
ಸಮಾಜದಲ್ಲಿ ಪ್ರಾಣಿಪ್ರಿಯರು ಇರುವಂತೆ ಪ್ರಾಣಿಗಳೆಂದರೆ ಮೂಗು ಮುರಿಯುವವರೂ ಇದ್ದಾರೆ ಎಂಬುದು ನಿರ್ವಿವಾದ. ಪ್ರಾಣಿಗಳಿಗೂ ಸಹ ಮನುಷ್ಯರಂತೆ ಜೀವಿಸುವ ಹಕ್ಕಿದೆ. ಅವುಗಳೂ ಸಹ ಪ್ರಕೃತಿ ಮತ್ತು ಮನುಷ್ಯರೊಂದಿಗೆ ಭಾವನಾತ್ಮಕ ಒಡನಾಟ ಹೊಂದಿರುತ್ತವೆ ಎಂಬುದನ್ನು ಮನೋಜ್ಞವಾಗಿ ಕಟ್ಟಿಕೊಟ್ಟಿದೆ. ಬಿಟ್ಟಿಯಾಗಿ ಉಪದೇಶ ಮಾಡುವ ಜನ ಹಸಿದ ಹೊಟ್ಟೆಗೆ ತುತ್ತು ಅನ್ನ ನೀಡಲಾರರು, ಬೇರೆಯವರ ಸಮಸ್ಯೆಗಳನ್ನು ನೋಡಿ ಕೇಕೆಯಾಕಿ ನಗುವವರು ತಮಗೆ ಸಮಸ್ಯೆಯಾದಾಗ ಸಾವಿರ ಪ್ರಶ್ನೆ ಎಸೆಯುತ್ತಾರೆ. ಸಹಾಯಕ್ಕೆ ಸಮಾಜ ಸಹಕರಿಸಲಿಲ್ಲವೆಂದು ಹಪಹಪಿಸುತ್ತಾರೆ. ಇಲಿಗಳು ವಾಸಸ್ಥಾನ ಮಾಡಿಕೊಂಡಿರುವ ತಂಗುದಾಣಗಳಲ್ಲೂ ಸಹ ಮನುಷ್ಯನೊಂದಿಗೆ ಒಡನಾಟವಿರುವ ನಾಯಿ ಯಂತಹ ನಿಷ್ಟಾವಂತ ಪ್ರಾಣಿ ಜೊತೆಗಿರಲು ಅವಕಾಶ ನೀಡುವುದಿಲ್ಲ ಎಂಬಂತಹ ಅನೇಕ ವಾಸ್ತವ ಸಂಗತಿಗಳನ್ನು ನಿರ್ದೇಶಕರು ಸೂಚ್ಯವಾಗಿ ತಿಳಿಸಿದ್ದಾರೆ.
ಕಿರಣ್ ರಾಜ್ ಕೆ ನಿರ್ದೇಶನದ ರಕ್ಷಿತ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಚಾರ್ಲಿ 777 ಅನೇಕ ಮಜುಲುಗಳಲ್ಲಿ ತನ್ನ ಕಥೆಯನ್ನು ತೆರೆದಿಡುತ್ತ ಸಾಗುತ್ತದೆ. ವಾಹನ ಚಾಲನ ಪರವಾನಗೆ ಪಡೆಯುವಂತೆ ನಾಯಿಗಳನ್ನು ಸಾಕಲು ಪರವಾನಗಿ ಪಡೆಯಬೇಕು, ಅವನ್ನು ಸಾಕಲು ಸಹ ಒಂದು ಪುಸ್ತಕ ಓದಬೇಕು, ಅವುಗಳಿಗೂ ಕೂಡ ಕ್ಯಾಂಪ್ ನಡೆಯುತ್ತದೆ, ಅಷ್ಟಲ್ಲದೆ ಅವುಗಳಿಗೂ ಸಹ ಸ್ಪರ್ಧೆ ಏರ್ಪಡಿಸಿ ಏದುಸಿರು ಬಿಡುತ್ತಾರೆ ಎಂಬಂತಹ ಸಂಗತಿಗಳು ಚಾರ್ಲಿ 777 ನೋಡಿದ ನಂತರವೇ ಗೊತ್ತಾಗಿದ್ದು.
ತಿಂದುಂಡು ಬಿಸಾಡಿದ್ದ ಇಡ್ಲಿಯನ್ನು ತಿಂದು ಜೀವಿಸುತ್ತಿದ್ದ ನಾಯಿಯೊಂದು ನಾಯಕನ ಮನೆ ಪಕ್ಕದಲ್ಲೇ ದ್ವಿಚಕ್ರ ಅಪಘಾತಕ್ಕೀಡುವ ದೃಶ್ಯ ಮನಕಲಕುತ್ತದೆ. ಆ ಅಪಘಾತದಲ್ಲಿ ಮನುಷ್ಯಂತಯೇ ನಾಯಿಗೆ ಪೆಟ್ಟು ಬಿದ್ದು ಅನಾಥವಾಗಿ ಬಿದಿದ್ದರೂ ಮನುಷ್ಯನನ್ನು ಸಂತೈಸುವ ಜನ ನಾಯಿಗೆ ಮಾತ್ರ ಹಿಡಿಶಾಪ ಹಾಕುತ್ತಾರೆ. ಪೆಟ್ಟು ತಿಂದು ಅನಾಥವಾಗಿ ಬಿದ್ದಿದ್ದ ದೃಶ್ಯವನ್ನು ಮಕ್ಕಳು ಕಂಡು ಮರುಗಿದರೂ ಪಾಪ! ಮಕ್ಕಳು ಅಸಹಾಯಕರು.
ಚಿಕ್ಕಂದಿನಲ್ಲೇ ತನ್ನ ಕುಟುಂಬ ಕಳೆದುಕೊಂಡಿದ್ದ, ಯಾರೊಂದಿಗೂ ಬೆರೆಯದ ಸದಾ ಸಿಡುಕು ಸ್ವಭಾವದ ನಾಯಕ 'ಧರ್ಮ' ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುತ್ತಾನೆ. ಒಂಟಿಯಾಗಿ ಬದುಕುತ್ತಿದ್ದ ಜೀವನದಲ್ಲಿ ನಾಯಿಯೊಂದು ಆಪ್ತ ಗೆಳೆಯನಂತೆ ವರ್ತಿಸಿದಾಗ ಆತನಲ್ಲೂ ಸಹ ಸಕಾರಾತ್ಮಕ ಬದಲಾವಣೆಗಳಾಗುತ್ತವೆ. ಮೊದ ಮೊದಲು ನಾಯಿಯು ಮನೆಯಲ್ಲಿ ಮಾಡುವ ಅವಾಂತರಗಳು ತಿಳಿಹಾಸ್ಯದೊಂದಿಗೆ ತುಟಿಯಂಚಲ್ಲಿ ನಗು ತರಿಸಿ ಸಿನಿಪ್ರಿಯರನ್ನು ನಗಿಸುತ್ತದೆ. ನಾಯಕ ಮೂರ್ಛೆ ಹೋದಾಗಲೂ ಸಹ ನಾಯಿ ತನ್ನ ನೀಯತ್ತು ತೋರಿಸುವುದರ ಮೂಲಕ ನಾಯಕನ ಮನಸ್ಸನ್ನು ಗೆಲ್ಲುತ್ತದೆ. ಸಿಗರೇಟು ಸೇದುವಂತಹ ದುರಭ್ಯಾಸವನ್ನು ಬಿಡಿಸುತ್ತದೆ. ಒಮ್ಮೆ ನಾಯಿಯ ಆರೋಗ್ಯ ಹದಗೆಟ್ಟಾಗ ನಾಯಿಗೂ ಕ್ಯಾನ್ಸರ್ ಇದೆ ಎಂಬುದು ವೈದ್ಯರ ಮೂಲಕ ಗೊತ್ತಾಗುತ್ತದೆ. ಇರುವಷ್ಟು ದಿನ ಚೆನ್ನಾಗಿ ನೋಡಿಕೊಳ್ಳಬೇಕೆಂಬ ಭಾವ ನಾಯಕ ಧರ್ಮನಲ್ಲಿ ಗರಿಗೆದರಿ ಪ್ರಕೃತಿ ದರ್ಶನ ಮಾಡಿಸಲು ತನ್ನ ಬೈಕ್ ಮೂಲಕ ಬಹುದೂರ ತೆರಳುತ್ತಾನೆ. ತನ್ನ ಪ್ರೀತಿ ಪಾತ್ರ ಚಾರ್ಲಿಗೋಸ್ಕರ ತನ್ನ ಜೀವನವನ್ನೇ ಮುಡುಪಾಗಿಡುವ ಸನ್ನಿವೇಶಗಳು ಕಣ್ಣಂಚಲ್ಲಿ ನೀರು ಜಿನಿಗಿಸುತ್ತವೆ. ಪ್ರಯಾಣ ಸಾಗುತ್ತಲೇ ಆಕಸ್ಮಿಕವಾಗಿ ಸಮಾಜ ಒಡ್ಡುವ ಸ್ಪರ್ಧೆಗೆ ಎದುರಾಗಿ ಸಮಾಜದಿಂದ ಅವಮಾನಕ್ಕೊಳಗಾದರೂ ತನ್ನ ಹಾಗು ಚಾರ್ಲಿಯ ಭಾವನಾತ್ಮಕ ಸಂಬಂಧದಿಂದ ಅದೇ ಜನರೆದರು ಚಪ್ಪಾಳೆಯನ್ನು ಸಹ ಗಿಟ್ಟಿಸಿಕೊಳ್ಳುತ್ತಾನೆ. ಮೊದಲಿಗೆಅನುಮಾನ, ನಂತರ ಅವಮಾನ, ತದನಂತರ ಬಹುಮಾನವೆಂಬುದು ಈ ದೃಶ್ಯದ ಮೂಲಕ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.
ಕೊನೆಗೆ ಚಾರ್ಲಿ ಒಂದು ಮರಿಗೆ ಜನ್ಮ ನೀಡಿ ಅಸುನೀಗುವ ದೃಶ್ಯದೊಂದಿಗೆ ಕಥೆ ಅಂತ್ಯಕಂಡರೂ ಸಿನಿಪ್ರಿಯರಲ್ಲಿ ಸಾಕುಪ್ರಾಣಿಗಳತ್ತ ತಮ್ಮ ಚಿತ್ತ ನೆಟ್ಟಿಸುವಲ್ಲಿ ಯಶಸ್ವಿಯಾಗಿದೆ. "ನಮ್ಮ ಸುತ್ತಮುತ್ತಲಿನ ಸಮಾಜದಲ್ಲಿ ಕೇವಲ ನಾಯಿಗಳು ಮಾತ್ರ ಬೀದಿಪಾಲಾಗಿಲ್ಲ, ಅನೇಕ ಹಿರಿಯರು, ನಿರ್ಗತಿಕರು ಸಹ ಬೀದಿಪಾಲಗಿದ್ದಾರೆ. ಅಂತಹವರನ್ನು ಅಪಹಾಸ್ಯ ಮಾಡದೆ ನಿಮ್ಮ ಕೈಲಾದ ಸಹಾಯ ಮಾಡಿ" ಎಂಬುದನ್ನು ಈ ಚಿತ್ರದ ಮೂಲಕ ಸೂಚ್ಯವಾಗಿ ತೆರೆದಿಟ್ಟಿದ್ದಾರೆ ಎನ್ನಬಹುದು. ಅಪರೂಪಕ್ಕೊಂದು ಸದಭಿರುಚಿ ಚಿತ್ರ ನೋಡಿದ ಅನುಭವವಾಯ್ತು ಎನ್ನಬಹುದು.
-ಸಮುದ್ರವಳ್ಳಿ ವಾಸು
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