ಕನ್ನಡದ ಭಾಷೆ ಸಾಹಿತ್ಯ ವೈಶಿಷ್ಟ್ಯಪೂರ್ಣವಾದದ್ದು: ಡಾ. ವಸಂತಕುಮಾರ ಪೆರ್ಲ

Upayuktha
0

ಒಡಿಶಾದ ದಾಮಂಜೋಡಿಯಲ್ಲಿ ಅಂತಾರಾಷ್ಟ್ರೀಯ ಕವಿಗೋಷ್ಠಿ, ಸಾಹಿತ್ಯಮೇಳ


ದಾಮಂಜೋಡಿ (ಕೋರಾಪುಟ್ ಜಿಲ್ಲೆ, ಒಡಿಶಾ ರಾಜ್ಯ): ಕನ್ನಡ ಭಾಷೆಗೆ ಸುಮಾರು ಒಂದು ಸಾವಿರದ ಆರುನೂರು ವರ್ಷಗಳ ಲಿಖಿತ ಇತಿಹಾಸವಿದ್ದು, ಸಾಹಿತ್ಯಕ್ಕೆ ಸುಮಾರು ಒಂದುಸಾವಿರದ ಮುನ್ನೂರು ವರ್ಷಗಳ ಇತಿಹಾಸವಿದೆ. ಇಷ್ಟೊಂದು ಇತಿಹಾಸವಿರುವ ಕನ್ನಡವು ಪೂರ್ವದ ಹಳಗನ್ನಡ, ಹಳಗನ್ನಡ, ನಡುಗನ್ನಡ, ಹೊಸಗನ್ನಡ ಎಂದು ವಿಂಗಡಣೆಯಾಗಿ ಇಂದು ಶಾಸ್ತ್ರೀಯ ಭಾಷೆಯ ಸ್ಥಾನವನ್ನು ಅಲಂಕರಿಸಿದೆ ಎಂದು ಕವಿ - ಸಾಹಿತಿ ಡಾ. ವಸಂತಕುಮಾರ ಪೆರ್ಲ ಹೇಳಿದರು.


ಒಡಿಶಾ ರಾಜ್ಯದ ಕೋರಾಪುಟ್ ಜಿಲ್ಲೆಯ ದಾಮಂಜೋಡಿ ಎಂಬಲ್ಲಿ ದಿನಾಂಕ 11, 12 ಮತ್ತು 13 ರಂದು ಜರಗಿದ ಅಂತಾರಾಷ್ಟ್ರೀಯ ಕವಿಗೋಷ್ಠಿ ಮತ್ತು ಸಾಹಿತ್ಯಮೇಳದಲ್ಲಿ ಕನ್ನಡ ಮತ್ತು ತುಳು ಭಾಷೆಯನ್ನು ಪ್ರತಿನಿಧಿಸಿ ಅವರು ಮಾತಾಡುತ್ತಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿ, ಒಡಿಶಾದ ಸಂಸ್ಕೃತಿ ಇಲಾಖೆ ಮತ್ತು ಇಂಕ್ ಡ್ಯೂ ಎಂಬ ಸಾಹಿತ್ಯ - ಸಾಂಸ್ಕೃತಿಕ ಸಂಸ್ಥೆ ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿದ್ದವು.


ಆದರೆ ಕನ್ನಡ ಭಾಷೆಯ ಪ್ರಾಚೀನತೆಯು  ಸುಮಾರು ಎರಡು ಸಾವಿರ ವರ್ಷಗಳ ಹಿಂದಕ್ಕೆ ಹೋಗುತ್ತದೆ. ಅದು ದ್ರಾವಿಡ ಭಾಷೆಗಳು ಮೂಲ ದ್ರಾವಿಡದಿಂದ ಪ್ರತ್ಯೇಕಗೊಳ್ಳಲು ಆರಂಭಿಸಿದ ಕಾಲವಾಗಿದೆ. ಮೂಲ ದ್ರಾವಿಡದಿಂದ ಮೊದಲಿಗೆ ತುಳು, ಬಳಿಕ ಕನ್ನಡ, ಅನಂತರ ತೆಲುಗು ಮತ್ತು ಕೊನೆಯಲ್ಲಿ ಮಲಯಾಳ ಕವಲೊಡೆಯಿತು. ತಮಿಳು ಮೂಲದ್ರಾವಿಡಕ್ಕೆ ತೀರಾ ಹತ್ತಿರವಾಗಿದ್ದು  ಕಾಲಕ್ಕೆ ತಕ್ಕಂತೆ ತಾನೂ ಬದಲಾಗುತ್ತ ಬಂದಿದೆ ಎಂದು ಡಾ. ಪೆರ್ಲ ಅವರು ಹೇಳಿದರು. 


ಮೂರು ದಿನಗಳ ಕಾಲ ಜರಗಿದ ಸಾಹಿತ್ಯ ಮೇಳದ ಇನ್ನೊಂದು ಗೋಷ್ಠಿಯಲ್ಲಿ ಅವರು ಕನ್ನಡ ಮತ್ತು ತುಳು ಸ್ವರಚಿತ ಕವಿತೆಗಳನ್ನು ವಾಚಿಸಿದರಲ್ಲದೆ ಈ ಸಾಹಿತ್ಯಗಳ ಬಗೆಗೂ ಮಾತಾಡಿದರು.


ಎಲ್ಲ ಭಾರತೀಯ ಭಾಷೆಗಳೊಂದಿಗೆ ಹಲವು ವಿದೇಶಿ ಪ್ರತಿನಿಧಿಗಳು ಸಾಹಿತ್ಯಮೇಳದಲ್ಲಿ ಭಾಗವಹಿಸಿದ್ದರು. ಮೂರು ದಿನಗಳಲ್ಲಿ ಹಲವಾರು ಗೋಷ್ಠಿಗಳು ಇದ್ದವು. ಹಿರಿಯ ಜನಪ್ರತಿನಿಧಿಗಳು, ರಾಷ್ಟ್ರೀಯ ಅಂತಾರಾಷ್ಟ್ರೀಯ ಗಣ್ಯ ಸಾಹಿತಿಗಳು ಭಾಗವಹಿಸಿದ್ದರು.


ದಾಮಂಜೋಡಿಯಲ್ಲಿ ಏಷ್ಯಾ ಖಂಡಕ್ಕೆ ಅತೀ ದೊಡ್ಡದಾದ ಕೇಂದ್ರ ಸರಕಾರ ಸ್ವಾಮ್ಯದ ನ್ಯಾಷನಲ್ ಅಲ್ಯೂಮಿನಿಯಂ ಕಂಪೆನಿ ಇದ್ದು ಈ ಕಾರ್ಯಕ್ರಮವನ್ನು ಭಾಗಶಃ ಪ್ರಾಯೋಜಿಸಿತ್ತು. ಇದೊಂದು ಅಪರೂಪದ ಅವಕಾಶ ಎಂದು ವಸಂತಕುಮಾರ ಪೆರ್ಲ ಅವರು ಪ್ರತಿಕ್ರಿಯಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top