|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಿರು ಕಾದಂಬರಿ: ದೊಂಬಿ ಭಾಗ -4

ಕಿರು ಕಾದಂಬರಿ: ದೊಂಬಿ ಭಾಗ -4



ಕೊಟ್ರಬಸಪ್ಪ ಹೆಂಡತಿ ಕಮ್ಲಿ ಮತ್ತು ಮಕ್ಕಳೊಡನೆ ಬೆಂಗಳೂರಿಗೆ ಬಂದ ದಿನ ಹಾಕಿದ ಟೆಂಟ್ ನಲ್ಲಿ ತಂಗಿದ್ದರು.  ಬಹಿರ್ದೆಶೆಗೆ ಬೇಗನೆ ಎದ್ದರಾಯಿತು, ಎಲ್ಲ ಕೊಳೆಗೇರಿಯ ಆರಂಭಿಕ ಪಾಠವದು, ಎಲ್ಲ ಸಂದರ್ಭಕ್ಕೂ ತಯಾರಿರಬೇಕು. ಮರುದಿನ ಅಕ್ಕ ಪಕ್ಕದ ಬಿಡಾರ ಮತ್ತು ಅಂಗಡಿಗಳವರ ಜೊತೆ ಮಾತನಾಡಿದ ಪರಿಣಾಮ ಗೊತ್ತಾಗಿ ಬಂದುದು ಸಾಧಾರಣ  ಇಪ್ಪತ್ತು ನಿಮಿಷಗಳ ನಡಿಗೆಯ ಅಂತರದಲ್ಲಿ ದೊಡ್ಡ ಕಟ್ಟಡವೊಂದು ನಡೆಯುತ್ತಿದೆ. ಸರಿ ಅಲ್ಲಿಗೆ ಹೋಗಿ ವಿಚಾರಿಸಬೇಕೆಂದು ಕೊಂಡ. ಕಮ್ಲಿ ಬೇಗ ಎದ್ದು, ಅಡಿಗೆ ಮಾಡಿ ಉಪಾಹಾರ ಮುಗಿಸಿ ಮಧ್ಯಾಹ್ನದ ಊಟವನ್ನು ಕಟ್ಟಿ ಕೆಲಸವನ್ನು ಹುಡುಕಿಕೊಂಡು ಹೊರಟರು.  ಪಕ್ಕದವರು ತೋರಿದ ಜಾಗಕ್ಕೆ ಸಾಧಾರಣ ಅರ್ಧ ಗಂಟೆಯ ನಡಿಗೆಯ ಬಳಿಕ ಕಂಡುಬಂದುದು  ಒಂದು ದೊಡ್ಡ ಕಟ್ಟದ ತಯಾರಿ, ಸಾಧಾರಣ ಹತ್ತು ಹದಿನೈದು ಮಾಳಿಗೆಯ ಕಟ್ಟಡ, ನೂರಾರು ಜನ ಕೆಲಸ ಮಾಡುತ್ತಿದಾರೆ.  ಕೊಟ್ರಬಸಪ್ಪ ತನ್ನ ಸಂಸಾರದೊಡನೆ ಎದುರಿಗೆ ಸಿಕ್ಕ ಕೂಲಿಯವನ ಬಳಿ ಕೇಳಿದ, ಇಲ್ಲಿ ಕೆಲಸ ಸಿಗಬಹುದೇ ಎಂದು. ಅವನು ದೂರದಲ್ಲಿ ನಿಂತ, ತಲೆಗೆ ಟೊಪ್ಪಿ ಹಾಕಿದ ಒಬ್ಬ ಮಧ್ಯಮ ವಯಸ್ಸಿನ ಕಪ್ಪಗಿನ ವ್ಯಕ್ತಿಯನ್ನು ದೂರದಿಂದಲೇ ತೋರಿದ. 

