ಕನ್ನಡ- ಸಂಸ್ಕೃತ ಸಾಹಿತ್ಯದ ಸಮನ್ವಯ ಪುರುಷ- ಪ್ರೊ. ಮಲ್ಲೇಪುರಂ: ಪ್ರೊ.ಪಿ.ವಿ. ಕೃಷ್ಣಭಟ್ಟ ಅಭಿಮತ

Upayuktha
0

ಬೆಂಗಳೂರು: ಪ್ರೊ.ಮಲ್ಲೇಪುರಂ ಅವರು ಇಂದಿನ ದಿನಮಾನದ ಅಪರೂಪ ವಿದ್ವಾಂಸರು. ನಿಸ್ಪೃಹ-ನಿರಾಡಂಬರ ಜೀವಿಗಳು. ತಮ್ಮ ಶಿಕ್ಷಕ ವೃತ್ತಿಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ಧಾರೆಯೆರೆದು ಸೌಜನ್ಯ ಶೀಲತೆಯನ್ನು ಮೆರೆದಿದ್ದಾರೆ. ಅವರ ವೈಚಾರಿಕ ಮನೋಧರ್ಮ, ಚಿಕಿತ್ಸಕ ಪ್ರವೃತ್ತಿ, ಸಂಘಟನಾ ಶಕ್ತಿ, ನಿರಪೇಕ್ಷ ಮನೋಭಾವ, ಪುಸ್ತಕಪ್ರೀತಿ, ಶಿಷ್ಯ ವಾತ್ಸಲ್ಯ, ಸಾಮಾಜಿಕ ಹಾಗೂ ಶೈಕ್ಷಣಿಕ ಕಾಳಜಿ, ಚಿಂತನಶೀಲವಾದುದು. ಸ್ವೋಪಜ್ಞತೆಯುಳ್ಳ ಪ್ರೊ.ಮಲ್ಲೇಪುರಂ ಅವರು ಪ್ರತಿಭೆ ಮತ್ತು ಪಾಂಡಿತ್ಯಗಳ ಸಂಗಮವಾಗಿದ್ದಾರೆ. ‘ಸಮನ್ವಯ ಪುರುಷ’ ಎಂದೇ ಅವರು ಹೆಸರಾಗಿದ್ದಾರೆ ಎಂದು ಕೇಂದ್ರೀಯ ವಿವಿಯ ಕುಲಪತಿ ಪ್ರೊ. ಪಿ.ವಿ. ಕೃಷ್ಣಭಟ್ಟ ಅಭಿಪ್ರಾಯಪಟ್ಟರು.


ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ಹಿರಿಯ ಸಾಹಿತಿ, ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರ 70ನೇ ಹುಟ್ಟುಹಬ್ಬದ ಪ್ರಯುಕ್ತ ಅಭಿನಂದನಾ ಕಾರ್ಯಕ್ರಮ ಮತ್ತು ಗ್ರಂಥಗಳ ಲೋಕಾರ್ಪಣೆ ಸಮಾರಂಭವವು ನಗರದ ಶಿವಾನಂದ ವೃತ್ತದಲ್ಲಿರುವ ಗಾಂಧಿಭವನದ “ಮಹಾದೇವ ದೇಸಾಯಿ ಸಭಾಂಗಣ”ದಲ್ಲಿ ಆಯೋಜಿಸಲಾಗಿತ್ತು.


40 ವರ್ಷಗಳ ಕಾಲ ತಮ್ಮ ಸ್ವಂತ ಪರಿಶ್ರಮದಿಂದ ಅನೇಕ ಏಳುಬೀಳುಗಳ ನಡುವೆ, ತಮ್ಮ ಸಾರ್ಥಕ ಬದುಕನ್ನು ಸಾಧಿಸಿ, ಸುಮಾರು 92 ಗ್ರಂಥಗಳನ್ನು ಸಮಾಜಕ್ಕೆ ನೀಡಿದ ಅಸಾಮಾನ್ಯರಾಗಿ ಗುರುತಿಸಿಕೊಂಡಿದ್ದಾರೆ. ಪ್ರಪ್ರಥಮವಾಗಿ ವೃತ್ತಿಜೀವನಕ್ಕೆ ಪ್ರೌಢಶಾಲಾ ಶಿಕ್ಷರಾಗಿ ಕಾಲಿರಿಸಿ, ಅಲ್ಲಿಂದ ವಿಶ್ವವಿದ್ಯಾಲಯಕ್ಕೆ ಕಾಲಿರಿಸಿ, ಅಲ್ಲಿ ಕುಲಸಚಿವರಾಗಿ, ಡೀನ್ ಆಗಿ, ಹಲವು ಹುದ್ದೆಗಳನ್ನು ಹೊಂದಿ, ಎಲ್ಲರಿಂದಲೂ ಮನ್ನಣೆ ಪಡೆದವರು.


