|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನೆನಪಿನ ಬುತ್ತಿಯಿಂದ: ನಾನು ಚಾಲಕನಾಗಿದ್ದಾಗ.. ಭಾಗ-2

ನೆನಪಿನ ಬುತ್ತಿಯಿಂದ: ನಾನು ಚಾಲಕನಾಗಿದ್ದಾಗ.. ಭಾಗ-2



ಪಯಣ ನಿರಂತರ ಎನ್ನುವಂತೆ ಪಯಣದೊಡನೆ ಬರುವ ಅನುಭವಗಳೂ ನಿರಂತರ. ಪ್ರತಿಯೊಂದು ಕ್ಷಣವೂ ಹೊಸತನ್ನೇ ಸೃಷ್ಟಿಸುವಂತೆ ಪ್ರತಿಯೊಂದು ಪ್ರಯಾಣವೂ ಒಂದೊಂದು ಕಥೆಯನ್ನೇ ಸೃಷ್ಟಿಸುತ್ತದೆ. ಉದಾಹರಣೆಗೆ ಮಂಗಳೂರಿಗೆ ನಾವು ಹಲವು ಬಾರಿ ಹೋಗಿದ್ದೇವೆ ಅಥವಾ ಮುಂದೆಯೂ ಹೋಗುತ್ತೇವೆ. ಕೆಲವೊಮ್ಮೆ ಪ್ರತಿನಿತ್ಯವೂ ಹೋಗುತ್ತೇವೆ. ಆದರೆ ಪ್ರತಿಯೊಂದು ಪ್ರಯಾಣವೂ ಹಿಂದಿನಂತೆ ಇರುವುದಿಲ್ಲ. ಚಾಲಕ ವೃತ್ತಿಯ ವೈಶಿಷ್ಟ್ಯವೇ ಇದು. ಪ್ರಯಾಣದಲ್ಲಿರುವ ಎಲ್ಲರಿಗೂ ಇದರ ಅನುಭವವಿದೆ. ಅದರಲ್ಲಿ ಚಾಲಕನಿಗೆ ಹೆಚ್ಚೇನು ಎಂದು ನಿಮಗನಿಸಬಹುದು.  ಆದರೆ ಪ್ರಯಾಣ ಮಾಡುವವರೆಲ್ಲ ಎಚ್ಚರವೇ ಇರಬೇಕೆಂದಿಲ್ಲ ನಿದ್ದೆಯಲ್ಲೂ ಇರಬಹುದು. ನಿದ್ದೆ ಬಂದ ಕ್ಷಣಗಳು ಪ್ರಯಾಣಿಕನಿಗೆ ಲಭ್ಯವಲ್ಲದವು. ಚಾಲಕನಿಗೆ ಹಾಗಲ್ಲ ಪ್ರತಿ ಹಂತವೂ ಜಾಗ್ರತಾವಸ್ಥೆಯಲ್ಲಿಬೇಕಾಗುವುದರಿಂದ ದೃಷ್ಟಿಗೆ ಬಿದ್ದದ್ದೆಲ್ಲವೂ ಅನುಭವಕ್ಕೂ ಬರುತ್ತದೆ. ಎಲ್ಲರೂ ನಿದ್ದೆಯಲ್ಲಿರುವಾಗ ಚಾಲಕನಿಗಷ್ಟೇ ಅನುಭವವಾದ ಒಂದು ಘಟನೆಯನ್ನು ನಿಮ್ಮ ಮುಂದಿಡುತ್ತೇನೆ.. 


