||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಿಶೇಷ ಲೇಖನ: ನವಭಾರತ ನಿರ್ಮಾಣಕ್ಕೊಂದು ಅರಿವಿನ ಸೋಪಾನ

ವಿಶೇಷ ಲೇಖನ: ನವಭಾರತ ನಿರ್ಮಾಣಕ್ಕೊಂದು ಅರಿವಿನ ಸೋಪಾನ

ಬೇಸ್- ಅಂಬೇಡ್ಕರ್ ಚೈತನ್ಯಕ್ಕೊಂದು ಅರ್ಥಪೂರ್ಣ ಗೌರವ


- ಡಾ. ಸಿ ಎನ್ ಅಶ್ವತ್ಥನಾರಾಯಣ

ಸರಿಯಾದ ಶಿಕ್ಷಣದ ಶಕ್ತಿ ಏನೆಂಬುದು ಇಡೀ ಮನುಕುಲಕ್ಕೇ ಗೊತ್ತಿದೆ. ಏಕೆಂದರೆ, ಶಿಕ್ಷಣವು ವ್ಯಕ್ತಿತ್ವ, ತಿಳಿವಳಿಕೆ, ಸಾಧನೆ, ಚಾರಿತ್ರ್ಯ, ಸಬಲೀಕರಣ, ಆತ್ಮವಿಶ್ವಾಸ, ತರ್ಕಶಕ್ತಿ, ದಾರ್ಶನಿಕತೆ, ಸಚ್ಚಿಂತನೆ- ಇತ್ಯಾದಿಗಳ ಮೂಲ. ಇಂತಹ ಶಿಕ್ಷಣದ ಮೂಲಬೀಜಗಳು ಇರುವುದು ನಮ್ಮ ಕುಟುಂಬ ವ್ಯವಸ್ಥೆಯಲ್ಲೇ. ಅದರಲ್ಲೂ ಇದರಲ್ಲಿ ನಮ್ಮ ತಾಯಂದಿರ ಪಾತ್ರ ಮಹತ್ತ್ವದ್ದು. ಹೀಗಾಗಿಯೇ, `ಮನೆಯೇ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರುವು, ಜನನಿಯಿಂದ ಪಾಠ ಕಲಿತ ಜನರು ಧನ್ಯರು’ ಎನ್ನುವ ಬಣ್ಣನೆ ಚಾಲ್ತಿಯಲ್ಲಿದೆ. 


ಆದರೆ, ಒಂದು ನಾಗರಿಕ ಸಮಾಜವಾಗಿ ಶಿಕ್ಷಣಕ್ಕೆ ಅಚ್ಚುಕಟ್ಟಾದ, ಗುಣಮಟ್ಟದ ಸಾಂಸ್ಥಿಕ ವ್ಯವಸ್ಥೆಯನ್ನು ಒದಗಿಸಬೇಕಾದ್ದು ಒಂದು ಸರಕಾರದ ಅಥವಾ ವ್ಯವಸ್ಥೆಯ ಆದ್ಯ ಕರ್ತವ್ಯ. ಇದನ್ನು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರಂತಹ ಚಿಂತಕರು ಚೆನ್ನಾಗಿ ಮನಗಂಡಿದ್ದರು. ಇದನ್ನು ಅವರ ಚಿಂತನೆಗಳಲ್ಲಿ ಸ್ಪಷ್ಟವಾಗಿ ಕಾಣಬಹುದು. 


