ಜಗತ್ತಿನಲ್ಲಿ ಅಮ್ಮ ಎಷ್ಟು ಶ್ರೇಷ್ಠಳೋ ಮಕ್ಕಳ ಭವಿಷ್ಯಕ್ಕೆ ಅಪ್ಪನೂ ಅಷ್ಟೇ ಶ್ರೇಷ್ಠ ಅಂದರೆ ತಪ್ಪಾಗಲಾರದು. ಅಪ್ಪ ಸಾಮಾನ್ಯ ವ್ಯಕ್ತಿಯಾದರೂ ಅವರೊಬ್ಬ ಸಾಕ್ಷಾತ್ ಪರಮಾತ್ಮನ ಪ್ರತಿರೂಪ. ತಾಯಿಗೆ ಗೌರವ ಇರುವಂತೆಯೇ ತಂದೆಗೂ ಕೂಡ ಘನತೆ ಗೌರವ ಇದ್ದೇ ಇರುತ್ತದೆ. ತಂದೆಯ ಪ್ರೀತಿ ಸದಾ ಕಾಲ ಮೋಡದ ಮರೆಯ ಚಂದ್ರನಂತೆ ಇರುತ್ತದೆ.
ದಿಕ್ಸೂಚಿ ಇಲ್ಲದೆ ದೋಣಿ ದಡ ಸೇರುವುದು ಕಷ್ಟ ಅಲ್ಲವೇ. ಹಾಗೆ ಮಕ್ಕಳು ಬದುಕಿನಲಿ ಯಶಸ್ಸು ಕಾಣಲು ತಂದೆಯ ಮಾರ್ಗದರ್ಶನ, ಸಹಕಾರ, ಬೆಂಬಲ ಪ್ರತಿ ಮಗುವಿಗೂ ಮುಖ್ಯ.
ತಂದೆಗೆ ಇಡೀ ಸಂಸಾರವನ್ನು ಹೇಗೆ ಸುಖ ಸಂತೋಷವೆಂಬ ದಡ ಸೇರಿಸಬೇಕೆಂಬ ಕನಸು ಹೊಂದಿರುವ ಅಪ್ಪ ಅನ್ನೋ ಬಿರುಸು ಕೈಯೊಳಗೆ ಪ್ರೀತಿ ಅನ್ನೋ ಬ್ರಹ್ಮಾಂಡವಿದ್ದಂತೆ. ತಂದೆ ಒಬ್ಬ ಪೋಷಕನಾಗಿ, ರಕ್ಷಕನಾಗಿ, ಪಾಲಕನಾಗಿ, ಶಿಕ್ಷಕನಾಗಿ, ಸಲಹೆಗಾರನಾಗಿ, ತಾಳ್ಮೆಯ ಕೇಳುಗನಾಗಿ, ಧೈರ್ಯ ತುಂಬುವ ಶಕ್ತಿಯಾಗಿ, ಬದುಕಿನ ರಹಸ್ಯ ತಿಳಿಸಿಕೊಡುವ ವ್ಯಕ್ತಿಯಾಗಿ, ಬದುಕಿಗೆ ಭರವಸೆ ತುಂಬಿ ಭವಿಷ್ಯದ ಬಗ್ಗೆ ನಂಬಿಕೆ ಮತ್ತು ಮಾನಸಿಕ ಧೈರ್ಯ ತುಂಬುವ ವ್ಯಕ್ತಿಯಾಗಿ, ಸಂಸಾರದ ಬೆನ್ನೆಲುಬಾಗಿ ಹೀಗೆ ಹತ್ತಾರು ಪಾತ್ರಗಳಲ್ಲಿ ಮಕ್ಕಳ ಏಳಿಗೆಗೆ ಶ್ರಮಿಸುವ ತಾಳ್ಮೆಯ ವ್ಯಕ್ತಿ ಎಂದರೆ ಅಪ್ಪ.
