ಭಾರತದ ಇತಿಹಾಸ, ಸಂಸ್ಕೃತಿಯ ಬಗ್ಗೆ ಇನ್ನಷ್ಟು ಸಂಶೋಧನೆಯಾಗಲಿ: ಪ್ರೊ. ಎಂ ಬಿ ಪುರಾಣಿಕ್

Upayuktha
0

ಮಂಗಳೂರು: ಒಂದು ದೇಶದ ಇತಿಹಾಸವನ್ನು ತಿಳಿಯಲಾಗಲಿಲ್ಲ ಎಂದರೆ ಇತಿಹಾಸವನ್ನು ಪ್ರಾಮಾಣಿಕವಾಗಿ ದಾಖಲಿಸಲಾಗಿಲ್ಲ ಎಂದರ್ಥ. ಭಾರತದ ನಾಗರಿಕತೆ, ಸಂಸ್ಕೃತಿ, ಚರಿತ್ರೆ ಶ್ರೀಮಂತವಾಗಿದೆ. ಈ ಬಗ್ಗೆ ಇನ್ನಷ್ಟು ಸಂಶೋಧನೆಯ ಅಗತ್ಯವಿದೆ, ಶಾರದಾ ವಿದ್ಯಾಲಯ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಪ್ರೊ. ಎಂ ಬಿ ಪುರಾಣಿಕ್ ಅಭಿಪ್ರಾಯಪಟ್ಟಿದ್ದಾರೆ. 


‘ಆಜಾದಿ ಕಾ ಅಮೃತ ಮಹೋತ್ಸವ’ದ ಅಂಗವಾಗಿ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳ ಸಂಯುಕ್ತಾಶ್ರಯದಲ್ಲಿ ರವೀಂದ್ರ ಕಲಾಭವನದಲ್ಲಿ ಆಯೋಜಿಸಲಾಗಿದ್ದ “ಕರಾವಳಿ ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟ” ಎಂಬ ವಿಚಾರ ಸಂಕಿರಣದ ಸಮಾರೋಪ  ಭಾಷಣ ಮಾಡಿದ ಅವರು, ಸಮಾಜದಿಂದ ನಾವು ಏನು ಪಡೆದಿದ್ದೇವೆ ಎಂಬುದಕ್ಕಿಂತ ಏನು ಕೊಟ್ಟಿದ್ದೇವೆ ಎಂಬುದು ಮುಖ್ಯ, ಎಂದರು. 


ಮುಖ್ಯ ಅತಿಥಿಯಾಗಿದ್ದ, ಬ್ಯಾಂಕ್ ಆಫ್ ಬರೋಡಾದ ಪ್ರಾದೇಶಿಕ ಕಛೇರಿಯ ಉಪ ಪ್ರಧಾನ ವ್ಯವಸ್ಥಾಪಕ ವಿನಯ್ ಗುಪ್ತಾ, ಈ  ಮಹೋತ್ಸವವನ್ನು ಶಾಲಾ ಕಾಲೇಜುಗಳು ಮಾತ್ರವಲ್ಲದೆ ಬ್ಯಾಂಕುಗಳು ಹಾಗೂ ಇತರ ಸಂಸ್ಥೆಗಳಲ್ಲಿಯೂ ಆಚರಿಸಲಾಗುತ್ತಿದೆ. ಏಕೆಂದರೆ ಸ್ವಾತಂತ್ರ್ಯ ವೀರರ ಬಗ್ಗೆ ತಿಳಿದುಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ, ಎಂದರು.  


ಕಾರ್ಯಕ್ರಮದ ಸಂಚಾಲಕಿ, ಪ್ರಾಂಶುಪಾಲೆ ಡಾ. ಸುಭಾಷಿಣಿ ಶ್ರೀವತ್ಸ ಅತಿಥಿಗಳನ್ನು ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಸಮಿತಿ ಕಾರ್ಯದರ್ಶಿ ವೆಂಕಟೇಶ್ ನಾಯಕ್ ಧನ್ಯವಾದ ಸಮರ್ಪಿಸಿದರು. ವಿಚಾರ ಸಂಕಿರಣದ ಸಲಹಾ ಸಮಿತಿ, ಸಂಘಟನಾ ಸಮಿತಿಗಳ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. 


