ನಮ್ಮ ದೇಶದ ಇತಿಹಾಸಕಾರರಿಗೆ ಸತ್ಯ ಹೇಳಲು ಅಂಜಿಕೆ: ಶಿವಾನಂದ ಸಿಂಧನಕೇರ

Upayuktha
0

ಮಂಗಳೂರು: ಇತಿಹಾಸವೇಂದರೆ ಸತ್ಯದ ದಾಖಲೀಕರಣ. ಆದರೆ ನಮ್ಮ ದೇಶದ ಇತಿಹಾಸಕಾರರಿಗೆ ಸತ್ಯ ಹೇಳಲು ಹೆದರಿಕೆ. ವಿದೇಶಿಗರು ಹೇಳಿದರೆ ಕೇಳುವ ಇತಿಹಾಸವನ್ನು ನಂಬುತ್ತೇವೆ. 'ಆಜಾದಿ ಕಿ ಅಮೃತ್ ಮಹೋತ್ಸವ್' ನಮ್ಮ ದೇಶವನ್ನು ಅರ್ಥಮಾಡಿಕೊಳ್ಳಲು ಉತ್ತಮ ಅವಕಾಶ, ಎಂದು ಮೈಸೂರಿನ ಮಹಾರಾಜ ಸರ್ಕಾರಿ ಪಿಯು ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಶಿವಾನಂದ ಸಿಂಧನಕೇರ ಅಭಿಪ್ರಾಯಪಟ್ಟಿದ್ದಾರೆ. 


ಸೋಮವಾರ, ‘ಆಜಾದಿ ಕಾ ಅಮೃತ ಮಹೋತ್ಸವ’ ಕಾರ್ಯಕ್ರಮ ಸರಣಿಯ ಭಾಗವಾಗಿ ಮಂಗಳೂರು ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳ ಸಂಯುಕ್ತಾಶ್ರಯದಲ್ಲಿ “ಕರಾವಳಿ ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟ” ಎಂಬ ವಿಷಯದ ಕುರಿತು ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ನಮ್ಮ ದೇಶ ಹೆಚ್ಚು ಆಕ್ರಮಣಗಳನ್ನು ಎದುರಿಸಿಯೂ ಉಳಿದುಕೊಂಡಿದೆ. ಜ್ಞಾನದಿಂದ ಜಗತ್ತನ್ನು ಗೆಲ್ಲಲು ಪ್ರಯತ್ನಿಸಿದೆ, ಆದರೆ ಇವು ಇತಿಹಾಸದಲ್ಲಿ ದಾಖಲಾಗಿಲ್ಲ, ಎಂದರು. 


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಗಳೂರು ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್,  ಸ್ವಾತಂತ್ರ್ಯ ಹೋರಾಟದಲ್ಲಿ ಕರಾವಳಿಗರು ನೀಡಿರುವ ಕೊಡುಗೆ ಎಲ್ಲರಿಗೂ ತಿಳಿಯಬೇಕು. ದೇಶದಲ್ಲಿ ಕ್ವಿಟ್ ಇಂಡಿಯಾ ಚಳುವಳಿ ಆರಂಭವಾಗುವ ಮೊದಲೇ ಸುಳ್ಯದಲ್ಲಿ ʼಅಮರ ಸುಳ್ಯ ದಂಗೆʼನಡೆದಿತ್ತು ಎಂಬುದು ಅಚ್ಚರಿಯ ವಿಚಾರ. ಈ ವಿಚಾರಗಳು ವಿದ್ಯಾರ್ಥಿಗಳಿಗೆ ತಿಳಿಯಬೇಕು, ಎಂದ ಅವರು ಇಂದಿಗೂ ನಾವು ಬ್ರಿಟಿಷರ ಪ್ರಭಾವದಿಂದ ಹೊರಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.  


ಮುಖ್ಯ ಅತಿಥಿಯಾಗಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ.ಲೋಕೇಶ್ ಕೆ.ಎಂ ಮಾತನಾಡಿ, ಇತಿಹಾಸ ಬದಲಾಗುವುದಿಲ್ಲ, ಆದರೆ ಇತಿಹಾಸಕಾರನ ದೃಷ್ಟಿಕೊನ ಬದಲಾಗುತ್ತದೆ. ಇತಿಹಾಸ ಓದುವಾಗ ಮನಸ್ಸು ಮುಕ್ತವಾಗಿರಲಿ. ಸಂವಾದವೇ ಇತಿಹಾಸದ ಆತ್ಮ, ಎಂದರು.


ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ, ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಇತಿಹಾಸ ಓದದವನು ಇತಿಹಾಸ ನಿರ್ಮಿಸಲಾರ. ನಾವು ನಮ್ಮ ಇತಿಹಾಸದ ಬಗ್ಗೆ ಎಚ್ಚೆತ್ತುಕೊಂಡು ಅದನ್ನು ಉಳಿಸಲು, ತಿಳಿಸಲು ‘ಆಜಾದಿ ಕಾ ಅಮೃತ ಮಹೋತ್ಸವ’ ಒಂದು ಉತ್ತಮ ಅವಕಾಶ, ಎಂದರು. 


ಕಾಲೇಜಿನ ಪ್ರಾಂಶುಪಾಲೆ, ಸಮ್ಮೇಳನದ ಸಂಚಾಲಕಿ ಹಾಗೂ ಸಂಘಟನಾ ಸಮಿತಿಯ ಡಾ.ಸುಭಾಷಿಣಿ ಶ್ರೀವತ್ಸ ಅತಿಥಿಗಳನ್ನು ಸ್ವಾಗತಿಸಿದರು. ಮಧುಶ್ರೀ ಶ್ರೀಯಾನ್ ಕಾರ್ಯಕ್ರಮ ನಿರೂಪಿಸಿದರು. ವಿವಿ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಚಂದ್ರಕಲಾ ಮೊದಲಾದವರು ಉಪಸ್ಥಿತರಿದ್ದರು.


ಪುತ್ತೂರಿನ ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಡಾ.ಪೀಟರ್ ವಿಲ್ಸನ್ ಪ್ರಭಾಕರ್ “ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಿಳೆಯರ ಪಾತ್ರ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಮಂಗಳೂರು ವಿಶ್ವವಿದ್ಯಾನಿಲಯದ ಎಸ್ಡಿಎಂ ತುಳು ಅಧ್ಯಯನ ಪೀಠದ ಸಂಯೋಜಕ ಡಾ.ಮಾಧವ ಎಂ.ಕೆ ಕಾರ್ಯಕ್ರಮ ನಿರ್ವಹಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top