||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಿಶ್ವ ಅಪ್ಪಂದಿರ ದಿನ: ಅಪ್ಪ- ಎಂದಿಗೂ 'ಕೆಟ್ಟವ'ನಾಗಿ ಕಾಣುವ ಹೀರೋ

ವಿಶ್ವ ಅಪ್ಪಂದಿರ ದಿನ: ಅಪ್ಪ- ಎಂದಿಗೂ 'ಕೆಟ್ಟವ'ನಾಗಿ ಕಾಣುವ ಹೀರೋಪ್ರತಿ ವರ್ಷ ಜೂನ್ ತಿಂಗಳ ಮೂರನೇ ಭಾನುವಾರದಂದು ವಿಶ್ವದ ಹೆಚ್ಚಿನ ರಾಷ್ಟ್ರಗಳಲ್ಲಿ ‘ಅಪ್ಪಂದಿರ ದಿನ’ ಎಂದು ಆಚರಿಸಿ ಸಂಭ್ರಮಿಸಲಾಗುತ್ತಿದೆ. ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ಅಪ್ಪಂದಿರ ಪಾತ್ರ, ಮಕ್ಕಳ ಮತ್ತು ಹೆತ್ತವರಿನ ನಡುವಿನ ಭಾಂದವ್ಯ ಬೆಸುಗೆಯನ್ನು ಹೆಚ್ಚಿಸುವಲ್ಲಿ ತಂದೆಯ ಕೊಡುಗೆ ಹಾಗೂ ಸಮಾಜದ ನಿರ್ಮಾಣದಲ್ಲಿ ತಂದೆಯ ಪಾಲುದಾರಿಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಈ ದಿನದಂದು ಮಾಡಲಾಗುತ್ತದೆ. ಪ್ರತಿ ಮಗುವಿನ ಮೊದಲ ಪ್ರೀತಿಯ ದ್ಯೋತಕ ಮತ್ತು ಕಡೆಯ ಹೀರೋ ಆಗಿರುವ ‘ತಂದೆ’ ಯು, ಸದ್ದಿಲ್ಲದೆ ಮಕ್ಕಳಲ್ಲಿ ಶಕ್ತಿ ತುಂಬುತ್ತಾ, ಬೆಲೆ ಕಟ್ಟಲಾಗದ ಭಾಂದವ್ಯಕ್ಕೆ ಮೌಲ್ಯ ಹೆಚ್ಚಿಸುತ್ತಾ ಹೋಗುತ್ತಾನೆ. ತಾಯಿಯ ಪ್ರೀತಿ ಮಮತೆ ಮಮಕಾರದ ಮುಂದೆ ತಂದೆಯ ಕಾಳಜಿ, ಹಿತವಾದ ಸಿಟ್ಟು, ನಿರಂತರ ತ್ಯಾಗ ಗೌಣವಾಗಬಾರದು ಎಂಬ ದೃಷ್ಟಿಯಿಂದ 1909 ರಲ್ಲಿ ತಾಯಂದಿರ ದಿನಾಚರಣೆಯಂತೆ, ಅಪ್ಪಂದಿರ ದಿನವನ್ನು ಆಚರಿಸಬೇಕು ಎಂಬ ಕೂಗು ವಿಶ್ವದೆಲ್ಲೆಡೆ ಕೇಳಿ ಬಂತು. ಇದರ ಪರಿಣಾಮವಾಗಿ 1910 ರಲ್ಲಿ ಅಮೇರಿಕಾದಲ್ಲಿ ಮೊದಲ ಬಾರಿ ಅಪ್ಪಂದಿರ ದಿನ ಆಚರಿಸಲಾಯಿತು. ಪ್ರತಿ ಮಗು, ಮಗ ಮತ್ತು ಮಗಳು ತನ್ನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ತಂದೆಯ ಪಾತ್ರವನ್ನು ಸ್ಮರಿಸಿ, ಗೌರವಿಸಿ ತಂದೆಯನ್ನು ಕೊಂಡಾಡುವ ಪವಿತ್ರ ದಿನ ಇದಾಗಿರುತ್ತದೆ. ಭಾರತದಲ್ಲಿಯೂ ಜೂನ್ ತಿಂಗಳ ಮೂರನೇ ಭಾನುವಾರದಂದೇ ಅಪ್ಪಂದಿರ ದಿನ ಆಚರಿಸಲಾಗುತ್ತಿದೆ. ಆದರೆ ಪೋರ್ಚುಗಲ್, ಸ್ಪೇನ್, ಇಟಲಿ, ಕ್ರೊಮೇಷಿಯ, ಇಂಗ್ಲೆಂಡ್‍ಗಳಲ್ಲಿ ಮಾರ್ಚ್ 19 ರಂದು ಅಪ್ಪಂದಿರ ದಿನ ಆಚರಿಸಲಾಗುತ್ತದೆ. ಇದೊಂದು ಪಾಶ್ಚಾತ್ಯ ದೇಶಗಳ ಸಂಸ್ಕೃತಿಯಾಗಿದ್ದರೂ ಮಕ್ಕಳ ಭವಿಷ್ಯಕ್ಕಾಗಿ ನಿರಂತರ ಶ್ರಮಿಸಿ, ಸರ್ವವನ್ನೂ ತ್ಯಾಗ ಮಾಡುವ ತಂದೆಯನ್ನು ಆರಾಧಿಸುವ, ಪೂಜಿಸುವ, ಸ್ಮರಿಸುವ ದಿನವಾಗಿದ್ದು ಈಗೀಗ, ಎಲ್ಲೆಡೆ ಹೆಚ್ಚು ಪ್ರಾಮುಖ್ಯತೆ ಪಡುತ್ತಿದೆ.