ಸರಿ ಎಂದು ಹೆಂಡತಿ ಮಕ್ಕಳನ್ನು ಅಲ್ಲೇ ನಿಲ್ಲಿಸಿ ಮೆಸ್ತ್ರಿಯನ್ನು ಮಾತನಾಡಿಸಲೆಂದು ಕೈ ಮುಗಿದು ನಿಂತ. ”ಸರೇ..ಇಲ್ಲಿ ಕೂಲಿಗ್ ಆಳ್ಬೇಕೇನ್ರೀ.”..ಎಂದ, ಮೇಸ್ತ್ರಿ ನೋಡಿದ ಒಳ್ಳೆ ಕಟ್ಟುಮಸ್ತಾದ ಆಳು, ಅಲ್ಲದೆ ಕನ್ನಡದವನು ”ಎಷ್ಟು ಜನ?” ವಿಚಾರಿಸಿದ ಮೇಸ್ತ್ರಿ, ”ನಾನು ಮತ್ತ ನನ್ನ ಹೆಂಡ್ರು” ಎಂದ. ಮೇಸ್ತ್ರಿಗೆ ಜನರ ಅಗತ್ಯವಿತ್ತು. ತಮಿಳು ನಾಡಿನ ಕೆಲವು ಕೂಲಿಗಳು ಊರಿಗೆ ಹೋಗಿದ್ದರು. ಅವರು ಒಂದು ಬಾರಿ ಊರಿಗೆ ಹೋದರೆ ಸಾಧಾರಣ ಒಂದು ತಿಂಗಳ ತನಕ ಬರುವುದಿಲ್ಲ. ಅಲ್ಲದೆ ಇಂಜಿನಿಯರ್ ಕೆಳಗಿನ ನಾಲ್ಕು ಮಾಳಿಗೆಗಳನ್ನು ಬೇಗನೆ ಮುಗಿಸುವಂತೆ ತಾಕೀತು ಮಾಡಿದ್ದ ಬೇರೆ. ”ಸರಿ ನಾಳಿಕ್ ಬನ್ನಿ” ಎಂದು ಆಜ್ಞೆ ಮಾಡಿದ್ದ. ಮತ್ತು ಹೆಚ್ಚಾಗಿ ಇನ್ನೂ ಐದಾರು ಮಂದಿ ಇದ್ದರೆ ಕರೆ ತನ್ರೀ ಎಂದು ತನ್ನ ಅಗತ್ಯವನ್ನು ತಿಳಿಸಿದ ಮೇಸ್ತ್ರಿ ಕೊಟ್ರ ಕೆಲಸ ಸಿಕ್ಕಿದ ಸಂತಸದಲ್ಲಿ ತನ್ನ ವಾಸ್ತವ್ಯವಿದ್ದ ರೈಲ್ವೆ ಹಳಿಯ ಬಳಿಯ ತನ್ನ ವಸತಿಯೆಡೆ ಬಂದು ತನ್ನೊಡನೆ ಬಂದ ಇತರ ಜನರನ್ನು ಹುಡುಕ ಹೊರಟರೆ, ಅವರು ಅದಾಗಲೇ ಯಾರೋ ಏಜೆಂಟ್ ಜೊತೆ ಬೇರೆಕಡೆ ಕೆಲಸಕ್ಕೆ ಹೋಗಿಯಾಗಿತ್ತು.


ಕಮ್ಲಿಗೆ ಬಹಳ ಆನಂದವಾಗಿತ್ತು. ಇಬ್ಬರಿಗೂ ಕೆಲಸ- ನನಗೆ ಇನ್ನೂರೈವತ್ತು, ತನ್ನ ಗಂಡಗೆ ಮುನ್ನೂರೈವತ್ತ  ಇನ್ನೇನು ಬೇಕು? ದೇವರು ಕೊನೆಗೂ ಕಣ್ಣು  ಬಿಟ್ಟ ಎಂದು ಕೊಂಡಳು ಅವಳು. ಆ ದಿನ ಮಧ್ಯಾಹ್ನದ ಅಡಿಗೆ ಬೆಳಗ್ಗೆ ಬೇಗ ಮಾಡಿದ್ದರಿಂದ ಅದನ್ನೇ ಮಧ್ಯಾಹ್ನಕ್ಕೆ ಒಂದು ಪಾಕೆಟ್ ಮೊಸರು ಮತ್ತು ಉಪ್ಪಿನಕಾಯಿ ಪಾಕೆಟ್ ನಲ್ಲಿ ಊಟ ಮುಗಿಯಿತು. ರಾತ್ರಿಗೆ ಅನ್ನ ಮಾಡಿ, ಟೊಮೆಟೊ ಹಾಕಿ ಬೇಳೆ ಸಾರಿನ ಜೊತೆಗೆಒಣಗಿದ ಮೀನನ್ನು ಸುಟ್ಟಿದ್ದೂ  ಆಯಿತು, ಬೆಂಗಳೂರಿನಲ್ಲಿ ಅಡಿಗೆ ಬಹಳ ಸುಲಭವೆಂದೆನಿಸಿತ್ತು ಅವಳಿಗೆ. ಗಂಜಿ ಇಲ್ಲವೆ ಗೋಧಿದೋ ಜೋಳದ್ದೋ ರೊಟ್ಟಿ ಮಾಡುವುದೂ ಸುಲಭ. ಅಂಗಡಿಗಳಲ್ಲಿ ಜೋಳ ಮತ್ತು ಗೋಧಿ ಸಿಗುತ್ತದೆ ಅದನ್ನು ಸ್ವಚ್ಚ ಮಾಡಿ ಬೀಸುವ ಅಂಗಡಿಗೆ ಹೋದರೆ ಅಲ್ಲಿ ಕ್ಷಣದಲಿ ಅದು ಪುಡಿಯಾಗಿ ಸಿಗುತ್ತದೆ, ಅದನ್ನು ರೊಟ್ಟಿ ತಟ್ಟುವುದು ಬಹಳ ಸುಲಭ, ಸಾರಿಗೆ-- ತರಕಾರಿ ಕೊಚ್ಚಿ ಬೇಯಿಸಿ ಸಾಂಬಾರ ಪುಡಿ ಸೇರಿಸಿ ಉಪ್ಪು ಖಾರಗಳ ಸಮತೂಕದಲ್ಲಿ ಒಂದು ಒಗ್ಗರಣೆ ಕೊಟ್ಟರೆ ವಾಹ್ ಅದೆಂತಹ ಪೊಗದಸ್ತಾದ ಊಟ!  ಒಣಗಿದ ಮೀನು, ಮೊಸರು, ತರತರದ ಉಪ್ಪಿನ ಕಾಯಿ, ಮತ್ತೆ ಬೇಕಿದ್ದರೆ ಕೋಳಿ ಮೊಟ್ಟೆ, ಮತ್ತೆ ವಾರಕ್ಕೊಮ್ಮೆ, ಕೋಳಿ ಸಾರು.. ಹೀಗೆ ಸಾಗುತ್ತಿತ್ತು ಕೊಟ್ರಬಸಪ್ಪನ ಬೆಂಗಳೂರಿನ ವಾಸ.


