ಗುರುಪುರ: ಮಳಲಿಯ ಮಸೀದಿಯ ಗೋಡೆಯನ್ನು ನವೀಕರಣ ಕಾರ್ಯಕ್ಕಾಗಿ ಕೆಡವಿದಾಗ ದೇವಾಲಯವನ್ನು ಹೋಲುವ ಕುರುಹುಗಳು ಲಭ್ಯವಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯರ ಆಗ್ರಹದ ಮೇರೆಗೆ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಇಂದು (ಮೇ 25) ತಾಂಬೂಲ ಪ್ರಶ್ನೆ ಇರಿಸಲಾಯಿತು.
ಕೇರಳದ ಜ್ಯೋತಿಷಿ ಗೋಪಾಲಕೃಷ್ಣ ಪಣಿಕ್ಕರ್ ಅವರು ಮಳಲಿ ಮಸೀದಿಯ ಸಮೀಪ ಇರುವ ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ ಬುಧವಾರ ಬೆಳಗ್ಗೆ 9.05ರಿಂದ ತಾಂಬೂಲ ಪ್ರಶ್ನೆ ಕ್ರಿಯೆಗಳು ನಡೆಸಿಕೊಟ್ಟರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮೇ 24ರಿಂದಲೇ ಮಳಲಿಯಲ್ಲಿ ನಗರ ಪಲೋಸ್ ಕಮಿಷನರ್ ಅವರು ಸೆಕ್ಷನ್ 144ರನ್ವಯ ನಿಷೇಧಾಜ್ಞೆ ಹೇರಿದ್ದರು.
ಬೆಳಗ್ಗೆ 10.30ಕ್ಕೆ ವಿಧಿವಿಧಾನ ಪೂರ್ಣವಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇರಳದ ಜ್ಯೋತಿಷಿ ಜಿ.ಪಿ. ಗೋಪಾಲಕೃಷ್ಣ ಪಣಿಕ್ಕರ್, ಮಳಲಿ ಮಸೀದಿ ಇರುವ ಸ್ಥಳದಲ್ಲಿ ಶೈವ ಆರಾಧನೆಯ ಸಾನ್ನಿಧ್ಯ ಇರುವುದು ತಾಂಬೂಲ ಪ್ರಶ್ನೆಯಲ್ಲಿ ಗೋಚರವಾಗಿದೆ ಎಂದು ತಿಳಿಸಿದ್ದಾರೆ.
ಸ್ಥಳದಲ್ಲಿ ದೇವರ ಸಾನ್ನಿಧ್ಯವಿತ್ತೇ ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಲಾಗಿದೆ. ಸ್ಥಳದಲ್ಲಿ ಹಿಂದೆ ಗುರುಮಠ ಅಧೀನದಲ್ಲಿ ಶೈವ ಆರಾಧನೆ ನಡೆಯುತ್ತಿದ್ದುದು ಗೋಚರಕ್ಕೆ ಬಂದಿದೆ. ಶೈವ-ವೈಷ್ಣವ ವ್ಯಾಜ್ಯದಿಂದಾಗಿ ಅಲ್ಲಿ ಆರಾಧನೆ ಮಾಡುತ್ತಿದ್ದವರು ಸ್ಥಳಾಂತರಗೊಂಡಿರುವ ಸಾಧ್ಯತೆ ಇದೆ. ಆದರೆ ದೇವರ ಸಾನ್ನಿಧ್ಯ ಹೋಗಿಲ್ಲ. ಉಪಾಧಿಯಾಗಿ ಅಲ್ಲಿನ ಆರಾಧನಾ ಶಕ್ತಿಗೆ ಸಂಬಂಧಿಸಿದ ಕೆಲವು ವಸ್ತುಗಳು ಕೆಲವು ಮಠ, ದೇವಸ್ಥಾನಗಳಲ್ಲಿ ಆರಾಧನೆಯಾಗುತ್ತಿರುವುದು ಕೂಡ ಕಂಡುಬಂದಿದೆ ಎಂದಿದ್ದಾರೆ.
ಈ ದೇವತಾ ಸಾನ್ನಿಧ್ಯ ಅಭಿವೃದ್ಧಿಯಿಂದ ಊರಿಗೆ ಒಳಿತಾಗಲಿದೆ:
ಈ ಸಾನಿಧ್ಯವನ್ನು ಅಭಿವೃದ್ಧಿಗೊಳಿಸಿದರೆ ಊರಿಗೆ ಒಳಿತಾಗಲಿದೆ. ಎಲ್ಲರ ಪ್ರಾರ್ಥನೆ, ಸಹಕಾರದಿಂದ ಈ ಕಾರ್ಯ ನಡೆಯಬೇಕು. ಸಾನ್ನಿಧ್ಯದ ಸಮಗ್ರ ಚರಿತ್ರೆ ತಿಳಿದುಕೊಳ್ಳಲು ಅಷ್ಟಮಂಗಲ ಪ್ರಶ್ನಾ ಚಿಂತನೆ ನಡೆಸಬೇಕು ಎಂದು ಗೋಪಾಲಕೃಷ್ಣ ಪಣಿಕ್ಕರ್ ತಿಳಿಸಿದರು.
ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಶಾಸಕ ಡಾ| ವೈ.ಭರತ್ ಶೆಟ್ಟಿ, ಗಿರೀಶ್ ತಂತ್ರಿ, ವಿಶ್ವ ಹಿಂದೂ ಪರಿಷತ್ ವಿಭಾಗೀಯ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಉದಯ ಕುಮಾರ್ ಆಳ್ವ, ಭುಜಂಗ ಕುಲಾಲ್ ಅದ್ಯಪಾಡಿ, ಗೋಪಾಲ್ ಕುತ್ತಾರ್, ಶಿವಾನಂದ ಮೆಂಡನ್, ಸುನಿಲ್ ಕುಮಾರ್, ರಘು ಸಕಲೇಶ್‌ಪುರ, ಭಜನ ಮಂದಿರದ ಅಧ್ಯಕ್ಷ ಗಿರೀಶ್ ಮೊದಲಾದವರು ಉಪಸ್ಥಿತರಿದ್ದರು.
ಬಿಗಿ ಪೊಲೀಸ್ ಬಂದೋಬಸ್ತ್:
ತಾಂಬೂಲ ಪ್ರಶ್ನೆ ಹಿನ್ನೆಲೆಯಲ್ಲಿ ಭಜನಾ ಮಂದಿರದ ಸುತ್ತ ಬಿಗಿ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್ ಸ್ಥಳದಲ್ಲಿದ್ದರು. ಇಬ್ಬರು ಎಸಿಪಿ, 7 ಮಂದಿ ಇನ್ಸ್‌ಪೆಕ್ಟರ್‌ಗಳು, 12 ಮಂದಿ ಪಿಎಸ್‌ಐ, 10 ಮಂದಿ ಎಎಸ್‌ಐ, 120 ಮಂದಿ ಸಿವಿಲ್ ಸಿಬಂದಿ, 3 ಕೆಎಸ್‌ಆರ್‌ಪಿ ತುಕಡಿ, 3 ಸಿಎಆರ್ ತುಕಡಿ ನಿಯೋಜನೆ ಮಾಡಲಾಗಿತ್ತು. ಮಸೀದಿ ಸುತ್ತುಮುತ್ತಲಿನ 500 ಮೀಟರ್ ವ್ಯಾಪ್ತಿಯಲ್ಲಿ ಸೆಕ್ಷನ್ 144ರನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.
ಸೌಹಾರ್ದಯುತ ಇತ್ಯರ್ಥಕ್ಕೆ ವಿಶ್ವ ಹಿಂದು ಪರಿಷತ್ ಮನವಿ:
ಮಸೀದಿ ಸ್ಥಳದಲ್ಲಿ ದೇವರ ಸಾನಿಧ್ಯ ಇರುವುದು ತಾಂಬೂಲ ಪ್ರಶ್ನೆಯಲ್ಲಿ ಸ್ಪಷ್ಟವಾಗಿದೆ. ಮಸೀದಿ ಸಮಿತಿಯವರು ಆ ಸ್ಥಳವನ್ನು ಹಿಂದೂ ಸಮಾಜದವರಿಗೆ ಬಿಟ್ಟು ಕೊಟ್ಟು ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು ಎಂಬುದು ನಮ್ಮ ಮನವಿ. ಸ್ಥಳಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟವೂ ಮುಂದುವರಿಯಲಿದೆ. ಸಾನಿಧ್ಯ ಯಾವ ಕ್ಷೇತ್ರ, ಮಠ ಅಥವಾ ರಾಜಮನೆತನಕ್ಕೆ ಸಂಬಂಧಿಸಿದ್ದು, ಇದರ ಇತಿಹಾಸವೆಷ್ಟು ಮತ್ತಿತರ ಸಮಗ್ರ ಮಾಹಿತಿಗಾಗಿ ಶೀಘ್ರದಲ್ಲೇ ಅಷ್ಟಮಂಗಲ ಪ್ರಶ್ನೆ ಇರಿಸಲು ನಿರ್ಧರಿಸಲಾಗಿದೆ ಎಂದು ವಿಶ್ವಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಪ್ರತಿಕ್ರಿಯಿಸಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