ಚರಿತ್ರೆ:

ಮೊದಲ ಬಾರಿಗೆ 1910 ರಲ್ಲಿ ಅಮೇರಿಕಾದಲ್ಲಿ ಈ ಆಚರಣೆ ಆರಂಭವಾಗಿತ್ತು. ಆ ಬಾರಿ ಜೂನ್ 19 ರಂದೇ ಆಚರಣೆ ಮಾಡಲಾಗಿತ್ತು. ಸೋನೋರ ಸ್ಮಾರ್ಟ್ ದೊಡ್ ಎಂಬಾಕೆಗೆ, ಅನ್ನಾ ಜಾರ್ವಿಸ್ ಎಂಬಾಕೆ ತಾಯಂದಿರ ದಿನ ಆರಂಭಿಸಿದ ಬಳಿಕ ಅದೇ ರೀತಿಯಲ್ಲಿ ತಂದೆಯಂದಿರ ದಿನ ಆಚರಿಸಬೇಕು ಎಂಬ ಬಯಕೆ ಉಂಟಾಗಿ ಚರ್ಚ್‍ನ ಧರ್ಮಗುರುಗಳಿಗೆ ತಂದೆಯಂದಿರ ದಿನ ಆರಂಭಿಸಲು ಸಲಹೆ ನೀಡಿದಳು. ಶ್ರೀಮತಿ ಸೋನೋರ ಅವರ ತಂದೆ ಒಬ್ಬ ಸೈನಿಕನಾಗಿದ್ದು, ಆತನ ಹೆಸರು ವಿಲಿಯಂ ಚಾಕ್‍ಸನ್ ಸ್ಮಾರ್ಟ್ ಎಂದಾಗಿತ್ತು. ಆತನ ಪತ್ನಿ ಬೇಗ ಮೃತಳಾಗಿದ್ದಳು. ಆತನಿಗೆ 6 ಮಂದಿ ಮಕ್ಕಳಿದ್ದರು. ಸಿಂಗಲ್ ಪೇರೆಂಟ್ ಆಗಿ ಆತ ತನ್ನ ಆರು ಮಕ್ಕಳನ್ನು ಓದಿಸಿ, ಕಲಿಸಿ, ವಿದ್ಯಾವಂತರನ್ನಾಗಿಸಿ ಸತ್ಪ್ರಜೆಗಳನ್ನಾಗಿ ಮಾಡಿದನು. ಇದರ ನೆನಪಿಗಾಗಿ ಸೊನೋರಾ ತನ್ನ ಅಪ್ಪ ವಿಲಿಯಂ ಚಾಕ್‍ಸನ್ ಅವರ ಹುಟ್ಟಿದ ದಿನ ಜೂನ್ 5 ರಂದು ತಂದೆಯಂದಿರ ದಿನ ಆಚರಿಸಲು ಧರ್ಮ ಗುರುಗಳಿಗೆ ತಿಳಿಸಿದ್ದಳು. ಆದರೆ ಕಾರಾಣಾಂತಗಳಿಂದ ಸಮಯದ ಆಭಾವದಿಂದ ಜೂನ್ ತಿಂಗಳ ಮೂರನೇ ಭಾನುವಾರಕ್ಕೆ ಈದಿನ ನಿಗದಿಯಾಗಿ, ನಂತರ ಪ್ರತೀ ವರ್ಷ ಅದೇ ದಿನ ಅಪ್ಪಂದಿರ ದಿನ ಆಚರಣೆ ಆರಂಭವಾಯಿತು.


ಅಪ್ಪಂದಿರ ದಿನ ಒಂದು ಸಾಂಕೇತಿಕ ಆಚರಣೆಯಾಗಿದ್ದು, ಈ ದಿನ ಮಕ್ಕಳು ಅಪ್ಪಂದಿರಿಗೆ ವಿಶೇಷವಾಗಿ ಉಡುಗೊರೆ ನೀಡಿ, ತ್ಯಾಗ, ಪ್ರೀತಿ ಮತ್ತು ನಿಷ್ಕಲ್ಮಶವಾದ ಮಮಕಾರವನ್ನು ಸ್ಮರಿಸುವ ದಿನ. ಇದನ್ನು ಬರೀ ತಂದೆಗೆ ಮಾತ್ರವಲ್ಲ ಅವರವರ ಜೀವನದಲ್ಲಿ ತಂದೆಯಂತೆ ಬಂಡೆಗಲ್ಲಿನಂತೆ ಗಟ್ಟಿಯಾಗಿ ನಿಂತು, ಮಾನಸಿಕ ಧೈರ್ಯ ತುಂಬಿ ಗುರಿ ತಲುಪಲು ಆರ್ಥಿಕವಾಗಿ, ಮಾನಸಿಕವಾಗಿ, ನೈತಿಕ ಬೆಂಬಲ ನೀಡಿದ ‘ಅಪ್ಪನ’ ಸ್ಥಾನಕ್ಕೆ ವಿಶೇಷ ಮೌಲ್ಯ ನೀಡಿದ ಮಹಾನುಭಾವನನ್ನು ಸ್ಮರಿಸುವ ವಿಶೇಷ ದಿನವಾಗಿರುತ್ತದೆ. ಹುಟ್ಟಿಸದವನು ವೈಜ್ಞಾನಿಕವಾಗಿ, ಜೈವಿಕವಾಗಿ ಅಪ್ಪನಾಗುತ್ತಾನೆಯೇ ಹೊರತು ನಿಜವಾದ ತಂದೆಯಾಗಲಾರ. ತಂದೆಯೆಂದರೆ ತ್ಯಾಗದ ಸಂಕೇತ ಎಂಬ ಸಂದೇಶ ಸಮಾಜಕ್ಕೆ ರವಾನೆಯಾಗಲಿ ಎಂಬ… ಉದ್ದೇಶದಿಂದ ಈ ಆಚರಣೆ ಜಾರಿಗೆ ಬಂದಿದೆ ಎಂದರೂ ತಪ್ಪಾಗಲಾರದು.


ಕೊನೆಮಾತು:

