||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ‘ಶಿಕ್ಷಣ ರಂಗಕ್ಕೆ ಯಶೋವರ್ಮ ಅವರಿಂದ ಹೊಸ ಮಾದರಿಯ ಕೊಡುಗೆ’

‘ಶಿಕ್ಷಣ ರಂಗಕ್ಕೆ ಯಶೋವರ್ಮ ಅವರಿಂದ ಹೊಸ ಮಾದರಿಯ ಕೊಡುಗೆ’

 ಉಜಿರೆಯಲ್ಲಿ ಡಾ.ಬಿ.ಯಶೋವರ್ಮ ಸ್ಮರಣಾರ್ಥ ಕಾರ್ಯಕ್ರಮಉಜಿರೆ: ಲಭಿಸಿದ ಸಾಂದರ್ಭಿಕ ಅವಕಾಶಗಳ ನೆರವಿನೊಂದಿಗೆ ಶಿಕ್ಷಣ ರಂಗದ ಸಮಾಜಮುಖೀ ಸಾಧ್ಯತೆಗಳನ್ನು ವಿಸ್ತರಿಸಿದ ಪ್ರಯೋಗಗಳ ಮೂಲಕ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ಅವರು ಶೈಕ್ಷಣಿಕ ನಾಯಕತ್ವದ ವಿಭಿನ್ನ ಮಾದರಿ ಸೃಷ್ಟಿಸಿದರು ಎಂದು ಅವರ ಪುತ್ರ ಪೂರನ್ ವರ್ಮಾ ಹೇಳಿದರು.


ಮೇ 23ರಂದು ನಿಧನರಾದ ಡಾ.ಬಿ.ಯಶೋವರ್ಮ ಅವರ ಸದ್ಗತಿ ಮತ್ತು ಆತ್ಮಶಾಂತಿಗಾಗಿ ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ನಡೆದ ವಿಶೇಷ ಅಲಂಕಾರ ಪೂಜೆಯ ನಂತರ ಶ್ರೀ ಕೃಷ್ಣಾನುಗ್ರಹ ಸಭಾಂಗಣದಲ್ಲಿ ಆಯೋಜಿತವಾದ ಸಾರ್ವಜನಿಕ ಸಮಾರಾಧನೆ, ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಪ್ರಾಂಶುಪಾಲರಾಗಿ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುವಾಗ ತಮಗೆ ಲಭಿಸಿದ ವಿವಿಧ ಅವಕಾಶಗಳನ್ನು ತಮ್ಮ ದೂರದೃಷ್ಟಿಯ ಬಲದೊಂದಿಗೆ ಸಮರ್ಥವಾಗಿ ಬಳಸಿಕೊಂಡು ಮುನ್ನಡೆಯ ಹೆಜ್ಜೆಗಳನ್ನಿಟ್ಟರು. ಇಡೀ ಶಿಕ್ಷಣ ಸಂಸ್ಥೆಗೆ ಸಮಾಜಮುಖೀ ಆಯಾಮವನ್ನು ನೀಡುವ ಮೂಲಕ ಹೊಸ ಶೈಕ್ಷಣಿಕ ನಾಯಕತ್ವದ ಮಾದರಿ ರೂಪಿಸಿದ ವ್ಯಕ್ತಿತ್ವ ಡಾ.ಬಿ.ಯಶೋವರ್ಮ ಎಂದರು.


ನಿರಂತರ ಅಧ್ಯಯನಶೀಲತೆಯೊಂದಿಗೆ ಗುರುತಿಸಿಕೊಂಡಿದ್ದ ಅವರು ಓದಿನ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನಗಾಣಿಸುವಲ್ಲಿ ಯಶಸ್ವಿಯಾಗಿದ್ದರು. ಗ್ರಂಥಾಲಯಕ್ಕೆ ವಿದ್ಯಾರ್ಥಿಗಳು ಬಂದು ಹೆಚ್ಚು ಹೊತ್ತು ಓದಬೇಕು ಎಂಬ ಸದಾಶಯದೊಂದಿಗೆ ಇಂತಿಷ್ಟು ಗಂಟೆಗಳ ಕಾಲ ಗ್ರಂಥಾಲಯ ಓದು ಕಡ್ಡಾಯ ಎಂಬ ನಿಯಮವನ್ನು ಜಾರಿಗೆ ತಂದರು. ಈ ಕಾರಣಕ್ಕಾಗಿಯೇ ಹಲವು ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿ ಕುಳಿತು ಬಹುಹೊತ್ತಿನವರೆಗೆ ಓದುವ ಪ್ರವೃತ್ತಿ ರೂಢಿಸಿಕೊಂಡರು ಎಂದು ತಿಳಿಸಿದರು.


