ಹಕ್ಕಿ ಕಲಿಸಿದ ಪಾಠ

Upayuktha
0

ಗದ್ದೆ ಬೇಸಾಯ ಎಂಬುದು 15 ದಿನಗಳ ಪ್ರಕ್ರಿಯೆ. ತಟ್ಟೆ ನೇಜಿ ಆದರೆ 21 ದಿನಗಳ ಒಳಗೆ ನೆಟ್ಟು ಆಗಲೇಬೇಕು. ನೇಜಿ ಹಾಕಿ ನಾಲ್ಕೈದು ದಿನಗಳ ನಂತರ ಹುಲ್ಲು ಹುಟ್ಟಿರುವ ಗದ್ದೆಯನ್ನು ಒಂದು ಸರ್ತಿ ನೀರಿನಲ್ಲಿ ಉತ್ತು ಬಿಡಬೇಕು. ಆಮೇಲೆ ಮಣ್ಣಿನ ಮೇಲೆ ಸುಮಾರು ಮೂರು ಇಂಚಿನಷ್ಟು ನೀರನ್ನು ನಿಲ್ಲಿಸಿದರೆ ಅಡಿ ಮೇಲಾದ ಹುಲ್ಲು ಕೊಳೆತು ಹೋಗುತ್ತದೆ. ಹುಟ್ಟದೇ ಇರುವ ಕಳೆ ಬೀಜಗಳು ಮೊಳೆಯಲು ಸುರುವಾಗುತ್ತದೆ. ಸುತ್ತುಮುತ್ತಲಿನ ಹುಣಿಯಲ್ಲಿರುವ ಕಳೆಯನ್ನು ತೆಗೆದು ಗದ್ದೆಗೆ ಸೇರಿಸಿದರೆ ಅದೂ ಸಾವಯವ ಗೊಬ್ಬರವಾಗುತ್ತದೆ. ಯಾಂತ್ರಿಕ ನೇಜಿಯ ನಾಲ್ಕು ದಿನದ ಮೊದಲು ಹಟ್ಟಿಗೊಬ್ಬರ ಕೊಟ್ಟು ಎರಡನೇ ಆವರ್ತಿ ಹೂಡಬೇಕಾಗುತ್ತದೆ. ನಾಲ್ಕು ದಿನ ನೀರು ಆರಿಸಿ ಮಣ್ಣು ಸ್ವಲ್ಪ ಗಟ್ಟಿಯಾಗುವಂತೆ ನೋಡಿಕೊಂಡರೆ ಯಾಂತ್ರಿಕ ನೇಜಿ ಸುಲಭ. ನೇಜಿಯ ಕೊಳೆಯುವಿಕೆ ಕಡಿಮೆ.ಗದ್ದೆ ಬೇಸಾಯಗಾರರಿಗೆ ಗೊತ್ತಿರುವ ಸಂಗತಿ ಆದರೂ ಹೊಸಬರಿಗೆ ಇದು ವಿಶೇಷ.


