24.04.1997 ರಂದು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರಿಯ ಶ್ರೀಮತಿ ವಿಶಾಲಾಕ್ಷಿ ಕೆ ಭಟ್ ಹಾಗೂ ಕೃಷ್ಣ ಭಟ್ ಇವರ ಮಗನಾಗಿ ಜನನ. ಮೂಡಬಿದ್ರಿಯ ಆಳ್ವಾಸ್ ಸಂಸ್ಥೆಯಲ್ಲಿ ಡಿಗ್ರಿ ಪದವಿ ಪಡೆದಿರುತ್ತಾರೆ. ತಂದೆ ಮತ್ತು ತಾಯಿ ಕೊಟ್ಟಂತಹ ಪ್ರೋತ್ಸಾಹದಿಂದ ಇವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು ಎಂದು ಅಕ್ಷಯ್ ಅವರು ಹೇಳುತ್ತಾರೆ.
6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವಾಗ ಶಿವಕುಮಾರ್ ಮೂಡಬಿದ್ರಿ ಇವರ ಬಳಿ ಯಕ್ಷಗಾನ ನಾಟ್ಯವನ್ನು ಕಲಿತು, 7ನೇ ತರಗತಿಯಿಂದ ೮ನೇ ತರಗತಿಯವರೆಗೆ ವೇಣೂರು ಅಶೋಕ್ ಆಚಾರ್ಯ ಇವರ ಬಳಿ ಅಭ್ಯಾಸ ಮಾಡಿ, ಪಿಯುಸಿ ಮತ್ತು ಡಿಗ್ರಿ ಕಲಿಯುವ ವೇಳೆಯಲ್ಲಿ ಸದಾಶಿವ ಶೆಟ್ಟಿಗಾರ್ ಕಿನ್ನಿಗೋಳಿ ಇವರ ಬಳಿ ಅಭ್ಯಾಸ ಮಾಡಿ ಯಕ್ಷಗಾನ ರಂಗದಲ್ಲಿ ಒಬ್ಬ ಒಳ್ಳೆಯ ಕಲಾವಿದನಾಗಿ ರೂಪುಗೊಂಡರು ಹಾಗೂ ಎರಡು ವರ್ಷಗಳಿಂದ ರವಿಚಂದ್ರ ಕನ್ನಡಿಕಟ್ಟೆ ಅವರ ಬಳಿ ಭಾಗವತಿಕೆ ಅಭ್ಯಾಸವನ್ನು ಮಾಡುತ್ತಿದ್ದರೆ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ ಎಂದು ಕೇಳಿದಾಗ;
ಹಿರಿಯ ಕಲಾವಿದರಲ್ಲಿ ಕೇಳಿಕೊಳ್ಳುತ್ತೇನೆ, ಪದ್ಯದ ಕುರಿತಾಗಿ ಭಾಗವತರಲ್ಲಿ ಕೇಳುತ್ತೇನೆ, ಕೆಲವೊಂದು ಬಾರಿ ಯೂಟ್ಯೂಬ್ ನಲ್ಲಿ ಹಿರಿಯ ಕಲಾವಿದರ ವೇಷವನ್ನು ಕಂಡು ಪ್ರಸಂಗದ ಬಗ್ಗೆ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಅಕ್ಷಯ್ ಹೇಳುತ್ತಾರೆ.
ಅಭಿಮನ್ಯು ಕಾಳಗ, ಇಂದ್ರಜಿತು ಕಾಳಗ, ಶ್ರೀನಿವಾಸ ಕಲ್ಯಾಣ ಇವರ ನೆಚ್ಚಿನ ಪ್ರಸಂಗಗಳು.
