿಸಲಿದ್ದಾರೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top