1992...93ನೇ ಇಸವಿಯ ದಿನಗಳಲ್ಲಿ ನಾನು ಉಡುಪಿಯಿಂದ ಕೊಪ್ಪಕ್ಕೆ ಹೋಗುವ ಶಂಕರ್ ಬಸ್ಸಿನಲ್ಲಿ ಚಾಲಕನಾಗಿದ್ದೆ. ಕೊಪ್ಪದಿಂದ ಬೆಳಗ್ಗೆ ಹೊರಟು ಆಗುಂಬೆ ಮುಖಾಂತರ ಉಡುಪಿಗೆ ಬಂದು ಪುನಃ ಕೊಪ್ಪಕ್ಕೆ. ಹೀಗೆ ಎರಡು ಸರ್ವಿಸ್ ಆದ ಮೇಲೆ ರಾತ್ರಿ ವಸತಿ ಕೊಪ್ಪದಲ್ಲಿ. ಇದು ಪ್ರತಿ ನಿತ್ಯವೂ ಪುನರಾವರ್ತನೆ ಆಗುತ್ತಿರುವ ಕಾಯಕ. ರಾತ್ರಿ ಬಸ್ಸನ್ನು ಗ್ಯಾರೇಜಲ್ಲಿ ನಿಲ್ಲಿಸಿ ಸ್ನಾನ ಮಾಡಿ ನನ್ನ ನಂತರ ಬರುವಂಥ ಕೊನೆಯ ಬಸ್ಸಿನ ಚಾಲಕನೂ ಸೇರಿ ಹೋಟೇಲ್ನಲ್ಲಿ ಊಟ ಮುಗಿಸಿ ಪುನಃ ಬಸ್ಸಿನಲ್ಲೇ ಮಲಗುವಾಗ ಸಾಧಾರಣ ರಾತ್ರಿ ಹತ್ತು ಗಂಟೆಯಷ್ಟಾಗುತ್ತಿತ್ತು. ಸೊಳ್ಳೆ ಬತ್ತಿ ಹೊತ್ತಿಸಿಟ್ಟು ಮಲಗಿದರೆ ಬೆಳಗ್ಗಿನ ಜಾವ ಐದುಗಂಟೆವರೆಗೆ ಅಥವಾ ಸೊಳ್ಳೆ ಬತ್ತಿ ಮುಗಿಯುವಲ್ಲಿವರೆಗೆ ಸುಂದರವಾದ ನಿದ್ದೆ. ಇದು ಪ್ರತಿನಿತ್ಯದ ಕರ್ಮ. ಹೀಗಿರುವಾಗ ಒಂದು ರಾತ್ರಿಯಲ್ಲಿ ನನ್ನ ಜೊತೆ ಯಾವಾಗಲೂ ಊಟಕ್ಕೆ ಬರುವಂಥ ಚಾಲಕ 'ನನಗೆ ಇಂದು ಹಸಿವಿಲ್ಲ ನೀವು ಊಟ ಮಾಡಿ ಬನ್ನಿ'  ಎಂದ. ನನಗಾದರೋ ಬಹಳ ಆಶ್ಚರ್ಯವಾಗಿತ್ತು. ಯಾಕೆಂದರೆ ಆತನಿಗೆ ನನಗಿಂತ ಹಸಿವು ಜಾಸ್ತಿ. ನಾನಾದರೋ ಒಂದು ಊಟ ಬಿಟ್ಟೇನು ಆದರೆ ಆತನಿಗೆ ಅದು ಅಸಾಧ್ಯವಾಗಿತ್ತು.  ನನಗ್ಯಾಕೋ ಅರ್ಥವಾಗಿಲ್ಲ. ಏನೋ ಆರೋಗ್ಯದಲ್ಲಿ ತೊಂದರೆ ಇರಬಹುದು ಎಂದೆಣಿಸಿ ನಾನೊಬ್ಬನೇ ಊಟ ಮಾಡಿ ಬಂದೆ. ಆವಾಗ ಕೂಡ ಆತ ಮಲಗಿರಲಿಲ್ಲ ಮಾತ್ರವಲ್ಲ ಏನೋ ಒಂದು ಖಿನ್ನತೆಯಿಂದ ಬಳಲುತ್ತಿದ್ದ ಎಂದೆನಿಸಿತು. ಮರುದಿನ ನನಗಿಂತ ಮೊದಲಾಗಿ ಅವನ ಬಸ್ಸು ಉಡುಪಿಗೆ ಹೋಗುವುದರಿಂದ ನಾನು ಏಳುವ ಮುಂಚೆಯೇ ಆತ ಹೋಗಿ ಆಗಿತ್ತು. ನೋಡೋಣ ರಾತ್ರಿ ಪುನಃ ಸಿಗುತ್ತಾನೆ ಆವಾಗ ವಿಚಾರಿಸಿದರಾಯಿತು ಎಂದು ನನ್ನ ಕರ್ತವ್ಯದಲ್ಲಿ ನಿರತನಾದೆ. ಯಥಾ ಪ್ರಕಾರ ರಾತ್ರಿ ಆತನೊಂದಿಗೆ ಊಟಕ್ಕೆ ಹೊರಡುವ ತಯಾರಿಯಲ್ಲಿದ್ದೆ. ಆವಾಗ ಆತನೇ ನನ್ನಲ್ಲಿ ಅವನ ಕಥೆಯನ್ನು ಹೇಳಲಾರಂಭಿಸಿದ.  