ಗುಂಪು ಚರ್ಚೆ, ಪ್ರಬಂಧ ಮಂಡನೆ

ವಿಚಾರ ಸಂಕಿರಣದ ಎರಡನೇ ದಿನ ಸಂಶೋಧಕರು ಪ್ರಬಂಧಗಳನ್ನು ಮಂಡಿಸಿದರು. ‘ಪಠ್ಯಕ್ರಮದಲ್ಲಿ ಸ್ವಾತಂತ್ರ್ಯ ಚಳವಳಿಯ ಪ್ರತಿಬಿಂಬಗಳು’ ಎಂಬ ವಿಷಯದ ಮೇಲೆ ನಡೆದ ಗುಂಪು ಚರ್ಚೆಯನ್ನು ಬೆಸೆಂಟ್ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ನಿವೃತ್ತ ಪ್ರಾಧ್ಯಾಪಿಕೆ ಡಾ. ಮೀನಾಕ್ಷಿ ರಾಮಚಂದ್ರ ಹಾಗೂ ಮೂಡಬಿದಿರೆಯ ಜೈನ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಪ್ರಭಾತ್ ಬಲ್ನಾಡ್ ಮುನ್ನಡೆಸಿದರು. ಭಾರತ್ ಫೌಂಡೇಶನ್ನ ಟ್ರಸ್ಟಿ ಹಾಗೂ ಲಿಟ್ ಫೆಸ್ಟ್ನ ಸಂಯೋಜಕ ಸುನೀಲ್ ಕುಲಕರ್ಣಿ ಕಾರ್ಯಕ್ರಮ ನಿರ್ವಹಿಸಿದರು.  


ವರ್ಣರಂಜಿತ ಉದ್ಘಾಟನೆ:

ರಾಣಿ ಅಬ್ಬಕ್ಕನ ಸಾಹಸ ಸಾರುವ ನೃತ್ಯ ರೂಪಕದಲ್ಲಿ ಆರಂಭಗೊಂಡ ಉದ್ಘಾಟನಾ ಕಾರ್ಯಕ್ರಮ ಗಮನ ಸೆಳೆಯಿತು. ಉದ್ಘಾಟಿನೆ ನೆರವೇರಿಸಿ ಮಾತನಾಡಿದ ಶಾಸಕ ಡಿ ವೇದವ್ಯಾಸ ಕಾಮತ್,  ಸ್ವಾತಂತ್ರ್ಯ ಹೋರಾಟದಲ್ಲಿ ಕರಾವಳಿಗರು ನೀಡಿರುವ ಕೊಡುಗೆ ಎಲ್ಲರಿಗೂ ತಿಳಿಯಬೇಕು, ಎಂದರು. ಪ್ರಧಾನ ಭಾಷಣಕಾರ ಮೈಸೂರಿನ ಮಹಾರಾಜ ಸರ್ಕಾರಿ ಪಿಯು ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಶಿವಾನಂದ ಸಿಂಧನಕೇರ, ಭಾರತ ಸಾಕಷ್ಟು ಆಕ್ರಮಣಗಳನ್ನು ಎದುರಿಸಿಯೂ ಯಾರ ಮೇಲೂ ಆಕ್ರಮಣ ಮಾಡದೆ ಶಾಂತಿ, ಜ್ಞಾನದಿಂದಲೇ ಜಗತ್ತನ್ನು ಗೆದ್ದ ದೇಶ. ಗಣಿತಶಾಸ್ತ್ರ ಸೇರಿದಂತೆ ವಿಜ್ಞಾನಕ್ಕೆ ಭಾರತದ ಕೊಡುಗೆ ಅಮೂಲ್ಯ, ಎಂದು ಅಭಿಪ್ರಾಯಪಟ್ಟರು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ, ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಇತಿಹಾಸ ಓದದವನು ಇತಿಹಾಸ ನಿರ್ಮಿಸಲಾರ. ನಾವು ನಮ್ಮ ಇತಿಹಾಸದ ಬಗ್ಗೆ ಎಚ್ಚೆತ್ತುಕೊಂಡು ಅದನ್ನು ಉಳಿಸಲು, ತಿಳಿಸಲು ‘ಆಜಾದಿ ಕಾ ಅಮೃತ ಮಹೋತ್ಸವ’ ಒಂದು ಉತ್ತಮ ಅವಕಾಶ, ಎಂದರು. ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ.ಲೋಕೇಶ್ ಕೆ.ಎಂ ಮೊದಲಾದವರು ಉಪಸ್ಥಿತರಿದ್ದರು. 


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top