ವಿವಿಧ ಕ್ಷೇತ್ರಗಳ ಬಗ್ಗೆ ಕುತೂಹಲವಿರಿಸಿಕೊಂಡು ಓದುತ್ತಿದ್ದರು. ಎಲ್ಲಾ ಬಗೆಯ ಓದು ಸಾಧ್ಯವಾಗಿಸಿಕೊಂಡ ಕಾರಣಕ್ಕಾಗಿಯೇ ಹೊಸ ಹೊಸ ಆಲೋಚನೆಗಳನ್ನು ಹೊಳೆಸಿಕೊಳ್ಳುತ್ತಿದ್ದರು. ಬದುಕನ್ನು ಪ್ರತಿ ಕ್ಷಣ, ಪ್ರತೀ ದಿನ ಅರ್ಥಪೂರ್ಣಗೊಳಿಸಿಕೊಳ್ಳುವುದರ ಕಡೆಗೇ ಅವರು ಹೆಚ್ಚು ಪ್ರಾಶಸ್ತ್ಯ ನೀಡುತ್ತಿದ್ದರು ಎಂದು ಪೂರನ್ ವರ್ಮಾ ನೆನಪಿಸಿಕೊಂಡರು.


ಇದೇ ಸಂದರ್ಭದಲ್ಲಿ ಮಾತನಾಡಿದ ಶ್ರದ್ಧಾ ಅಮಿತ್ ಅವರು ಡಾ.ಬಿ.ಯಶೋವರ್ಮ ಅವರ ಬದುಕಿನ ವಿವಿಧ ವಿಶೇಷ ಸಂದರ್ಭಗಳನ್ನು ಸ್ಮರಿಸಿದರು. ಬದುಕನ್ನು ಪರಿಪೂರ್ಣಗೊಳಿಸಿಕೊಳ್ಳುವುದರಲ್ಲಿಯೇ ಯಶಸ್ಸಿನ ಸಾಧ್ಯತೆಗಳಿರುತ್ತವೆ ಎಂಬುದನ್ನು ನಿರೂಪಿಸಿದ ವ್ಯಕ್ತಿತ್ವ ಡಾ.ಬಿ.ಯಶೋವರ್ಮ. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ವಿಶೇಷ ಸಾಧನೆಗೈದಾಗಲೆಲ್ಲಾ ಅವರು ಹೆಮ್ಮೆಯೊಂದಿಗೆ ಮಾತನಾಡುತ್ತಿದ್ದರು. ತಪ್ಪು ಮಾಡಿದ ವಿದ್ಯಾರ್ಥಿಗಳಿಗೆ ಕರೆದು ಆಪ್ತವಾಗಿ ಬುದ್ಧಿವಾದ ಹೇಳಿ ಅವರು ಬದಲಾಗುವುದಕ್ಕೆ ಅವಕಾಶ ನೀಡುತ್ತಿದ್ದರು ಎಂದು ಶ್ರದ್ಧಾ ಅಮಿತ್ ಹೇಳಿದರು.


ಪ್ರತೀ ಕ್ಷಣವನ್ನು ಆನಂದಿಸುವುದನ್ನು ಅವರು ಕಲಿಸಿದರು. ಕಾವ್ಯ, ಓದು, ಪುಸ್ತಕ, ಮಾತು ಪ್ರತಿಯೊಂದನ್ನೂ ಸಂಭ್ರಮಿಸುತ್ತಿದ್ದರು. ತಾವು ಅಳವಡಿಸಿಕೊಂಡ ಅನೇಕ ಶಿಸ್ತುಬದ್ಧ ನಿಯಮಗಳನ್ನು  ಕಾಲೇಜಿನಲ್ಲಿ ಜಾರಿಗೆ ತಂದಿದ್ದರು. ಎಲ್ಲಾ ಕೆಲಸದಲ್ಲಿಯೂ ಒಂದು ಪ್ರಯೋಜನ ಇರಬೇಕು. ಕಲಿಯುವಂಥ ವಿಷಯ ಇರಬೇಕು ಎಂಬ ನಿಲುವು ಅವರದ್ದಾಗಿತ್ತು. ಕಾರು ಪ್ರಯಾಣ ಅವರ ಓದಿನೊಂದಿಗೆ ಇರುತ್ತಿತ್ತು. ಯಾರ ನಿಂದೆಯನ್ನೂ ಅವರು ಸಹಿಸುತ್ತಿರಲಿಲ್ಲ. ಹೊಸ ವಿಚಾರಗಳನ್ನು ಅವರು ಗೌರವಿಸುತ್ತಿದ್ದರು ಎಂದರು.


ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ ಅವರು ಮಾತನಾಡಿ ಡಾ.ಬಿ.ಯಶೋವರ್ಮ ಅವರ ವ್ಯಕ್ತಿತ್ವದ ವೈಶಿಷ್ಟ್ಯತೆಯನ್ನು ವಿಶ್ಲೇಷಿಸಿದರು. ವಿನೂತನ ಯೋಚನೆ ಮತ್ತು ಯೋಜನೆಗಳನ್ನು ಅನುಷ್ಠಾನಗೊಳಿಸುವ ವಿಭಿನ್ನ ಆಡಳಿತಾತ್ಮಕ ಮಾದರಿಯನ್ನು ರೂಪಿಸಿದ ವ್ಯಕ್ತಿತ್ವ ಅವರದ್ದು. ಯೋಚನೆ, ಯೋಜನೆಗಳು ಕ್ಲಿಷ್ಟಕರವಾಗಿದ್ದರೂ ಅವುಗಳನ್ನು ಅತ್ಯಂತ ಸರಳವಾಗಿ, ಮನವರಿಕೆಯಾಗುವ ರೀತಿಯಲ್ಲಿ ತಿಳಿಸಿ ಅನುಷ್ಠಾನಗೊಳಿಸುವ ಕೌಶಲ್ಯ ಅವರಲ್ಲಿತ್ತು ಎಂದು ನುಡಿದರು.


ಉಜಿರೆಯ ಸೌಂದರ್ಯೀಕರಣದ ಹಿಂದೆ ಯಶೋವರ್ಮ ಅವರ ಚಿಂತನೆಯ ಕೊಡುಗೆಯೂ ಇದೆ. ಎಲ್ಲರನ್ನೂ ಆಪ್ತವಾಗಿ ಮಾತನಾಡಿಸಿ ಪ್ರೇರಣೆ ನೀಡುವ ವ್ಯಕ್ತಿತ್ವ ಅವರದ್ದಾಗಿತ್ತು. ಸರಳ, ಸಜ್ಜನಿಕೆಯೊಂದಿಗೆ ಗುರುತಿಸಿಕೊಂಡು ಹಲವರನ್ನು ಪ್ರಭಾವಿಸಿದವರು ಅವರು. ಅಭಿವೃದ್ಧಿ ಕುರಿತ ಅವರ ಆಲೋಚನೆಗಳಿಗೆ ಅನುಗುಣವಾಗಿ ಬೆಳ್ತಂಗಡಿಯಲ್ಲಿ ಅಭಿವೃದ್ಧಿಯನ್ನು ಸಾಧ್ಯವಾಗಿಸಲು ಪ್ರಯತ್ನಿಸುತ್ತೇನೆ ಎಂದು ಹರೀಶ್ ಪೂಂಜಾ ಹೇಳಿದರು.


ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಕಾರ್ಯದರ್ಶಿ ಶರತ್ ಪಡ್ವೆಟ್ನಾಯ ಅವರು ಮಾತನಾಡಿದರು. ಶಿಕ್ಷಣ ಕ್ಷೇತ್ರದಲ್ಲಿ ಉಜಿರೆಯ ಹೆಸರು ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಡಲು ಡಾ.ಬಿ. ಯಶೋವರ್ಮ ಅವರ ಕೊಡುಗೆ ಮಹತ್ವದ್ದು ಎಂದರು. ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಎಂ.ಎಸ್.ಡಬ್ಲ್ಯೂ ವಿಭಾಗದ ಸಹಾಯಕ ಪ್ರಾಧ್ಯಾಪಕ ಸುವೀರ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಸಾರ್ವಜನಿಕರು, ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳು ಹಾಗೂ ವಿವಿಧ ರಂಗಗಳ ಗಣ್ಯರು, ಸ್ಥಳೀಯರು ಬಹುಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post