ಮೂಡುಬಿದಿರೆ: ಸಿನಿಮಾಗಳು ಸ್ಥಳೀಯ ಸಂಸ್ಕೃತಿಯಿಂದ ವಿಮುಖವಾಗುತ್ತಿರುವುದರಿಂದ ಚಿತ್ರೋದ್ಯಮವು ಜನರನ್ನು ತಲುಪಲು ಹೆಣಗಾಗುತ್ತಿದೆ ಎಂದು ಉಜಿರೆಯ ಎಸ್‌ಡಿಎಂ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ ಪದ್ಮನಾಭ ಎನ್.ಕೆ ಹೇಳಿದರು.
ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಭಿವ್ಯಕ್ತಿ ಫೋರಂ ಆಯೋಜಿಸಿದ್ದ "ಸಿನಿಮಾಗಳಲ್ಲಿ ಸ್ಥಳೀಯ ಸಂಸ್ಕೃತಿಯ ಮಹತ್ವ" ಎಂಬ ವಿಷಯದ ಕುರಿತು ಮಾತನಾಡಿದರು.
ಸ್ಥಳೀಯ ಮತ್ತು ನೈಜ ಸಂಸ್ಕೃತಿಯು ಸಿನಿಮಾ ಕಥೆಗಳ ಮತ್ತು ನಿರೂಪಣೆಯ ಬುನಾದಿಯಾಗಿರಬೇಕು. ಇದರಿಂದ ವೀಕ್ಷಕರಲ್ಲಿ ಸಾಮಾಜಿಕ ಜವಾಬ್ದಾರಿಯೂ ಜಾಗೃತವಾಗುತ್ತದೆ ಎಂದರು. ಸಿನಿಮಾ ಜನಪದದ ಒಂದು ವಿಸ್ತೃತ ಸ್ವರೂಪವಾಗಿರುವುದರಿಂದ ಅದರಲ್ಲಿನ ಕಥೆ, ನಿರೂಪಣೆ, ಸಂಗೀತ, ಸ್ಕ್ರೀನ್ ಪ್ಲೇ, ಸಂಭಾಷಣೆಗಳಲ್ಲಿ ಸ್ಥಳೀಯ ಸಂಸ್ಕೃತಿಯನ್ನು ಪ್ರತಿನಿಧಿಸಿದಾಗ ಸಮಾಜದ ಮೇಲೆ ಧನಾತ್ಮಕ ಪ್ರಭಾವ ಬೀರುತ್ತದೆ. ಸಿನಿಮಾಗಳಲ್ಲಿ ಪೌರಾಣಿಕ ಪಾತ್ರಗಳ ಪುನರ್ ನಿರ್ಮಾಣ ಮಾಡುವುದರಿಂದಲೂ ಭಾರತೀಯ ಅಸ್ಮಿತೆ, ಪ್ರಾದೇಶಿಕ ವೈವಿಧ್ಯಮಯ ಸಂಸ್ಕೃತಿಯನ್ನು ಪ್ರತಿನಿಧಿಸಿದಂತಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಸಿನಿಮಾ ಪಠ್ಯದ ಆಯ್ಕೆಯಲ್ಲಿ ಕಥೆ, ಸ್ಕ್ರೀನ್ ಪ್ಲೇ, ಸಂಭಾಷಣೆ, ಸಾಹಿತ್ಯಿಕ ಮಹತ್ವ, ಸಂಗೀತ, ಪ್ರಾದೇಶಿಕ ನಿರ್ದಿಷ್ಟ ವೈಶಿಷ್ಟ್ಯಗಳ ಪರಿಗಣನೆ ಪ್ರಮುಖವಾಗುವ ಅಂಶಗಳು, ಆ ನೆಲೆಯಲ್ಲಿ ನಿರ್ದೇಶಕನಾದವನು ಯೋಚಿಸಬೇಕು ಎಂದರು.
ಅಲ್ಲದೆ ಭಾಷೆ ಬಹುತ್ವ, ಮೌಲ್ಯ ವ್ಯವಸ್ಥೆ, ಪೌರಾಣಿಕ ವಿಷಯಗಳು, ಸಾಮಾಜಿಕ ಮೌಲ್ಯಗಳು, ಹಾಗೂ ತಾತ್ವಿಕ ವಿಷಯಗಳ ನೆಲೆಗಟ್ಟಿನಲ್ಲಿ ಮೂಡಿಬರುವ ಸಿನಿಮಾ ಪ್ರಭಾವಶಾಲಿಯಾಗಿ ನೆಲೆನಿಲ್ಲಬಲ್ಲದು ಎಂದರು.
ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಸಂಯೋಜಕ ಪ್ರಸಾದ ಶೆಟ್ಟಿ ಹಾಗೂ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು. ದುರ್ಗಾ ಪ್ರಸನ್ನ ಕಾರ್ಯಕ್ರಮವನ್ನು ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