ರಮೇಶ ಕುಲಶೇಖರ ಅವರಿಗೆ ವಾಗೀಶ್ವರೀ ಸಂಮಾನ

Upayuktha
0

ಮಂಗಳೂರು: ಖ್ಯಾತ ಯಕ್ಷಗಾನ ಸ್ತ್ರೀ ವೇಷಧಾರಿ, ಸಂಘಟಕ ರಮೇಶ ಕುಲಶೇಖರ ಅವರಿಗೆ ವಾಗೀಶ್ವರೀ ಶತಮಾನೋತ್ಸವ ಸಂಮಾನ ಮಂಗಳೂರಿನ ಕುಡ್ತೇರಿ ಮಹಾಮಾಯಾ ದೇವಸ್ಥಾನದಲ್ಲಿ ನಡೆಯಿತು.


ಕಳೆದ ಮೂರೂವರೆ ದಶಕಗಳಿಂದ ತೆಂಕುತಿಟ್ಟಿನ ಮಧೂರು, ತಳಕಲ, ಕಾಂತಾವರ, ಬಪ್ಪನಾಡು, ಸಸಿಹಿತ್ಲು, ದೇಂತಡ್ಕ, ಸುಂಕದಕಟ್ಟೆ ಮೇಳಗಳಲ್ಲಿ ಸ್ತ್ರೀ ವೇಷಧಾರಿಯಾಗಿ ತುಳು ಕನ್ನಡ ಪ್ರಸಂಗಗಳಲ್ಲಿ ಮೆರೆದಿರುವ, ಮೇಳದ ಪ್ರಬಂಧಕ, ಚಿಕ್ಕ ಮೇಳದ ಸಂಚಾಲಕ  ರಮೇಶ್ ಅವರ ಕಲಾಸಾಧನೆಯನ್ನು ನೆನಪಿಸಿ ಕದ್ರಿ ನವನೀತ ಶೆಟ್ಟಿ ಅವರು ಅಭಿನಂದಿಸಿದರು. 


ಬಾಲಕೃಷ್ಣ ಶೆಟ್ಟಿ ಕದ್ರಿ ಕಂಬಳ ಸಂಸ್ಮರಣೆ:

ಮಂಗಳೂರಿನ ಕದ್ರಿ, ಶರವು, ಉರ್ವ ಮಾರಿಗುಡಿ, ಉರ್ವಾಸ್ಟೋರ್, ಹಾಗೂ ವಾಗೀಶ್ವರೀ ಸಂಘಗಳಲ್ಲಿ ಕಲಾಸೇವೆಗೈದಿದ್ದ  ಹಿರಿಯ ತಾಳಮದ್ದಳೆ ಅರ್ಥಧಾರಿ, ಕದ್ರಿ  ಕಂಬಳ ಸಂಚಾಲಕ ಕೀರ್ತಿಶೇಷ ಕದ್ರಿ ಕಂಬಳಗುತ್ತು ಬಾಲಕೃಷ್ಣ ಶೆಟ್ಟಿ ಅವರ  ಸಂಸ್ಮರಣೆಯನ್ನು ಸಂಘದ ಪ್ರಧಾನ ಕಾರ್ಯದರ್ಶಿ ಸಂಜಯ ಕುಮಾರ್ ರಾವ್ ರವರು ಮಾಡಿದರು.

ಭಾಗವತ ಅಶೋಕ ಬೋಳೂರು ರವರು ಸಂಮಾನ ಪತ್ರ ವಾಚಿಸಿದರು. 

ಶ್ರೀ ವಾಗೀಶ್ವರೀ ಕಲಾವರ್ಧಕ ಸಂಘದ 15 ನೆಯ ಸರಣಿಯ ಸನ್ಮಾನಕ್ಕೆ ಉತ್ತರಿಸಿದ ರಮೇಶ "ಇಂದು  ನಾನು ಈ ಮಟ್ಟದ ಕಲಾವಿದ ನಾಗಿ ಬೆಳೆಯಲು ಕಾರಣರಾದ ಗುರು ಮೋಹನ ಬಂಗೇರ, ಮುಂಡಪ್ಪ ಕೊಮ್ಮುಂಜೆ, ವೀರಪ್ಪ ಕಾನಡ್ಕ, ಜಪ್ಪು ದಯಾನಂದ ಶೆಟ್ಟಿ ಮೊದಲಾದವರನ್ನು ಸ್ಮರಿಸಿ, ವಾಗೀಶ್ವರೀ ಸಂಘದ ಕಲಾವಿದರೊಂದಿಗಿನ ತನ್ನ ಸಾಹಚರ್ಯವನ್ನು ನೆನಪಿಸಿಕೊಂಡರು.


ಸುರಭಿ ಸೌಂಡ್ಸ್ ನ ದಾಮೋದರ ಬಾಳಿಗ ಅವರು ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯಾಧ್ಯಕ್ಷ ನಾಗೇಶ ಪ್ರಭು, ಸಂಘದ ಅಧ್ಯಕ್ಷ ಶ್ರೀನಾಥ್ ಪ್ರಭು, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಸಿ.ಎಸ್. ಭಂಡಾರಿ, ಉಪಾಧ್ಯಕ್ಷೆ ಪ್ರಪುಲ್ಲಾ ನಾಯಕ್, ಮೋಹನ್ ಬಂಗೇರ ಉಪಸ್ಥಿತರಿದ್ದರು.


ಶಿವಪ್ರಸಾದ್ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಂಘದ ಕಲಾವಿದರಿಂದ ಶ್ರೀರಾಮ ಚರಿತಾಮೃತ ಸರಣಿಯ "ಚೂಡಾಮಣಿ" ತಾಳಮದ್ದಳೆ ಜರಗಿತು. ಆರು ಭಾಷೆಗಳ ಯಕ್ಷಗಾನ ಭಾಗವತ ಖ್ಯಾತಿಯ ಸತೀಶ್ ಶೆಟ್ಟಿ ಬೋಂದೆಲ್ ಅತಿಥಿ ಕಲಾವಿದರಾಗಿ ಪಾಲ್ಗೋಂಡಿದ್ದರು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top