ವರ್ಷಗಳು ಕಳೆದವು ಕೊಟ್ರಬಸಪ್ಪ, ಕಮ್ಲಿ ಮತ್ತೆ ಅವರ ಇಬ್ಬರು ಮಕ್ಕಳು ಮಾಲತಿ ಮತ್ತು ಬಸವ ಬೆಂಗಳೂರಿನ ಹವೆ ಮತ್ತು ಜೀವನ ಶೈಲಿಗೆ ಬಹಳವಾಗಿ ಒಗ್ಗಿಕೊಂಡಿದ್ದರು. ಅಲ್ಲದೆ ಕೊಟ್ರಬಸಪ್ಪ ಒಳ್ಳೆಯ ನಿಯತಿನ ಮನುಷ್ಯ, ಮೇಸ್ತ್ರಿ ಅಥಾವ ಎಂಜಿನಿಯರ್ ಹೇಳಿದ ಯಾವುದೇ ಕೆಲಸವನ್ನದರೂ ನಿಯತ್ತಿನಿಂದ ಮಾಡುವನು. ಕಮಲಿಗೆ ಗಾರೆಯವರಿಗೆ ಕಲೆಸಿದ ಸಿಮೆಂಟ್ ನ್ನು ತೆಗೆದು ಕೊಡುವ ಕೆಲಸ. ಅಪ್ಪ ಮತ್ತು ಅಮ್ಮ ಅಲ್ಲಿ ಕೆಲಸ ಮಾಡುತ್ತಿದ್ದರೆ ಮಕ್ಕಳು ಅದೇ ರೀತಿಯ ಇತರ ಮಕ್ಕಳ ಜೊತೆ ಸೇರಿಕೊಂಡು ಆಟ ವಾಡುತ್ತಿರುವರು. ಮೇಸ್ತ್ರಿಯ ನಂಬುಗೆಯ ಕೆಲಸದವನಾದ ಕೊಟ್ರ ಬಸ್ಯನಿಗೆ ಅದೇ ಕಟ್ಟಡದ ಕೆಳಗಿನ ಕಾರು ಪಾರ್ಕ್ ನ ಒಂದು ಮೂಲೆಯಲ್ಲಿರುವ ಕೋಣೆಯನ್ನು ವಾಸಕ್ಕಾಗಿ ವ್ಯವಸ್ಥೆ ಮಾಡಿದ್ದರು. ಆದರೆ ಅಲ್ಲಿ ಕಟ್ಟಿಗೆಯಿಂದ ಆಡಿಗೆ ಮಾಡುವಂತಿಲ್ಲ. ಅಂಗಡಿಯಿಂದ ಸೀಮೆ ಎಣ್ಣೆ ತಂದು ಸ್ಟೊವ್ ನಿಂದ ಅಡಿಗೆ ಮಾಡಬೇಕಾಗಿತ್ತು. ಅಂತೂ ಜೀವನ ಕ್ರಮದಲ್ಲಿ ಒಂದು ಹಂತ ಮೇಲೆಯೇ ಏರಿದ್ದರು. ರೈಲು ಹಳಿಗಳ ಬದಿಯ ತರ್ಪಾಲಿನ ವಾಸ ಕುಟೀರವೆತ್ತ ಕಡೆ, ಹದಿನೈದು ಅಂತಸ್ತಿನ ಕಾರು ಪಾರ್ಕ್ ನ ಮೂಲೆಯ ಒಂದು ಕೋಣೆಯಲ್ಲಿ ಮಲಗುವ ಉಣ್ಣುವ ವ್ಯವಸ್ಥೆ ಈ ಹಂತವೆತ್ತ ಕಡೆ. ನಿಜವಾಗಿಯೂ ನಾವು ಭಾಗ್ಯವಂತರೆಂದು ಕೊಂಡರು ಕೊಟ್ರ ಬಸಪ್ಪ ಮತ್ತು ಕಮ್ಲಿ.  


