ಹಳೆಯ ಕಾಲದಿ ಸೊಗಸಿನಿಂದಲಿ
ಮುಳಿಯ ಹುಲ್ಲನು ಹೊದೆಸಿದ
ಕಳೆಯ ಕಟ್ಟಿದ ಮನೆಯು ಊರಲಿ
ನೆಲೆಯು ನರನಿಗೆ ಚಂದದ
ಮಣ್ಣ ಗೋಡೆಗೆ ಸೆಗಣಿ ಬಳಿಯಲು
ಕಣ್ಣ ತುಂಬುವ ನೆಲದಲಿ
ತಣ್ಣಗಾಗಿಯೆ ಇರುತ ನಲಿಯಲು
ಸಣ್ಣ ಗೇಹದಿ ಚಿಲಿಪಿಲಿ..
ಗುಬ್ಬಿ ಗೂಡಿನ ನೆಲೆಯು ಇಲ್ಲಿಯೆ
ಉಬ್ಬಿ ಹಾಡುವ ತೋಷವು
ತಬ್ಬಿ ಅಳಿವನು ಕಂಡ ಹಾಗೆಯೆ
ಸುಬ್ಬಿ ಕಾಣದೆ ದುಗುಡವೆ ..
ಇಂದು ಕಾಣದು ಇಂಥ ಮನೆಗಳು
ಎಂದು ಕಾಂಬುದು ಮುಂದಕೆ
ಚೆಂದ ತೋರುವ ಸರಳ ಗುಡಿಸಲು
ಸಂದು ಹೋಗಿದೆ ಹಿಂದಕೆ.
-ಗುಣಾಜೆ ರಾಮಚಂದ್ರ ಭಟ್