ಇತ್ತೀಚಿನ ವರುಷಗಳಲ್ಲಿ ಮಳೆಗಾಲ ನಿರೀಕ್ಷಿತವಾಗಿ ಬಾರದೆ, ಮುಂದೆ ಮುಂದೆ ಹೋಗುವುದರಿಂದ ನೇಜಿ ಹಾಕುವುದು ಯಾವಾಗ, ಉಳುಮೆ ಮಾಡುವುದು ಯಾವಾಗ ಎಂಬುದು ಪ್ರಶ್ನೆ? ಎಲ್ಲವೂ ಅನಿಶ್ಚಿತ. ಆದರೆ ಈ ವರ್ಷ ಮೇ ತಿಂಗಳಲ್ಲಿಯೇ ಕಿರು ಮಳೆಗಾಲ ಬಂದುದರಿಂದಾಗಿ ತೋಡಿನಲ್ಲಿ ನೀರಾಗಿತ್ತು. ಹಾಗಾಗಿ ಸಮಯಕ್ಕೆ ಸರಿಯಾಗಿ ಬೇಸಾಯ ಮಾಡಲು ಹೊರಟೆ. ಮೇ 25ಕ್ಕೆ ನೇಜಿ ಹಾಕಿ, ಜೂನ್ ಮೊದಲ ದಿನವೇ ತೋಡಿಗೆ ಅಡ್ಡ ಕಟ್ಟವನ್ನು ಹಾಕಿ ನೀರು ಮಾಡಿ ಹೂಟೆ ಮಾಡಿದೆ. ಹೂಟೆ ಮಾಡುವಾಗ, ಆನಂತರದ ದಿನಗಳಲ್ಲಿ ಗದ್ದೆಯಲ್ಲಿ ಕೊಕ್ಕರೆ ವರ್ಗದ ಹಕ್ಕಿಗಳು ಹುಳುವನ್ನು ಹೆಕ್ಕಿ ತಿನ್ನುವುದು ಸಾಮಾನ್ಯ. ಇಷ್ಟರವರೆಗೆ ನಾನು ಗಮನಿಸದ ಆಶ್ಚರ್ಯದ ಸಂಗತಿ ನಡೆದದ್ದು ಇಲ್ಲಿ. ಪ್ರತಿನಿತ್ಯ ಸಂಜೆಯ ಹೊತ್ತು ಗದ್ದೆ ಬದಿಗೆ ಹೋಗಿ ಬರುವ ನನ್ನ ಸೊಸೆ ಕೇಳಿದಳು ಹಕ್ಕಿಗಳು ಯಾಕೆ ನಮ್ಮಲ್ಲಿ ಮಾತ್ರ ಇರುತ್ತವೆ? ಪಕ್ಕದ ಗದ್ದೆಗೆ ಹೋಗುವುದಿಲ್ಲ ಎಂದು. ಪ್ರಶ್ನೆ ನನಗೂ ಕುತೂಹಲ ಹುಟ್ಟಿತು ನಾನು ದಿನಕ್ಕೆ ನಾಲ್ಕಾರು ಬಾರಿ ವೀಕ್ಷಿಸಲು ಹೋದೆ. ಕಳೆದ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಸಾವಯವದಲ್ಲಿರುವ ನನ್ನ ಗದ್ದೆ ಮತ್ತು ರಾಸಾಯನಿಕವನ್ನು ಬಳಸುವ ಪಕ್ಕದ ಗದ್ದೆ ಮೇಲುನೋಟಕ್ಕೆ ನಮಗೇನೂ ವ್ಯತ್ಯಾಸ ಕಾಣದಿದ್ದರೂ, ಪಕ್ಷಿಗಳಿಗೆ ಗೊತ್ತಾಗುವುದು ಆಶ್ಚರ್ಯ ತಂದಿತು. ದಿನಕ್ಕೆ ಎಷ್ಟು ಸಾರಿ ಹೋದಾಗಲೂ ಕೆಸರೊಳಗೆ ಕೊಕ್ಕನ್ನು ಹಾಕಿ ಏನೋ ಒಂದು ಜೀವಿಯನ್ನು ಹಿಡಿದು ತಿನ್ನುವ ಹೊಸತೊಂದು ಪಕ್ಷಿ ಸಮೂಹ ನನಗೆ ತೀವ್ರ ಕುತೂಹಲಕ್ಕೆ ಕಾರಣವಾಯಿತು. ರಾಸಾಯನಿಕದಿಂದ ಸೂಕ್ಷ್ಮಾಣುಜೀವಿಗಳ ನಾಶವಾಗುತ್ತದೆ ಮಣ್ಣು ಬರಡಾಗುತ್ತದೆ ಎಂಬ ತಜ್ಞರ ಮಾತಿಗೆ ಬಲುದೊಡ್ಡ ಪೂರಕ ಮಾಹಿತಿ ಇದು ಎಂದು ನನಗನಿಸಿತು. ಹಕ್ಕಿ ತಿನ್ನುವಷ್ಟು ದೊಡ್ಡ ಜೀವಿಗಳೇ ರಾಸಾಯನಿಕ ಬಳಸುವ ಗದ್ದೆಯಲ್ಲಿ ನಾಶವಾಗಿದೆ ಎಂದಾದರೆ, ಅದೆಷ್ಟು ಪ್ರಮಾಣದ ಸೂಕ್ಷ್ಮಾಣು ಜೀವಿಗಳ ನಾಶವಾಗಿರಬಹುದು ಎಂದು ಯೋಚಿಸಿದಾಗ ದಿಗಿಲು ಹುಟ್ಟಿಸುತ್ತದೆ. ಮಣ್ಣಿನಲ್ಲಿ ಸಾವಯವ ಇಂಗಾಲದ ಪ್ರಮಾಣ ನಾಶವಾಗುವುದೆಂದರೆ, ಮಣ್ಣು ಬರಡಾಗುವತ್ತ ಸಾಗುತ್ತಿದೆ ಎಂದೇ ಅರ್ಥ.


ಸಾಗೋಣ ನಾವು ಸಹಜ ಜೀವನದತ್ತ. ಪ್ರಕೃತಿಗೆ ಪೂರಕ ಸಾವಯವ ಕೃಷಿಯತ್ತ. ಮುಂದಿನ ಪೀಳಿಗೆಗೆ ಜೀವಧಾರಕವಾಗಿ ಭೂಮಿಯನ್ನು ಉಳಿಸಿಕೊಡುವತ್ತ.


ಮಣ್ಣಿಂದ ಕಾಯಾ ಮಣ್ಣಿಂದ,

ಅನ್ನ ಉದಕ ಊಟವೀಯುವುದು ಮಣ್ಣು,

ಬಣ್ಣ ಬಂಗಾರ ಬೊಕ್ಕಸವೆಲ್ಲ ಮಣ್ಣು,

ಉನ್ನತವಾದ ಪರ್ವತವೆಲ್ಲ ಮಣ್ಣು,

ಕಣ್ಣು ಮೂರುಳ್ಳವನ ಕೈಲಾಸ ಮಣ್ಣು,

ಪುರಂದರವಿಠಲನ ಪುರವೆಲ್ಲ ಮಣ್ಣು.

ಪುರಂದರ ವಿಠಲನಿಗೆ ನಮಿಸುತ್ತಾ ಮಣ್ಣು ಉಳಿಸೋಣ.

-ಎ.ಪಿ. ಸದಾಶಿವ ಮರಿಕೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top