ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ, ʼಮಂಗಳಾ ಯೋಜನೆʼ ಗ್ರಾಮ ದತ್ತು ಸ್ವೀಕಾರ ಕಾರ್ಯಕ್ರಮದಡಿ, ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಮಂಗಳೂರು ಮತ್ತು ಜಿಲ್ಲಾ ಸಂಚಾರಿ ನೇತ್ರ ಘಟಕ, ಪುತ್ತೂರಿನ ಆನಂದಾಶ್ರಮ ಸೇವಾ ಟ್ರಸ್ಟ್, ಜೆಸಿಐ ಮಂಗಳಗಂಗೋತ್ರಿ ಹಾಗೂ ನಾಟೆಕಲ್ ಪ್ರಾಥಮಿಕ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಸಹಭಾಗಿತ್ವದಲ್ಲಿ ಕೊಣಾಜೆ, ಬಾಳೆಪುಣಿ, ನರಿಂಗಾನ, ಹರೇಕಳ, ಪಜೀರು, ಬೆಳ್ಮ ಮತ್ತು ಮಂಜನಾಡಿ ಗ್ರಾಮ ಪಂಚಾಯತ್ ವ್ಯಾಪ್ತಿ ಹಾಗೂ ಸುತ್ತಮುತ್ತಲಿನ ನಾಗರಿಕರಿಗಾಗಿ ನಾಟೆಕಲ್ನ ಪ್ರಾಥಮಿಕ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಮಂಗಳವಾರ ಉಚಿತ ನೇತ್ರ ಚಿಕಿತ್ಸಾ ಸೇವಾ ಶಿಬಿರ ಆಯೋಜಿಸಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ಮಾತನಾಡಿ, "ಆರೋಗ್ಯದ ಮಹತ್ವ ಅರಿವಾಗುವುದು ನಮ್ಮ ಅದು ಹದಗೆಟ್ಟಾಗ ಮಾತ್ರ. ಅದಾಗಬಾರದು. ನಲವತ್ತು ವರ್ಷ ದಾಟಿದ ಪ್ರತಿಯೊಬ್ಬ ವ್ಯಕ್ತಿಯು ಕನಿಷ್ಠ ಎರಡು ವರ್ಷಕ್ಕೊಮ್ಮೆ ನೇತ್ರ ತಜ್ಞರನ್ನು ಸಂದರ್ಶಿಸಿ ಪರೀಕ್ಷಿಸಿಕೊಳ್ಳಬೇಕು. ಕಣ್ಣಿನ ಆರೋಗ್ಯಕ್ಕೆ ಹಾನಿಯುಂಟುಮಾಡುವ ಅತಿಯಾದ ಮೊಬೈಲ್ ಬಳಕೆ ಬಗ್ಗೆ ಎಚ್ಚರದಿಂದಿರಬೇಕು. “ಜನರು ಆಯುಷ್ಮಾನ್ ಭಾರತ್, ಜ್ಯೋತಿ ಸಂಜೀವಿನಿ ಮೊದಲಾದ ಯೋಜನೆಗಳು ಮತ್ತು ಅರೋಗ್ಯ ಶಿಬಿರಗಳ ಪ್ರಯೋಜನ ಪಡೆದುಕೊಳ್ಳಬೇಕು. ವಿಶ್ವವಿದ್ಯಾನಿಲಯ ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪರ ಕಾರ್ಯಕ್ರಮಗಳನ್ನು ಆಯೋಜಿಸಲಿದೆ" ಎಂದರು.
ಮಂಗಳಾ ಯೋಜನೆಯ ಸಂಯೋಜಕ ಪ್ರೊ. ಪ್ರಶಾಂತ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಸಂಚಾರಿ ನೇತ್ರ ಘಟಕದ ನೇತ್ರಾಧಿಕಾರಿ ಅನಿಲ್ ರಾಮಾನುಜಂ, ನಾಟೆಕಲ್ ಪ್ರಾಥಮಿಕ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ವೈದ್ಯಾಧಿಕಾರಿ ಡಾ. ಹರ್ಷಿತಾ, ಪುತ್ತೂರಿನ ಆನಂದಾಶ್ರಮ ಸೇವಾ ಟ್ರಸ್ಟ್ ನ ಅಧ್ಯಕ್ಷೆ ಡಾ. ಗೌರಿ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಅಂಗಾಂಗ ಕಸಿ ಸಂಯೋಜಕ ಪದ್ಮಾ ವೇಣೂರು, ರಕ್ತದಾನ, ಅಂಗಾಂಗ ದಾನಗಳ ಮಹತ್ವದ ಬಗ್ಗೆ ಮನವರಿಕೆ ಮಾಡಿದರು.
ಮಂಗಳಗಂಗೋತ್ರಿಯ ಜೆಸಿಐ ಅಧ್ಯಕ್ಷ ಜೆ.ಸಿ ಕಮಲಾಕ್ಷ ಶೆಟ್ಟಿಗಾರ್ ವಂದನಾರ್ಪಣೆಗೈದರು. ಜೆ.ಸಿ ಜಯಲಕ್ಷ್ಮಿ ಜಿ. ಕಾರ್ಯಕ್ರಮ ನಿರೂಪಣೆ ಮಾಡಿದರು. ಶಿಬಿರದಲ್ಲಿ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಮಂಗಳೂರು, ಜಿಲ್ಲಾ ಸಂಚಾರಿ ನೇತ್ರ ಘಟಕ ಹಾಗೂ ಕೆಎಂಸಿ ಯ ಪ್ರಸಿದ್ಧ ನೇತ್ರ ತಜ್ಞರು ನೇತ್ರ ತಪಾಸಣೆ ನಡೆಸಿದರು. ಕಣ್ಣಿನ ಪರೀಕ್ಷೆ, ಚಿಕಿತ್ಸೆ ಮತ್ತು ಸಲಹೆ, ಉಚಿತ ಲಭ್ಯ ಕನ್ನಡಕಗಳ ವಿತರಣೆ, ತಪಾಸಣೆಯ ನಂತರ ಅಗತ್ಯತೆ ಇರುವವರಿಗೆ ಸರಕಾರಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಂದ ಉಚಿತವಾಗಿ ಶಸ್ತ್ರಚಿಕಿತ್ಸೆಗೆ ವ್ಯವಸ್ಥೆ ಮಾಡಲಾಯಿತು.
ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಸುತ್ತಮುತ್ತಲಿನ ಗ್ರಾಮಗಳ ಸುಮಾರು 300 ನಾಗರಿಕರು ನೋಂದಣಿ ಮಾಡಿಕೊಂಡು ಶಿಬಿರದ ಪ್ರಯೋಜನ ಪಡೆದುಕೊಂಡರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