ಆಧುನಿಕ ಜಗತ್ತಿನಲ್ಲಿ ಶಿಕ್ಷಣವು ಸಾಂಪ್ರದಾಯಿಕವಾದ ಚಹರೆಗಳಿಂದ ಬಿಡಿಸಿಕೊಂಡು, ಸಂಕೀರ್ಣ ಜಗತ್ತಿನ ಸಮಕಾಲೀನ ಅಗತ್ಯಗಳಿಗೆ ತಕ್ಕಂತೆ ರೂಪುಗೊಳ್ಳಬೇಕಾಗುತ್ತದೆ. ಇದು ಕಾಲಧರ್ಮ. ಖ್ಯಾತ ಚಿಂತಕ ಓಶೋ, ಇದನ್ನೆಲ್ಲ ಐವತ್ತು ವರ್ಷಗಳ ಹಿಂದೆಯೇ ಹೇಳಿದ್ದರು. ಇದರ ಜತೆಗೆ, ನಾವು ನಮ್ಮ ಜನ ಸಮುದಾಯಗಳು, ಸಮಾಜ ಮತ್ತು ರಾಷ್ಟ್ರದ ಅಗತ್ಯಗಳಿಗೆ ತಕ್ಕಂತೆ ಶಿಕ್ಷಣ ಕ್ರಮವನ್ನೂ ಗುಣಮಟ್ಟದ ಉನ್ನತ ಸಂಸ್ಥೆಗಳನ್ನೂ ಕಟ್ಟಬೇಕು; ಇದೆಲ್ಲ ಒಂದು ನಿರಂತರ ವಿದ್ಯಮಾನವಾಗಿರುವಂತೆ ನೋಡಿಕೊಳ್ಳಬೇಕು. ಈ ಮೂಲಕ ದೇಶೀಯ ಮತ್ತು ಜಾಗತಿಕ ಅಗತ್ಯಗಳಿಗೆ ಸ್ಪಂದಿಸಬೇಕು; ಅಲ್ಲಿನ ಸ್ಪರ್ಧೆಯನ್ನು ಎದುರಿಸಬೇಕು; ವಿಶ್ವ ಮಟ್ಟದಲ್ಲಿ ಭಾರತದ ಪ್ರತಿಭಾಶಕ್ತಿಯನ್ನು ಪ್ರದರ್ಶಿಸಬೇಕು.


ಅಂಬೇಡ್ಕರ್ ಅವರು ನಮ್ಮ ಸಂವಿಧಾನ ರಚನೆಯಲ್ಲಿ ವಹಿಸಿದ ಪಾತ್ರ ಎಲ್ಲರಿಗೂ ಗೊತ್ತಿದೆ. ಆದರೆ, ಅವರು ಅರ್ಥಶಾಸ್ತ್ರವೂ ಸೇರಿದಂತೆ 64 ವಿಷಯಗಳಲ್ಲಿ ಪದವಿ ಪಡೆದಿದ್ದರು ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ! ಅವರು, The Problem of the Rupee ಎನ್ನುವ ತಮ್ಮ ಮಹಾಪ್ರಬಂಧಕ್ಕೆ 1923ರಲ್ಲಿ ಪಿಎಚ್.ಡಿ ಪದವಿ ಪಡೆದುಕೊಂಡಿದ್ದು ಪ್ರತಿಷ್ಠಿತ `ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್’ನಿಂದ. ಅಂಬೇಡ್ಕರ್ ಈ ಸಂಸ್ಥೆಗೆ ಕಾಲಿಟ್ಟಿದ್ದು 1916ರಲ್ಲಿ. ಈ ಘಟನೆಗೆ 2016ರಲ್ಲಿ ನೂರು ವರ್ಷ ತುಂಬಿತಷ್ಟೆ. ಇದರ ನೆನಪಿಗೆ ಪ್ರಧಾನಿ ನರೇಂದ್ರ ಮೋದಿಯವರು, ತಮ್ಮ ಲಂಡನ್ ದಿನಗಳಲ್ಲಿ ಉಳಿದುಕೊಂಡಿದ್ದ ಮನೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಿ, ಲೋಕಾರ್ಪಣೆ ಮಾಡಿದರು. ನಾವೀಗ, ಅಂಬೇಡ್ಕರ್ ಅವರ ಪಿಎಚ್.ಡಿ ಸಾಧನೆಯ ಶತಮಾನೋತ್ಸವದ ಹೊಸ್ತಿಲಲ್ಲಿದ್ದೇವೆ. ಯೋಗಾಯೋಗವೆಂಬಂತೆ, ನಾವೀಗ ಅವರ ಗೌರವಾರ್ಥವಾಗಿ ಭವ್ಯವಾಗಿ ನಿರ್ಮಿಸಿರುವ `ಡಾ.ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಯೂನವರ್ಸಿಟಿ’ (ಬೇಸ್) ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರಿಂದ ಲೋಕಾರ್ಪಣೆಗೊಳ್ಳುತ್ತಿದೆ. ಇದು, ನಮ್ಮ ಸಂವಿಧಾನ ಶಿಲ್ಪಿಗೆ ಅವರ 125ನೇ ಜನ್ಮದಿನದ ಅಂಗವಾಗಿ ಸಮರ್ಪಿಸುತ್ತಿರುವ ಒಂದು ಅರ್ಥಪೂರ್ಣ ಕೊಡುಗೆ. ಇದರ ಜತೆಯಲ್ಲೇ, ಅಂಬೇಡ್ಕರ್ ಅವರ 22 ಅಡಿ ಎತ್ತರದ ಕಂಚಿನ ಪುತ್ಥಳಿಯನ್ನೂ ಅನಾವರಣಗೊಳಿಸಲಾಗುತ್ತಿದೆ.