ಯಾವುದೇ ಅಪೇಕ್ಷೆ ಇಲ್ಲದೆ ನಿಸ್ವಾರ್ಥದಿಂದ ಸಂಸಾರಕ್ಕೋಸ್ಕರ ಕೊನೆಯ ಉಸಿರು ಇರೋವರೆಗೂ ದುಡಿಯುವ ವ್ಯಕ್ತಿ ಮತ್ತು ಮಕ್ಕಳ ಭವಿಷ್ಯಕ್ಕೆ ಬೆಳಕು ನೀಡುವವನು ಅಪ್ಪ. ತಾಯಿ ಮಕ್ಕಳನ್ನು ಪ್ರಪಂಚಕ್ಕೆ ಪರಿಚಯಿಸಿದರೆ ತಂದೆ ಪ್ರಪಂಚವನ್ನು ಮಕ್ಕಳಿಗೆ ಪರಿಚಯಿಸುತ್ತಾನೆ. ತಾಯಿಯಿಂದ ಜೀವ ತಂದೆಯಿಂದ ಜೀವನ ಅಲ್ಲವೇ. ತಂದೆ ಕಷ್ಟಗಳನ್ನು ಎದುರಿಸಿ ಮುಂದೆ ಬರಲಿ ಎಂದು ಹುರಿದುಂಬಿಸುತ್ತಾನೆ. ಮಕ್ಕಳು ಒಂದು ಹಂತಕ್ಕೆ ಬರುವವರೆಗೆ ಅಮ್ಮ ಅವರ ಬೆಳವಣಿಗೆಯಲ್ಲಿ ಪ್ರಧಾನ ಪಾತ್ರ ವಹಿಸಿದರೆ, ಅದಕ್ಕೆ ಪೋಷಕವಾಗಿ ಹಿನ್ನೆಲೆಯಲ್ಲಿ ಅಪ್ಪನ ಶ್ರಮವಿರುತ್ತದೆ. ಮಕ್ಕಳಿಗೆ ಅಪ್ಪನ ಸಂಸ್ಕಾರ ಮಹತ್ವವಾದುದ್ದು. ಅಪ್ಪನ ಸಂಸ್ಕಾರದಲ್ಲಿ ಬೆಳೆದ ಮಕ್ಕಳ ಭವಿಷ್ಯವು ಭದ್ರ ಬುನಾದಿಯ ಮೇಲೆ ಕಟ್ಟಿದ ಮನೆಯಂತಿರುವುದು.
ಇಂದು ವಿಶ್ವ ಅಪ್ಪಂದಿರ ದಿನಾಚರಣೆ. ಆದರೆ ನನಗೆ ದೇವರ ದಿನ ಎಂದೇ ಭಾವಿಸುತ್ತೇನೆ. ಎಲ್ಲಾ ಮಕ್ಕಳಿಗೂ ಅಪ್ಪನೆಂಬುದು ಹಿಮಾಲಯವಿದ್ದಂತೆ. ನನ್ನಪ್ಪನ ಬಗ್ಗೆ ಖುಷಿಯಿಂದ ವೈಯಕ್ತಿಕವಾಗಿ ಲೇಖನ ರೂಪದಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಜನ್ಮ ನೀಡಿದ ತಂದೆಗಿಂತ ಹೆಚ್ಚಾಗಿರುವರು ನನಗೆ ನನ್ನ ತಂದೆಯ ಚಿಕ್ಕಪ್ಪ. ಅವರು ನನ್ನ ತಂದೆಗೆ ಸಂಬಂಧದಲ್ಲಿ ಚಿಕ್ಕಪ್ಪ ಆಗಿದ್ರು ಆದರೆ ನನಗೆ ಅವರೇ ಅಪ್ಪ ಅವರೇ ಪ್ರಪಂಚ. ಏಕೆಂದರೆ ತಂದೆಗಿಂತ ಹೆಚ್ಚಾಗಿ ದೇವರ ರೀತಿ ನನ್ನನ್ನು ಪೋಷಿಸಿದ್ದಾರೆ. ಅವರು ಜನ್ಮ ನೀಡಿದ ಆರು ಮಕ್ಕಳಲ್ಲಿ ನನ್ನನ್ನು ತನ್ನ ಏಳನೇ ಮಗಳು ಮತ್ತು ಕೊನೆಯ ಮಗಳೆಂದು ಯಾವ ಬೇಧ ಭಾವ ಮಾಡದೇ 12 ವರ್ಷ ಸಲುಹಿ ನನ್ನ ಹೆತ್ತವಳ ಮಡಿಲಿಗೆ ಹಾಕಿದ ಪರಮಾತ್ಮರು ಅವರು. ದೇವರಂತಿರುವ ಅಂತಹ ಅಪ್ಪ ಅಮ್ಮನನ್ನು ಹಾಗೂ ನನ್ನ ಹೆತ್ತ ಅಪ್ಪ ಅಮ್ಮ ಈ ನಾಲ್ವರನ್ನು