ನನ್ನನ್ನು ಆತ ಭಟ್ರೇ ಎಂದು ಸಂಬೋಧಿಸುತ್ತಿದ್ದ. 'ನೋಡಿ ಭಟ್ರೆ ನಿನ್ನೆ ನಾನು ನಾನಾಗಿರಲಿಲ್ಲ. ಮಾತ್ರವಲ್ಲ ನನಗೆ ಬೆಳಗ್ಗಿನವರೆಗೂ ನಿದ್ದೆಯೂ ಬರಲಿಲ್ಲ. ಇವತ್ತು ನಿಮಗೆ ಹೇಳುವಾಗಲೂ ನನ್ನ ಕೈಕಾಲು ನಡುಗುತ್ತದೆ' ಎಂದು ಹೇಳಲು ತೊಡಗಿದ. ನಡಿದದ್ದಿಷ್ಟೆ. ರಾತ್ರಿಯ ಕೊನೆಯ ಸರ್ವಿಸ್ನಲ್ಲಿ ಕೊಪ್ಪಕ್ಕೆ ಬರುತ್ತಿರುವಾಗ ಇನ್ನೇನು ಹದಿನೈದು ಕಿ. ಮೀ. ಇರುವಂತೆ ಒಂದು ತಿರುವಿನಲ್ಲಿ ಸಂಕವೊಂದಿದೆ. ಅದು ಕೂಡ ಒಂದು ವಾಹನಕ್ಕೆ ಹೋಗುವಷ್ಟೇ ಅಗಲವಾಗಿದ್ದುದರಿಂದ ಅಪಾಯಕಾರಿಯೇ ಆಗಿತ್ತು. ಆದರೂ ರಾತ್ರಿ ವಾಹನ ಚಾಲನೆ ಮಾಡುವಾಗ ಎದುರಿನಿಂದ ವಾಹನ ಬರುವುದು ಅದರ ಹೆಡ್ಲೈಟಿನ ಪ್ರಕಾಶದಿಂದ ಸಾಕಷ್ಟು ದೂರದಿಂದಲೇ ಗೊತ್ತಾಗುವುದರಿಂದ ತಿರುವುಗಳಲ್ಲೂ ವಾಹನಗಳು ಸ್ವಲ್ಪ ವೇಗದಲ್ಲೇ ಇರುತ್ತವೆ. ಅದರಂತೆ ನಮ್ಮ ಚಾಲಕನೂ ಆತನ ಹತೋಟಿಯಲ್ಲಿರುವ ಗರಿಷ್ಟ ವೇಗದಲ್ಲೇ ಚಲಾಯಿಸುತ್ತಿದ್ದ. ಇನ್ನೇನು ತಿರುವು ದಾಟಿ ಸಂಕದ ಮೇಲೆ ಬಸ್ಸು ಬರುವಾಗ ಮಧ್ಯ ಮಾರ್ಗದಲ್ಲಿ ಯಾವನೋ ಒಬ್ಬ ಮಲಗಿದ್ದು ಕಾಣಿಸಿತು.