`ಬೇಸ್’ ಕ್ಯಾಂಪಸ್ ನಮ್ಮ ಉಳಿದ ವಿ.ವಿ.ಗಳಂತಲ್ಲ. ಇದೊಂದು ಏಕೀಕೃತ ವಿಶ್ವವಿದ್ಯಾಲಯ. 43 ಎಕರೆ ವಿಶಾಲ ಪ್ರದೇಶದಲ್ಲಿ ತಲೆಯೆತ್ತಿರುವ ಈ ಸಂಸ್ಥೆಯಲ್ಲಿ ಅರ್ಥಶಾಸ್ತ್ರ ಮತ್ತು ಸಮಾಜವಿಜ್ಞಾನಗಳ ಅಧ್ಯಯನ ಪ್ರಧಾನವಾಗಿ ನಡೆಯಲಿದೆ. ಇಲ್ಲಿರುವ ಬೋಧಕ ಸಿಬ್ಬಂದಿಯೆಲ್ಲ ಸ್ವತಃ ಪಿಎಚ್.ಡಿ ಪಡೆದಿರುವವರು. 2017ರಲ್ಲಿ ಬೀಜರೂಪದಲ್ಲಿ ಅಸ್ತಿಭಾರ ಕಂಡ `ಬೇಸ್’ಗೆ ನಮ್ಮ ಸರಕಾರ ಅಗ್ರ ಆದ್ಯತೆ ಕೊಟ್ಟಿದ್ದು, ಈಗ ಮೊದಲ ಹಂತದ ಕ್ಯಾಂಪಸ್ ಮೈದಾಳುವಂತೆ ಮಾಡಿದೆ. ಈ ಇಚ್ಛಾಶಕ್ತಿಯ ಫಲವಾಗಿ 13 ಬ್ಲಾಕ್ ಗಳು ನಿರ್ಮಾಣವಾಗಿದ್ದು, ಇದಕ್ಕಾಗಿ 250 ಕೋಟಿ ರೂ.ಗಳನ್ನು ವಿನಿಯೋಗಿಸಲಾಗಿದೆ. ವಿಕಸನದ ಹಂತದಲ್ಲೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡಿರುವುದು `ಬೇಸ್’ನ ಹೆಗ್ಗಳಿಕೆಗಳಲ್ಲೊಂದು. ಹೀಗಾಗಿ, ಆರಂಭದಿಂದಲೇ ಇಲ್ಲಿ ಪರಿಪೂರ್ಣ ಮತ್ತು ಸಮಗ್ರ ಶಿಕ್ಷಣದ ವ್ಯವಸ್ಥೆ ಬೇರು ಬಿಡಲು ಅವಕಾಶವಾಗಿದೆ. ಅರ್ಥಶಾಸ್ತ್ರದಲ್ಲಿ 5 ವರ್ಷಗಳ ಇಂಟೆಗ್ರೇಟೆಡ್  ಎಂ.ಎಸ್ಸಿ, 2 ವರ್ಷಗಳ ಎಂ.ಎಸ್ಸಿ ಮತ್ತು ಹಣಕಾಸು ಅರ್ಥಶಾಸ್ತ್ರದಲ್ಲಿ ಇಲ್ಲಿ ಸದ್ಯಕ್ಕೆ ಸ್ನಾತಕೋತ್ತರ ಪದವಿಗಳನ್ನು ಒದಗಿಸಲಾಗುತ್ತಿದೆ.


