|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಧರ್ಮಸ್ಥಳದಲ್ಲಿ 8ನೇ ವಿಶ್ವ ಯೋಗ ದಿನಾಚರಣೆ

ಧರ್ಮಸ್ಥಳದಲ್ಲಿ 8ನೇ ವಿಶ್ವ ಯೋಗ ದಿನಾಚರಣೆ

ಯೋಗದಿಂದ ಆದರ್ಶ ವ್ಯಕ್ತಿತ್ವ ನಿರ್ಮಾಣ


ತುಮಕೂರು ರಾಮಕೃಷ್ಣ ಆಶ್ರಮದ ಸ್ವಾಮಿ ಪರಮಾನಂದಜೀ ಮಹಾರಾಜ್ ಎಂಟನೆ ವಿಶ್ವಯೋಗ ದಿನಾಚರಣೆ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿದರು.

ಬೆಂಗಳೂರಿನ ಯೋಗಪಟು ಪ್ರಜ್ವಲ್ ನಾಯಕ್‍ರಿಗೆ “ಯೋಗ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಾಮೂಹಿಕ ಯೋಗ ಪ್ರದರ್ಶನ ನಡೆಯಿತು.


ಉಜಿರೆ: ಯೋಗ ನಮ್ಮ ಜೀವನ ಶೈಲಿಯಾಗಬೇಕು. ನಿತ್ಯವೂ ಯೋಗಾಭ್ಯಾಸ ಮಾಡುವುದರಿಂದ ನೈತಿಕ ಹಾಗೂ ಮಾನವೀಯ ಮೌಲ್ಯಗಳೊಂದಿಗೆ ಆದರ್ಶ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಎಂದು ತುಮಕೂರು ರಾಮಕೃಷ್ಣ ಆಶ್ರಮದ ಸ್ವಾಮಿ ಪರಮಾನಂದಜೀ ಮಹಾರಾಜ್ ಹೇಳಿದರು.


ಅವರು ಮಂಗಳವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ಆಶ್ರಯದಲ್ಲಿ ಎಂಟನೇ ವಿಶ್ವಯೋಗ ದಿನಾಚರಣೆಯಲ್ಲಿ ಆಶೀರ್ವಚನ ನೀಡಿದರು.


ಯೋಗಾಭ್ಯಾಸದಿಂದ ಮನಸ್ಸು ಪರಿಶುದ್ಧವಾಗುತ್ತದೆ, ದೇಹ ಸದೃಢವಾಗುತ್ತದೆ. ಯಾವುದೇ ವೃತ್ತಿ-ಪ್ರವೃತ್ತಿಯಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಸಮಾಜಸೇವೆ ಎಲ್ಲರ ಹೊಣೆಗಾರಿಕೆಯಾಗಿದೆ. ಮೋಕ್ಷವೇ ಬದುಕಿನ ಅಂತಿಮ ಗುರಿಯಾಗಿದ್ದು, ಪ್ರತಿಯೊಬ್ಬರೂ ತಮಗೆ ಸಿಕ್ಕಿದ ಅವಕಾಶದ ಸದುಪಯೋಗ ಮಾಡಿ ಸರ್ವರ ಹಿತಕ್ಕಾಗಿ ನಗುಮೊಗದಿಂದ ನಿಸ್ವಾರ್ಥ ಸೇವೆ ಮಾಡಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.


ಯುವಜನತೆ ದೇಶದ ಅಮೂಲ್ಯ ಮಾನವ ಸಂಪನ್ಮೂಲವಾಗಿದ್ದು, ದೃಢಸಂಕಲ್ಪದಿಂದ ಸಮಾಜ ಸೇವೆ ಮಾಡಿ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡಬೇಕು. ಸುಖ-ಶಾಂತಿ, ಸಂಪತ್ತನ್ನು ಎಲ್ಲರೂ ಹಂಚಿಕೊಂಡು ಸಂತೋಷದಿಂದ ನೆಮ್ಮದಿಯ ಸಾರ್ಥಕ ಜೀವನ ಮಾಡಬೇಕು. ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಪದ್ಧತಿ ಹಾಗೂ ಆಯುರ್ವೇದದಿಂದ ಇಂದು ಭಾರತ ವಿಶ್ವದೆಲ್ಲೆಡೆ ಬೆಳಗುತ್ತಿದೆ ಎಂದು ಅವರು ಅಭಿಪ್ರಾಯ ಪಟ್ಟರು.


ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಯೋಗ ಆರೋಗ್ಯ ಶಿಬಿರಗಳನ್ನು ಆಯೋಜಿಸಿ ಯೋಗದ ಮಹತ್ವದ ಬಗ್ಯೆ ನಾಲ್ಕು ಲಕ್ಷ ಜನರಲ್ಲಿ ಅರಿವು, ಜಾಗೃತಿ ಮೂಡಿಸಲಾಗಿದೆ. ದೀರ್ಘಾಯುಷ್ಯ ಮತ್ತು ಆರೋಗ್ಯ ಭಾಗ್ಯ ರಕ್ಷಣೆಗಾಗಿ ಎಲ್ಲರೂ ಯೋಗಾಭ್ಯಾಸ ಮಾಡಬೇಕು.


ಆಧುನಿಕ ತಂತ್ರಜ್ಞಾನದ ಬೆಳವಣಿಗೆ ಹಾಗೂ ಅನೇಕ ಸವಲತ್ತುಗಳಿಂದ ಇಂದು ದೇಹ ಮತ್ತು ಮನಸ್ಸಿಗೆ ಶ್ರಮ ಕಡಿಮೆಯಾಗಿದೆ. ಪರಾವಲಂಬನೆ ಜಾಸ್ತಿಯಾಗಿದೆ. ಯೋಗ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತದೆ. ನಾವು ಅನೇಕ ವಸ್ತುಗಳನ್ನು ವಿದೇಶಗಳಿಂದ ಆಮದು ಮಾಡುತ್ತೇವೆ. ಆದರೆ ಯೋಗಾಭ್ಯಾಸ, ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸಾ ವಿಧಾನವನ್ನು ವಿದೇಶಗಳಿಗೆ ರಫ್ತು ಮಾಡಿ ಭಾರತ ವಿಶ್ವಮಾನ್ಯವಾಗಿದೆ ಎಂದು ಹೆಗ್ಗಡೆಯವರು ಅಭಿಪ್ರಾಯಪಟ್ಟರು.


ನೆಲ್ಯಾಡಿ ಜ್ಞಾನೋದಯ ಬೆಥನಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಥೋಮಸ್ ಬಿಜಿಲಿ ಶುಭಾಶಂಸನೆ ಮಾಡಿ, ಸಾವಿರಾರು ವರ್ಷಗಳಿಂದ ಸಾಧು-ಸಂತರು ಕಲಿಸಿದ ಯೋಗಾಭ್ಯಾಸ ಜಾತಿ, ಮತ, ದೇಶ-ಭಾಷೆಯ ಗಡಿಯನ್ನು ಮೀರಿ ಮಾನವ ಕಲ್ಯಾಣ ಸಾಧ್ಯವಾಗುತ್ತದೆ. ಮಾನವ ಸೇವೆಯೇ ಮಾಧವನ ಸೇವೆಯಾಗುತ್ತದೆ ಎಂದು ಹೇಳಿದರು.


ಶಾಸಕ ಹರೀಶ್ ಪೂಂಜ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಮತ್ತು ಡಿ. ವೀರೇಂದ್ರ ಹೆಗ್ಗಡೆಯವರು ಯೋಗಾಭ್ಯಾಸಕ್ಕೆ ನೀಡುತ್ತಿರುವ ಪ್ರೋತ್ಸಾಹದಿಂದಾಗಿ ಭಾರತ ಇಂದು ವಿಶ್ವಗುರುವಾಗಿ ಬೆಳಗುತ್ತಿದೆ, ಬೆಳೆಯುತ್ತಿದೆ ಎಂದರು.


ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಮಾತನಾಡಿ ಯೋಗಾಭ್ಯಾಸದಿಂದ ದೇಹ, ಮನಸ್ಸು ಮತ್ತು ಆತ್ಮದ ಉನ್ನತಿಯೊಂದಿಗೆ ಸರ್ವತೋಮುಖ ಪ್ರಗತಿ ಸಾಧ್ಯವಾಗುತ್ತದೆ ಎಂದರು.


ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಉಪಕಾರ್ಯದರ್ಶಿ ನಸೀಮಾ, ಬಿ.ಐ. ಮಾತನಾಡಿ, ಯೋಗ ಬಲ್ಲವರಿಗೆ ರೋಗವಿಲ್ಲ. ಆದುದರಿಂದ ಎಲ್ಲರೂ ಯೋಗಾಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು.


ಬೆಂಗಳೂರಿನ ಯೋಗಪಟು ಪ್ರಜ್ವಲ್ ನಾಯಕ್‍ರಿಗೆ “ಯೋಗರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು. ಯೋಗ ವಿಭಾಗದ ಡೀನ್ ಡಾ. ಶಿವಪ್ರಸಾದ್ ಶೆಟ್ಟಿ ಧನ್ಯವಾದವಿತ್ತರು.


ಡಾ. ಜ್ಯೋಸ್ನಾ ಮತ್ತು ಡಾ. ಅನನ್ಯಾ ಕಾರ್ಯಕ್ರಮ ನಿರ್ವಹಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 تعليقات

إرسال تعليق

Post a Comment (0)

أحدث أقدم