ಬಸ್ಸಿನ ದೀಪಗಳು ರಸ್ತೆಯನ್ನು ಸರಿಯಾಗಿ ತೋರಿಸಲು ಬಸ್ಸು ತಿರುವಿನಿಂದ ನೇರ ದಾರಿಗೆ ಬರುವಷ್ಟು ಹೊತ್ತು ಅಂಧಕಾರವೇ ತುಂಬಿರುವುದು. ಅಷ್ಟರೊಳಗೆ ಬಸ್ಸನ್ನು ನಿಲ್ಲಿಸುವುದು ಅಸಾಧ್ಯವೇ ಸರಿ. ಹಾಗೆಂದು ಬ್ರೇಕ್ ಹಾಕಿದರೂ ಉಪಯೋಗವಿಲ್ಲ. ಆವಾಗ ಇರುವ ಒಂದೇ ದಾರಿ ಎಂದರೆ ಸಾಧ್ಯವಾದಷ್ಟು ಮಲಗಿದ್ದವನು ಮಧ್ಯಕ್ಕೆ ಬರುವಂತೆ ಎರಡು ಬದಿಯ ಚಕ್ರಗಳೂ ತಾಗದ ರೀತಿಯಲ್ಲಿ ಮುನ್ನಡೆಸುವುದು. ಈತ ಮಾಡಿದ್ದೂ ಅದನ್ನೇ. ಸಮಯಪ್ರಜ್ಞೆಯಿಂದ ಮಲಗಿದವನ ಮೇಲಿಂದಲೇ ಅಂದರೆ ಆತನಿಗೆ ಚಕ್ರಗಳು ತಾಗದಿರುವ ರೀತಿಯಲ್ಲಿ ಬಂದ ವೇಗದಲ್ಲೇ ಬಸ್ಸನ್ನು ಚಲಾಯಿಸಿದ್ದಾನೆ.  


ಬಸ್ಸೇನೋ ಮುಂದೋಡುತ್ತಿತ್ತು. ಆ ಕ್ಷಣದಲ್ಲೇ ಪಕ್ಕದ ಸೀಟಿನಲ್ಲಿರುವವರಿಗೆ ಈ ಘಟನೆ ಗೊತ್ತಾಗಿದೆಯೇ ಎಂಬುದೂ ತಿಳಿದುಕೊಳ್ಳಬೇಕಿತ್ತು. ಆದರೆ ಅವರೆಲ್ಲರೂ ಗಾಢ ನಿದ್ದೆಯಲ್ಲಿದ್ದುದರಿಂದ ಈ ಘಟನೆ ಚಾಲಕನಿಗಲ್ಲದೆ ಬೇರೆ ಯಾರಿಗೂ ತಿಳಿದಿಲ್ಲವೆಂಬುದೂ ಖಚಿತವಾಯಿತು. ಒಂದು ವೇಳೆ ಪ್ರಯಾಣಿಕರಿಗೆ ಗೊತ್ತಾಗಿದ್ದರೆ ಕೆಲವರಾದರೂ ಬೊಬ್ಬೆ ಹೊಡೆಯುತ್ತಿದ್ದರು. ಅಂತೆಯೇ ಬಸ್ಸನ್ನು ನಿಲ್ಲಿಸದೆ ಮುಂದೆ ಹೋಗುವಂತೆಯೂ ಇರಲಿಲ್ಲ. ಇದಿಷ್ಟು ನಿರ್ಧಾರವನ್ನೂ ಕ್ಷಣ ಮಾತ್ರದಲ್ಲಿ ತೆಗೆದುಕೊಂಡು ಬಹಳ ಪಾಪ ಪ್ರಜ್ಞೆಯಿಂದ ಚಾಲಕ ಬಸ್ಸನ್ನು ಕೊಪ್ಪಕ್ಕೆ ತಂದು ಗ್ಯಾರೇಜಿನಲ್ಲಿ ನಿಲ್ಲಿಸುವಾಗ ಆತನಿಗೆ ಅರಿವಿಲ್ಲದಂತೆಯೇ ಬೆವೆತು ಹೋಗಿದ್ದ. ಆತನ ಮನದೊಳಗೆ ಆಗುತ್ತಿರುವ ತಮುಲ ಅದೆಷ್ಟು ಇತ್ತು ಎಂದರೆ ಆತನಿಗೆ ಹಸಿವು ನಿದ್ದೆ ಎಂಬುದು ಹತ್ತಿರವೂ ಸುಳಿಯದಷ್ಟು. ಮನಸ್ಸಿಗೆ ಧೈರ್ಯವಿದ್ದರೂ ಮನುಷ್ಯನೊಬ್ಬನ ಮೇಲಿಂದ ಬಸ್ಸನ್ನು ಚಲಾಯಿಸಿದಾಗ ಒಂದಿಂಚು ಆತನಿಗೆ ಸ್ಪರ್ಶಿಸಿದರೂ ಆತ ಬದುಕುಳಿಯಲಾರದೆಂದೂ ತಿಳಿದಿರುವಾಗ ಅದು ಹೇಗೆ ನಿದ್ದೆ ಬಂದೀತು? ಅದೂ ಅಲ್ಲದೆ ಬೆಳಿಗ್ಗೆ ಆತನ ಬಸ್ಸು ಬೇಗ ಹೋಗಬೇಕಾಗಿರುವುದರಿಂದ ಆ ಘಟನೆ ನಡೆದಂಥ ಜಾಗವನ್ನು ನೋಡುವಲ್ಲಿವರೆಗೆ ಸಮಾಧಾನವಾದರೂ ಹೇಗೆ ಬರಬೇಕು? ಅಂತು ಬೆಳಗ್ಗಿನ ಚಳಿಯಲ್ಲೂ ಬೆವೆತಂಥ ಅನುಭವದೊಂದಿಗೆ ಬಸ್ಸನ್ನು ಚಲಾಯಿಸಬೇಕಾದ ಸಂದರ್ಭ ಮಾತ್ರ ಆತನನ್ನು ಹಿಂಡಿ ಹಿಪ್ಪೆ ಮಾಡಿತ್ತು.