`ಬೇಸ್’ನಲ್ಲಿ ಸಾಮಾಜಿಕ ನ್ಯಾಯ ಮತ್ತು ಪ್ರತಿಭೆ ಎರಡಕ್ಕೂ ಮನ್ನಣೆ ಕೊಡಲಾಗುತ್ತಿದೆ. ಇದರ ಜತೆಗೆ, ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ 371ಜೆ ವಿಧಿಯ ಪ್ರಕಾರ ಕೊಡಬೇಕಾದ ಆದ್ಯತೆಯನ್ನೂ ಪಾಲಿಸಲಾಗುತ್ತಿದೆ. ರಾಜ್ಯದ ಪಾಲಿಗೆ ಮಕುಟಮಣಿಯಾಗಲಿರುವ ಮತ್ತು ದೇಶ-ವಿದೇಶಗಳ ಮಟ್ಟದಲ್ಲಿ ಗಮನ ಸೆಳೆಯಲಿರುವಂತಹ `ಬೇಸ್’ನಲ್ಲಿ ಮುಂದಿನ ಮೂರು ವರ್ಷಗಳಲ್ಲಿ, ಅಂದರೆ 2024-25ನೇ ಶೈಕ್ಷಣಿಕ ಸಾಲಿನ ವೇಳೆಗೆ 1,100 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಸಿಗಲಿದೆ.


ಶಿಕ್ಷಣದಲ್ಲಿ ನಾವು ಜಾಗತಿಕ ಮಟ್ಟದಲ್ಲಿ ಪ್ರತಿಷ್ಠಾಪಿತವಾಗಬೇಕಾದ್ದು ಇಂದಿನ ತುರ್ತು ಅನಿವಾರ್ಯತೆಗಳಲ್ಲಿ ಒಂದು. ಇದು ಸಾಧ್ಯವಾಗಬೇಕೆಂದರೆ ಸಂಶೋಧನೆಗೆ ಒತ್ತು ಸಿಗುವಂತಹ ಶೈಕ್ಷಣಿಕ ವಾತಾವರಣವನ್ನು ನಿರ್ಮಿಸಬೇಕಾದ್ದು ಅಗತ್ಯ. ಇದನ್ನು ಗಮನದಲ್ಲಿ ಇಟ್ಟುಕೊಂಡು, ದೇಶದ ಪ್ರತಿಷ್ಠಿತ ಅಧ್ಯಯನ ಸಂಸ್ಥೆಗಳಾದ ಎನ್.ಎಸ್.ಎಲ್.ಯು.ಐ, ಭೋಪಾಲಿನಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಸುಶಾಸನ ಮತ್ತು ನೀತಿ ವಿಶ್ಲೇಷಣಾ ಸಂಸ್ಥೆ, `ಸ್ಕೋಪ್’ ಮುಂತಾದ ಸಂಸ್ಥೆಗಳೊಂದಿಗೆ ಸಂಶೋಧನೆ ಮತ್ತು ಜ್ಞಾನ ವಿನಿಯಯದ ಒಡಂಬಡಿಕೆಗಳನ್ನು ಮಾಡಿಕೊಳ್ಳಲಾಗಿದೆ. ಇದರ ಜತೆಗೆ, ಕೇಂದ್ರ ಸರಕಾರದ ಹಲವು ಇಲಾಖೆಗಳು ಹಾಗೂ ಯೂನಿಸೆಫ್, ಯುನೈಟೆಡ್ ಕಿಂಗ್ಡಮ್ ವಿ.ವಿ.ಗಳಂಥ ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೂ ಇಂತಹ ಒಪ್ಪಂದಗಳಿಗೆ ಅಂಕಿತ ಹಾಕಲಾಗಿದೆ.