ಪಡೆದ ನಾನೇ ಧನ್ಯಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ತುಂಬಿದ ಮನೆಯಲ್ಲಿ ಯಾವ ಬೇಧ ಭಾವ ಇಲ್ಲದೆ ಅಕ್ಕಂದಿರ ಅಣ್ಣಂದಿರ ಪ್ರೀತಿ ವಾತ್ಸಲ್ಯದ ಅಕ್ಕರೆಯ ಸಕ್ಕರೆ ಗೊಂಬೆಯಂತೆ 12 ವರುಷ ಸಲಹಿದ್ದಾರೆ. ಇವತ್ತಿಗೂ ಆ ಮನೆಯ ಅಕ್ಕರೆಯ ಸಕ್ಕರೆ ಗೊಂಬೆಯಾಗಿದ್ದೀನಿ. ಅವರ ಗೌರವ, ಆತ್ಮಾಭಿಮಾನ, ಸ್ವಾಭಿಮಾನ, ನನ್ನಲ್ಲಿ ರಕ್ತಗತವಾಗಿದೆ. ಹೆಗಲ ಮೇಲೆ ಕುಳಿತು ಊರೆಲ್ಲಾ ಸುತ್ತಿದ ನೆನಪುಗಳು ಇಂದಿಗೂ ನನ್ನನ್ನು ಹಸಿರಾಗಿ ಕಾಡುತ್ತಿವೆ. ಪೇಟೆಗೆ ಹೋದ್ರೆ ಎಳೆನೀರು ಕುಡಿಯೋರು ಎಳೆನೀರಿನ ಗಂಜಿಯನ್ನು ನನಗೆ ಇಷ್ಟ ಎಂದು ನನಗೆ ಅಂತ ತಗೊಂಡು ಬಂದು ಕೊಡುತ್ತಿದ್ರು ನನ್ನಯ್ಯ. ಅದು ಹೇಗೆ ಮರೆಯಲಿ ನಾನು. ನಾನು ಸುಂದರ ಬದುಕಿಗೆ ಬರುವ ಮೊದಲೆ ನಮ್ಮನ್ನೆಲ್ಲಾ ಬಿಟ್ಟು ಅಗಲಿದರು.
ಅಪ್ಪನ ಕೈ ಬೆರಳು ಹಿಡಿದು ನಡೆದಂತಹ ಗುರುತು ಖುಷಿಪಟ್ಟಿದ್ದೆ ನಾನು ಅಪ್ಪನ ಹೆಗಲ ಮೇಲೆ ಕುಳಿತು ಅದನ್ನೆಲ್ಲಾ ಮರೆತು ನಾನು ಬದುಕಲು ಸಾಧ್ಯವಿಲ್ಲ
ಇಷ್ಟೆಲ್ಲಾ ಮಾಡಿದ ದೇವನಿಗೆ ನಾನೇನು ಕೊಡಲು ಆಗಲಿಲ್ಲ
ಬಾಳಿನಲಿ ಸಾಧನೆಯ ಹಾದಿ ಹಿಡಿಯಲು ಭರವಸೆ ನೀನಪ್ಪಾ
ಎಂದೂ ಮರೆಯಲಾಗದ ಭಗವಂತನ ಸ್ವರೂಪ ನೀನಪ್ಪಾ
ಇಂದು ನಿಮ್ಮ ನಿರೀಕ್ಷೆಗಿಂತ ಹೆಚ್ಚು ಬೆಳೆದಿದ್ದೇನೆ ನಾನು
ನಿಮಗೆ ಏನನ್ನೂ ಕೊಡಲು ಆಗಲಿಲ್ಲ ಆದ್ರೆ ನಿಮ್ಮ ಹೆಸರು ಉಳಿಸಿದ್ದೇನೆ ನಾನು
ದಿಗಂತದಲ್ಲಿ ಸ್ಥಿರವಾಗಿ ಅನಂತನಲ್ಲಿ ನೀವು ಲೀನನಾಗಿರುವೆ
ಅಲ್ಲಿಂದ ನನ್ನ ಸುಖ ಮತ್ತು ಏಳಿಗೆಯನ್ನು ಕಂಡು ಸಂತೋಷ ಪಡುತ್ತಿರುವೆ ಅಲ್ಲವೇ
ಒಂದೇ ಒಂದು ಬಾರಿ ಕನಸಲ್ಲಿ ನೀವು ಬಂದು ದರುಶನ ಕೊಡುತ್ತೀರಿ ಎಂದು ನಂಬಿರುವ ನಿನ್ನ ನೆಚ್ಚಿನ ಮಗಳು
-ಆಶಾ ಶಿವು ಬೆಂಗಳೂರು
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