ಸಾಮಾನ್ಯವಾಗಿ ಅಮ್ಮನ ಎಣೆಯಿಲ್ಲದ ಪ್ರೀತಿ ಮಮತೆ ಮತ್ತು ಮಮಕಾರದ ಮುಂದೆ ಎಷ್ಟೋ ಬಾರಿ ಅಪ್ಪಂದಿರ ತ್ಯಾಗ ಕಾಣುವುದೇ ಇಲ್ಲ. ಎಲ್ಲರೂ ಅಮ್ಮಂದಿರ ಸೇವೆ ಮತ್ತು ಪರಿಶ್ರಮವನ್ನು ಹಾಡಿ ಹೊಗಳುತ್ತಾರೆ. ಆದರೆ ನಿರಂತರವಾಗಿ ಕುಟುಂಬದ ಇತರ ಮಂದಿಯ ಶ್ರೇಯಸ್ಸಿಗಾಗಿ ಮೌನವಾಗಿ ನೆಗಿಲು ಹೊತ್ತು ಹೊಲ ಉಳುವ ಎತ್ತಿನಂತೆ ಕೆಲಸ ಮಾಡುತ್ತಾ, ಕುಟುಂಬಕ್ಕೆ ಶಕ್ತಿ ನೀಡಿ, ಕುಟುಂಬದ ಬೆನ್ನೆಲುಬಾಗಿ ಇರುವ ಅಪ್ಪಂದಿರು ಕಣ್ಣಿಗೆ ಗೌಣವಾಗಿ ಬಿಡುತ್ತಾರೆ. ಆದರೆ ಯಾವ ಅಪ್ಪಂದಿರು ಇದಕ್ಕೆ ಗೊಣಗುವುದೂ ಇಲ್ಲ. ಇಲ್ಲಿ ಅಪ್ಪ ಮೇಲು, ಅಮ್ಮ ಮೇಲು ಎಂಬ ಚರ್ಚೆ ಅಗತ್ಯವಿಲ್ಲ. ಮಕ್ಕಳ ಪರಿಪೂರ್ಣ ಬೆಳವಣಿಗೆ ಅಮ್ಮನಷ್ಟೇ ಅಪ್ಪನ ಪಾತ್ರವೂ ಬಹುಮುಖ್ಯವಾಗುತ್ತದೆ. ಇದಕ್ಕಾಗಿಯೇ ಬಲ್ಲಿದರು ಹೀಗೆ ಹೇಳುತ್ತಾರೆ, “ಯಾರೂ ಬೇಕಾದರೂ ತಂದೆ ಯಾಗಬಹುದು ಆದರೆ ಅಪ್ಪನಾಗಲು ನಿಜವಾಗಿಯೂ ವಿಶೇಷ ಗುಣವಿರಲೇ ಬೇಕು. ಸಾಮಾನ್ಯವಾಗಿ ಅಪ್ಪಂದಿರು ಹೆಚ್ಚು ಉಪದೇಶ ಮಾಡುವುದಿಲ್ಲ. ಅವರ ಬದುಕೇ ಮಕ್ಕಳಿಗೆ ಉಪದೇಶವಾಗಿರುತ್ತದೆ. ಹಾಗಾದರೆ ಮಾತ್ರ ‘ಅಪ್ಪ’ ಎಂಬ ಶಬ್ದಕ್ಕೆ ಶಕ್ತಿ ಮೌಲ್ಯ ಹಾಗೂ ಪ್ರಾಮುಖ್ಯತೆ ಬರುತ್ತದೆ. ಅದೇ ರೀತಿ ಮಗನಿಗೆ ಅಪ್ಪಂದಿರೇ ಮೊದಲ ಹೀರೋ ಹಾಗೂ ಮಗಳಿಗೆ ಅಪ್ಪನೇ ಮೊದಲ ಪ್ರೀತಿ ಆಗಿರುತ್ತದೆ. ಸದಾ ಕಾಲ ತನ್ನ ಕುಟುಂಬದ ಬಗ್ಗೆ ಯೋಚಿಸುವ ಅಪ್ಪ ಒಂದು ರೀತಿಯಲ್ಲಿ ತ್ಯಾಗಮಯಿಯಾಗಿಯೇ ಜೀವನ ಪರ್ಯಾಂತ ದುಡಿಯುತ್ತಾನೆ.  


