
ಷಣ್ಮುಗನ ಕಾಲೇಜು ದಿನಗಳು ಚೆನ್ನಾಗಿಯೇ ನಡೆಯುತ್ತಿದೆ, ಸ್ಪೋರ್ಟ್ಸ್ ನಲ್ಲೂ ಮುಂದಿರುವುದಿರುವುದರಿಂದ ಅವನಿಗೆ ದಿನಗಳೆಯುವುದು ಕಷ್ಟವಾಗುವುದಿಲ್ಲ. ಅಲ್ಲದೆ ಅವನು ಕಂಪೂಟರ್ ಸೈನ್ಸ್ ತೆಗೆದು ಕೊಂಡಿರುವುದರಿಂದ ಅದರ ಮನೆಗೆಲಸಗಳೇ ಆತನಿಗೆ ಸಾಕಷ್ಟು ಇರುತ್ತಿತ್ತು. ತಾನೇ ಒಂದು ಲಾಪ್ ಟೋಪ್ ಖರೀದಿಸಿದ್ದ, ಒಳ್ಳೆಯ ಎಂಡ್ರೊಯ್ಡ್ ಫೋನ್ ಇದೆ. ಆದರೆ ತಾಯಿಗಾಗಲಿ ತಂದೆಗಾಗಲಿ ಆತನ ಕಲಿಕೆಯ ಮಟ್ಟ ಅಥವಾ ಅದರ ಹರವು ಇರಲಿಲ್ಲ, ಅದು ಅವರಿಗೆ ಅರ್ಥವಾಗುವ ಮಾತೂ ಅಲ್ಲ. ಅಂತೂ ನಮ್ಮ ಮಗ ನಾವು ಮಾಡದುದನ್ನು ಮಾಡುತ್ತಾನೆ ಎಂಬ ಅಭಿಮಾನ, ಹಾಗೆಂದು ಅವನಿಗೆ ಆ ಮನೆಯಲ್ಲಿ ಒಳ್ಳೆಯ ಬೆಲೆಯಿದೆ. ಆತನ ಬೇಕು ಬೇಡಗಳಿಗೆ ಆ ಮನೆಯಲ್ಲಿ ಅಗ್ರ ಪ್ರಾಶಸ್ತ್ಯವಿದೆ. ಷಣ್ಮುಗನ ಕೊನೆಯ ಕಾಲೇಜು ವರ್ಷ ಕ್ಯಾಂಪಸ್ ಸೆಲೆಕ್ಷನ್ ಇತ್ತು. ಕೆಲಸ ಗಿಟ್ಟಿಸಿಕೊಂಡವರಲ್ಲಿ ಅವನೂ ಒಬ್ಬ. ಅಂತರ್ ರಾಷ್ಟ್ರೀಯ ಸೋಫ್ಟ ವೇರ್ ಕಂಪನಿ, ಸಂಬಳ ಮೊದಲಿಗೆ ಮೂವತ್ತೈದು ಸಾವಿರ, ಒಂದು ತಿಂಗಳು ಟ್ರೈನಿಂಗ್ ಮತ್ತೆ ಒಂದು ಟೀಮಿನಲ್ಲಿ ಕೆಲಸ ಮಾಡಬೇಕಾಗುತ್ತದೆ. ಮುಂದಿನ ಪ್ರೊಮೋಶನ್ ವರ್ಷದ ನಂತರ, ಆ ಪೊಸ್ಟ್ ಟೀಮ್ ಲೀಡರ್, ಹಾಗೆ ಮುಂದುವರಿದರೆ ಪ್ರೊಜೆಕ್ಟ್ ಮ್ಯಾನೇಜರ್, ಈ ಹುದ್ದೆಯಲ್ಲಿ ಒಂದು ವರ್ಷ ಕೆಲಸ ಮಾಡಿದರೆ ಮುಂದೆ ಅಮೇರಿಕಕ್ಕೆ ಹೋಗುವ ಅವಕಾಶವಿದೆ. ತನ್ನ ಕೆಲಸ ಮತ್ತು ಅದರ ಬಾಹುಳ್ಯದ ಬಗ್ಗೆ ಕಣ್ಣ ತನ್ನ ತಂದೆ ತಾಯಿಯವರಿಗೆ ವಿವರಿಸಿ ಹೇಳಿದರೂ ಅವರಿಗೆ ಅರ್ಥವಾಗಲಿಲ್ಲ. ಸರಿ ತನಗೆ ದೊಡ್ಡ ಕೆಲಸ ಸಿಕ್ಕಿದೆ ಮೂವತ್ತೈದು ಸಾವಿರ ತಿಂಗಳಿಗೆ ಸಂಬಳ ಎಂದು ಮಾತ್ರ ಹೇಳಿದ. ಅಲ್ಲದೆ ತನಗೆ ಕೆಲಸಕ್ಕೆ ಮತ್ತು ಸಮಯಕ್ಕೆ ಸರಿಯಾಗಿ ಹಾಜರಾಗಲು ಒಂದು ಒಳ್ಳೆಯ ದ್ವಿಚಕ್ರ ವಾಹನ ಬೇಕೆಂದು ಕೇಳಿದಾಗ ತಂದೆ ಇಪ್ಪತ್ತು ಸಾವಿರ ಮತ್ತು ತಾಯಿ ಹತ್ತು ಸಾವಿರವನ್ನು ಕೊಟ್ಟರು, ಆ ಹಣದಿಂದ ಅವನು ಬೇಂಕೊಂದರಿಂದ ಡೌನ್ ಪೇಮೆಂಟ್ ಸೌಲಭ್ಯದಿಂದಎಪ್ಪತ್ತೈದು ಸಾವಿರದ ಗಾಡಿಯೊಂದನ್ನು ಕೊಂಡುಕೊಂಡ.
ಷಣ್ಮುಗನ ಕಾಲೇಜು ಮುಗಿಯಿತು. ಕ್ಯಾಂಪಸ್ ಸೆಲೆಕ್ಷನ್ನ ಕಂಪೆನಿಯ ಆಫೀಸು ಇರುವುದು ವೈಟ್ ಫೀಲ್ಡ್ ನಲ್ಲಿ, ಅಲ್ಲದೆ ಶಿಫ್ಟ್ ಕೆಲಸ. ಕೆಲವೊಮ್ಮೆ ಎರಡು ಗಂಟೆಗೆ ಮನೆ ಬಿಟ್ಟರೆ ಮತ್ತೆ ಅವನು ಬರುವುದು ಮಧ್ಯರಾತ್ರಿ ಎರಡು ಗಂಟೆಗೆ, ಅಥವಾ ರಾತ್ರಿಯ ಪಾಳಿಯಾದರೆ ರಾತ್ರಿ ಒಂಭತ್ತು ಗಂಟೆಗೆ ಕೆಲಸಕ್ಕೆ ಹೋದರೆ ಬೆಳಿಗ್ಗೆ ಐದು ಗಂಟೆಗೆಲ್ಲ ಮನೆಗೆ ಬರುತ್ತಿದ್ದ. ಮತ್ತೆ ನಿದ್ರೆ ತಿಂಡಿ ಊಟ, ಸಿಕ್ಕಿದಾಗ ಇದೆ ಇಲ್ಲವೆಂದರೆ ತಾನೇ ಹೊರಗೆ ಹೋಗಿ ಊಟ ಮಾಡಿಬರುತ್ತಿದ್ದ.. ಸಾಮಾನ್ಯ ಶಿಫ್ಟ್ ಅಂದರೆ ಬೆಳಿಗ್ಗೆ ಒಂಭತ್ತು ಗಂಟೆಗೆ ಹೋದರೆ ಸಮ್ಮನೆ ಆರುಗಂಟೆಗೆಲ್ಲ ಮನೆಗೆ ಬರುತ್ತಿದ್ದ. ಈ ಶಿಫ್ಟ್ಗಳ ವ್ಯವಸ್ಥೆ ಅವನ ಕೈಯಲ್ಲಿ ಇಲ್ಲದಿರುವುದರಿಂದ ತಾನು ಮನೆಗೆ ಬಂದು ಹೋಗುವ ರಾತ್ರಿ ಹಗಲೆನ್ನದ ತನ್ನ ಶಿಫ್ಟ್ ಗೆ ಹೊಂದಿಕೊಳ್ಳಲು ಆತನು ಮನೆಯನ್ನು ಉತ್ತಮ ಸೌಲಭ್ಯಗಳಿರುವ ಒಂದು ಅಪಾರ್ಟ್ಮೆಂಟ್ ಗೆ ಬದಲಿಸಿದ.