ವರ್ಷಗಳು ಉರುಳಿದವು, ಕೊಟ್ರ ಮಾಡುತ್ತಿದ್ದ ಆ ಹದಿನೈದು ಮಾಳಿಗೆಯ ಕೆಲಸ ಮುಗಿದಿದೆ. ಈಗ ಅವರು ರಾಜಾಜಿ ನಗರ ಪಕ್ಕದ ಸೇರ್ಪಡೆಯಾದ ಕಡೆ ನಡೆಯುವ ಬೆಂಗಳೂರು ಡೆವೆಲೊಪ್ ಮೆಂಟ್ ಅಥೋರಿಟಿಯವರ ನಾಲ್ಕು ಮಾಳಿಗೆಯ ಹತ್ತಿಪ್ಪ್ಪತ್ತು ಕಟ್ಟಡಗಳು ಆಗಬೇಕಾಗಿದೆ. ಇದು ಸಾಧಾರಣ ಎರಡುವರ್ಷಗಳ ಪರ್ಯಂತ ನಡೆಯುವ ಕಾಮಗಾರಿ  ಅದೇ ಮೇಸ್ತ್ರಿ, ಆದರೆ ಎಂಜಿನಿಯರ್ ಗಳು ಬೇರೆ. ಕಳೆದ ಏಳೆಂಟು ವರ್ಷಗಳ ಬೆಂಗಳೂರು ವಾಸ್ತವ್ಯದಲ್ಲಿ ಕೊಟ್ರ ಸಂಸಾರ ಸಮೇತ ಊರಿಗೆ ಹೋಗಿದ್ದು ಎರಡೋ ಮೂರೋ ಬಾರಿ. ಅದೂ ಕುಟುಂಬದ ದೇವರ ಕಾರ್ಯದ ಸಂದರ್ಭದಲ್ಲಿ. ಅಲ್ಲದೆ ಅವನಿಗೆ ಅಲ್ಲಿ ಹೇಳಿಕೊಳ್ಳುವಂತ ಸಂಬಂದಿಕರು ಯಾರೂ ಇಲ್ಲ. ಆದರೆ ಈಗ ಆರ್ಥಿಕವಾಗಿ ಅವರಿಗೆಲ್ಲರಿಗಿಂತಲೂ ಅನುಕೂಲ ಸ್ಥಿತಿಯಲಿರುವುದೆಂದರೆ ಅದು ಕೊಟ್ರನ ಕುಟುಂಬ. ಅವನಿಗೆ ಈಗ ಬೇಂಕ್ ಅಕೌಂಟ್ ಇದೆ, ರೇಷನ್ ಕಾರ್ಡ್ ಇದೆ. ಆಧಾರ ಕಾರ್ಡ್ ಇದೆ, ಎಲ್ಲವೂ ರಾಜಾಜಿನಗರದ ಕೆಳಸ್ಥರದ ಜನ ವಾಸಿಸುವ ಗುಡಿಸಲುಗಳ ವಿಳಾಸ. ಕೊಟ್ರ ಬಸಪ್ಪನದೂ ಒಂದು ಬಾಡಿಗೆ ಮನೆಯಿದೆ. ತಿಂಗಳಿಗೆ ಆರು ನೂರು ರೂಪಾಯಿಯ ಗುಡಿಸಲು. ಗುಡಿಸಲ ಹೊರಗೆ ಸಾಕಷ್ಟು ಖಾಲಿ ಜಾಗವಿರುವುದರಿಂದ ಎಲ್ಲ ಗುಡಿಸಲುಗಳ ಹೊರಗೆ ಒಂದೋ ಎರಡೋ  ಮಲಗುವ ಮಂಚಗಳಿರುತ್ತಿದ್ದವು. ಗಂಡಸರು ಹೊರಗೆ ಮಲಗಿದರೆ ಹೆಂಗಸರು ಒಳಗೆ ಮಲಗುತಿದ್ದರು.

(ಶಂಕರ ಭಟ್)



web counter

0 Comments

Post a Comment

Post a Comment (0)

Previous Post Next Post