ಯಾವುದೇ ತರಹದ ಶಿಕ್ಷಣ ಸಂಸ್ಥೆಯಾಗಲಿ, ಅಲ್ಲಿ ಓದಿದವರಿಗೆ ಉದ್ಯೋಗದ ಖಾತ್ರಿ ಸಿಗುವಂತೆ ನೋಡಿಕೊಳ್ಳಬೇಕಾದ್ದು ತುಂಬಾ ಮುಖ್ಯ. ಇಲ್ಲದಿದ್ದರೆ, ಎಂತಹ ಸುಸಜ್ಜಿತ ಕ್ಯಾಂಪಸ್ಸುಗಳನ್ನು ಕಟ್ಟಿದರೂ ಪ್ರಯೋಜನವಿಲ್ಲ. `ಬೇಸ್’ ಇದನ್ನು ತನ್ನ ಪ್ರಮುಖ ಗುರಿಗಳಲ್ಲಿ ಒಂದಾಗಿ ಇಟ್ಟುಕೊಂಡಿದೆ ಎನ್ನುವುದು ಗಮನಾರ್ಹ ಸಂಗತಿ. ಏಕೆಂದರೆ, ಕಳೆದ ನಾಲ್ಕೈದು ವರ್ಷಗಳಲ್ಲಿ ಇಲ್ಲಿ ವಿದ್ಯಾರ್ಥಿಗಳಾಗಿದ್ದವರ ಪೈಕಿ ಶೇಕಡ 80ರಷ್ಟು ಜನರನ್ನು ಉದ್ಯೋಗಗಳು ಅರಸಿಕೊಂಡು ಬಂದಿವೆ. ಅದರಲ್ಲೂ ಬ್ಯಾಂಕಿಂಗ್, ಕನ್ಸಲ್ಟೆನ್ಸಿಗಳು, ಸಂಶೋಧನಾ ಸಂಸ್ಥೆಗಳು, ಎನ್.ಜಿ.ಓ.ಗಳು ಮೊದಲಾದ ವಲಯಗಳಲ್ಲಿ `ಬೇಸ್’ ವಿದ್ಯಾರ್ಥಿಗಳಿಗೆ ಒಳ್ಳೆಯ ಬೇಡಿಕೆ ಇದೆ. ಇದಲ್ಲದೆ, ಓದುತ್ತಿರುವ ಹಂತದಲ್ಲಿ ಪ್ರಮುಖ ಸಂಸ್ಥೆಗಳಲ್ಲಿ ಇಂಟರ್ನ್ಶಿಪ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. `ಬೇಸ್’ ಸ್ಥಾಪನೆಯ ಹಿಂದೊಂದು ಸಮಾಜಪರವಾದ ಮಹೋದ್ದೇಶವಿದೆ. ಈ ಸಂಸ್ಥೆಗೆ ಸ್ವಾಯತ್ತ ಸ್ಥಾನಮಾನಗಳು ಸಿಗುವ ದಿನಗಳು ದೂರವೇನಿಲ್ಲ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ. ಇಂಥ ಉನ್ನತ ಸಂಸ್ಥೆಯು ನಾಲ್ಕು ಗೋಡೆಗಳಿಗೆ ಸೀಮಿತವಾಗದೆ, ನವಕರ್ನಾಟಕ ಮತ್ತು ನವಭಾರತ ನಿರ್ಮಾಣಕ್ಕೆ ಮೇಲ್ಪಂಕ್ತಿಯ ಸೋಪಾನವಾಗಲಿ ಎನ್ನುವುದೇ ನಮ್ಮ ಆಶಯ. 

(ಲೇಖಕರು ಉನ್ನತ ಶಿಕ್ಷಣ, ಐಟಿ-ಬಿಟಿ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಸಚಿವರು)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

0 Comments

Post a Comment

Post a Comment (0)

Previous Post Next Post