ಹಂಪಿ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸಿದ ನಂತರ, ಸಂಸ್ಕøತ ವಿಶ್ವವಿದ್ಯಾಲಯದ ಕನಸು ಹೊತ್ತು, ಅದಕ್ಕಾಗಿ ಅಪಾರವಾಗಿ ಶ್ರಮಿಸಿ, ಛಲಬಿಡದ ತ್ರಿವಿಕ್ರಮನಂತೆ, ಸಾಧಿಸಿ ಸಂಸ್ಕøತ ವಿಶ್ವವಿದ್ಯಾಲಯವನ್ನು ಹುಟ್ಟುಹಾಕಿದರು. ಇದು ಕರ್ನಾಟಕದಲ್ಲಿಯೇ ಮೊಟ್ಟಮೊದಲ ಪ್ರಯತ್ನವಾಯಿತು. ಹಾಗೆಯೇ ಎಲ್ಲರ ಮನೆಮಾತಾಯಿತು. ಹುಟ್ಟುಹಾಕಿದ್ದೇನೋ ಸರಿ, ಆದರೆ ಅದರ ಮುಂದಾಳುತ್ವ ವಹಿಸುವುದು, ತುಂಬ ಸಾಹಸನೀಯವಾದದ್ದು. ಅದನ್ನು ಅತ್ಯಂತ ಪರಿಶ್ರಮದಿಂದ, ಅದರ ಆಗುಹೋಗುಗಳನ್ನು ಸೂಕ್ಷ್ಮವಾಗಿ ನಿರ್ವಹಿಸುತ್ತ, ಅದರ ಗೌರವ, ಘನತೆಯನ್ನು ಹೆಚ್ಚಿಸಿ ಸಂಸ್ಕೃತ ಭಾಷೆಯ ಮಹತ್ವವನ್ನು ಮನುಕುಲಕ್ಕೆ ತಿಳಿಸುವಲ್ಲಿ ಆದರ್ಶ ಪ್ರಾಯರಾದರು ಎಂದು ಮುಖ್ಯ ಅಥಿತಿಗಳಾದ ವಿಶ್ರಾಂತ ನ್ಯಾಯಮೂರ್ತಿ ಎನ್. ಕುಮಾರ್ ಬಣ್ಣಿಸಿದರು.


ಬೇರೆಯವರಿಗೂ ಮತ್ತು ಮಲ್ಲೇಪುರಂ ಅವರಿಗೂ ಇರುವ ವ್ಯತ್ಯಾಸವೆಂದರೆ, ಮಲ್ಲೇಪುರಂ ಅವರು, ಬರೆದಂತೆ ಬದುಕಿದವರು, ನುಡಿದಂತೆ ನಡೆದವರು, ಹಾಗೆಯೇ ಬೇರೆಯವರಿಗಾಗಿಯೇ ಬದುಕನ್ನು ಮೀಸಲಾಗಿರಿಸಿದವರು. ಸಾವಿರಾರು ಶಿಷ್ಯಂದಿರನ್ನು ಹೊಂದಿದ ಗುರುವಾಗಿರುವವರು. ಪ್ರತಿಯೊಬ್ಬರಿಗೂ ಒಂದಿಲ್ಲೊಂದು ನಿಟ್ಟಿನಲ್ಲಿ ನೆಲೆತೋರಿ ಬದುಕನ್ನು ಕಟ್ಟಿಕೊಟ್ಟವರು. ಮಲ್ಲೇಪುರಂ ಅವರು ಮೇಲ್ನೋಟಕ್ಕೆ ಒಬ್ಬ ಮೌನಿ, ಮಾತನಾಡಿದರೆ ಅದ್ಭುತ ವಾಗ್ಮಿ. ಯಾವುದೇ ವಿಷಯವಾಗಲಿ ನಿರರ್ಗಳವಾಗಿ ವಿಷಯವನ್ನು ಮಂಡಿಸಬಲ್ಲ, ಶ್ರೇಷ್ಠ ವಿದ್ವಾಂಸ. ಸದಾ ಗ್ರಂಥಗಳ ಅಧ್ಯಯನ. ಬಿಡುವಿಲ್ಲದ ಬರವಣಿಗೆ, ಶಿಸ್ತಿನ ಬದುಕು, ವೈಚಾರಿಕತೆಯಲ್ಲೂ ಉದಾತ್ತತೆಯ ಭಾವ  ಎಂದು ಅಭಿನಂದನಾ ನುಡಿಗಳಾಡಿದ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ. ವೂಡೇ ಪಿ. ಕೃಷ್ಣ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.