ಅಭಿಮನ್ಯು, ಶ್ರೀನಿವಾಸ, ಕೃಷ್ಣ, ಲಕ್ಷ್ಮಣ, ಬಬ್ರುವಾಹನ, ಭಾರ್ಗವ, ಸುದರ್ಶನ ಇವರ ನೆಚ್ಚಿನ ವೇಷಗಳು.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಕೇಳಿದಾಗ ;
ಹೊಸತನವನ್ನು ಒಪ್ಪಿಕೊಳ್ಳುವವರು ಒಂದು ಕಡೆಯಾದ್ರೆ ಹಳೆಯ ಪರಂಪರೆಯನ್ನು ಇಷ್ಟ ಪಡುವವರು ಇನ್ನೊಂದು ಕಡೆ. ಹಾಗಾಗಿ ಹಳೆಯ ಪರಂಪರೆಯು ಅಳಿಯದ ಹಾಗೆ ಹೊಸತನದಲ್ಲಿ ಅಳವಡಿಸಿಕೊಂಡು ವೇಷ ಮಾಡುವಂತಹ ಕಲಾವಿದರು ಬಹಳಷ್ಟಿದ್ದಾರೆ. ಇದು ಸದ್ಯದ ಸ್ಥಿತಿ ಗತಿ ಎಂದು ಹೇಳುತ್ತಾರೆ ಅಕ್ಷಯ್.
ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಪೂರ್ತಿ ಯಕ್ಷಗಾನವನ್ನು ನೋಡದೆ ಸುಮ್ಮನೆ ಕಲಾವಿದರ ವೇಷದ ಕುರಿತಾಗಿ ನೆಗೆಟಿವ್ ಕಾಮೆಂಟ್ ಮಾಡುವ ಪ್ರೇಕ್ಷಕರು ಕೆಲವರಿದ್ದರೆ, ಪೂರ್ತಿ ಯಕ್ಷಗಾನವನ್ನು ನೋಡಿ ಕಲಾವಿದರ ಮೇಲಿನ ಅಭಿಮಾನದಿಂದ ಚೌಕಿಗೆ ಬಂದು ಪ್ರೋತ್ಸಾಹಿಸುವ ಸಜ್ಜನ ಪ್ರೇಕ್ಷಕರು ಬಹಳಷ್ಟು ಮಂದಿಯಿದ್ದಾರೆ.... ಹಾಗಾಗಿ ಕಲಾವಿದರು 2 ವರ್ಗದ ಪ್ರೇಕ್ಷಕರೊಂದಿಗೂ ಒಂದೇ ರೀತಿಯಲ್ಲಿ ವ್ಯವಹಾರಿಸಬೇಕಾದದ್ದು ಕಲಾವಿದನ ಕರ್ತವ್ಯ ಎಂದು ಅಕ್ಷಯ್ ಅವರು ಹೇಳುತ್ತಾರೆ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ ಬಗ್ಗೆ ಕೇಳಿದಾಗ:-
ನಾಲ್ಕು ಜನ ಗುರುತಿಸುವಂತೆ ಯಕ್ಷರಂಗದಲ್ಲಿ ಕಾಣಿಸಿಕೊಂಡಿದ್ದೇನೆ, ನಾಲ್ಕು ಜನ ಮೆಚ್ಚುವ ತರದಲ್ಲಿ ವೇಷವನ್ನು ಮಾಡಿ ಸಾಧನೆ ಮಾಡಬೇಕೆಂಬ ಹಂಬಲ ನನ್ನದು.
ಸಂಪಾಜೆ ಯಕ್ಷೋತ್ಸವದಲ್ಲಿ ಹವ್ಯಾಸಿ ಕಲಾವಿದರ ಯಕ್ಷಗಾನ ಸ್ಪರ್ಧೆಯಲ್ಲಿ ತಂಡಕ್ಕೆ ಪ್ರಥಮ ಸ್ಥಾನ ಮತ್ತು ಇವರ ಲಕ್ಷ್ಮಣ ವೇಷಕ್ಕೆ ಪ್ರಥಮ ಬಹುಮಾನ ನಗದು ಮತ್ತು ಬಂಗಾರದ ಪದಕವನ್ನು ಪಡೆದುಕೊಂಡಿದ್ದಾರೆ ಅಕ್ಷಯ್.
ಹನುಮಗಿರಿ ಮೇಳದಲ್ಲಿ 3 ವರ್ಷ ತಿರುಗಾಟ ಮಾಡಿ ಪ್ರಸ್ತುತ 2 ವರ್ಷದಿಂದ ಕಟೀಲು ಮೇಳದಲ್ಲಿ ತಿರುಗಾಟವನ್ನು ಮಾಡುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
Photos By:- Dhanu K.P, Sumanth Photography.
-ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
8971275651
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