ಬಾಡಿಗೆ ಹನ್ನೊಂದು ಸಾವಿರ. ಆದರೆ ಮನೆ ಶ್ರೀಮಂತರ ದಂತಹುದು. ತಮ್ಮ ಜೀವನದಲ್ಲಾದ ಈ ಬದಲಾವಣೆಗಳನ್ನು ಗಮನಿಸಲು ಕಣ್ಣ ಮತ್ತು ಮಾಲತಿಯವರಿಗೆ ಬಹಳ ಸಂತಸವಾಗುತ್ತಿತ್ತು. ಮಾಲತಿ ಇತ್ತೀಚೆಗಿನ ವರೆಗೂ ಇದೇ ತರದ ಮನೆಗಳವರ ಮನೆ ಕೆಲಸಗಳಿಗೆ ಹೋಗುತ್ತಿದ್ದಳು. ಈಗ ಅವಳು ಕೆಲಸಕ್ಕೆ ಹೋಗಬಾರದೆಂದು ಷಣ್ಮುಗನ ವಿನಂತಿ, ಅದನ್ನು ಸಂತೋಷದಿಂದಲೇ ಒಪ್ಪಿದ್ದಳು, ಯಾಕೆಂದರೆ ಜೀವನ ಕ್ರಮಕ್ಕೆ ಈಗ ಯಾವುದೇ ಕೊರತೆಯಿರಲಿಲ್ಲ. ಕಣ್ಣ ಈಗಲೂ ಮೇಸ್ತ್ರಿಯೆ, ಕೆಲಸ ಮಾಡುತ್ತಾನೆ. ತಿಂಗಳಿಗೆ ಕಡಿಮೆ ಎಂದರೂ ಹತ್ತು ಹದಿನೈದು ಸಾವಿರ ದುಡಿಯುತ್ತಾನೆ. ಮಗನಿಗೆ ಸಾಧಾರಣ ಇಪ್ಪತೇಳು ಅಥವಾ ಇಪ್ಪತ್ತೆಂಟು ಸಾವಿರ ಕೈಗೆ ಸಿಗುತ್ತದೆ. ಉಳಿದ ಹಣ ಇನ್ಸುರೆನ್ಚೆ, ಆ ಯೋಜನೆ ಈ ಯೋಜನೆ ಎಂದು ಕಟ್ ಆಗುತ್ತಿತ್ತು. ಹನ್ನೊಂದು ಸಾವಿರ ಬಾಡಿಗೆ ಮತ್ತೆ ಎರಡುಸಾವಿರ ಮೈನ್ಟ್ನೆನ್ಸ್ ಮತ್ತು ಸೆಕೂರಿಟಿ ವೆಚ್ಚಗಳು, ಇದು ಷಣ್ಮುಗನ ಲೆಕ್ಕ, ಮತ್ತೆ ನೀರಿನ ಬಿಲ್ಲು, ಕರೆಂಟ್ ಬಿಲ್ಲ್ ಮನೆ ಖರ್ಚಿನ ವಾರ್ತ ಇವೆಲ್ಲವೂ ಕಣ್ಣನ ಲೆಕ್ಕ, ಅಂತೂ ಅವರು ಸುಖ ಸಂಸಾರಕ್ಕೆ ಬೇಕಾದ ಹೊಂದಾಣಿಕೆಯನ್ನು ಮಾಡಿಕೊಂಡಿದ್ದರು.
(ಶಂಕರ ಭಟ್)
ಇನ್ನೂ ಇದೆ-
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