ಹೆಚ್ಚಿನ ಅಪ್ಪಂದಿರು ನಿಷ್ಠರವಾದಿಯಾಗಿರುತ್ತಾನೆ. ಎಲ್ಲಾ ಕುಟುಂಬಗಳಲ್ಲಿ ಎಲ್ಲಾ ನಿರ್ಣಾಯಗಳನ್ನು ಅಮ್ಮ ಅಪ್ಪನ ತಲೆಗೆ ಹಾಕಿ ಕೈ ತೊಳೆದುಕೊಳ್ಳುತ್ತಾರೆ. ಎಲ್ಲವನ್ನೂ ಅಳೆದು ತೂಗಿ ಸರಿಯಾದ ನಿರ್ಧಾರ ತೆಗೆದುಕೊಳ್ಳಬೆಕಾದ ಹೊಣೆಗಾರಿಕೆ ಅಪ್ಪನದ್ದಾಗಿರುತ್ತದೆ. ಅಮ್ಮ ಯಾವತ್ತೂ ಭಾವನಾತ್ಮಕವಾಗಿ ಮಕ್ಕಳ ಪ್ರೀತಿಗೆ ಜೋತು ಬಿದ್ದು ಹೋಗಲಿ ಬಿಡಿ ಎಂದು ತಕ್ಷಣವೇ ಒಪ್ಪಿಕೊಂಡು ಮಕ್ಕಳ ಪಾಲಿಗೆ ದೇವತೆಯಾಗುತ್ತಾಳೆ. ಅಪ್ಪ ಮಕ್ಕಳ ಎಲ್ಲ ಪ್ರಶ್ನೆಗಳಿಗೆ ಇಲ್ಲ ಅಥವಾ ಮುಂದೆ ನೋಡುವ ಎಂದಾಗ ಕುಟುಂಬದ ಎಲ್ಲರ ಪಾಲಿಗೂ ಕಾಮನ್ ಎನಿಮಿ ಆಗಿ  ಬಿಡುತ್ತಾನೆ. ಹೆಚ್ಚಿನ ಎಲ್ಲಾ ಮಧ್ಯಮ ವರ್ಗದ ಅಪ್ಪಂದಿರ ಹಣೆಬರಹ ಇದೇ ಆಗಿರುತ್ತದೆ. ಅಪ್ಪನ ಸ್ಥಾನ ಎನ್ನುವುದು ಒಂದು ಥ್ಯಾಂಕ್ಸ್‍ಲೆಸ್ ಜಾಬ್ ಇಡೀ ಕುಟುಂಬಕ್ಕೆ ಕೂಳು ಕೊಟ್ಟ ಅಪ್ಪ ಕೊನೆಗೆ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾಗುವಂತ ಸ್ಥಿತಿ ನಿರ್ಮಾಣವಾಗುತ್ತದೆ. ಎಲ್ಲಾ ಒಳ್ಳೆಯದಾಗಿ ಸುಖಾಂತ್ಯವಾದರೆ ಅಮ್ಮನಿಗೆ ಸಿಂಹಪಾಲು. ಮಕ್ಕಳು ಹಾಳಾಗಿ ಕೆಟ್ಟು ಹೋದಲ್ಲಿ ಎಲ್ಲಾ ನಿಮ್ಮಿಂದಲೇ ಎಂಬ ದೋರಣೆಯ ಮಾತು ಅಪ್ಪ ಅನಿವಾರ್ಯವಾಗಿ ಕೇಳಿಸಿಕೊಳ್ಳಲೇ ಬೇಕು. ಇದಕ್ಕಾಗಿಯೇ ಖ್ಯಾತ ಅಂಕಣಕಾರ ಚಾರ್ಲ್ಸ್‌  ವ್ಯಾಡ್‍ವರ್ತ್ ಹೀಗೆ ಹೇಳುತ್ತಾರೆ. “By the time a man relizes that may be  his father was right, he usually has son who think  he is wrong” ಇದರ ಅರ್ಥ ಒಬ್ಬ ಮನುಷ್ಯ /ಗಂಡಸು, ತನ್ನ ತಂದೆ ಹೇಳಿದ್ದು ಸರಿ ಎಂದು ತಿಳಿಯುವ ಹೊತ್ತಿಗೆ, ಆತನಿಗೆ ಎದೆಯೆತ್ತರಕ್ಕೆ ಬೆಳೆದ ಮಕ್ಕಳಾಗಿರುತ್ತಾರೆ ಹಾಗೂ ಅದೇ ಮಕ್ಕಳು ತಮ್ಮಪ್ಪ ಮಾಡಿದ್ದು ತಪ್ಪು ಎಂಬ ಧೋರಣೆಯನ್ನು ಹೊಂದಿರುತ್ತಾರೆ.  


ಮನೆಯೊಳಗೆ ಇದ್ದು ಕುಟುಂಬದವರಿಗೆ ಅನಾಮಿಕನಾಗಿ ಬದುಕುವ ಟೀಕೆ ಟಿಪ್ಪಣಿಗಳಿಗೆ ಪ್ರತಿಕ್ರಿಯಿಸದೆ ಸ್ಥಿತಪ್ರಜ್ಞನಾಗಿ ಬದುಕುವ, ಅಪಮಾನ, ಅಸಡ್ಡೆ ತಿರಸ್ಕಾರ ತಾತ್ಸಾರ ಬಂದರೂ ಎಲ್ಲವನ್ನೂ ಅವುಡು ಕಚ್ಚಿಕೊಂಡು ನೀಲಕಂಠನಾಗಿ ಕುಟುಂಬದ ಏಳಿಗೆಗಾಗಿ ಸದಾ ಕಾಲ ಶ್ರಮಿಸುವ ಎಲ್ಲಾ ಅಪ್ಪಂದಿರಿಗೂ ಈ ಅಪ್ಪಂದಿರ ದಿನದ ಶುಭ ಹಾರೈಸೋಣ.


-ಡಾ|| ಮುರಲೀ ಮೋಹನ್‍ ಚೂಂತಾರು

BDS, MDS,DNB,MOSRCSEd (U.K), FPFA, M.B.A                                

ಮೊ : 9845135787

drmuraleechoontharu@gmail.com


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post