ದಿವ್ಯ ಸಾನ್ನಿಧ್ಯವನ್ನು ತುಮಕೂರು ಶ್ರೀಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ವಹಿಸಿದ್ದ ಸಮಾರಂಭದಲ್ಲಿ ನಾಡೋಜ ಡಾ. ವೂಡೇ ಪಿ. ಕೃಷ್ಣ ಅವರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟವಾಗಿರುವ ಪ್ರೊ. ಮಲ್ಲೇಪುರಂ 70ರ ಅಭಿನಂದನಾ ಗ್ರಂಥ “ಸಮಾಹಿತ” ಮತ್ತು ಡಾ. ಸಂತೋಷ ಹಾನಗಲ್-ಸ್ವ್ಯಾನ್ ಕೃಷ್ಣಮೂರ್ತಿ ಅವರ ಸಂಪಾದಕತ್ವದಲ್ಲಿ ಮೂಡಿಬಂದಿರುವ ಪ್ರೊ. ಮಲ್ಲೇಪುರಂ ಚಿತ್ರವಿಹಾರ “ಸಪ್ತತಿ” ಗ್ರಂಥಗಳನ್ನು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಪದ್ಮಭೂಷಣ ಡಾ. ಚಂದ್ರಶೇಖರ ಕಂಬಾರ ಅವರು ಲೋಕಾರ್ಪಣೆ ಮಾಡಿದರು. ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಡಾ. ಶಿವರಾಜ ವಿ. ಪಾಟೀಲ ಅವರು ಅಧ್ಯಕ್ಷತೆ ವಹಿಸಿದ್ದರು, ಅಧ್ಯಾತ್ಮ ಚಿಂತಕಿ ಡಾ. ವೀಣಾ ಬನ್ನಂಜೆ ಅಭಿನಂದನಾ ನುಡಿಗಳನ್ನಾಡಿದರು.


ಪ್ರೊ. ಮಲ್ಲೇಪುರಂ 70ರ ಅಭಿನಂದನಾ ಸಮಿತಿಯ ಅಧ್ಯಕ್ಷರಾದ ಡಾ. ಕೆ.ಜಿ. ಲಕ್ಷ್ಮೀನಾರಾಯಣಪ್ಪ  ಪ್ರಾಸ್ತಾವಿಕ ನುಡಿಗಳನ್ನಾಡಿ ಬೇರೆಯವರ ವಿಷಯದಲ್ಲಿ ಮೂಗು ತೂರಿಸದೆ, ಎಂದಿಗೂ ಸಜ್ಜನಿಕೆಯ ಸಹವಾಸವೇ ಅವರ ಆಭರಣ. ನೇರನಡೆ, ನಿಷ್ಠೂರವಾದಿ, ದಕ್ಷ, ಪ್ರಾಮಾಣಿಕ ಅಧಿಕಾರಿಯಾಗಿದ್ದು, ಅಪಾರ ಗೌರವ, ಭಕ್ತಿ, ಶ್ರದ್ಧೆ, ಮನ್ನಣೆ ದೊರಕಿಸಿಕೊಂಡಿದ್ದಾರೆ. ಯಾವ ಸಂದರ್ಭದಲ್ಲಿಯೇ ಆಗಲಿ, ಯಾರಿಂದಲೇ ಆಗಲಿ ಟೀಕೆ ಟಿಪ್ಪಣೆಗಳಿಗೆ ಒಳಗಾಗದ ಧೀಮಂತ ಸ್ನೇಹಜೀವಿ, ಇವರು ನೊಂದ ಮನಸ್ಸುಗಳಿಗೆ ಸಾಂತ್ವನ ಹೇಳುವ ವಿದ್ವನ್ಮಣಿ, ವೈಚಾರಿಕ ಸಂತ ಈ ಅಭಿನಂದನಾ ಸಮಾರಂಭವನ್ನು ಮತ್ತಷ್ಟು ಸ್ಮರಣೀಯವಾಗಿಸಲು ಕರ್ನಾಟಕ ಸಂಸ್ಕøತ ವಿಶ್ವವಿದ್ಯಾಲಯದಲ್ಲಿ ಸಂಸ್ಕøತ ಎಂಎ ಪ್ರಥಮ ರಾಂಕ್ ಪಡೆದ ವಿದ್ಯಾರ್ಥಿಗೆ ಮಲ್ಲೇಪುರಂರವರ ಹೆಸರಿನಲ್ಲಿ ಚಿನ್ನದ ಪದಕ ನೀಡಬೇಕೆಂಬ ಅಭಿಲಾಷೆಇದೆ ಎಂದು ತಿಳಿಸಿದರು.


ಕಾರ್ಯದರ್ಶಿಗಳಾದ ಡಾ. ಪ್ರಕಾಶ್ ಆರ್. ಪಾಗೋಜಿ ಮತ್ತು ಡಾ. ಸಂತೋಷ ಹಾನಗಲ್ ವೇದಿಕೆಯಲ್ಲಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top