ಅಂತು ಆ ಜಾಗ ಬಂದಾಗ ಒಂದಷ್ಟು ಜನ ಸೇರಿಕೊಂಡು ಹೊಡೆತ, ಗಲಾಟೆ, ಪೋಲಿಸ್ ಸ್ಟೇಷನ್ ಮುಂತಾದ ಪ್ರಸಂಗಗಳನ್ನು ನಿಭಾಯಿಸಬೇಕೆಂದು ಗಟ್ಟಿ ಮನಸ್ಸು ಮಾಡಿ ಕೊಂಡಿದ್ದ. ಆದರೆ ಆತ ಅಂದುಕೊಂಡಂತೆ ಅಲ್ಲಿ ಯಾವುದೇ ಹೆಣವಾಗಲಿ, ಗಾಯಾಳುವಾಗಲಿ, ಜನರಾಗಲಿ ಇಲ್ಲದ್ದರಿಂದ ನಮ್ಮ ಚಾಲಕ ತನ್ನ ಜೀವಮಾನದಲ್ಲೇ ದೀರ್ಘ ನಿಟ್ಟುಸಿರೊಂದನ್ನು ಬಿಟ್ಟದ್ದು ಮಾತ್ರ ಕಥೆಯಾಗಿಯೇ ಹೋಯಿತು. ನಾನು ಶಂಕರ್ ಕಂಪೆನಿಯಲ್ಲಿ ಇದ್ದಷ್ಟು ದಿನವೂ ಅಥವಾ ಇಂದಿಗೂ ಕೂಡ ಯಾವುದೇ ತಿರುವಿನಲ್ಲಿ ಸಂಕಗಳನ್ನು ಕಂಡಾಗ ಆ ಘಟನೆ ನೆನಪಾಗದೇ ಇರಲಾರದು... ನಮಸ್ಕಾರ ಮುಂದೆ ನೋಡೋಣ.

***********

-ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post